ಬುಧವಾರ, ಜುಲೈ 19, 2017

ನುಡಿಯು ನಡೆಯ ಕೈಗನ್ನಡಿ



ನುಡಿಯು ನಡೆಯ ಕೈಗನ್ನಡಿ

          ಜೀವನದಲ್ಲಿ ನಡೆ ಹಾಗೂ ನುಡಿಗಳ ಪಾತ್ರ ಬಹಳ ಮಹತ್ವಪೂರ್ಣವಾದುದು. ಇವೆರಡೂ ಪರಸ್ಪರ ಒಂದನ್ನೊಂದು ಪ್ರಭಾವಿಸುತ್ತಾ, ಒಂದರ ಪ್ರತಿಬಿಂಬ ಇನ್ನೊಂದಾಗುತ್ತ ಸಾಗುವಂಥವು. ನಡೆಗೆಟ್ಟ ನುಡಿಗಾಗಲಿ, ನುಡಿಗೆಟ್ಟ ನಡೆಗಾಗಲೀ ಈ ಲೋಕದ ವ್ಯವಹಾರದಲ್ಲಿ ಮಾನ್ಯತೆ ಎಂಬುದಿಲ್ಲ. ನುಡಿಯೇ ಪ್ರಧಾನವಾಗಿರುವ ಮೌಖಿಕ ಸಾಹಿತ್ಯದ ವಲಯದಲ್ಲಿ ಜನಪದರ ಬದುಕಿನ ಸಾರವೇ ಅಡಕವಾಗಿದೆ. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಪ್ರಾಜ್ಞರ ನುಡಿಯಲ್ಲಿ ಮಾತಿಗೂ ಮುತ್ತಿನ ಹಿರಿತನವನ್ನು ಆರೋಪಿಸಲಾಗಿದೆ. ಕೈ ಜಾರಿ ಒಡೆದುಹೋದ ಮುತ್ತುಗಳನ್ನು ಸರಿಪಡಿಸಿ ಮೊದಲಿನಂತೆಯೇ ಮಾಡುವುದು ಹೇಗೆ ಅಸಾಧ್ಯವೋ ಹಾಗೆಯೇ ಒಮ್ಮೆ ಆಡಿಹೋದ ಮಾತುಗಳನ್ನೂ ಕೂಡ ಸರಿಪಡಿಸಿ ಪ್ರಯೋಗಿಸಲಾಗದು. ಬರೆದ ಬರಹಗಳನ್ನಾದರೂ ಮುದ್ರಣ ಪೂರ್ವದಲ್ಲಿ ಸಾಕಷ್ಟು ಬಾರಿ ತಿದ್ದಿ ಪರಿಷ್ಕರಿಸಿಕೊಳ್ಳಬಹುದು. ಆದರೆ, ಆ ಕ್ಷಣಕ್ಕೆ ಬಂದುಹೋಗುವ ಮಾತುಗಳನ್ನು ಮುಂದೆಂದೂ ಪರಿಷ್ಕರಿಸಿಕೊಳ್ಳಲಾಗದು. 
        ನುಡಿಯ ಸ್ವರೂಪ ಹೇಗೆಂದರೆ, ಹರಿತವಾದ ಕತ್ತಿಯ ಮೇಲಿನ ನಡಿಗೆಯಿದ್ದಂತೆ. ತುಸು ಆಯತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಕತ್ತಿಯ ಮೇಲೆ ನಡೆಯುವಾಗ ಎಷ್ಟು ಜಾಗ್ರತೆ ವಹಿಸಬೇಕೋ ಅದಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ನುಡಿಯ ಸಂದರ್ಭದಲ್ಲಿ ವಹಿಸಬೇಕು. ನುಡಿ ಎಂಬ ಶಬ್ದದಲ್ಲಿನ ಅಕ್ಷರಗಳ ಸಂಖ್ಯೆ ಎರಡೇ ಆದರೂ, ಅದರೊಳಗೆ ಆರೋಪಿತವಾಗುವ ಅರ್ಥವ್ಯಾಪ್ತಿ ವಿಶಾಲ. ಕೇವಲ ಶ್ರವಣ ಮಾತ್ರದಿಂದಲೇ ಅನುಭವವೇದ್ಯವಾಗುವ ನುಡಿಯನ್ನು ಕೈಯಲ್ಲಿ ಹಿಡಿದು ತೂಗುವುದಕ್ಕಾಗಲೀ, ಕಣ್ಣಿನಿಂದ ಕಂಡು ಅಳೆಯುವುದಕ್ಕಾಗಲೀ ಸಾಧ್ಯವಿಲ್ಲ. ಹೀಗಿದ್ದರೂ ಅದು ಇಡೀ ಬಾಳ್ವೆಯ ಚಾರಿತ್ರ್ಯದ ಕೈಗನ್ನಡಿಯಾಗಿ ನಿಲ್ಲುತ್ತದೆ.
