ಮಂಗಳವಾರ, ಮಾರ್ಚ್ 28, 2017

ಮುನ್ನುಡಿಗೊಂದು ಮುನ್ನುಡಿ





ಮುನ್ನುಡಿಗೊಂದು ಮುನ್ನುಡಿ


ಸಾಹಿತ್ಯ-ಸಮಾಜ ನಿತ್ಯನೂತನವಾದವು. ಒಂದನ್ನೊಂದು ಪ್ರಭಾವಿಸುತ್ತಾ, ಪರಿಣಾಮಿಸುತ್ತಾ ಬೆಳೆದು ಬರುವವು. ಬೆಳವಣಿಗೆಗೆ ಹಳೆಯ ಬೇರಿನಂತೆ ಹೊಸ ಚಿಗುರೂ ಆವಶ್ಯಕ. ಬಗೆಯ ಚಿಗುರು ಯುವಪ್ರತಿಭೆ ಶಿವಕುಮಾರ ಬಿ. ಅಳಗೋಡುರವರು. ಕಾಲೇಜಿನ ಗೋಡೆ ಪತ್ರಿಕೆಗೆ, ಆಕಾಶವಾಣಿಗೆ, ಉದಯವಾಣಿ ಮೊದಲಾದ ನಿಯತಕಾಲಿಕಗಳಿಗೆ ನಿರಂತರ ಬರೆಯುವ ಹವ್ಯಾಸ ಇರಿಸಿಕೊಂಡಿರುವ ಇವರು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಕೂಡ. ‘ಪ್ರಾಯಂ ಕೂಸಾದೊಡೆ ಅಭಿಪ್ರಾಯಂ ಕೂಸಕ್ಕುಮೆಎನ್ನುವಂತೆ ವಯಸ್ಸು ಚಿಕ್ಕದಾದರೂ ಮನಸ್ಸು ದೊಡ್ಡದಾದ ಅವರ ಬರವಣಿಗೆಗಳಲ್ಲಿ ತಾಜಾತನವಿದೆ, ಸರಳತೆಯಿದೆ, ಸಹಜತೆಯಿದೆ. ಹಾಸ್ಯದ ಹೊನಲಿದೆ. ಅಲಕ್ಷಿತರ ಕಡೆಗೆ ಲಕ್ಷ್ಯವಿದೆ. ಮಾನವೀಯ ಕಾಳಜಿ ಕಡಲಾಗಿದೆ. ತಮ್ಮನ್ನು ಬಾಲ್ಯದಿಂದಲೂ ಪ್ರಭಾವಿಸಿದ ಸಂಗತಿಗಳನ್ನು ಬರಹ ರೂಪದಲ್ಲಿ ದಾಖಲಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ.
ಯಕ್ಷಗಾನದ ಬಗ್ಗೆ ವಿಶೇಷ ಒಲವುಳ್ಳ ಶ್ರೀಯುತರು ಯಕ್ಷಗಾನ ಪಾತ್ರಧಾರಿಯಾಗಿಯೂ, ಯಕ್ಷಗಾನ ಪ್ರಸಂಗಕರ್ತೃವಾಗಿಯೂ ಜನಮನ್ನಣೆ ಗಳಿಸಿದ್ದಾರೆ. ಅವರ ಮುನ್ನುಡಿಯಲ್ಲಿ ಬಾಲ್ಯದ ದಿನಗಳ ಶಾಲಾ ನೆನಪುಗಳಿಂದ ಹಿಡಿದು ಸಮಕಾಲೀನ ಸಾಮಾಜಿಕ ಸಮಸ್ಯೆಗಳ ಕಡೆಗೆ ವಿಷಯದ ವಿಸ್ತಾರವಿದೆ. ರಾಮಾಯಣ, ಮಹಾಭಾರತಗಳ ಬಗ್ಗೆ ಲೇಖಕರಿಗೆ ವಿಶೇಷ ಆಸಕ್ತಿ, ಕಾಳಜಿ, ತಿಳುವಳಿಕೆ ಇದೆ. ಅದಕ್ಕಾಗಿಯೇ ಅಲ್ಲಿನ ಅನೇಕ ಅಲಕ್ಷಿತ ಪಾತ್ರಗಳಿಗೆ ಮರುಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಮಾನವೀಯತೆ ಮರೆಯಾಗಿ ಹೋಗುತ್ತಿರುವ ಹೊತ್ತಿನಲ್ಲಿ ಮನುಜನಲ್ಲಿ ಮತ್ತೆ ಮನುಷ್ಯತ್ವವನ್ನು ಬಿತ್ತುವ ತುರ್ತು ಇದೆ. ‘ತಪ್ಪಿಲ್ಲ ನಿನ್ನೊಳು ಮಂಥರಾ ನೆಲೆಯಲ್ಲಿ ರಚನೆಯಾಗಿರುವ ಪ್ರಬಂಧ. ‘ಪಾಪಿಗೂ ಉದ್ಧಾರವಿಹುದೌ ಸೃಷ್ಟಿಯ ಮಹದ್ವ್ಯೂಹ ರಚನೆಯೊಳ್ ಎನ್ನುವ ಕುವೆಂಪು ಅವರ ಮಾತು ಇಲ್ಲಿ ನೆನಪಾಗುತ್ತಿದೆ. ‘ಮಾತಾಡು ಊರ್ಮಿಳಾರಾಮಾಯಣದಲ್ಲಿ ಮೌನಿಯಾಗಿರುವ ಲಕ್ಷ್ಮಣನ ಮಡದಿ ಊರ್ಮಿಳೆಯ ಒಳತೋಟಿಗಳನ್ನು ಅರ್ಥಪೂರ್ಣವಾಗಿ ಅರ್ಥೈಸುವ ಪ್ರಬಂಧವಾಗಿದೆ. ‘ಭಾರತದ ಕರ್ಣನಂತೂ ಕರ್ಣ ರಸಾಯನವಾಗಿದೆ. ಲೇಖಕರ ಸೂಕ್ಷ್ಮ ಅಧ್ಯಯನ ಇಲ್ಲಿ ಪುಟಪುಟದಲ್ಲೂ ಪ್ರಕಟಗೊಳ್ಳುತ್ತದೆ. ಕರ್ಣನ ಬದುಕಿನ ಎಲ್ಲಾ ಸಂಗತಿಗಳನ್ನೂ ಪಂಪಭಾರತ, ಕುಮಾರವ್ಯಾಸ ಭಾರತಗಳ ಹಿನ್ನೆಲೆಯಲ್ಲಿ ಬಹಳ ವಿವರವಾಗಿ ವಿವರಿಸಲಾಗಿದೆ.
