ಶುಕ್ರವಾರ, ಫೆಬ್ರವರಿ 9, 2018

'ಲೌಕಿಕದ ಬೆಳಗು' ಕೃತಿಯ ಮುನ್ನುಡಿ - ಶಿವಕುಮಾರ ಬಿ.ಎ. ಅಳಗೋಡು

'ಲೌಕಿಕದ ಬೆಳಗು'


ಮುನ್ನುಡಿ

ಪಂಪ ಕನ್ನಡ ಸಾರಸ್ವತ ಲೋಕ ಕಂಡ ಒಬ್ಬ ಅದ್ಭುತ ಪ್ರತಿಭಾಶಕ್ತಿಯ ಕವಿ. ತನಗಿಂತಲೂ ಹಿಂದೆ ಆಗಿ ಹೋದ ಕವಿಕೃತಿಗಳನ್ನು ಚೆನ್ನಾಗಿ ಅರಿತು ಅರಗಿಸಿಕೊಂಡು, ಅವೆಲ್ಲವನ್ನೂ ಮೀರಿಸಿದ ಕಾವ್ಯವನ್ನು ಸೃಷ್ಟಿಸಿದಾತ. ಜೈನಧರ್ಮವನ್ನು ಅಂಗೀಕರಿಸಿಕೊಂಡು, ಚಂಪೂ ಸಾಹಿತ್ಯವನ್ನು ಅಳವಡಿಸಿಕೊಂಡು ಹಿತಮಿತ ಮೃದುವಚನದಿಂದ ಲೋಕ ಸತ್ಯವನ್ನೂ, ಕಾವ್ಯಸತ್ವವನ್ನೂ ಉಣಬಡಿಸಿದ ಆದಿಕವಿ. 
ಜಿನಾಗಮವನ್ನು ತೋರುವುದಕ್ಕೆ, ಲೌಕಿಕವನ್ನು ಬೆಳಗುವುದಕ್ಕೆ ಆತ ಕೈಗೆತ್ತಿಕೊಂಡುದು ಎರಡೇ ಕಾವ್ಯವಸ್ತುವನ್ನು. ಈ ಎರಡು ಕೃತಿಗಳೂ ಮೂಲವನ್ನು ಆಧರಿಸಿ, ಮೂಲವನ್ನು ಮರೆಸಿ ಮೆರೆಸಿದವುಗಳು. ಮೊದಲನೆಯ ತೀರ್ಥಂಕರನಾದ ಆದಿನಾಥನ ಜೀವನ, ವೈರಾಗ್ಯವನ್ನು ‘ಆದಿಪುರಾಣ’ ದಲ್ಲಿಯೂ, ಆಶ್ರಯದಾತನ ಹೆಸರನ್ನು ಚಿರಸ್ಥಾಯಿಗೊಳಿಸುವ ನೆಲೆಯಲ್ಲಿ ರಚಿಸಿದ ‘ವಿಕ್ರಮಾರ್ಜುನ ವಿಜಯ’ದಲ್ಲಿ ಭಾರತ ಕಥೆಯನ್ನೂ ಪಂಪ ಅತ್ಯಂತ ಸೊಗಸಾಗಿ ನಿರೂಪಿಸಿದ್ದಾನೆ. ಆತನೇ ಹೇಳಿಕೊಂಡಂತೆ ಒಂದು ಜಿನಾಗಮದ ಕಾವ್ಯ, ಇನ್ನೊಂದು ಲೌಕಿಕದ ಕಾವ್ಯ. 
ಈ ಲೌಕಿಕದ ಭಾರತವನ್ನು ಕವಿ ಎಷ್ಟು ಸಾಧ್ಯವೋ ಅಷ್ಟು ಬೆಳಗಿದ್ದಾನೆ. ಬೆಳಗು ಎಂದರೆ ಚೆನ್ನಾಗಿ ಉಜ್ಜಿ, ಶುದ್ಧಗೊಳಿಸುವುದು ಎಂದರ್ಥ. ಒಂದು ಬಗೆಯಲ್ಲಿ ಹೊಸ ಮೆರುಗನ್ನು ಕೊಡುವುದು ಎಂದೂ ಆಗುತ್ತದೆ. ಆ ಕಾಯಕವನ್ನು ಪಂಪ ತನ್ನ ಭಾರತ ಕಾವ್ಯದಲ್ಲಿ ಸಮರ್ಥವಾಗಿ ನಿರ್ವಹಿಸಿದ್ದಾನೆ.
