ಬುಧವಾರ, ಅಕ್ಟೋಬರ್ 25, 2017

ಶಿವಕುಮಾರ ಬಿ.ಎ. ಅಳಗೋಡು ಇವರಿಗೆ 2017 ನೇ ಸಾಲಿನ 'ಜ್ಯೋತಿ ಪುರಸ್ಕಾರ'




ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ 101 ನೇ ವಾರ್ಷಿಕ ಅಧಿವೇಷನದಲ್ಲಿ 2017ನೇ ಸಾಲಿನ ರಾಜ್ಯಮಟ್ಟದ 'ಜ್ಯೋತಿ ಪುರಸ್ಕಾರ' ವನ್ನು ಶ್ರೀಯುತ ಶಿವಕುಮಾರ ಬಿ.ಎ. ಅಳಗೋಡು ಇವರಿಗೆ ನೀಡಿ ಗೌರವಿಸಲಾಯಿತು. ಸೆಪ್ಟೆಂಬರ್ 25 ನೇ ತಾರೀಕು ತಲಪಾಡಿಯಲ್ಲಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮನು ಬಳಿಗಾರ್ ಶಿವಕುಮಾರರಿಗೆ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜ್ಯೋತಿ ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಯುತ ಪ್ರದೀಪ್ ಕಲ್ಕೂರ, ನೀಲಾವರ ಸುರೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

ಭಾನುವಾರ, ಅಕ್ಟೋಬರ್ 22, 2017


ಕಲಾತಪಸ್ವಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಯಕ್ಷಯಾನದ ಕೊನೆಯ 5 ಪೌರಾಣಿಕ ಪಾತ್ರಗಳು -
(ಶ್ರೀ ಬಂಗಾರಮಕ್ಕಿ ವೀರಾಂಜನೇಯ ದೇವರ ಸನ್ನಿಧಿಯಲ್ಲಿ)

ಶ್ರೀದೇವಿಮಹಾತ್ಮೆಯ 'ವಿದ್ಯುನ್ಮಾಲಿ' 21/09/2017
ರಾಜಸೂಯಾಧ್ವರದ 'ಮಾಗದ'       22/09/2017
ಮಹೀಂದ್ರ ಮಹಾಭಿಷ ಪ್ರಸಂಗದ 'ಬ್ರಹ್ಮ' 23/09/2017
ಶರಸೇತು ಬಂಧದ 'ಅರ್ಜುನ' 24/09/2017
ವಸುವರಾಂಗಿ ಪ್ರಸಂಗದ 'ಶಂತನು' 25/09/2017

ವಿಧಿವಶರಾಗಿದ್ದು : 03/10/2017 ರಾತ್ರಿ 9:30

ಕೃಪೆ : ಬಂಗಾರಮಕ್ಕಿ ದೇವಸ್ಥಾನ

ಶುಕ್ರವಾರ, ಅಕ್ಟೋಬರ್ 6, 2017






ಅಮೃತದ ಕಡಲು ಗೋವಿನೊಡಲು

|| ಭಾಮಿನಿ ಷಟ್ಪದಿ ||

ಎತ್ತಿದಾ ಕೂರಸಿಯು ಕತ್ತರಿ | 
ಸಿತ್ತು ಗೋವಿನ ಕುಸುಮ ಕತ್ತನು |
ನೆತ್ತರಿನ ಹೊಳೆ ಹರಿದು ಹೋಯಿತು | ಅತ್ತವರ ಕಾಣೆ || 
ನೆತ್ತಿಯಂಚಿನ ಕತ್ತಿಯರಿಯದೆ | 
ವಿತ್ತಕಷ್ಟೇ ಚಿತ್ತವಾಯಿತು |
ಮತ್ತಜನರರಿಯದೆಯೆ ಕೊಲುವರು | ಸುತ್ತುತಿಹ ಸಾವ! || 1 ||

ದಯೆಯೆ ಧರ್ಮದ ಮೂಲವೆಂಬರು | 
ದಯೆಯ ಮರೆಯುತ ಕೊಂದು ಕಳೆವರು |
ದಯೆಯ ಪರಿಧಿಗೆ ಭಯದ ಪರದೆಯನೆಳೆದು ಮೆರೆಯುವರು ||
ಜಯತು ಜಯವೆಂದೊರೆವ ಜನಕಪ | 
ಜಯವ ಹಾರೈಸುತಲಿ ನಡೆವರ |
ಪಯಣದಲಿ ತಿರುತಿರುಗಿ ಕಂಡರೆ ಪಾಪದಾ ಮೂಟೆ! || 2 ||

ಚಿಕ್ಕ ಹೊನ್ನಿನ ತತ್ತಿಯಿಕ್ಕಿದ | 
ಕುಕ್ಕುಟವ ನರನೋರ್ವನಾರ್ಜಿಸೆ |
ಹೊಕ್ಕಿತಾಸೆಯು ಗರ್ಭದೊಳಗಿನ್ನೇಸು ಇಹುದೆನುತ ||
ಸಿಕ್ಕದಾಯಿತು ದಕ್ಕದಾಯಿತು | 
ಮಕ್ಕಳಾಟಿಕೆಯಾಗಿ ಹೋಯಿತು |
ಸೊಕ್ಕಿನಿಂ ಗೋವನ್ನು ಕೊಂದರೆ ನೀನು ಇಂತಪ್ಪೆ


 || 3 ||

ಹಾಲನುರೆ ಚಪ್ಪರಿಸುತೀಜನ | 
ಹಾಲನಿತ್ತಾಕೆಯನೆ ಕಡಿವರು |
ಬಾಳ ಬೆಲೆಯೆಷ್ಟರ್ಥವಾಪುದು ಬಾಳ ಕುರುಡರಿಗೆ? || 
ಕಾಲನೆಳೆವರು ಗೋಣ ಮುರಿವರು | 
ಕಾಳಿನಷ್ಟೂ ನಲ್ಮೆದೋರರು |
ಹೇಳಿರೈ ನೀವ್ ತಡೆಯಿರೈ ನೀವ್ ನರಕ ನಿಮಗೆನುತ || 4 ||

ಮೊಸರು ಮಜ್ಜಿಗೆ ಹಾಲು ತುಪ್ಪದ | 
ರಸವ ಹೀರುತಲುದಯಿಸಿದ ಜನ |
ಪಶುವಿನುದರವ ಬಗೆವ ಪರಿಯನು ಕಾಣೆನೀಜಗದಿ ||
ಕುಶಲದಿಂದಾ ಪಶುವ ಸಲಹಲು | 
ಬಿಸಜಸುತನುರಿಗಣ್ಣ ಮುರರಿಪು |
ಜಸವನೆರೆವರು ಕುಂಭಿನಿಯೊಳೀ ನುಡಿಯು ಕಡುದಿಟವು || 5 ||