ಸಮಕಾಲೀನ ಸಮಸ್ಯೆಗಳ ಕಡೆಗೆ ನಮ್ಮ ಗಮನ ಸೆಳೆಯುವ ಪ್ರಯತ್ನ ಅವರಕೆಜಿ ಯಿಂದ ಪಿಜಿವರೆಗೆಪ್ರಬಂಧದಲ್ಲಿ ಒಡಮೂಡಿದೆ. ತಮ್ಮ ಬಾಲ್ಯದ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತಾ ಹೋಗುವ ಲೇಖಕರು ಕಲಿಕೆಯ ಕಾಲದ ಮಹತ್ವಿಕೆಯನ್ನು ತಿಳಿಸುತ್ತಾ ಹೋಗುತ್ತಾರೆ. ವಿದ್ಯಾರ್ಥಿಗಳಂತೆ ಪೋಷಕರೂ ಗಮನಿಸಲೇಬೇಕಾದ ಪ್ರಬಂಧ ಇದಾಗಿದೆ. ‘ಭೂರಂಗದಲಿ ವರ್ಷ ನರ್ತನಮಲೆನಾಡಿನ ಮಳೆಗಾಲದ ಅನುಭವವನ್ನು ಬಿಚ್ಚಿಡುತ್ತದೆ. ಶಾಲೆಗೆ ಮಳೆಯ ನಡುವೆಯೂ ಹೋಗಬೇಕಾದ ಒಡನಾಟದ ಮಾತುಗಳಿವೆ.
ಸ್ತ್ರೀಯರ ಮೇಲಾಗುತ್ತಿರುವ ಶೋಷಣೆಯ ವಿವಿಧ ಮುಖಗಳನ್ನು ಹೆಣ್ಣೆ ನಿನಗೆಲ್ಲೆ ಮನ್ನಣೆತಿಳಿಸುತ್ತಾ, ಸ್ತ್ರೀಯರ ಮೇಲೆ ನಡೆಯುತ್ತಿರುವ ಅನಾಚಾರಗಳು ನಿಲ್ಲಬೇಕೆಂಬ ಕಾಳಜಿ ಇಲ್ಲಿದೆ. ಸ್ವ ಅನುಭವದ ನೆಲೆಯಲ್ಲಿಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆಮತ್ತುವಾಹನಸಂಹಾರಗಳಲ್ಲಿ ಸೊಳ್ಳೆ, ಇಲಿಗಳ ಕಾಟದಿಂದ ಅನುಭವಿಸಿದ ಕಷ್ಟನಷ್ಟದ ರಸವತ್ತಾದ ಚಿತ್ರಣವಿದೆ. ‘ ಮನಸು ಹೊಲಸಿನ ತೊಟ್ಟಿಪ್ರಬಂಧದಲ್ಲಿ ಮನಸ್ಸು ಕೇಂದ್ರಭಾವವಾಗಿದೆ. ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಏನಾಗುತ್ತದೆ, ನಾವು ಮನಸ್ಸಿನ ನಿಯಂತ್ರಣದಲ್ಲಿದ್ದರೆ ಏನಾಗುತ್ತದೆ ಎನ್ನುವುದನ್ನು ರಾಮಾಯಣ, ಮಹಾಭಾರತ, ಪುರಾಣಗಳ ನಿದರ್ಶನದಿಂದ ನಿರೂಪಿಸಲಾಗಿದೆ.
ಹೂವುಗಳ ಬಗ್ಗೆ ಅಪರೂಪದ ಅಪೂರ್ವ ವಿವರಗಳ ಪರಿಮಳವನ್ನು ಕೊಡುವ ಪ್ರಬಂಧಹೂವೇ ಹೂವೇಆದರೆ, ಯುವಪ್ರೇಮಿಗಳ ಸರಸ-ಸಲ್ಲಾಪದ ನುಡಿಗಳನ್ನು ಸೊಗಸಾಗಿ ನಿರೂಪಿಸುವ ಪ್ರಬಂಧ ‘ಪೂರ್ವೋತ್ತರವಾಗಿದೆ. ಹಾಸ್ಟೆಲ್‍ನ ಅನುಭವವು ‘ಆ ದಿನಗಳ ಮೆಲುಕುನಲ್ಲಿ ಚಿತ್ರಿತಗೊಂಡಿದೆ.
ಶ್ರೀ ಶಿವಕುಮಾರ ಬಿ.ಎ. ಅಳಗೋಡು ಇವರ ಮೊದಲ ತೊದಲ ಬರವಣಿಗೆ ಅಚ್ಚುಕಟ್ಟಾಗಿಯೇ ಮೂಡಿಬಂದಿದೆ. ವಿಷಯ ವೈವಿಧ್ಯ ಮನಸ್ಸಿಗೆ ಹಿಡಿಸುವಂತಿದೆ. ಅದರ ಜೊತೆಜೊತೆಗೆ ಶ್ರೀಯುತರ ಅಧ್ಯಯನ ಅಭ್ಯಾಸಗಳು ಆಳವಾಗಿ ನಡೆಯಲಿ. ಕನ್ನಡ ಸಾಹಿತ್ಯಕ್ಕೆ ಅವರು ಮತ್ತಷ್ಟು, ಮಗದಷ್ಟು ಕೃತಿಗಳನ್ನು ಕೊಡಲಿ. ಭರವಸೆಯ ಬರಹಗಾರನಾಗಿ ಮೂಡಿಬರಲಿ.

