ಸೋಮವಾರ, ನವೆಂಬರ್ 14, 2016

ದುಡುಕು ಕೆಡುಕಿನ ಮೂಲ ( ಮಂಗಳೂರು ಆಕಾಶವಾನಿಯಲ್ಲಿ ಪ್ರಕಟ )

ದುಡುಕು ಕೆಡುಕಿನ ಮೂಲ

ಮಹಾಸ್ವಾಮಿ, ನಾನೊಬ್ಬ ಬಡವ. ಆದರೇನು ಮಾಡುವುದು ಹೇಳಿ, ನನಗೂ ಆಸೆಗಳಿರುವುದಿಲ್ಲವೇ? ಖಂಡಿತಾ ಇವೆ. ಒಂದಲ್ಲ; ಎರಡಲ್ಲ ಬೆಟ್ಟದಷ್ಟು. ನಮ್ಮ ಹಿರಿಯರೆಲ್ಲ ಆಗಾಗ ಹೇಳುತ್ತಿರುತ್ತಾರೆ ಬಡವರಿಗೆ ಆಸೆ ಇರಬಾರದು ಎಂದು. ಈ ಪ್ರಪಂಚದಲ್ಲಿ ಆಸೆಗಳನ್ನು ಗೆದ್ದವರೆಷ್ಟು ಜನ? ಒಬ್ಬೊಬ್ಬರಿಗೂ ಒಂದೊಂದರ ಮೇಲೆ ಆಸೆ. ಯಾರೋ ಹೇಳಿದ್ದನ್ನು ಕೇಳಿದ ನೆನಪು; ಬಡವರಿಗೆ ಬದುಕು ತುಟ್ಟಿ, ಸಾವು ಮತ್ತೂ ತುಟ್ಟಿ ಎಂಬುದಾಗಿ. ನನ್ನ ಸ್ಥಿತಿಯೂ ಇದಕ್ಕಿಂತ ಹೊರತಾದುದೇನಲ್ಲ.
ಈಗೀಗ ನಾನು ಗತಬದುಕಿನ ಇತಿಹಾಸವನ್ನು ಕುರಿತು ಹೆಚ್ಚು ಚಿಂತಿಸುವುದಕ್ಕೆ ಹೋಗುವುದೇ ಇಲ್ಲ. ಆದರೂ ನೆನಪುಗಳೆಂಬ ಹರಿತವಾದ ಆಯುಧಗಳು ಆಗಾಗ ನನ್ನನ್ನು ಚುಚ್ಚಿ ಚುಚ್ಚಿ ಗಾಯಗೊಳಿಸುತ್ತಲೇ ಇರುತ್ತವೆ. ಆಂತರಿಕ ವೇದನೆ ಪರಾಕಾಷ್ಟೆಯ ಸ್ಥಿತಿಯನ್ನು ತಲುಪುತ್ತಿದ್ದರೂ ರಕ್ತಮಾತ್ರ ಬರುವುದಿಲ್ಲ, ನನ್ನೆಲ್ಲ ನೋವುಗಳನ್ನು ಮೂಲೆಯಲ್ಲಿ ಕುಳಿತು ಕಣ್ಣೀರಧಾರೆಯನ್ನು ಹರಿಸುವ ಮೂಲಕ ಕಳೆದುಕೊಳ್ಳಬೇಕೆನಿಸಿದರೂ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ನನ್ನಲ್ಲಿ ಹೆಂಗರುಳಿನ ಕೋಮಲತೆಯಿಲ್ಲ.
ಇಷ್ಟೆಲ್ಲ ಸಂಗತಿಗಳು ನನಗೆ ಅರಿವಿಲ್ಲದಂತೆಯೇ ಹೊರಬಂದು ಬಿಟ್ಟವು. ನನ್ನ ಈರೀತಿಯ ವಿಷಮ ಸ್ಥಿತಿಗೆ ಕಾರಣಗಳಿಲ್ಲದೇ ಇಲ್ಲ. ಎಲ್ಲರಂತೆ ಮೊದಲು ನಾನೂ ಕೂಡ ಸುಖ ಜೀವಿಯೇ ಆಗಿದ್ದೆ. ನನಗೂ ಹೆಂಡತಿ, ಮುದ್ದಾದ ಮಗನೂ ಇದ್ದಿದ್ದ. ಆದರೆ ಈಗ ಅವರ್ಯಾರೂ ನನ್ನ ಬಳಿಯಿಲ್ಲ. ಕೋಪದಲ್ಲಿ ಕೊಯ್ದ ಮೂಗು ಮರಳಿ ಬಂದೀತೇ? ಎಂದು ನಮ್ಮ ಬಾಲ್ಯದಿಂದಲೂ ಪ್ರಶ್ನೆಯನ್ನು ಕೇಳಿಕೊಳ್ಳುತ್ತ ಬಂದಿದ್ದರೂ ಒಂದು ಕ್ಷಣದ ಸಿಟ್ಟಿಗೆ ಬುದ್ಧಿಯನ್ನು ಒಪ್ಪಿಸಿ ನನ್ನ ಕುಟುಂಬವನ್ನೇ ನಾನು ಬಲಿಕೊಟ್ಟುಬಿಟ್ಟೆ.