- ಶಿವಕುಮಾರ ಬಿ.ಎ. ಅಳಗೋಡು
 ಕನ್ನಡ ಉಪನ್ಯಾಸಕರು, ಪಿ.ಪಿ.ಸಿ

ಬುಧವಾರ, ಜುಲೈ 19, 2017

ನುಡಿಯು ನಡೆಯ ಕೈಗನ್ನಡಿ



ನುಡಿಯು ನಡೆಯ ಕೈಗನ್ನಡಿ

          ಜೀವನದಲ್ಲಿ ನಡೆ ಹಾಗೂ ನುಡಿಗಳ ಪಾತ್ರ ಬಹಳ ಮಹತ್ವಪೂರ್ಣವಾದುದು. ಇವೆರಡೂ ಪರಸ್ಪರ ಒಂದನ್ನೊಂದು ಪ್ರಭಾವಿಸುತ್ತಾ, ಒಂದರ ಪ್ರತಿಬಿಂಬ ಇನ್ನೊಂದಾಗುತ್ತ ಸಾಗುವಂಥವು. ನಡೆಗೆಟ್ಟ ನುಡಿಗಾಗಲಿ, ನುಡಿಗೆಟ್ಟ ನಡೆಗಾಗಲೀ ಈ ಲೋಕದ ವ್ಯವಹಾರದಲ್ಲಿ ಮಾನ್ಯತೆ ಎಂಬುದಿಲ್ಲ. ನುಡಿಯೇ ಪ್ರಧಾನವಾಗಿರುವ ಮೌಖಿಕ ಸಾಹಿತ್ಯದ ವಲಯದಲ್ಲಿ ಜನಪದರ ಬದುಕಿನ ಸಾರವೇ ಅಡಕವಾಗಿದೆ. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಪ್ರಾಜ್ಞರ ನುಡಿಯಲ್ಲಿ ಮಾತಿಗೂ ಮುತ್ತಿನ ಹಿರಿತನವನ್ನು ಆರೋಪಿಸಲಾಗಿದೆ. ಕೈ ಜಾರಿ ಒಡೆದುಹೋದ ಮುತ್ತುಗಳನ್ನು ಸರಿಪಡಿಸಿ ಮೊದಲಿನಂತೆಯೇ ಮಾಡುವುದು ಹೇಗೆ ಅಸಾಧ್ಯವೋ ಹಾಗೆಯೇ ಒಮ್ಮೆ ಆಡಿಹೋದ ಮಾತುಗಳನ್ನೂ ಕೂಡ ಸರಿಪಡಿಸಿ ಪ್ರಯೋಗಿಸಲಾಗದು. ಬರೆದ ಬರಹಗಳನ್ನಾದರೂ ಮುದ್ರಣ ಪೂರ್ವದಲ್ಲಿ ಸಾಕಷ್ಟು ಬಾರಿ ತಿದ್ದಿ ಪರಿಷ್ಕರಿಸಿಕೊಳ್ಳಬಹುದು. ಆದರೆ, ಆ ಕ್ಷಣಕ್ಕೆ ಬಂದುಹೋಗುವ ಮಾತುಗಳನ್ನು ಮುಂದೆಂದೂ ಪರಿಷ್ಕರಿಸಿಕೊಳ್ಳಲಾಗದು. 
        ನುಡಿಯ ಸ್ವರೂಪ ಹೇಗೆಂದರೆ, ಹರಿತವಾದ ಕತ್ತಿಯ ಮೇಲಿನ ನಡಿಗೆಯಿದ್ದಂತೆ. ತುಸು ಆಯತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಕತ್ತಿಯ ಮೇಲೆ ನಡೆಯುವಾಗ ಎಷ್ಟು ಜಾಗ್ರತೆ ವಹಿಸಬೇಕೋ ಅದಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ನುಡಿಯ ಸಂದರ್ಭದಲ್ಲಿ ವಹಿಸಬೇಕು. ನುಡಿ ಎಂಬ ಶಬ್ದದಲ್ಲಿನ ಅಕ್ಷರಗಳ ಸಂಖ್ಯೆ ಎರಡೇ ಆದರೂ, ಅದರೊಳಗೆ ಆರೋಪಿತವಾಗುವ ಅರ್ಥವ್ಯಾಪ್ತಿ ವಿಶಾಲ. ಕೇವಲ ಶ್ರವಣ ಮಾತ್ರದಿಂದಲೇ ಅನುಭವವೇದ್ಯವಾಗುವ ನುಡಿಯನ್ನು ಕೈಯಲ್ಲಿ ಹಿಡಿದು ತೂಗುವುದಕ್ಕಾಗಲೀ, ಕಣ್ಣಿನಿಂದ ಕಂಡು ಅಳೆಯುವುದಕ್ಕಾಗಲೀ ಸಾಧ್ಯವಿಲ್ಲ. ಹೀಗಿದ್ದರೂ ಅದು ಇಡೀ ಬಾಳ್ವೆಯ ಚಾರಿತ್ರ್ಯದ ಕೈಗನ್ನಡಿಯಾಗಿ ನಿಲ್ಲುತ್ತದೆ.
       ಮಾತಿನ ಬಗೆಗೆ ರೂಢಿಯಲ್ಲಿ ಸಾಕಷ್ಟು ವಾಕ್ಯಗಳು ರೂಪಗೊಂಡಿವೆ. ‘ಮಾತೇ ಮುತ್ತು; ಮಾತೇ ಮೃತ್ಯು’, ‘ಮಾತು ಮನೆ ಕೆಡಿಸಿತು’, ‘ಮಾತು ಬಲ್ಲವನಿಗೆ ಜಗಳವಿಲ್ಲ’... ಹೀಗೆ ಇನ್ನೂ ಅನೇಕಾನೇಕ ಸಾಲುಗಳನ್ನು ಗಮನಿಸಬಹುದು. ಮೃದು ಮಧುರವಾಗಿ ನುಡಿದರೆ ಮುತ್ತಾಗಿ ಪರಿಣಮಿಸುವ ಮಾತು, ಅತಿಯಾದರೆ, ಔಚಿತ್ಯವರಿಯದೇ ಪ್ರಯೋಗಗೊಂಡರೆ ಜೀವಿತಕ್ಕೇ ಕುತ್ತಾಗಿ ಮೃತ್ಯುರೂಪತಾಳುತ್ತದೆ. ಮಾತಿಗೆ ಮನೆಯನ್ನು ಕೂಡಿಸುವ ಸಾಮಥ್ರ್ಯವೂ ಇದೆ; ಕೆಡಿಸುವ ಶಕ್ತಿಯೂ ಇದೆ. ಹಾಗಾಗಿ, ಬಳಸಿಕೊಂಡಂತೆ ಬಾಗುವ ನುಡಿಯನ್ನು ಮಿತಗೊಳಿಸಿ, ಸಂದರ್ಭೋಚಿತವಾಗಿ ಹೊರಹೊಮ್ಮಿಸಬೇಕು.
     ಕನ್ನಡ ಸಾರಸ್ವತ ಲೋಕದ ಮೊಟ್ಟ ಮೊದಲ ಉಪಲಬ್ದ ಕೃತಿಯಾದ ಕವಿರಾಜಮಾರ್ಗದಲ್ಲಿ ಶ್ರೀವಿಜಯ ಹೀಗೆ ಹೇಳುತ್ತಾನೆ- ‘ನುಡಿಯಂ ಛಂದದೊಳೊಂದಿರೆ ತೊಡರ್ಚನಲರಿವಾತನಾತನಿಂದಂ ಜಾಣಂ’ ಎಂಬುದಾಗಿ. ಒಟ್ಟಂದದಲ್ಲಿ ಮಾತು ಛಂದಸ್ಸಿನ ಆವರಣದಿಂದ ಶೋಭಿಸಿದರೆ ಅದರ ತೂಕ ಮತ್ತಷ್ಟು ಹೆಚ್ಚಿದಂತೆಯೇ. 
       ಶರಣ ಸಂದೋಹದ ಮಾಲಿಕೆಯಲ್ಲಿ ಪದಕ ಸನ್ನಿಭನಾಭನಾಗಿ ಕಾಣಿಸಿಕೊಳ್ಳುವ ಬಸವಣ್ಣ, ನುಡಿಯ ಬಗೆಗೆ ಸುಂದರವಾದ ವಚನಗಳನ್ನು ರಚಿಸಿದ್ದಾನೆ. ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎಂಬುದಾಗಿ. ಮಾತಿನ ಕುರಿತು ಇಷ್ಟು ಚಂದದ ವಿವರಗಳನ್ನು ಬಹುಶಃ ಮತ್ಯಾರೂ ಕೊಟ್ಟಿರಲಿಕ್ಕಿಲ್ಲ. 
      ತ್ರಿಪದಿ ಎಂದ ಕೂಡಲೇ ಥಟ್ಟನೇ ನೆನಪಾಗುವ ಕವಿ ಸರ್ವಜ್ಞ. ಆತನೂ ಕೂಡ ಮಾತು, ಮಾತಿನ ಸ್ವರೂಪವನ್ನು ಸೊಗಸಾಗಿ ವಿವರಿಸುತ್ತಾನೆ. ‘ರಸಿಕನಾಡಿದ ಮಾತು ಶಶಿಯುದಯಿಸಿ ಬಂದಂತೆ, ರಸಿಕನಲ್ಲದವನ ಬರಿಮಾತು ಕಿವಿಗೆ ಕೂರ್ದಸಿಯ ಬಡಿದಂತೆ’ ಎಂದು. ಆತನೇ ಇನ್ನಿತರ ತ್ರಿಪದಿಯಲ್ಲಿ ಮಾತಿನ ಕುರಿತು ಹೀಗೆ ಹೇಳುತ್ತಾನೆ,- ‘ಹೊಲಬನರಿಯದ ಮಾತು, ತಲೆ ಬೇನೆ ಎದ್ದಂತೆ; ಹೊಲಬರಿತು ಒಂದು ನುಡಿದರೆ, ಅದು ದಿವ್ಯ ಫಲ’, ‘ಹೊತ್ತಿಗೊದಗಿದ ಮಾತು, ಸತ್ತವನು ಎದ್ದಂತೆ; ಹೊತ್ತಾಗಿ ನುಡಿದ ಮಾತು, ಕೈಜಾರಿದ ಮುತ್ತಿನಂತೆ’ ಎಂಬುದಾಗಿ. ಸರ್ವಜ್ಞನಿಗೆ ಮಾತೇ ಮಾಣಿಕ್ಯವಾದರೆ, ಅನುಭಾವಿ ಅಲ್ಲಮನಿಗೆ ‘ಮಾತೆಂಬುದು ಜ್ಯೋತಿರ್ಲಿಂಗ’ ವಾಗುತ್ತದೆ.
       ಲೋಕದಲ್ಲಿ ‘ನುಡಿದಂತೆ ನಡೆ’ ಎಂಬ ಮಾತಿದೆ. ಆಡಿದ ಹಾಗೆಯೇ ನಡೆದುಕೊಳ್ಳಬೇಕು ಎಂದು ಒಂದು ಬಗೆಯಲ್ಲಿ ಇದನ್ನು ಅರ್ಥೈಸಿಕೊಂಡರೆ, ನುಡಿದ ರೀತಿಯಲ್ಲಿಯೇ ನಡವಳಿಕೆಯೂ ಇರಬೇಕು ಎಂಬ ಇನ್ನೊಂದು ಅರ್ಥವನ್ನೂ ಇದಕ್ಕೆ ಆರೋಪಿಸಬಹುದಾಗಿದೆ. ಹೀಗೆ ನೋಡುವುದಾದರೆ, ನುಡಿಯು ನಡೆಯ ಕೈಗನ್ನಡಿಯಾಗಿಯೇ ಕಾಣಿಸಿಕೊಳ್ಳುತ್ತದೆ.
ಸಚ್ಚಾರಿತ್ರ್ಯವನ್ನು ಹೊಂದಿದವರ ನುಡಿಯೂ ಕೂಡ ಹಾಗೆಯೇ ಇರುತ್ತದೆ. ಸವಿ ನುಡಿಯು ಸುಸಂಸ್ಕøತ ವ್ಯಕ್ತಿತ್ವದ ಪ್ರತಿನಿಧಿಯೂ ಆಗುತ್ತದೆ. ನುಡಿಯು ಬೆಡಗಿನಿಂದಲೇ ಕೂಡಿರಬೇಕೆಂದಿಲ್ಲ; ಕಾಲ, ಸ್ಥಳ, ಸ್ಥಿತಿ, ಔಚಿತ್ಯವನ್ನರಿತು ಹೊರಬಂದರೆ ಅನಾಹುತಗಳಾಗುವ ಪ್ರಮಾಣ ತೀರಾ ವಿರಳವೆನ್ನಬಹುದು. ಹಾಗಾಗಿ ಕಾಲಿಡುವ ಮುನ್ನ ಕಣ್ಣಿಡು ಎಂಬಂತೆ, ಆಡುವ ಪೂರ್ವದಲ್ಲಿ ಆ ಮಾತನ್ನು ಅಳೆದು ತೂಗಿ ಆ ಬಳಿಕ ಆಡುವುದು ಉತ್ತಮ. ಇಲ್ಲವಾದಲ್ಲಿ ಅಪಾಯದ ಸರಮಾಲೆಯನ್ನೇ ಆಮಂತ್ರಿಸಿಕೊಳ್ಳಬೇಕಾಗುತ್ತದೆ. 