                      - ಡಾ. ಎಚ್.ಕೆ ವೆಂಕಟೇಶ
                   ಕನ್ನಡ ಸಹಾಯಕ ಪ್ರಾಧ್ಯಾಪಕರು
          ಸ.ಪ್ರ.ದ.ಕಾಲೇಜು, ತೆಂಕನಿಡಿಯೂರು, ಉಡುಪಿ
                 
                     

                                                                                                                  

ಸೋಮವಾರ, ಮಾರ್ಚ್ 20, 2017

'ಮುನ್ನುಡಿ' ಹೊತ್ತಗೆಯಲ್ಲಿರುವ ಒಂದು ಸುಂದರ ಬಾಲ್ಯದ ಲೇಖನ

                                                           
                                                         ಭೂರಂಗದಲಿ ವರ್ಷ ನರ್ತನ

 ಭೂರಮೆಯ ವಿಶಾಲರಂಗದಲ್ಲಿ ವರ್ಷನರ್ತಕಿಯ ನಾಟ್ಯ ಆರಂಭಗೊಳ್ಳುತ್ತಿದೆ. ಹಸಿರಿನುಡುಗೆಯನ್ನುಟ್ಟ ಪ್ರಕೃತಿಮಾತೆಯು, ಮಳೆಯ ಚುಂಬನದಿಂದ ಮುದಗೊಳ್ಳುತ್ತಿರುವ ಇಳಾಸೌಂದರ್ಯದ ಪ್ರತಿಬಿಂಬದಂತೆ ಕಾಣುತ್ತಿದ್ದಾಳೆ. ನಿತ್ಯನೂತನ ಪರಿಸರÀದ ಚರ್ಯೆಯೇ ಸಂಪೂರ್ಣ ಬದಲಾಗಿ, ಎಲ್ಲೆಲ್ಲೂ ಅರಳುವಿಕೆಯ ಸೊಬಗೇ ರಂಜಿಸುತ್ತಿದೆ. ಮಳೆಯ ನವವಿಲಾಸದ ನಾಟ್ಯಕ್ಕೆ ಪಟಪಟ ಸದ್ದು ಜೊತೆಗೂಡಿ ಅದೃಶ್ಯವಾಗುತ್ತಿದೆ. ಹೊರಗೆ ಇಳೆ ಹಾಗೂ ಮಳೆಯ ಚೆಲ್ಲಾಟ ಸಾಗುತ್ತಿದ್ದರೆ, ಮನದಲ್ಲಿ ಹಿಂದಿನ ನೆನಪುಗಳೆಲ್ಲವೂ ಮರುಕಳಿಸುತ್ತಿದೆ. ಬೇಸಿಗೆಯಲ್ಲಿ ಬೆವರಿಳಿಸಿಕೊಂಡು ಅಂಗಳದಲ್ಲಿ ಕುಣಿದು, ಕುಪ್ಪಳಿಸಿ ಸಂಜೆವೇಳೆಗೆ ಮನೆಗೆ ಬರುವ ಸಮಯವು ಮುಗಿದು, ಈಗ ಬೆಚ್ಚನೇ ಮನೆಯೊಳಗೆ ಸೇರಿಕೊಳ್ಳುವ ಕಾಲ ಬಂದಿದೆ.