ಹದಿನಾಲ್ಕು ಆಶ್ವಾಸಗಳ ಚಂಪೂಕೃತಿಯಾದ ವಿಕ್ರಮಾರ್ಜುನ ವಿಜಯದಲ್ಲಿ ನೂರಾರು ಮೌಲಿಕ ಪ್ರಸಂಗಗಳಿವೆ. ಇಲ್ಲಿ ಹೆಕ್ಕಿದ್ದೆಲ್ಲ ಹೊನ್ನೇ ಆದರೂ ಈ ಹೊತ್ತಗೆಯಲ್ಲಿ ಕೊನೆಯ ಆರು ಆಸ್ವಾಸಗಳ ಮುಖ್ಯ ಪ್ರಸಂಗಗಳನ್ನಷ್ಟೇ ಕೈಗೆತ್ತಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದೇನೆ. ಪಾಶ್ಚಾತ್ಯ ಮೀಮಾಂಸಕನೊಬ್ಬ ‘ನಮ್ಮ ಹೆಗಲು ಹೊರುವಷ್ಟು ಭಾರವನ್ನಷ್ಟೇ ನಾವು ಎತ್ತಿಕೊಳ್ಳಬೇಕು’ ಎಂದು ಕಾವ್ಯವಸ್ತು ಸಂಬಂಧಿಯಾಗಿ ಹೇಳಿದಂತೆ ಇವಿಷ್ಟನ್ನು ಮಾತ್ರ ಸ್ಪರ್ಶಿಸುವುದಕ್ಕೆ ತೊಡಗಿದೆ.
ಒಂಬತ್ತನೆಯ ಆಶ್ವಾಸದಿಂದಾರಂಭಿಸಿ ಕೊನೆಯ ಚತುರ್ಥಾಶ್ವಾಸದವರೆಗಿನ ಹದಿಮೂರು ಪ್ರಧಾನ ಪ್ರಸಂಗಗಳ ಅವಲೋಕನ, ವಿಶ್ಲೇಷಣೆ ಜೊತೆಯಲ್ಲಿ ಮತಿಯ ಮಿತಿಗೆ ನಿಲುಕಿದ ಕೆಲವಷ್ಟು ಸಂಗತಿಗಳ ಲಘುವಿಮರ್ಶೆಯನ್ನಿಲ್ಲಿ ಕಾಣಬಹುದು. ಪಂಪಭಾರತದ ಪದ್ಯಗಳನ್ನು ಮುಂದಿರಿಸಿಕೊಂಡು ಅವುಗಳಿಗೆ ಪೂರಕವಾಗಿರುವ ಇನ್ನಿತರ ಕೃತಿಗಳ ಓದನ್ನು ಬೆರೆಸಿಕೊಂಡು ಈ ಕೃತಿಯನ್ನು ಕಟ್ಟುವ ಯಥಾಯೋಗ್ಯ ಪ್ರಯತ್ನಕ್ಕೆ ಮುಂದಾಗಿದ್ದೇನೆ.
ಇದು ಪಂಪನ, ಪಂಪಭಾರತದ ಮುಖ್ಯ ಪ್ರಸಂಗಗಳ ಅವಲೋಕನವೂ ಹೌದು; ನಮ್ಮೊಳಗಿನ ನಮ್ಮ, ನಮ್ಮ ಮುಂದಿನ ಲೋಕಸತ್ಯ-ವಾಸ್ತವಗಳ ಅವಲೋಕನವೂ ಹೌದು. ವೀರಕಾವ್ಯದ ಮರೆಯಲ್ಲಿ ಯುದ್ಧವಿರೋಧಿ ನೀತಿಯನ್ನಭಿವ್ಯಕ್ತಿಸುವ ಪಂಪ ಬರೆದಿದ್ದು ಎರಡೇ ಕಾವ್ಯವಾದರೂ ಹೇಳಿದ ಸಂಗತಿಗಳು ಅಸಂಖ್ಯ. ಚಂಪೂಯುಗದ ಈ ಕೃತಿ ಅನೇಕರನ್ನು ಕಾಡಿದೆ; ಹೊಸ ಬಗೆಯ ನಿಲುವುಗಳನ್ನು ತಳೆಯಲು ಪ್ರೇರೇಪಿಸಿದೆ. ಅಂಥಹ ಪ್ರೇರೇಪಣೆಯಲ್ಲಿ ರೂಪುಗೊಂಡ ಕೃತಿ ಸರಣಿಯಲ್ಲಿ ಈ ಕೃತಿಯೂ ಕೂಡ ಒಂದು. ಅವುಗಳ ಮಟ್ಟವನ್ನು ಮುಟ್ಟಲು ಸಾಧ್ಯವಾಗದಿದ್ದರೂ ಆ ನೆಲೆಯಲ್ಲಿ ಸಾಗಲು ಈ ಹೊತ್ತಗೆ ಒಂದು ಮುನ್ನುಡಿಯನ್ನು ಖಂಡಿತಾ ಬರೆಯುತ್ತದೆ ಎಂಬ ನಂಬಿಕೆ ನನ್ನದು. 