                                                                                                    - ಶಿವಕುಮಾರ ಬಿ. ಎ. ಅಳಗೋಡು
    

ಭಾನುವಾರ, ಏಪ್ರಿಲ್ 30, 2017


ಅಪೂರ್ವ ಧ್ವನಿ,ಚಿತ್ರ,ದೃಶ್ಯಗಳ ಸಂಗ್ರಹಕಾರ – ಸುಧೇಶ್ ಶೆಟ್ಟಿ

ಬದುಕಿರುವಾಗ ವ್ಯಕ್ತಿಯ ದೇಹದೊಳಗಿರುವ ಜೀವ ಆತನನ್ನು ಜೀವಂತವಾಗಿರಿಸಿದರೆ, ಮಡಿದಮೇಲೆಯೂ ಜೀವಂತಗೊಳಿಸುವುದು ನೆನಪುಗಳಷ್ಟೇ. ಬದುಕಿರುವಾಗ ಸವಿದ ಎಷ್ಟೋ ಸಂಗತಿಗಳೂ ಕೂಡ ಅವರನ್ನು ಅಗಲಿದ ಮೇಲೆ ಕಾಡುವುದಕ್ಕೆ ಪ್ರಾರಂಭಿಸುತ್ತವೆ. ಎಲ್ಲವನ್ನೂ ಕಳೆದುಕೊಂಡ ಮೇಲೆ ಕಳೆದುಹೋದವರ ಕುರಿತು ಒಲವು ಅತಿಯಾಗುತ್ತದೆ. ಆದರೆ, ಅಷ್ಟರಲ್ಲಾಗಲೇ ಎಲ್ಲವೂ ನಮ್ಮಿಂದ ದೂರಾಗಿಬಿಟ್ಟಿರುತ್ತವೆ. ಒಬ್ಬ ವ್ಯಕ್ತಿ ನಮಗೆ ಪರಿಚಿತನಾಗಿದ್ದರೆ, ಆತನ ಮರಣದ ನಂತರವೂ ನಮ್ಮನ್ನು ಸುತ್ತಿಕೊಳ್ಳುವುದು ಸಹಜ. ಒಂದು ಕ್ಷಣದ ಮಾತ್ರಕ್ಕೂ ಕಂಡಿರದ ವ್ಯಕ್ತಿತ್ವವೊಂದರ ಕುರಿತು ಎಳವೆಯಿಂದಲೇ ಆಕರ್ಷಿತರಾಗಿ, ಅವರನ್ನು ಆಳವಾಗಿ ಅರಿಯುವ ಮನಮಾಡುವವರು ವಿರಳಾತಿವಿರಳ. ಈ ಪೀಠಿಕೆ ಮುಂದಿನ ಕಥೆಗೆ ಎಂದೂ ತೊಡಕುಂಟುಮಾಡುವಂಥದ್ದಲ್ಲ.
ಯಕ್ಷಲೋಕದಲ್ಲಿ ಒಂದು ಹೊಸಬಗೆಯ ಅಲೆಯನ್ನೇ ಸೃಷ್ಟಿಸಿ, ದಶಕದಶಕಗಳೇ ಕಳೆದುಹೋದರೂ ಮಾನಸರಂಗದಲ್ಲಿ ನರ್ತಿಸುತ್ತಿರುವ ಚೇತನ, ಗುಂಡ್ಮಿಕಾಳಿಂಗ ನಾವಡರು. ಇವರ ಗಾನಮಾಧರ್ಯಕ್ಕೆ ಮನಸೋಲದ ಮನಸ್ಸುಗಳೇ ಇಲ್ಲವೆನ್ನಬಹುದು. ಏರು ಶೃತಿಯ ರಂಗಸೂತ್ರಧಾರ ನಾವಡರು ಜೀವಿಸಿದ್ದು ಅತ್ಯಲ್ಪ ಕಾಲ. ಅಷ್ಟರಲ್ಲೇ ಪೂರ್ಣಾಯುಷ್ಯದ ಸಾಧನೆಯನ್ನು ಮಾಡಿ ಇಹದ ಋಣವನ್ನು ಕಳಚಿಕೊಂಡರು. ಭೌತಿಕವಾಗಿ ನಮ್ಮಿಂದ ಮರೆಯಾಗಿಹೋದರೂ ಕೂಡ ಇಂದಿಗೂ ಪ್ರತಿಯೊಬ್ಬರ ಮನಮನಗಳಲ್ಲಿ ಸ್ವರಸಿರಿಯ ಮೂಲಕ ಮತ್ತೆ ಮತ್ತೆ ಜೀವಂತಗೊಳ್ಳುತ್ತಿದ್ದಾರೆ.
ನಾನು ಈ ಭುವಿಯ ಬೆಳಕನ್ನು ಮೊದಲಬಾರಿಗೆ ಕಂಡಿದ್ದು ಇಪ್ಪತ್ತೆರಡು ವರ್ಷಗಳ ಹಿಂದೆ. ನಾಳೆಗೆ ಅದು ಮುಂದಿನ ವರ್ಷಾರಂಭಕ್ಕೆ ಮುಂದಡಿಯಿಡುತ್ತದೆ. ನಾವಡರು ಹುಟ್ಟಿದ್ದು 1958ರಲ್ಲಿ. ಮರಣಿಸಿದ್ದು 1990. ಮಿತ್ರರಾದ ಸುಧೇಶ ಶೆಟ್ಟಿಯವರಿಗೂ ನನ್ನದ್ದೇ ಪ್ರಾಯ. (1995) ಹುಟ್ಟುವಾಗಲೇ ಮೇರು ಭಾಗವತನನ್ನು ಕಳೆದುಕೊಂಡು ಹುಟ್ಟಿದವರು ನಾವುಗಳು. ಆದರೆ, ಈ ನೋವನ್ನೇ ಛಲವಾಗಿಸಿಕೊಂಡು ಮುನ್ನಡೆದು ಬಂದವರು ಸುಧೇಶರು. ಕಾಳಿಂಗ ನಾವಡರು ಜೀವಿಸಿದ್ದ ಕಾಲದಲ್ಲಿ ಅವರಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿ, ದೃಶ್ಯಸುರುಳಿ, ಧ್ವನಿಸುರುಳಿ, ಅಪೂರ್ವದ ಭಾವಚಿತ್ರಗಳು ಪ್ರತಿಯೊಂದನ್ನೂ ಸಂಗ್ರಹಿಸಿಕೊಳ್ಳುವ ಕಾಯಕದಲ್ಲಿ ತೊಡಗಿಸಿಕೊಂಡರು. ಸ್ವಂತ ಖರ್ಚಿನಲ್ಲಿ, ಯಾವುದೇ ಲಾಭಗಳಿಕೆಯ ಉದ್ಧೇಶವಿಲ್ಲದೇ ಎಲ್ಲೆಲ್ಲಿಗೋ ಹೊತ್ತುಗೊತ್ತನ್ನು ನೋಡದೇ ಹೋಗಿ, ಕಾಡಿ, ಬೇಡಿ ಅಮೂಲ್ಯವಾದ ಸಂಪತ್ತನ್ನು ಪಡೆದುಕೊಂಡಿದ್ದಾದೆ. ಅವರ ಈ ಪ್ರಯತ್ನ ಇಂದಿಗೂ ನಿರಂತರವಾಗಿ ಸಾಗುತ್ತಿದೆ. ಕೆಲವರು ನಾವಡರ ಮುಖವನ್ನೇ ನೋಡಿರಲಿಲ್ಲ, ಇನ್ನು ಕೆಲವರಿಗೆ ನಾವಡರ ಒಂದಿಷ್ಟು ಪದ್ಯಗಳು ಮಾತ್ರ ತಿಳಿದಿವೆ. ಹೀಗಿರುವಾಗ ಅವರ ಸಾಧನೆಯ ವಿಸ್ತಾರತೆಯನ್ನು ಪರಿಚಯಿಸುವ ಕಾರ್ಯ ಸುಧೇಶರಿಂದ ಸಂಪನ್ನಗೊಳ್ಳುತ್ತಿದೆ.
ಆಗಿನ ಕಾಲಕ್ಕೆ ಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳಿರಲಿಲ್ಲ. ಅಂಥಹ ಸಮಯದಲ್ಲಿಯೂ ಕೆಲವು ಅಭಿಮಾನಿಗಳು, ಕಲಾಸಕ್ತರು ದಾಖಲಿಸಿಕೊಂಡ ಅತ್ಯಮೂಲ್ಯ ತುಣುಕುಗಳನ್ನು ಸಂಗ್ರಹಿಸಿ ಇರಿಸಿಕೊಂಡವರು ಮಿತ್ರ ಸುಧೇಶ್. ಯೂಟ್ಯೂಬ್, ಫೇಸ್ಬುಕ್ ಗಳಲ್ಲಿಯೂ ಕೆಲವು ತುಣುಕುಗಳನ್ನು ಹಾಕುತ್ತಿರುತ್ತಾರೆ. ಭಾವಚಿತ್ರಗಳಂತೂ ಆಗಾಗ ಕಾಣಿಸಿಕೊಳ್ಳುತ್ತವೆ. ಒಂದೇ ಅಲ್ಲ, ಹತ್ತಾರು, ನೂರಾರು ವಿಭಿನ್ನ ಭಾವಚಿತ್ರಗಳು. ನಾವಡರ ದೊಡ್ಡ ಅಭಿಮಾನಿಯಾಗಿ, ಅಭಿಮಾನಿಗಳೊಂದಿಗೆ ಸೇರಿ ‘ನಾವಡರ ನೆನಪಿನ’ ದಿನವನ್ನು ಕಲಾಪ್ರದರ್ಶನದ ಮೂಲಕ ಆಚರಿಸುತ್ತಾರೆ. ನಿನ್ನೆಯೂ ನಾವಡರ, ರೂಪಶ್ರೀ, ವಿಜಯಶ್ರೀ, ಕಾಂಚನಶ್ರೀ ಪ್ರಸಂಗ ಬಹಳ ಸೊಗಸಾಗಿ ನರ್ತಿಸಿತು.
ಕೆಲವರು ತಪ್ಪಾಗಿ ತಿಳಿದುಕೊಂಡಿರಬಹುದು, ಇದರಿಂದೇನೋ ಲಾಭವಿದೆ ಎಂದು. ಖಂಡಿತಾ ಹಾಗಿಲ್ಲ. ಇದೊಂದು ಬಗೆಯ ಹುಚ್ಚು. ಅಪಾರವಾದ ಅಭಿಮಾನ. ಸುಧೇಶರು ಈ ಮಹತ್ವದ ಕೆಲಸಕ್ಕೆ ತೊಡಗಿಕೊಳ್ಳದೇ ಇರುತ್ತಿದ್ದರೆ, ಇಂದು ನಾವಡರ ಕೆಲವೇ ಪದ್ಯಗಳಿಂದ ನಾವೆಲ್ಲ ತೃಪ್ತಿಪಟ್ಟುಕೊಂಡು ಸುಮ್ಮನಾಗಬೇಕಿತ್ತು. ಇವರ ಪರಿಶ್ರಮದಿಂದಾಗಿ ಸಾಗರವನ್ನೇ ನೋಡುವಂತಾಗಿದೆ. ಕೇವಲ ನಾವಡರ ಕುರಿತಾಗಿ ಮಾತ್ರವಲ್ಲ ಕೆಲಸ. ಯಕ್ಷಗಾನದ ಬಹಳ ಹಿಂದಿನ ದೃಶ್ಯ, ಚಿತ್ರಗಳನ್ನು ಸಂಗ್ರಹಿಸಿಕೊಳ್ಳುತ್ತಾರೆ. ಇದರಿಂದಾಗಿ ಯಕ್ಷಗಾನದ ಹಿಂದಿನ ಇತಿಹಾಸ, ಇಂದಿನ ವರ್ತಮಾನವನ್ನು ಜೊತೆಯಾಗಿರಿಸಿಕೊಂಡು ನೋಡಬಹುದಾಗಿದೆ. ಸಣ್ಣ ಪ್ರಾಯದಲ್ಲಿ ಇಂಥಹ ಮಹತ್ವದ ಕೆಲಸಕ್ಕೆ ತೊಡಗಿಕೊಂಡಿರುವ ಸುಧೇಶರು ಸದಾ ಶ್ಲಾಘನಾರ್ಹರು. ಇವರ ಈ ಕಾಯಕ ಇನ್ನೂ ಮುಂದುವರಿದೆ, ಮತ್ತೂ ಅಮೂಲ್ಯವಾದ ದಾಖಲೆಗಳನ್ನು ಸಂಗ್ರಹಿಸುವಂತಾಗಲಿ, ಆ ಮೂಲಕ ಯಕ್ಷಕಲೆ, ನಾವಡರ ಬದುಕಿನ ತುಣುಕು ಪ್ರಸಾರವಾಗಲಿ ಎಂಬುದೇ ಎಲ್ಲರ ಆಶಯ.

                                                                                  ಶಿವಕುಮಾರ ಬಿ.ಎ ಅಳಗೋಡು

ಶುಕ್ರವಾರ, ಏಪ್ರಿಲ್ 28, 2017

ಕೆಜಿಯಿಂದ ಪಿಜಿವರೆಗೆ - ಶಿವಕುಮಾರ ಬಿ.ಎ ಅಳಗೋಡು ('ಮುನ್ನುಡಿ' ಕೃತಿಯಿಂದ ಆಯ್ದ ಲೇಖನ)




 ಕೆಜಿಯಿಂದ ಪಿಜಿವರೆಗೆ

ಹೀಗೆಂದಾಕ್ಷಣ ಏನಪ್ಪಾ ಇದು? ಎಂದೆನಿಸುವುದು ಸಹಜ. ಆದರೆ ಇಂದಿನ ದಿನಗಳಲ್ಲಿವು ತೀರಾ ಸಾಮಾನ್ಯವಾಗಿಬಿಟ್ಟಿವೆ. ನಾವೆಲ್ಲಾ ಓದು ಪ್ರಾರಂಭಿಸುವ ವೇಳೆಯಲ್ಲಿ ಕೆಜಿಗಳ ಪರಿಚಯವೇ ಇರಲಿಲ್ಲ. ನಮಗೆ ತಿಳಿದದ್ದು ಕೇವಲ ಅಳತೆಯ ಮಾಪನದ ಕೆಜಿಗಳು ಮಾತ್ರ. ಹಿಂದೆಲ್ಲಾ ವಿದ್ಯೆಯನ್ನು ಕಲಿಸುವುದಕ್ಕೆ ಗುರುಕುಲ ವ್ಯವಸ್ಥೆಗಳಿತ್ತು. ಅಲ್ಲಿ ವಿದ್ಯಾರ್ಥಿಯು ಅವಧಿ ಪೂರ್ಣಗೊಳ್ಳುವವರೆಗೂ, ಗುರುವಿನ ಪದತಳದಲ್ಲಿ ಸೇವೆಮಾಡಿ ಕೊಂಡೇ ಜ್ಞಾನಾರ್ಜನೆಯನ್ನು ಮಾಡಬೇಕಿತ್ತು. ಆದರೆ, ಮುಂದೆ ನಮ್ಮೊಳಗೆ ಬೆರೆತುಹೋದ ಪಾಶ್ಚಾತ್ಯರ ಆಗಮನದ ವಾರ್ತೆಯೂ, ಅವರ ಚಿಂತನೆಗಳೂ ಇಂಥಹ ವ್ಯವಸ್ಥೆಯ ಮೇಲೆ ಬಲವಾದ ಪ್ರಭಾವವನ್ನೇ ಬೀರಿಬಿಟ್ಟವು. ಈ ರೀತಿಯ ಹಲವು ಬದಲಾವಣೆಗಳು ತಲೆದೋರಿದ ಆನಂತರದಲ್ಲಿ ಬಾಲವಾಡಿಗಳು ತಲೆಯೆತ್ತಿದವು. ಸ್ವಲ್ಪ ಕಾಲದ ಬಳಿಕ ಅವೂ ತಮ್ಮ ಅಸ್ಥಿತ್ವವನ್ನೂ, ಸತ್ವವನ್ನೂ ಕಳೆದುಕೊಂಡು ಮೂಲೆಸೇರಿಬಿಟ್ಟವು. ಈಗಂತೂ ಎಲ್ಲಿ ನೋಡಿದರೂ ಬರಿಯ ಕೆಜಿಗಳಷ್ಟೇ ತುಂಬಿಹೋಗಿವೆ.
 ಮಕ್ಕಳು ಇಂಜಿನೀಯರ್, ಡಾಕ್ಟರ್‍ಗಳೇ ಆಗಬೇಕೆಂಬ ಹೆತ್ತವರ ಅಪೇಕ್ಷೆ, ಉನ್ನತ ಸ್ಥಾನಗಳಿಸಬೇಕೆಂದು ಹುಟ್ಟುವ ಮೊದಲೇ ಹುಟ್ಟುವ ಬಯಕೆಗಳ ಕಾರಣದಿಂದಲೇ ಇಂದು ಕೆಜಿಗಳು ಹೆಚ್ಚಾಗಿವೆ. ಇದರಿಂದಾಗಿ ದೇಹದ ಕೆಜಿ ಕಡಿಮೆಯಾಗುತ್ತಿದ್ದರೂ ಅದರ ಕುರಿತು ಲಕ್ಷ್ಯವೇ ಇಲ್ಲ. ಬಾಲ್ಯದಲ್ಲಿ ಮಕ್ಕಳಿಗೆ ಸಹಜವಾದ ಬಾಲ್ಯವನ್ನು ಅನುಭವಿಸಲು ಬಿಡಬೇಕು. ಆದರೆ ಈಗಿನ ವ್ಯವಸ್ಥೆಯಲ್ಲಿ ಕೇವಲ ಪುಸ್ತಕದ ಬದನೇಕಾಯಿಯಾಗಿ ಮಾತ್ರ ಬದುಕುವಂತಾಗಿದೆ. ಅಂದೆಲ್ಲಾ ನಾವು ಸಣ್ಣವರಿದ್ದಾಗ ಆಡುತ್ತಿದ್ದ ತುಂಟಾಟಗಳು, ಮರಕೋತಿ, ಲಗೋರಿ, ಚಿನ್ನಿದಾಂಡು, ಮೈಚೆಂಡು, ಕೋಕೋ ಆಟ ಇಂದು ಸಂಪೂರ್ಣ ಕಣ್ಮರೆಯಾಗಿಬಿಟ್ಟಿವೆ. ನಮ್ಮ ಮನೆಯ ಮಗನಲ್ಲದ ಕ್ರಿಕೆಟ್ ಕುರಿತಾಗಿಯೂ ಒಂದಷ್ಟು ದಿನ ಯುವ ಪೀಳಿಗೆಗೆ ಒಲವಿದ್ದುದು ನಿಜ. ಆದರೆ, ಈಗಂತೂ ಯಾರ ಮನೆಯಲ್ಲಿ ನೋಡಿದರೂ ಮೊಬೈಲ್, ಕಂಪ್ಯೂಟರ್‍ಗಳು. ಇಂದು ಇವು ನವಜಾತ ಶಿಶುವಿನ ಅಂಗೈನಲ್ಲೂ ಸೇರಿಹೋಗಿವೆ. ಇದು ತೀರಾ ದುಃಖದ ಸಂಗತಿಯಲ್ಲದೇ ಮತ್ತಿನ್ನೇನು?
ನಿಜಕ್ಕೂ ಬಾಲ್ಯವೇ ಸುಂದರ. ಅದರಲ್ಲೂ ಬಾಲ್ಯದ ಶಾಲಾದಿನಗಳು ಎಂದೂ ಮರೆತುಹೋಗದ ಸವಿಕ್ಷಣಗಳನ್ನು ನಮ್ಮಲ್ಲಿ ಅಚ್ಚೊತ್ತಿಸಿರುತ್ತವೆ. ಯಾವ ಕಲ್ಮಶವೂ ಇಲ್ಲದ, ಮುಗ್ದ ಮನದ ವಿದ್ಯಾರ್ಜನೆಯ ಕಾಲವದು. ನಲಿಯುತ್ತಾ ಕಲಿಯುವ ಆ ದಿನಗಳು ಕ್ರಮೇಣ ಏಕಾಗ್ರಗೊಳ್ಳುತ್ತಾ ಪದವಿ ಹಂತದವರೆಗೂ ಸಾಗುತ್ತವೆ. ಮುಂದಿನದು ಪಿಜಿ ಜೀವನ. ಇದು ಬಾಲ್ಯದ ದಿನದಂತೆ ಸರಳವೂ ಅಲ್ಲ, ಸಹಜವೂ ಅಲ್ಲ. ಇಲ್ಲಿ ಜ್ಞಾನವನ್ನು ವಿಸ್ತಾರಗೊಳಿಸಿಕೊಳ್ಳುವ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಸಂಗತಿ ಯಷ್ಟೇ ಪ್ರಧಾನವಾಗುತ್ತದೆ. ಸಾಮಾನ್ಯವಾಗಿ ರೂಢಿಯಲ್ಲಿ ಒಂದು ಮಾತಿದೆ. ವಿದ್ಯಾರ್ಥಿ ಸುಖಾರ್ಥಿಯಾಗಲಾರ, ಸುಖಾರ್ಥಿ ವಿದ್ಯಾರ್ಥಿಯಾಗಲಾರ ನೆಂದು. ಅದು ನಿಜವೂ ಹೌದೆನ್ನಿ. ಹಾಗಾಗಿಯೋ ಏನೋ... ಆಳವಾಗಿ ಅಧ್ಯಯನ ಮಾಡುವುದಕ್ಕೆ ಬಂದಾಗ, ಅಲ್ಲಿ ಓದೊಂದೇ ಮುಖ್ಯವಾಗುತ್ತದೆ.
ಈಗಿನ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸವು ಕೆಜಿಗಳಿಂದಲೇ ಆರಂಭವಾಗುವಂತಹದ್ದು. ಅಲ್ಲಿಂದ ಮೊದಲ್ಗೊಂಡು ಉನ್ನತ ಹಂತದ ಪಿಜಿವರೆಗೂ ವಿದ್ಯಾರ್ಥಿ ತನ್ನೆಲ್ಲಾ ಸುಖ ಸಂತೋಷಗಳನ್ನು ಬದಿಗಿರಿಸಿ, ಓದನ್ನು ಮಾತ್ರ ಗುರಿಯಾಗಿಸಿಕೊಳ್ಳಬೇಕಾಗುತ್ತದೆ. ಈ ನಡುವೆ ಹೊಸ ಹೊಸ ಮುಖಗಳ ಪರಿಚಯವಾಗುತ್ತದೆ. ಪರಿಚಯದಿಂದ ಸ್ನೇಹ, ಪ್ರೀತಿ ಎಲ್ಲವೂ ವಿದ್ಯಾಹಂತದ ಭಾಗಗಳೇ ಆಗಿಬಿಡುತ್ತದೆ. ಕೆಲವರು ಶ್ರದ್ಧೆಯಿಂದ ಓದಿ ತಾವಂದುಕೊಂಡದ್ದನ್ನು ಸಾಧಿಸುತ್ತಾರೆ. ಇನ್ನು ಕೆಲವರು ಲೌಕಿಕದ ಪಾಶಗಳ ಸುಳಿಗೆ ಸಿಲುಕಿ ದೆಸೆಗೆಡುತ್ತಾರೆ. ಹಂತಗಳು ಉನ್ನತವಾಗುತ್ತಾ ಹೋದಹಾಗೆ ನಮ್ಮಲ್ಲಿನ ಭಾವನೆಗಳೂ ಬೆಳೆಯುತ್ತಲೇ ಸಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಮೇಷ್ಟ್ರುಗಳ ಭಯ, ರಜೆಸಿಕ್ಕಾಗ ಆಗುವ ಸಂತೋಷ, ದಿನಾಚರಣೆಗಳಲ್ಲಿ ಕೊಟ್ಟ ಸಿಹಿಯ ಅನುಭವ, ಹೋಂವರ್ಕ್‍ಗಳ ಕಿರಿಕಿರಿ ಎಲ್ಲವೂ ಮೇಳೈಸಿಕೊಂಡಿರುತ್ತದೆ. ಆದರೆ ಪದವಿ ಪೂರ್ವ ಮತ್ತು ಪದವಿ ಹಂತಗಳಿಗೆ ಕಾಲಿರಿಸಿದಾಗ ಆಗುವ ಅನುಭವಗಳೇ ವಿಭಿನ್ನ ರೀತಿಯದ್ದು. ಶಿಕ್ಷಕರ ಅನುಕರಣೆ ಮಾಡುವುದು, ಡೆಸ್ಕ್‍ಗಳಲ್ಲಿ ಚಿಂಗಮ್ ಹಚ್ಚಿಡುವುದು, ಮುಂದೆ ಕುಳಿತವರ ತಲೆಗೆ ಹೊಡೆಯುವುದು, ಕೂದಲನ್ನು ಗದ್ದೆ ನೆಟ್ಟಿ (ನಾಟಿ) ಮಾಡಿದಂತೆ ಆಕಾಶಕ್ಕೆ ಏರಿಸಿ ಬಾಚುವುದು, ಎಲ್ಲರೂ ತರಗತಿ ಯೊಳಗೆ ಕುಳಿತ ಮೇಲೆ ಹೀರೋ ರೀತಿಯಲ್ಲಿ ಒಳಗೆ ಕಾಲಿಡುವುದು, ಬೇಕೆಂದೇ ಕೀಟಲೆ ಮಾಡುತ್ತಾ ಕುಳಿತುಕೊಳ್ಳುವುದು... ಹೀಗೆಲ್ಲಾ ಆ ದಿನಗಳು ಸಾಗುತ್ತವೆ. ಇವುಗಳ ಜೊತೆಯಲ್ಲಿಯೇ ಪ್ರೀತಿ ಪ್ರೇಮಗಳ ಬಯಕೆಯೂ ಅಂಕುರಗೊಂಡು ಮನಸ್ಸನ್ನು ಎತ್ತೆತ್ತಲೋ ಕೊಂಡುಹೋಗುತ್ತದೆ. ಯಾರೋ ಒಬ್ಬರು ಇಷ್ಟವಾಗುತ್ತಾರೆ; ಸದಾ ಅವರನ್ನೇ ಕಾಣಬೇಕು, ಮಾತಾಡಬೇಕೆಂಬ ಬಯಕೆ ಹೆಚ್ಚುತ್ತದೆ. ಕೆಲವರಂತೂ, ತಾವು ಓದಿದ ಕಥೆÀಗಳ ಸುಂದರ ನಾಯಕ, ನಾಯಕಿಯರನ್ನು ತನ್ನವರೊಂದಿಗೆ ಹೋಲಿಸಿಕೊಂಡು   ಕಾರಣವಿಲ್ಲದೆಯೇ ನಗುತ್ತಿರುತ್ತಾರೆ. ಕನಸಿನಲ್ಲಿ ಕಂಡವರನ್ನು, ಕಣ್ಣು ತೆರೆದಾಗಲೂ ಮತ್ತೆ ಮತ್ತೆ ಹುಡುಕಾಡುತ್ತಾರೆ. ಕಣ್ಣು ಮುಚ್ಚಿರುವಾಗಲೂ ಅವರನ್ನೇ ನೆನೆಯುತ್ತಾರೆ. ಅಷ್ಟರೊಳಗಾಗಲೇ ಮುಖ್ಯಪರೀಕ್ಷೆಯು ಹತ್ತಿರಕ್ಕೆ ಬಂದುಬಿಡುತ್ತದೆ. ಇನ್ನೇನು ನಾಳೆಯೇ ಪರೀಕ್ಷೆ ಎಂಬುದು ಸ್ಪಷ್ಟವಾದರೂ ಯಾಕೋ ಓದುವುದಕ್ಕೇ ಉದಾಸೀನ. ಆಗಲೂ ಮನಸ್ಸು ಎಲ್ಲೆಲ್ಲಿಗೋ ಹೋಗಿಬರುತ್ತದೆ. ಪ್ರೀತಿಯಲ್ಲಿ ಅತಿಯಾಗಿ ಮುಳುಗಿದವರು, ಓದಿನ ಪುಸ್ತಕದಲ್ಲಿಯೂ ತಮ್ಮವರನ್ನೇ ಹುಡುಕುತ್ತಾರೆ! ಹಾಸಿಗೆಯ ಮೇಲೆ ಮಲಗಿಕೊಂಡು ಇತಿಹಾಸ ಓದುವ ಬದಲು ಮನಸಿಗೆ ಹತ್ತಿರವಾದವರು ಕೊಟ್ಟ ಪತ್ರವನ್ನೋ, ಗ್ರೀಟಿಂಗನ್ನೋ ಇನ್ನೇನನ್ನೋ ಓದುವುದಕ್ಕೆ ಮುಂದಾಗುತ್ತಾರೆ. ನೋಡುವವರಿಗೆ ಇವರಷ್ಟ್ಟು ಶಿಸ್ತುಬದ್ದ ‘ಬ್ರಿಲಿಯೆಂಟ್ ಸ್ಟೂಡೆಂಟ್’ಗಳು ಪ್ರಪಂಚದಲ್ಲಿ ಮತ್ತೆಲ್ಲೂ ಇಲ್ಲವೇನೋ ಎನಿಸುತ್ತದೆ. ಆದರೆ ಈ ಗುಟ್ಟು ಅವರಿಗಷ್ಟೇ ಗೊತ್ತಿದ್ದು, ಒಳಗೊಳಗೇ ಮುಸಿಮುಸಿ ನಗುತ್ತಾರೆ. ಹೀಗಿದ್ದರೂ, ಅಂತಿಮ ಪರೀಕ್ಷೆಯಲ್ಲಿ ಹೇಗೋ ತಕ್ಕಷ್ಟು ಅಂಕ ಗಳಿಸಿಕೊಂಡು ಉತ್ತೀರ್ಣರೂ ಆಗಿಬಿಡುತ್ತಾರೆ!