ನಾವೆಲ್ಲಾ ಹಳ್ಳಿಹುಡುಗರು. ತ್ರಿಕಾಲದಲ್ಲಿಯೂ ಪ್ರಾಕೃತಿಕ ಸೊಗಸನ್ನು ಕಣ್ತುಂಬಿಕೊಂಡೇ ಬೆಳೆದವರು. ರಾತ್ರಿಯಿಂದ ಬೆಳಗಿನವರೆಗೂ ವಿಪರೀತ ಗುಡುಗು, ಸಿಡಿಲುಗಳಿಂದ ಕೂಡಿದ ಮಳೆಯು ಒಂದೇ ಸಮನೇ ಸುರಿಯುವುದು ಸಾಮಾನ್ಯಸಂಗತಿ. ಆಗಾಗ ಮನೆಯ ಹಂಚಿನ ಒಡಕಿನಿಂದ ಹೊರಗಿನ ನೀರು ನುಸುಳಿಕೊಂಡು ಒಳಸೇರಿ ತೊಂದರೆಕೊಡುತ್ತದೆ. ಬೆಳಗ್ಗೆಯಾದರೂ ಸುಖವಿದೆಯೇ? ಅದೂ ಇಲ್ಲ; ಮೊದಲೇ ಹುಚ್ಚುಮಳೆ. ಅದರೊಂದಿಗೆ ಕೊರೆವ ಚಳಿಯಲ್ಲಿ ಹೊದ್ದು ಮಲಗೋಣವೆಂದರೆ, ಗಡಿಯಾರದ ಮುಳ್ಳು ಆಗಲೇ ಎಂಟುಗಂಟೆಗೆ ಹೋಗಿ ನಿಂತಿರುತ್ತಿತ್ತು. ಮನೆಯವರ ನಿಲ್ಲದ ಕಿರಿಕಿರಿಯ ನಡುವೆ ಸ್ನಾನಮಾಡಿ, ತಿಂಡಿತಿಂದು ಮೂಲೆಯಲ್ಲಿ ಬಿದ್ದಿದ್ದ ಕೊಡೆ, ಬ್ಯಾಗನ್ನು ಬೆನ್ನಿಗೆ ಏರಿಸಿಕೊಂಡು ಶಾಲೆಗೆ ಹೊರಡುವಾಗ ದೊಡ್ಡ ಯಜ್ಞವನ್ನೇ ಮಾಡಿದ ಅನುಭವವಾಗುತ್ತಿತ್ತು.
ಅದರಲ್ಲೂ ಈಗಿನ ಹೈವೇಗಳಿಲ್ಲದ ಹಳ್ಳಿಯ ಕೊರಕಲುದಾರಿಯಲ್ಲಿ ಹಳ್ಳ ಕೊಳಗಳದೇ ಸಾಮ್ರಾಜ್ಯ. ಅಲ್ಲೋ ಮಳೆನೀರು ತುಂಬಿಕೊಂಡು, ಕಾಲಿಟ್ಟರೆ ತೇಲಿಸಿಕೊಂಡು ಹೋಗುವ ಸುಳಿ! ಇದೆಲ್ಲದರ ನಡುವೆಯೂ ನಾವು ಶಾಲೆಗೆ ಹೋಗಲೇಬೇಕಿತ್ತು. ಹೊತ್ತಾಗಿರುತ್ತಿದ್ದ ಕಾರಣದಿಂದ ಓಡಿಕೊಂಡು ಹೋಗುವುದಲ್ಲದೇ ಬೇರೆ ಉಪಾಯವೇ ಇರುತ್ತಿರಲಿಲ್ಲ. ಶಾಲೆಯ ಮಧ್ಯಾಹ್ನದ ಊಟದ ಬಿಡುವಿನಲ್ಲಿ ಒಬ್ಬೊಬ್ಬರನ್ನೂ ಕಾಲಿಡಾರ್‍ನಲ್ಲಿ  ಬಾತುಕೋಳಿಯಂತೆ ಕೂರಿಸಿಕೊಂಡು ಎಳೆದಾಡುವ ಆಟಸಾಗುತ್ತಿತ್ತು. ಬಿದ್ದರೆ ತಿಂಗಳ ಆರೈಕೆ ಖಂಡಿತ. ಆದರೆ, ಇದೆಲ್ಲ ಆ ಸಮಯದಲ್ಲಿ ಎಲ್ಲಿ ನೆನಪಿಗೆ ಬರುತ್ತದೆ ಹೇಳಿ. ಇನ್ನು ತರಗತಿಯಲ್ಲಿ ನಾವು ಕುಳಿತುಕೊಂಡಿದ್ದರೂ ಮನಸ್ಸು ಪಾಠ ಕೇಳುವುದಕ್ಕಿಂತ ಹೆಚ್ಚಾಗಿ ಹೊರಗಡೆಯೇ ಉತ್ಸುಕಗೊಳ್ಳುತ್ತಿರುತ್ತದೆ. ಸಂಜೆಯ ಕೊನೆಯ ಬೆಲ್ಲಿನ ಸದ್ದಾಗುವುದೇ ತಡ ಒಂದೇ ಓಟಕ್ಕೇ ಹೊರಗೋಡುತ್ತಿದ್ದೆವು. ದಾರಿಯಲ್ಲಿ ಬರುವಾಗ, ಮಳೆಬಂದು ನೀರುನಿಂತಲ್ಲೆಲ್ಲಾ ಕಾಲು ಜಾರಿಸಿ ಆಟವಾಡುತ್ತಾ ಮನೆಗೆ ಬರುವಾಗ ಪೂರ್ಣ ಒದ್ದೆಯ ಮುದ್ದೆಗಳೇ. ಮನೆಗೆ ಬಂದ ಬಳಿಕ ಧರಿಸಿದ ಬಟ್ಟೆಯನ್ನು ಕಿತ್ತೆಸೆದು ಬೆಂಕಿಯ ಬುಡದಲ್ಲಿ ಕುಳಿತರೆ ಮತ್ತೆ ಸದ್ಯಕ್ಕೆ ಅಲ್ಲಿಂದ ಕದಲುವ ಮಾತೇ ಇರಲಿಲ್ಲ. ಒಲೆಯಲ್ಲಿ ಬೆಂಕಿಯ ಕಾವು ಕ್ಷೀಣಿಸಿದಾಗ ಕುರುಕಲು ತಿಂಡಿಯ ನೆನಪಾಗುತ್ತಿತ್ತು. ಬೇಸಿಗೆಯಲ್ಲಿ ಮೊದಲೇ ಮಾಡಿಟ್ಟ ಹಲಸಿನ ಹಪ್ಪಳವೋ, ಸಂಡಿಗೆಯೋ ಲೆಕ್ಕವಿಲ್ಲದೇ ಸುಟ್ಟು, ಕರಿದು ಬಾಯಿಗೆ ಆಹುತಿಯಾಗುತ್ತಿತ್ತು. ಇವಿಷ್ಟೇ ಅಲ್ಲದೆ, ಕೆಲವೊಮ್ಮೆ ಹಲಸಿನ ಬೀಜವನ್ನೂ, ಒಣಗಿಸಿಟ್ಟ ಗೇರುಬೀಜವನ್ನೂ ಸುಟ್ಟುತಿನ್ನುವುದಿತ್ತು. ಅಷ್ಟರಲ್ಲಿ ಮತ್ತೆ ಮಳೆಯ ಆರ್ಭಟ ಪ್ರಾರಂಭವಾಗಿ ಗೂಡುಸೇರುವ ಹಕ್ಕಿಗಳಂತೆ, ಮುಸುಕಿನ ಮರೆಯಲ್ಲಿ ಮರೆಯಾಗುತ್ತಿದ್ದೆವು.
ಸುತ್ತಲೂ ಎತ್ತರದ ಮರಗಳಿಂದಲೇ ಕೂಡಿದ ಪರಿಸರವಾದ್ದರಿಂದ ಒಂದು ಸಲ ಹೋದ ಕರೆಂಟಿನ ಮುಖದರ್ಶನವಾಗುತ್ತಿದ್ದುದು ಹದಿನೈದು ಇಪ್ಪತ್ತು ದಿನಗಳ ಬಳಿಕವೇ! ಅಲ್ಲಿವರೆಗೆ ಬೇಸರ ಕಳೆಯಲು ಚಿಮಣಿ ಬೆಳಕಿನಲ್ಲಿಯೇ ಮನೆಯವರೆಲ್ಲರಿಂದ ಪಗಡೆಯಾಡುವುದೋ, ಹಾವುಏಣಿ ಹತ್ತಿಸುವುದೋ ಏನೋ ಒಂದಾಟ ಸಾಗುತ್ತಿತ್ತು. ರಾತ್ರಿಯಾಗುತ್ತಿದ್ದಂತೆಯೇ ಗಾಳಿಗೆ ದೀಪವೂ ನಿಲ್ಲುತ್ತಿರಲಿಲ್ಲ. ಕೈತೊಳೆಯಲು ಮಳೆಯಿಂದ ಹೊರಗೆ ಹೋಗುವುದಕ್ಕೂ ಆಗದೇ ಪೇಚಾಟ ಪ್ರಾರಂಭ. ಹಳೆಯ ಮನೆಯಾದ್ದರಿಂದ ಮಳೆಯ ನೀರಿಗೂ ನಿರ್ಭಯವಾಗಿ ಒಳಬರಲು ವಿಫುಲ ಅವಕಾಶವಿತ್ತು! ಹೇಳಿಕೊಳ್ಳುವುದಕ್ಕೆ ಮೂರ್ನಾಲ್ಕು ಕೋಣೆಗಳಿದ್ದರೂ ಅದರಲ್ಲಿ ಬೆಚ್ಚಗಿನಕೋಣೆ ಒಂದೇ. ಆ ನಡುಮನೆಯಲ್ಲಿಯೇ ನಮ್ಮ ಆಟ, ಕೂಟ, ಶಯನೋತ್ಸವ ಎಲ್ಲವೂ.
ಮತ್ತೆ ಮರುದಿನ ಯಥಾಪ್ರಕಾರದ ಗೋಳು;ಶಾಲೆಗೆ ಹೊರಡುವುದು. ಹೇಗೋ ಹೊರಡುತ್ತಿದ್ದೆವು. ದಾರಿಯಲ್ಲಿ ತಿರುಗಾಡುವ ವಾಹನಗಳಿಗೋ ಅತೀವ ಅಹಂಕಾರ. ಬಡಪಾಯಿಗಳಾಗಿ ಹೋಗುತ್ತಿದ್ದ ನಮ್ಮ ಮೇಲೆ ಕೆಸರುಮಿಶ್ರಿತ ನೀರನ್ನು ಹಾರಿಸಿಕೊಂಡೇ ಹೋಗುವುದು. ಮೊದಲೇ ಗಡಿಬಿಡಿ, ಅದರಲ್ಲಿ ಇದರ ಕಾಟದಿಂದಾಗಿ ಶಾಲೆಗೆ ಹೋಗುವಾಗಲೇ ನಾವು ಒದ್ದೆ. ಅಲ್ಲಾದರೂ ಸುಖವಿದೆಯೇ? ಅಲ್ಲೂ ಅದೇ ಅವಸ್ಥೆ! ಒಡಕು ಹಂಚಿನ ಕೊನೆಯಿಂದ ಸುರಿವ ಮಳೆಯ ಆಗಮನ. ಮಳೆಯ ಜೊತೆಯಲ್ಲಿಯೇ ಚಳಿಯೂ ನಮ್ಮನ್ನು ರೇಗಿಸುತ್ತಿರುತ್ತದೆ. ಒಮ್ಮೊಮ್ಮೆ ಬಹಳ ಚಳಿಯಾದಾಗ, ನಮ್ಮ ಅವಸ್ಥೆಯನ್ನು ನೋಡುವುದಕ್ಕಾಗದೇ ಶಿಕ್ಷಕರು ಬೆತ್ತದ ಬಿಸಿ ಮುಟ್ಟಿಸುತ್ತಿದ್ದರು! ಅದೇ ವೇಳೆಗೆ ‘ಹುಯ್ಯೋ ಹುಯ್ಯೋ ಮಳೆರಾಯ ಮಾವಿನ ತೋಟಕೆ ನೀರಿಲ್ಲ’ ಎಂಬ ಪದ್ಯವೂ ಕಿವಿದೆರೆಗೆ ಬೀಳುತ್ತಿತ್ತು. ಮಳೆಗಾಲ ಬಂತೆಂದರೆ ಇನ್ನೂ ಒಂದು ಮಹತ್ವದ ಸಂಗತಿ ನೆನಪಾಗುತ್ತದೆ. ಒದ್ದೆಯಾಗದಿರಲಿ ಎಂದು ಪುಸ್ತಕಕ್ಕೆ ಕಾಕಿ ಬೈಂಡ್ ಹಾಕಿ, ಅದಕ್ಕೆ ಹೆಸರಿನ ಸ್ಟಿಕ್ಕರ್ ಅಂಟಿಸುವ ಜಾಣ್ಮೆ.
ನಿತ್ಯವೂ ನಾವು ಶಾಲೆಗೆ ಹೋಗುವ ದಾರಿಯಲ್ಲಿ ಒಂದಿಲ್ಲೊಂದು ಮರ ಬಿದ್ದೇ ಇರುತ್ತಿತ್ತು. ಅಷ್ಟೇ ಅಲ್ಲದೇ, ‘ಮತ್ತೊಂದು ಯಾವಾಗ ಬೀಳುತ್ತದೆಯಪ್ಪಾ..’ ಎಂಬ ಸಣ್ಣ ಭಯವೂ ನಮ್ಮಿಂದ ದೂರಸರಿಯುತ್ತಿರಲಿಲ್ಲ. ಘಟ್ಟಪ್ರದೇಶದ ಗಾಳಿಯ ಭೀಕರತೆಯ ಕುರಿತು ಹೇಳುವುದಕ್ಕೆ ಸಾಧ್ಯವೇ ಇಲ್ಲ. ಅದನ್ನು ಅನುಭವಿಸಿಯೇ ತಿಳಿಯಬೇಕು. ಒಮ್ಮೊಮ್ಮೆ ರಭಸವಾಗಿ ಬಂತೆಂದರೆ, ಕೈಯ್ಯಲ್ಲಿ ಹಿಡಿದ ಎಂಥಹಾ ಕೊಡೆಯೂ ತಿರುವು ಮುರುವಾಗುವುದರಲ್ಲಿ ಸಂಶಯವಿಲ್ಲ.  ಪಿರಿಪಿರಿ ಮಳೆ ಬರುತ್ತಿದ್ದರೂ ಕೊಡೆ ಬಿಡಿಸುವಂತಿಲ್ಲ. ಬಿಡಿಸಿದರೆ ಅದರ ಸಮೇತ ಗಾಳಿ ನಮ್ಮನ್ನೂ ಹಾರಿಸಿಕೊಂಡೇ ಹೋಗುವುದು. ಬಿಡಿಸದೇ ಇದ್ದರೂ ಉಪಾಯವುಂಟೇ? ತಲೆನೆನೆಯುವುದಕ್ಕೆ ಅಷ್ಟೇ ಸಾಕಾಗುತ್ತದೆ. ಮುಂದೆ ಹಿಡಿದರೆ, ಬೆನ್ನಿನ ಚೀಲ ಒದ್ದೆ; ಹಿಂದೆ ಹಿಡಿದರೆ ತಲೆಯೂ ಒದ್ದೆ. ಗಾಳಿಗೆ ಕೊಡೆಯ ಕಥೆಯೂ ಮುಗಿದಂತೆಯೇ. ಆಗಾಗ ರಸ್ತೆ ಬದಿಯಲ್ಲಿ ಹೋಗುವಾಗ ವಾಹನಗಳ ಮಳೆಯ ಸುರಿತದಲ್ಲಿ ವಾಹನವೂ ಕಾಣಿಸದು. ಇದೆಲ್ಲದರ ನಡುವೆ ನಮ್ಮ ಪಯಣ. ಗಾಳಿಯ ಅಹಂಕಾರಕ್ಕೆ ಸವಾಲೊಡ್ಡುವುದಕ್ಕೆ ಒಂದಿಷ್ಟು ದಿನ ಮಳೆಕೋಟನ್ನೂ ಹಾಕಿದ್ದಾಯಿತು. ಆದರೆ ಅದನ್ನು ಹಾಕಿ, ಬಿಚ್ಚುವ ಅವಸರದಲ್ಲಿ ಅದೆಷ್ಟು ದಿನ ಹರಿಯದೇ ಉಳಿದುಕೊಳ್ಳುತ್ತದೆ ಹೇಳಿ. ಇದೇ ಅವಸ್ಥೆಯ ವ್ಯವಸ್ಥೆಯಲ್ಲಿಯೇ ಹತ್ತುವರ್ಷ ಶಾಲೆಗೆ ತಿರುಗಾಡಿದ್ದು ಗೊತ್ತೇ ಆಗಲಿಲ್ಲ. ಹಳ್ಳಿಯ ಮಣ್ಣಿನಮನೆಗಳಲ್ಲಿ ನಾವಷ್ಟೇ ಇರುವುದಲ್ಲ. ಮೊದಮೊದಲು ಅಪೂರ್ವಕ್ಕೆ ಸಣ್ಣ ಹಾವಿನ ಮರಿಯೋ, ಚೇಳೋ ನಮ್ಮೆಲ್ಲರ ಯೋಗಕ್ಷೇಮ ವಿಚಾರಣೆಗಾಗಿ ಮನೆಯೊಳಗೆ ಬರುವುದಿತ್ತು. ಬಂದು ಒಂದಿಷ್ಟು ಸಮಯ ನೆಂಟರಂತೆ ಇದ್ದು, ಮತ್ತೆ ಎಲ್ಲಿಗೋ ಸಾಗಿಬಿಡುತ್ತಿದ್ದವು. ಆದರೆ, ಈಗ ಕೇವಲ ವಿವಿಧ ಬಗೆಯ ಹುಳಗಳು ಮಾತ್ರ ಬಂದುಹೋಗುತ್ತಿರುತ್ತವೆ. ಹಿಂದಿನವರ ಹೆಸರನ್ನು ನೆನಪಿಸುವ ಮಟ್ಟಿಗಷ್ಟೇ!
ವಿಷಾದದ ಸಂಗತಿ ಎಂದರೆ ಪೇಟೆಯ ಮಕ್ಕಳಿಗೆ ಇದ್ಯಾವುದರ ಪರಿಚಯವೂ ಇಲ್ಲ. ಕಾರು, ಆಟೋಗಳಲ್ಲಿಯೇ ಅವರ ಪಯಣ ವಾದ್ದರಿಂದ ಇಂತಹ ಅನುಭವಗಳಿಂದ ಅವರು ವಂಚಿತರಾಗುತ್ತಿದ್ದಾರೆ. ಎಲ್ಲವೂ ಆಧುನಿಕವಾದಂತೆ ಸಹಜಸುಂದರ ಅನುಭವಗಳು ಮೂಲೆಗುಂಪಾಗುತ್ತಿದೆ. ನಮಗೆ ಅಂದು ಕಳೆದ ಬಾಲ್ಯದ ಮಳೆಗಾಲ ಇಂದಿಗೂ ನೆನಪಿದೆ. ಆಡಿದ ತುಂಟಾಟಗಳು, ಮಾಡಿದ ಚೇಷ್ಟೆಗಳು ಸ್ಮøತಿಯಿಂದ ಸ್ವಲ್ಪವೂ ಮಾಸಿಲ್ಲ. ದುಃಖದ ಸಂಗತಿ ಎಂದರೆ, ಮಳೆಗಾಲ ಮತ್ತೆ ಮತ್ತೆ ಬರುತ್ತಿದ್ದರೂ ಆ ಸುಂದರ ನೆನಪುಗಳನ್ನು ಹೊತ್ತು ತರುತ್ತಿಲ್ಲ. ಆ ಸಂತೋಷವನ್ನು ಕೊಡುತ್ತಿಲ್ಲ. ಈಗೀಗ ಹಳ್ಳಿಗಳಲ್ಲಿಯೂ ಪಟ್ಟಣದ ಲಾಲಸೆ ಹೆಚ್ಚಾಗುತ್ತಿದೆ. ಹಾಗಾಗಿ ಇಲ್ಲಿಯೂ, ಮಳೆ ಮನೆಯ ಸದಸ್ಯನಾಗಿ ಉಳಿಯುತ್ತಿಲ್ಲ. ಆಗಾಗ ಬಂದು ಹೋಗುವ ನೆಂಟ ರಂತಾಗುತ್ತಿದೆ. ಇನ್ನು ಪೇಟೆಗಳ ಪರಿಸ್ಥಿತಿಯನ್ನು ವಿವರಿಸಿ ಹೇಳುವುದಕ್ಕೆ ಏನಿದೆ. ಅಲ್ಲಿ ಎಲ್ಲವೂ ಇದೆ; ಹಣವಿದ್ದರೆ! ಆದರೆ ನೆನಪಿಡಿ, ಹಣದಿಂದ ಪಡೆಯಲಾರದ ಬಹುತೇಕ ಸಹಜ ಸಂಗತಿಗಳನ್ನು ಹಳ್ಳಿಯ ನಿರ್ಮಲಪರಿಸರದಲ್ಲಿ ಪಡೆಯಬಹುದು. ನಾವೆಲ್ಲರೂ ಅದರ ಮಡಿಲಿನಲ್ಲಿಯೇ ಆಡಿ ಬಂದ ಕಾರಣ ನಮಗೆ ಎಂದಿಗೂ ಅವುಗಳ ಸಾಂಗತ್ಯ ಬೇಕೆನಿಸುತ್ತಲೇ ಇರುತ್ತದೆ...*