‘ಲೌಕಿಕದ ಬೆಳಗು’ ನನ್ನ ನಾಲ್ಕನೆಯ ಹೊತ್ತಗೆಯಾದರೂ ವಿಮರ್ಶಾ ವಿಭಾಗದಲ್ಲಿ ಇದು ಮೊದಲನೆಯದೇ. ಕಥಾಸಂಕಲನ, ಲೇಖನ ಮಾಲಿಕೆ, ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಬಳಿಕ ಅದೇಕೋ ನನ್ನ ತಿಳುವಳಿಯ ವ್ಯಾಪ್ತಿಗೆ ನಿಲುಕಿದ ಒಂದಿಷ್ಟು ವಿಚಾರವನ್ನು ಹಂಚಿಕೊಳ್ಳಬೇಕೆಂಬ ಹಂಬಲ ಉಂಟಾಯಿತು. ಅದರ ಫಲರೂಪವೇ ಈ ಕಿರು ಹೊತ್ತಗೆ.
 ಪಂಪನ ಕುರಿತಾದ ಸಂಕ್ಷಿಪ್ತ ಮಾಹಿತಿಯನ್ನು ನಾನು ಪ್ರಾಥಮಿಕ ಶಾಲೆಗಳಿಂದಲೇ ತಿಳಿದುಕೊಂಡು ಬಂದವ. ಆದರೆ, ನನ್ನ ಸ್ನಾತಕೋತ್ತರ ಪದವಿಯ ಓದು ಆ ಎಲ್ಲಾ ಬಾಲಿಷ ತಿಳುವಳಿಕೆಯನ್ನೂ ಕೆಲವು ತಪ್ಪು ಗ್ರಹಿಕೆಗಳನ್ನೂ ದೂರ ಮಾಡಿ ಸಾಧಾರಣ ಮಟ್ಟದ ಅರಿವನ್ನಾದರೂ ಮೂಡಿಸಿತೆಂದು ಧೈರ್ಯದಿಂದ ಹೇಳಿಕೊಳ್ಳಬಲ್ಲೆ. ಜೊತೆಯಲ್ಲಿ ಅಷ್ಟಿಷ್ಟು ವಿಮರ್ಶೆಯನ್ನು ಮಾಡುವ ಸ್ವಭಾವವನ್ನೂ ಕಲಿತಿದ್ದು ನಾನು ಇತ್ತೀಚೆಗೇ. ಕಲಿತದ್ದನ್ನು ಅಂದಂದೇ ಮರೆತು ಬಿಡುವ ಅನೇಕರಲ್ಲಿ ಬಹುಶಃ ನಾನೂ ಒಬ್ಬನಿರಬೇಕು. ಕಾಲ ಕಳೆದಂತೆಲ್ಲ ನಮ್ಮ ಸ್ಮøತಿಯ ಸಂಗ್ರಹ ಗುಣವೂ ಕ್ಷೀಣಿಸುತ್ತದೆ. ನನಗೂ ಈ ಅನುಭವ ಅನೇಕ ಸಲ ಆಗಿತ್ತು. ಹಾಗಾಗಿ ಅಳಿದುಳಿದ ಒಂದಿಷ್ಟು ಸಂಗತಿಗಳನ್ನಾದರೂ ಒಂದು ವ್ಯವಸ್ಥಿತ ರೂಪದಲ್ಲಿ ಉಳಿಸಿಕೊಳ್ಳಬೇಕೆಂಬ ಹಂಬಲದಿಂದಲೂ, ಮುಂದಿನ ಹೆಜ್ಜೆಗೆ ಈ ಹೆಜ್ಜೆ ಮುನ್ನುಡಿಯನ್ನು ಬರೆಯಲಿ ಎಂಬ ನೆಲೆಯಿಂದಲೂ ‘ಪಂಪಭಾರತವನ್ನು’ ಮತ್ತೊಮ್ಮೆ ಕೈಗೆತ್ತಿಕೊಂಡೆ. ಅದೊಂದು ಸಾಗರ ಎನ್ನುವ ಪರಿಜ್ಞಾನ ನನಗೆ ಖಂಡಿತಕ್ಕೂ ಇತ್ತು. ಹಾಗಾಗಿಯೇ ಹದಿನಾಲ್ಕು ಆಶ್ವಾಸಗಳುಳ್ಳ ಕೃತಿಯಲ್ಲಿ ಕೇವಲ ಕೊನೆಯ ಆರು ಆಶ್ವಾಸಗಳನ್ನಷ್ಟೇ ಬಳಸಿಕೊಂಡು ವಿಶ್ಲೇಷಿಸುವ ಪ್ರಯತ್ನಕ್ಕೆ ಮುಂದಾದೆ.
ಈ ಕೃತಿಗೆ ‘ಇತರ ಸಹೃದಯ ಮಹಾಶಯರಿಂದ ಮುನ್ನುಡಿಯನ್ನು ಬರೆಯಿಸಬೇಕೆಂದು ಒಮ್ಮೆ ಭಾವಿಸಿದ್ದೆನು. ಆದರೆ, ಆಪ್ತಮಿತ್ರರೊಬ್ಬರ ಸೂಚನೆಗೂ ಅನುವಾಗಿ ಆ ಭಾವನೆಯನ್ನು ಬಿಟ್ಟಿರುವೆನು. ಮುನ್ನುಡಿಯನ್ನು ಬರೆಯಿಸುವುದೆಂದರೆ, ಆ ವಿದ್ವಾಂಸರ ಮನಸ್ಸನ್ನು ಕತ್ತರಿಯಲ್ಲಿಕ್ಕಿದಂತೆ ಆಗುವುದೂ ಇದೆ. ತನ್ನ ಈ ಮಿತ್ರನ ಕೈಯನ್ನು ನೋಡಿ ಅವಲಕ್ಷಣವನ್ನು ಹೇಳಿದರೆ ಬೇಸರವಾಗುವುದೋ ಎಂಬುದೇ ಆ ವಿದ್ವಾಂಸರ ಮನಸ್ಸನ್ನು ಅವುಕುವ ಕತ್ತರಿ. ಹಾಗಾಗಿ, ಸಹೃದಯರಾದವರು ಮುಂದೆ ಗ್ರಂಥವನ್ನೋದಿ ತಂತಮ್ಮ ಮುನ್ನುಡಿಗಳನ್ನು ತಾವು ತಾವೇ ಸ್ವತಂತ್ರವಾಗಿ ಬರೆವುದೋ ಅಥವಾ ಭಾವಿಸುವುದೋ ತಕ್ಕುದಾಗಿದೆ’* 
ನಾನು ಸೇವೆಸಲ್ಲಿಸುತ್ತಿರುವ ಪೂರ್ಣಪ್ರಜ್ಞ ಸಂಸ್ಥೆಗೂ ಹಾಗೂ ಈ ಹೊತ್ತಗೆಯನ್ನು ಮುದ್ರಿಸಿಕೊಟ್ಟ ಮಂಗಳೂರಿನ ದಿಗಂತ ಪ್ರಿಂಟರ್ಸ್ ಇವರಿಗೂ, ಮುಖಪುಟವನ್ನು ಸುಂದರವಾಗಿ ರೂಪಿಸಿಕೊಟ್ಟ ಸಮರ್ಥ್ ಶೆಟ್ಟಿಯವರಿಗೂ, ಕೃತಿ ರಚನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರೋತ್ಸಾಹಿಸಿದ ಎಲ್ಲರಿಗೂ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಲ್ಲಿಸುತ್ತೇನೆ. 
                                      