       ಮಾತಿನ ಬಗೆಗೆ ರೂಢಿಯಲ್ಲಿ ಸಾಕಷ್ಟು ವಾಕ್ಯಗಳು ರೂಪಗೊಂಡಿವೆ. ‘ಮಾತೇ ಮುತ್ತು; ಮಾತೇ ಮೃತ್ಯು’, ‘ಮಾತು ಮನೆ ಕೆಡಿಸಿತು’, ‘ಮಾತು ಬಲ್ಲವನಿಗೆ ಜಗಳವಿಲ್ಲ’... ಹೀಗೆ ಇನ್ನೂ ಅನೇಕಾನೇಕ ಸಾಲುಗಳನ್ನು ಗಮನಿಸಬಹುದು. ಮೃದು ಮಧುರವಾಗಿ ನುಡಿದರೆ ಮುತ್ತಾಗಿ ಪರಿಣಮಿಸುವ ಮಾತು, ಅತಿಯಾದರೆ, ಔಚಿತ್ಯವರಿಯದೇ ಪ್ರಯೋಗಗೊಂಡರೆ ಜೀವಿತಕ್ಕೇ ಕುತ್ತಾಗಿ ಮೃತ್ಯುರೂಪತಾಳುತ್ತದೆ. ಮಾತಿಗೆ ಮನೆಯನ್ನು ಕೂಡಿಸುವ ಸಾಮಥ್ರ್ಯವೂ ಇದೆ; ಕೆಡಿಸುವ ಶಕ್ತಿಯೂ ಇದೆ. ಹಾಗಾಗಿ, ಬಳಸಿಕೊಂಡಂತೆ ಬಾಗುವ ನುಡಿಯನ್ನು ಮಿತಗೊಳಿಸಿ, ಸಂದರ್ಭೋಚಿತವಾಗಿ ಹೊರಹೊಮ್ಮಿಸಬೇಕು.
     ಕನ್ನಡ ಸಾರಸ್ವತ ಲೋಕದ ಮೊಟ್ಟ ಮೊದಲ ಉಪಲಬ್ದ ಕೃತಿಯಾದ ಕವಿರಾಜಮಾರ್ಗದಲ್ಲಿ ಶ್ರೀವಿಜಯ ಹೀಗೆ ಹೇಳುತ್ತಾನೆ- ‘ನುಡಿಯಂ ಛಂದದೊಳೊಂದಿರೆ ತೊಡರ್ಚನಲರಿವಾತನಾತನಿಂದಂ ಜಾಣಂ’ ಎಂಬುದಾಗಿ. ಒಟ್ಟಂದದಲ್ಲಿ ಮಾತು ಛಂದಸ್ಸಿನ ಆವರಣದಿಂದ ಶೋಭಿಸಿದರೆ ಅದರ ತೂಕ ಮತ್ತಷ್ಟು ಹೆಚ್ಚಿದಂತೆಯೇ. 
       ಶರಣ ಸಂದೋಹದ ಮಾಲಿಕೆಯಲ್ಲಿ ಪದಕ ಸನ್ನಿಭನಾಭನಾಗಿ ಕಾಣಿಸಿಕೊಳ್ಳುವ ಬಸವಣ್ಣ, ನುಡಿಯ ಬಗೆಗೆ ಸುಂದರವಾದ ವಚನಗಳನ್ನು ರಚಿಸಿದ್ದಾನೆ. ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎಂಬುದಾಗಿ. ಮಾತಿನ ಕುರಿತು ಇಷ್ಟು ಚಂದದ ವಿವರಗಳನ್ನು ಬಹುಶಃ ಮತ್ಯಾರೂ ಕೊಟ್ಟಿರಲಿಕ್ಕಿಲ್ಲ. 