ಅಂದುಕೊಂಡದ್ದೆಲ್ಲವೂ ಹಾಗೆಯೇ ಆದರೆ ನಮ್ಮಷ್ಟು ಪುಣ್ಯವಂತರೇ ಇಲ್ಲವೆಂದು ಬೀಗುತ್ತೇವೆ. ಕೆಲವೊಮ್ಮೆ ಬಯಸಿದ್ದು ಕೈಗೆಟುಕದೇ ಇದ್ದಾಗ ಕಣ್ಕೊಳದ ಕಟ್ಟೆಯೊಡೆದು ಜಲಪ್ರವಾಹವೇ ಉಂಟಾಗುತ್ತದೆ. ಸ್ಥಿರ ಮನಸ್ಕರಲ್ಲದವರಂತೂ, ಸಣ್ಣ ಸಣ್ಣ ವಿಷಯಕ್ಕೂ ತುಂಬಾ ತಲೆಕೆಡಿಸಿ ಕೊಳ್ಳುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ಪರೀಕ್ಷೆಯಲ್ಲಿ ಬಯಸಿದಷ್ಟು ಅಂಕ ದೊರೆಯಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೂ ಆತ್ಮಹತ್ಯೆಯ ಪ್ರಯತ್ನಕ್ಕೆ ಮುಂದಾಗುತ್ತಾರೆ. ನಾವು ಪ್ರೀತಿಸಿದವರನ್ನೇ ಮದುವೆಯಾಗುವ ಭಾಗ್ಯ ಸಿಕ್ಕಾಗ ಭೂಮಿಯಲ್ಲಿ ನಮಗಿಂತ ಹೆಚ್ಚು ಸಂತೋಷಪಡುವವರೇ ಇಲ್ಲವೆನಿಸುತ್ತದೆ. ಹಾಗೆಯೇ ಬಯಸಿದವರನ್ನು ಹೊಂದಲಾಗದೇ ಇದ್ದಾಗ, ಬೇರೆ ದಾರಿಯೇ ಇಲ್ಲ ಎಂದುಕೊಂಡು ಸಾವಿಗೆ ಶರಣಾಗುವವರೂ ಇದ್ದಾರೆ. ಇನ್ನು ಕೆಲವು ತರುಣರು ಸಾವಿಗೆ ಮುಂದಾಗದಿದ್ದರೂ, ಕೊರಗುತ್ತಲೇ ಮುಖದಮೇಲೆ ಒಂದಿಷ್ಟು ದಾಡಿಬಿಟ್ಟುಕೊಂಡು ದೇವ ದಾಸನಂತೆ ತಿರುಗುತ್ತಾರೆ!
ಹೇಗೆಲ್ಲಾ ಸಾಗಿ ಬರುತ್ತದಲ್ಲವೇ ಈ ಶೈಕ್ಷಣಿಕ ಜೀವನ. ಮಾನವನ ಜೀವನ ಅನಂತ ತಿರುವುಗಳ ಆಗರವೆಂದು ಬಲ್ಲವರು ಹೇಳಿದ್ದಾರೆ. ಈ ತಿರುವುಗಳ ದಾರಿಯಲ್ಲಿ ಸಾಗುವಾಗ ನಮ್ಮ ಜೀವನದಲ್ಲಿಯೂ ಅನೇಕ ಏರುಪೇರುಗಳುಂಟಾಗುತ್ತವೆ. ವಾಡಿಕೆಯಲ್ಲಿ, ವಿದ್ಯಾರ್ಥಿಯ ಜೀವನವನ್ನು ಬಂಗಾರದ ಜೀವನ ಎಂದು ಕರೆಯುವುದಿದೆ. ಇದಕ್ಕೆ ಕಾರಣವಿಲ್ಲದೇ ಇಲ್ಲ. ಈ ಹಂತಗಳಲ್ಲಿ ಪಡೆಯುವ ಅನುಭವ ಇನ್ನಾವ ಸಮಯದಲ್ಲಿಯೂ, ಬೇಕೆಂದರೂ ಸಿಗುವುದಿಲ್ಲ. ಗೆಳೆಯರೊಡನೆ ಹರಟೆ, ಆಟ, ವಿನೋದಾವಳಿ ಗಳು ಎಲ್ಲವೂ ನಮ್ಮನ್ನು ಸಂತಸದ ಕಡಲಲ್ಲಿ ತೇಲಾಡಿಸುತ್ತವೆ. ಕಲಿಯುವಿಕೆಗೆ ಕೊನೆಯಿಲ್ಲವಾದರೂ ಶಾಲಾ ಕಾಲೇಜುಗಳಲ್ಲಿ ಕುಳಿತು ಕಲಿಯುವ ಅವಕಾಶ ಕೇವಲ ಕೆಜಿಯಿಂದ ಪಿಜಿವರೆಗೆ ಮಾತ್ರ. ಮುಂದೆಯೂ ಓದುವುದಕ್ಕೆ ಸಾಧ್ಯ, ಆದರೆ ಅಲ್ಲಿ ಈ ಹಿಂದಿನಂತಹ ವ್ಯವಸ್ಥೆಗಳಿರುವುದಿಲ್ಲ. ಸಾಮಾನ್ಯವಾಗಿ ಇಂದಿನ ಆಧುನಿಕ ಜಗತ್ತಿನಲ್ಲಿದ್ದರೂ, ಅನೇಕರು ಹಿಂದಿನ ಮಧುರಾನುಭವದ ರಸಾಸ್ವಾದವನ್ನು ಪಡೆದುಕೊಂಡೇ ಬಂದಿರುವವರಾಗಿರುತ್ತಾರೆ.
ನಮಗೆಲ್ಲ ಕೆಜಿಗಳ ಅನುಭವವಿಲ್ಲ. ಒಂದೆರಡು ದಿನ ಮಾತ್ರ ಬಾಲವಾಡಿಗೆ ಹೋಗಿ ಫುಡ್ ತಿಂದ ನೆನಪಷ್ಟೇ ಉಳಿದಿದೆ. ತೀರಾ ಇತ್ತೀಚಿನವರಿಗೆ ಬಾಲವಾಡಿ ಎಂದರೇನೆಂದೇ ಗೊತ್ತಿಲ್ಲದಿರುವುದು ವಿಷಾದದ ಸಂಗತಿ. ಈಗಿನ ಮಕ್ಕಳು ಬಹುತೇಕ ಸಂದರ್ಭಗಳಲ್ಲಿ ಸಹಜ ಸಂತಸಗಳಿಂದ ಸಂಪೂರ್ಣ ವಂಚಿತರಾಗುತ್ತಿದ್ದಾರೆ. ಪುಸ್ತಕದ ಹುಳಗಳಾಗುತ್ತಿದ್ದಾರೆ. ಕುಟುಂಬದಲ್ಲಿ ಮಕ್ಕಳು ಹುಟ್ಟುತ್ತಲೇ, ಪ್ರತಿಷ್ಠಿತ ಹುದ್ದೆಗಳನ್ನು ಪಡೆಯಲು ಬಲವಂತದಿಂದ ತಿದ್ದಲಾಗುತ್ತಿದೆ. ಆಡಿಕೊಂಡು ಇರಬೇಕಾದ ದಿನಗಳಲ್ಲಿ ಗೂಡಿನೊಳಗೆ ಕುಳಿತು ಮೂರುಹೊತ್ತೂ ಟ್ಯೂಷನ್, ಓದು, ಹೋಂವರ್ಕ್ ಎಂದು ಹಿಂಸಿಸತೊಡಗಿದರೆ, ಆ ಮಗುವಿಗೆ ಮಾನಸಿಕ ಒತ್ತಡವಾಗಿ ಬದ್ದಿ ಮಂದವಾದರೂ ಆದೀತು. ಸರಿಯಾದ ಜೀವನ ರೂಪಿಸಿಕೊಳ್ಳುವುದಕ್ಕೆ, ಲೋಕದ ಜನರ ನಡುವೆ ಬೆರೆಯುವ ಕ್ರಿಯೆ ಮಾತ್ರ ಸಹಾಯ ಮಾಡಲು ಸಾಧ್ಯ. ಪಂಜರದ ಗಿಳಿಗೆ ಹಾರುವ ಹುಮ್ಮಸ್ಸಿದ್ದರೂ ಬಂಧನವೇ ಹೆಚ್ಚಾದರೆ, ಅದು ಕ್ರಮೇಣ ನಿರುತ್ಸಾಹಿಯೇ ಆಗಿಬಿಡುತ್ತದೆ. ಹಾಗಾಗಿ ಇನ್ನಾದರೂ ಮಕ್ಕಳಿಗೆ ಮತ್ತೆ ಹಿಂದಿನ ಸಂತಸವೇ ಮರುಕಳಿಸುವಂತಾಗಬೇಕು. ಹೀಗೆ ಬಯಸುವ ಭಾವವೇ ಎಲ್ಲರೆದೆಯಲ್ಲೂ ಮೊಳೆತು ಹೆಮ್ಮರವಾಗಲಿ ಎಂಬುದೇ ನಮ್ಮ, ಹಿರಿಯರೆಲ್ಲರ ಆಶಯ...*         

26.02.2016 
 ಉದಯವಾಣಿಯಲ್ಲಿ ಪ್ರಕಟ