                                                                                                        - ಶಿವಕುಮಾರ ಬಿ.ಎ. ಅಳಗೋಡು
                                                                                 01-02-2018

ಬುಧವಾರ, ಅಕ್ಟೋಬರ್ 25, 2017

ಶಿವಕುಮಾರ ಬಿ.ಎ. ಅಳಗೋಡು ಇವರಿಗೆ 2017 ನೇ ಸಾಲಿನ 'ಜ್ಯೋತಿ ಪುರಸ್ಕಾರ'
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ 101 ನೇ ವಾರ್ಷಿಕ ಅಧಿವೇಷನದಲ್ಲಿ 2017ನೇ ಸಾಲಿನ ರಾಜ್ಯಮಟ್ಟದ 'ಜ್ಯೋತಿ ಪುರಸ್ಕಾರ' ವನ್ನು ಶ್ರೀಯುತ ಶಿವಕುಮಾರ ಬಿ.ಎ. ಅಳಗೋಡು ಇವರಿಗೆ ನೀಡಿ ಗೌರವಿಸಲಾಯಿತು. ಸೆಪ್ಟೆಂಬರ್ 25 ನೇ ತಾರೀಕು ತಲಪಾಡಿಯಲ್ಲಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮನು ಬಳಿಗಾರ್ ಶಿವಕುಮಾರರಿಗೆ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜ್ಯೋತಿ ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಯುತ ಪ್ರದೀಪ್ ಕಲ್ಕೂರ, ನೀಲಾವರ ಸುರೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

ಭಾನುವಾರ, ಅಕ್ಟೋಬರ್ 22, 2017


ಕಲಾತಪಸ್ವಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಯಕ್ಷಯಾನದ ಕೊನೆಯ 5 ಪೌರಾಣಿಕ ಪಾತ್ರಗಳು -
(ಶ್ರೀ ಬಂಗಾರಮಕ್ಕಿ ವೀರಾಂಜನೇಯ ದೇವರ ಸನ್ನಿಧಿಯಲ್ಲಿ)

ಶ್ರೀದೇವಿಮಹಾತ್ಮೆಯ 'ವಿದ್ಯುನ್ಮಾಲಿ' 21/09/2017
ರಾಜಸೂಯಾಧ್ವರದ 'ಮಾಗದ'       22/09/2017
ಮಹೀಂದ್ರ ಮಹಾಭಿಷ ಪ್ರಸಂಗದ 'ಬ್ರಹ್ಮ' 23/09/2017
ಶರಸೇತು ಬಂಧದ 'ಅರ್ಜುನ' 24/09/2017
ವಸುವರಾಂಗಿ ಪ್ರಸಂಗದ 'ಶಂತನು' 25/09/2017