      ತ್ರಿಪದಿ ಎಂದ ಕೂಡಲೇ ಥಟ್ಟನೇ ನೆನಪಾಗುವ ಕವಿ ಸರ್ವಜ್ಞ. ಆತನೂ ಕೂಡ ಮಾತು, ಮಾತಿನ ಸ್ವರೂಪವನ್ನು ಸೊಗಸಾಗಿ ವಿವರಿಸುತ್ತಾನೆ. ‘ರಸಿಕನಾಡಿದ ಮಾತು ಶಶಿಯುದಯಿಸಿ ಬಂದಂತೆ, ರಸಿಕನಲ್ಲದವನ ಬರಿಮಾತು ಕಿವಿಗೆ ಕೂರ್ದಸಿಯ ಬಡಿದಂತೆ’ ಎಂದು. ಆತನೇ ಇನ್ನಿತರ ತ್ರಿಪದಿಯಲ್ಲಿ ಮಾತಿನ ಕುರಿತು ಹೀಗೆ ಹೇಳುತ್ತಾನೆ,- ‘ಹೊಲಬನರಿಯದ ಮಾತು, ತಲೆ ಬೇನೆ ಎದ್ದಂತೆ; ಹೊಲಬರಿತು ಒಂದು ನುಡಿದರೆ, ಅದು ದಿವ್ಯ ಫಲ’, ‘ಹೊತ್ತಿಗೊದಗಿದ ಮಾತು, ಸತ್ತವನು ಎದ್ದಂತೆ; ಹೊತ್ತಾಗಿ ನುಡಿದ ಮಾತು, ಕೈಜಾರಿದ ಮುತ್ತಿನಂತೆ’ ಎಂಬುದಾಗಿ. ಸರ್ವಜ್ಞನಿಗೆ ಮಾತೇ ಮಾಣಿಕ್ಯವಾದರೆ, ಅನುಭಾವಿ ಅಲ್ಲಮನಿಗೆ ‘ಮಾತೆಂಬುದು ಜ್ಯೋತಿರ್ಲಿಂಗ’ ವಾಗುತ್ತದೆ.
       ಲೋಕದಲ್ಲಿ ‘ನುಡಿದಂತೆ ನಡೆ’ ಎಂಬ ಮಾತಿದೆ. ಆಡಿದ ಹಾಗೆಯೇ ನಡೆದುಕೊಳ್ಳಬೇಕು ಎಂದು ಒಂದು ಬಗೆಯಲ್ಲಿ ಇದನ್ನು ಅರ್ಥೈಸಿಕೊಂಡರೆ, ನುಡಿದ ರೀತಿಯಲ್ಲಿಯೇ ನಡವಳಿಕೆಯೂ ಇರಬೇಕು ಎಂಬ ಇನ್ನೊಂದು ಅರ್ಥವನ್ನೂ ಇದಕ್ಕೆ ಆರೋಪಿಸಬಹುದಾಗಿದೆ. ಹೀಗೆ ನೋಡುವುದಾದರೆ, ನುಡಿಯು ನಡೆಯ ಕೈಗನ್ನಡಿಯಾಗಿಯೇ ಕಾಣಿಸಿಕೊಳ್ಳುತ್ತದೆ.
ಸಚ್ಚಾರಿತ್ರ್ಯವನ್ನು ಹೊಂದಿದವರ ನುಡಿಯೂ ಕೂಡ ಹಾಗೆಯೇ ಇರುತ್ತದೆ. ಸವಿ ನುಡಿಯು ಸುಸಂಸ್ಕøತ ವ್ಯಕ್ತಿತ್ವದ ಪ್ರತಿನಿಧಿಯೂ ಆಗುತ್ತದೆ. ನುಡಿಯು ಬೆಡಗಿನಿಂದಲೇ ಕೂಡಿರಬೇಕೆಂದಿಲ್ಲ; ಕಾಲ, ಸ್ಥಳ, ಸ್ಥಿತಿ, ಔಚಿತ್ಯವನ್ನರಿತು ಹೊರಬಂದರೆ ಅನಾಹುತಗಳಾಗುವ ಪ್ರಮಾಣ ತೀರಾ ವಿರಳವೆನ್ನಬಹುದು. ಹಾಗಾಗಿ ಕಾಲಿಡುವ ಮುನ್ನ ಕಣ್ಣಿಡು ಎಂಬಂತೆ, ಆಡುವ ಪೂರ್ವದಲ್ಲಿ ಆ ಮಾತನ್ನು ಅಳೆದು ತೂಗಿ ಆ ಬಳಿಕ ಆಡುವುದು ಉತ್ತಮ. ಇಲ್ಲವಾದಲ್ಲಿ ಅಪಾಯದ ಸರಮಾಲೆಯನ್ನೇ ಆಮಂತ್ರಿಸಿಕೊಳ್ಳಬೇಕಾಗುತ್ತದೆ. 

                                                                                                    - ಶಿವಕುಮಾರ ಬಿ. ಎ. ಅಳಗೋಡು