'ಮಹೀಂದ್ರ ಮಹಾಭಿಷ' ಪೌರಾಣಿಕ ಪ್ರಸಂಗಕೃತಿ

ಶಿವಕುಮಾರ ಬಿ.ಎ ಅಳಗೋಡು ಇವರ ‘ಮಹೀಂದ್ರ ಮಹಾಭಿಷ’ ಎಂಬ ಪೌರಾಣಿಕ ಪ್ರಸಂಗ

ಶಿವಕುಮಾರ ಬಿ.ಎ ಅಳಗೋಡು ಇವರ ‘ಮಹೀಂದ್ರ ಮಹಾಭಿಷ’ ಎಂಬ ಪೌರಾಣಿಕ ಪ್ರಸಂಗ ಈಗಾಗಲೇ ಮುದ್ರಿತ ರೂಪವನ್ನು ಪಡೆದುಕೊಂಡಿದೆ. ಶ್ರೀಮನ್ಮಹಾಭಾರತದ  ಆದಿಪರ್ವದಲ್ಲಿನ ಮಹಾಭಿಷನ ಕಥೆ ಇಲ್ಲಿಯ ವಸ್ತು. ಶಂತನು ಚಕ್ರವರ್ತಿಯ ಪೂರ್ವ ಜನ್ಮದ ಕಥೆಯನ್ನು ಹೊಂದಿದ ಈ ಪ್ರಸಂಗ ಕಾಲಮಿತಿಗೆ ಬಹಳ ಸುಂದರವಾಗಿ ಹೊಂದಿಕೊಳ್ಳುತ್ತದೆ. ಸುಲಲಿತ ಪ್ರಾಸ, ಛಂದೋಬದ್ಧ ಪದ್ಯಗಳು, ಪೌರಾಣಿಕ ಕಥಾಹಂದರ ಹೀಗೆ ಎಲ್ಲಾ ಅಂಶಗಳಿಂದಲೂ ಇದು ಗಮನ ಸೆಳೆಯುತ್ತದೆ. ಈಗಾಗಲೇ ಮೂರು ವರ್ಷದ ಹಿಂದೆ ಇದೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವ ಮಂಡಳಿಯಿಂದ ದೃಶ್ಯಚಿತ್ರೀಕರಣಗೊಂಡು ಅಪಾರ ಜನಮನ್ನಣೆಗಳಿಸಿದೆ. ಅಲ್ಲದೇ, ಅನೇಕ ಪ್ರದರ್ಶನಗಳನ್ನೂ ಕಂಡಿದೆ. ಸಾಮಾಜಿಕ ಪ್ರಸಂಗಗಳು ಭರದಿಂದ ಸಾಗುತ್ತಿರುವ ಈ ಕಾಲದಲ್ಲಿ ಇದೊಂದು ವಿಶೇಷವಾದ ಸೊಬಗನ್ನು ಒದಗಿಸುವುದರಲ್ಲಿ ಸಂಶಯವೇ ಇಲ್ಲ. ಈ ಪ್ರಸಂಗಕೃತಿಯ ಬೆಲೆ ಕೇವಲ 25. ಪುಸ್ತಕಕ್ಕಾಗಿ ಸಂಪರ್ಕಿಸಿ

9482703082

ಶಿವಕುಮಾರ ಬಿ.ಎ ಅಳಗೋಡು ಇವರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಮಾಲಿಕೆ ‘ಮುನ್ನುಡಿ’

ಶಿವಕುಮಾರ ಬಿ.ಎ ಅಳಗೋಡು ಇವರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಮಾಲಿಕೆ ‘ಮುನ್ನುಡಿ’ ಅತೀ ಶೀಘ್ರದಲ್ಲಿ ಪ್ರಕಟವಾಗಲಿಕ್ಕಿದೆ. ಇದೊಂದು ಕಿರು ಹೊತ್ತಗೆಯಾಗಿದ್ದು, ಎಲ್ಲರನ್ನೂ ಸೆಳೆಯುವ ಲೇಖನಗಳನ್ನು ತನ್ನೊಳಗೆ ಮೇಳೈಸಿಕೊಂಡಿದೆ. ಬಿಡಿ ಬಿಡಿ ಬರಹಗಳೆಂದು ಮೇಲ್ನೋಟಕ್ಕೆ ಕಂಡರೂ ಎಲ್ಲವೂ ಒಂದು ಕ್ರಮದಲ್ಲಿ, ಆಂತರಿಕ ಸಂಬಂಧದಲ್ಲಿ ರಚನೆಗೊಂಡಿದೆ. ಇಲ್ಲಿರುವ ಲೇಖನಗಳು ಒಟ್ಟು 17. ಅದರಲ್ಲಿ ಬಾಲ್ಯದ ಪರಿಸರ, ಬಾಲ್ಯದ ಶಾಲಾದಿನಗಳು, ವಿದ್ಯಾರ್ಥಿ ನಿಲಯದ ಮೆಲುಕು, ತಾರುಣ್ಯದ ಸಂಗತಿಗಳು, ಮದುವೆ, ದಾಂಪತ್ಯ, ಸ್ತ್ರೀಸಂವೇದನೆ, ವಾಸ್ತವ, ವಿಮರ್ಶಾತ್ಮಕ.,ಹೀಗೆ ವಿಭಿನ್ನ ಬಗೆಯ ಬರಹಗಳನ್ನು ಈ ಸಣ್ಣ ಪುಸ್ತಕದಲ್ಲಿ ಕಾಣಬಹುದು. ಎಳೆಯರಿಂದ ಹಳೆಯರವರೆಗೆ ಎಲ್ಲರೂ ಬೇಗನೇ ಓದಿ ಮುಗಿಸುವ, ಹಿಂದಿನ ನೆನಪುಗಳನ್ನು ಮರುಕಳಿಸುವ ಲೇಖನಗಳು ಇಲ್ಲಿವೆ. ಗಾತ್ರದಷ್ಟೇ ಬೆಲೆಯೂ ಕಡಿಮೆಯಲ್ಲಿರುತ್ತದೆ. ಒಂದಿಷ್ಟು ಸಮಯ ಮನಸ್ಸಿಗೆ ಆನಂದವನ್ನು ಕೊಡುವ ಈ ಪುಸ್ತಕವು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಗೊಂಡು ಎಲ್ಲರ ಕೈಸೇರಲಿದೆ. ಇದನ್ನು ಬಹುಸಂಖ್ಯೆಯಲ್ಲಿ ಕೊಂಡು ಓದಿ ಕೃತಿಕಾರರನ್ನು ಪ್ರೋತ್ಸಾಹಿಸಿ…

ರಾಜಾಂಗಣವೇರಿದ ಮಹೀಂದ್ರ ಮಹಾಭಿಷ

ಶಿವಕುಮಾರ ಬಿ.ಎ ಅಳಗೋಡು ಇವರ 'ಮುನ್ನುಡಿ' ಎಂಬ ಲೇಖನ ಮಾಲಿಕೆ ಅತೀ ಶೀಘ್ರದಲ್ಲಿ..