ವಿಧಿವಶರಾಗಿದ್ದು : 03/10/2017 ರಾತ್ರಿ 9:30

ಕೃಪೆ : ಬಂಗಾರಮಕ್ಕಿ ದೇವಸ್ಥಾನ

ಶುಕ್ರವಾರ, ಅಕ್ಟೋಬರ್ 6, 2017


ಅಮೃತದ ಕಡಲು ಗೋವಿನೊಡಲು

|| ಭಾಮಿನಿ ಷಟ್ಪದಿ ||

ಎತ್ತಿದಾ ಕೂರಸಿಯು ಕತ್ತರಿ | 
ಸಿತ್ತು ಗೋವಿನ ಕುಸುಮ ಕತ್ತನು |
ನೆತ್ತರಿನ ಹೊಳೆ ಹರಿದು ಹೋಯಿತು | ಅತ್ತವರ ಕಾಣೆ || 
ನೆತ್ತಿಯಂಚಿನ ಕತ್ತಿಯರಿಯದೆ | 
ವಿತ್ತಕಷ್ಟೇ ಚಿತ್ತವಾಯಿತು |
ಮತ್ತಜನರರಿಯದೆಯೆ ಕೊಲುವರು | ಸುತ್ತುತಿಹ ಸಾವ! || 1 ||

ದಯೆಯೆ ಧರ್ಮದ ಮೂಲವೆಂಬರು | 
ದಯೆಯ ಮರೆಯುತ ಕೊಂದು ಕಳೆವರು |
ದಯೆಯ ಪರಿಧಿಗೆ ಭಯದ ಪರದೆಯನೆಳೆದು ಮೆರೆಯುವರು ||
ಜಯತು ಜಯವೆಂದೊರೆವ ಜನಕಪ | 
ಜಯವ ಹಾರೈಸುತಲಿ ನಡೆವರ |
ಪಯಣದಲಿ ತಿರುತಿರುಗಿ ಕಂಡರೆ ಪಾಪದಾ ಮೂಟೆ! || 2 ||

ಚಿಕ್ಕ ಹೊನ್ನಿನ ತತ್ತಿಯಿಕ್ಕಿದ | 
ಕುಕ್ಕುಟವ ನರನೋರ್ವನಾರ್ಜಿಸೆ |
ಹೊಕ್ಕಿತಾಸೆಯು ಗರ್ಭದೊಳಗಿನ್ನೇಸು ಇಹುದೆನುತ ||
ಸಿಕ್ಕದಾಯಿತು ದಕ್ಕದಾಯಿತು | 
ಮಕ್ಕಳಾಟಿಕೆಯಾಗಿ ಹೋಯಿತು |
ಸೊಕ್ಕಿನಿಂ ಗೋವನ್ನು ಕೊಂದರೆ ನೀನು ಇಂತಪ್ಪೆ


 || 3 ||

ಹಾಲನುರೆ ಚಪ್ಪರಿಸುತೀಜನ | 
ಹಾಲನಿತ್ತಾಕೆಯನೆ ಕಡಿವರು |
ಬಾಳ ಬೆಲೆಯೆಷ್ಟರ್ಥವಾಪುದು ಬಾಳ ಕುರುಡರಿಗೆ? || 
ಕಾಲನೆಳೆವರು ಗೋಣ ಮುರಿವರು | 
ಕಾಳಿನಷ್ಟೂ ನಲ್ಮೆದೋರರು |
ಹೇಳಿರೈ ನೀವ್ ತಡೆಯಿರೈ ನೀವ್ ನರಕ ನಿಮಗೆನುತ || 4 ||

ಮೊಸರು ಮಜ್ಜಿಗೆ ಹಾಲು ತುಪ್ಪದ | 
ರಸವ ಹೀರುತಲುದಯಿಸಿದ ಜನ |
ಪಶುವಿನುದರವ ಬಗೆವ ಪರಿಯನು ಕಾಣೆನೀಜಗದಿ ||
ಕುಶಲದಿಂದಾ ಪಶುವ ಸಲಹಲು | 
ಬಿಸಜಸುತನುರಿಗಣ್ಣ ಮುರರಿಪು |
ಜಸವನೆರೆವರು ಕುಂಭಿನಿಯೊಳೀ ನುಡಿಯು ಕಡುದಿಟವು || 5 ||

- ಶಿವಕುಮಾರ ಬಿ.ಎ. ಅಳಗೋಡು
 ಕನ್ನಡ ಉಪನ್ಯಾಸಕರು, ಪಿ.ಪಿ.ಸಿ