ಹೌದು ಸ್ವಾಮಿ, ನಾನು ಹೇಳಲೇಬೇಕು ಎಲ್ಲವನ್ನೂ ನಿಮ್ಮೆದುರು ತೆರೆದಿಟ್ಟು ನನ್ನ ಹೃದಯದ ಭಾರವನ್ನು ಸಾಸಿವೆಯಷ್ಟಾದರೂ ಕಡಿಮೆ ಮಾಡಿಕೊಳ್ಳಬೇಕು. ಬಡತನದ ಕಪಿಮುಷ್ಠಿಯಲ್ಲಿ ನಾನು ಸಿಕ್ಕಿಕೊಂಡಿದ್ದರೂ ಯಾವುದೋ ಜನ್ಮದ ಋಣಾನುಬಂಧದಿಂದ ಒಬ್ಬಳು ಒಳ್ಳೆಯ ಮನಸ್ಸಿನ ಹುಡುಗಿ ನನಗೆ ಪ್ರೇಯಸಿಯಾಗಿ ಸಿಕ್ಕಿದಳು. ನಮ್ಮಿಬ್ಬರ ಮಧುರ ಪ್ರೇಮ  ಮಧ್ಯದಲ್ಲಿಯೇ ತುಂಡಾಗದೇ, ಮದುವೆಯಲ್ಲಿ ಒಂದಾಯಿತು. ಸುಖದಾಂಪತ್ಯದ ಪ್ರತೀಕವಾಗಿ ನವಮಾಸ ತುಂಬುತ್ತಾ ಹೆಂಡತಿ ಗಂಡು ಮಗುವೊಂದಕ್ಕೆ ಜನ್ಮ ನೀಡಿದಳು. ಅದೆಷ್ಟು ಮುದ್ದಾದ ಮಗು! ನಿಜಕ್ಕೂ ಅದು ಮನ್ಮಥನ ರೂಪವನ್ನೂ ಮೀರಿಸಿದಂತಿತ್ತು. ಮಗನ ಲಾಲನೆಪಾಲನೆಯಲ್ಲಿ ನನ್ನಾಕೆ ಮೈಮರೆತು ನಲಿಯುತ್ತಿದ್ದಳು. ದಿನದಿನವೂ ಮಗು ಬಿದಿಗೆ ಚಂದ್ರನಂತೆ ಬೆಳೆಯುತ್ತಾ ಹತ್ತನೇ ವಯಸ್ಸಿಗೆ ಕಾಲಿರಿಸಿದಾಗ ನಮಗಾದ ಆನಂದ ಅಷ್ಟಿಷ್ಟಲ್ಲ.
ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಮಾರುಕಟ್ಟೆಯಿಂದ ತರುವಕೆಲಸವನ್ನು ಮಗನಿಗ ವಹಿಸಿ ನಾನು, ನನ್ನ ಹೆಂಡತಿ ಅವರಿವರ ಮನೆಯ ಕೆಲಸಕ್ಕೆ ಹೋಗುವುದು ನಿತ್ಯಪದ್ದತಿಯಾಗಿತ್ತು. ಅದಕ್ಕೆ ಬೇಕಾದ ಹಣವನ್ನು ಕೊಟ್ಟು ಕಳುಹಿಸುವುದು ಮಾತ್ರ ನನ್ನ ಜವಾಬ್ದಾರಿ. ಆದರೆ ಪ್ರತೀನಿತ್ಯ ಕೊಟ್ಟ ಹಣದಲ್ಲಿ ಮನೆಗೆ ವಸ್ತುಗಳನ್ನು ತರುವ ಮಗ ಒಂದಿಷ್ಟು ಚಾಕಲೇಟನ್ನು ತಂದು ಇಟ್ಟುಕೊಳ್ಳುತ್ತಿದ್ದ. ಕೊಟ್ಟ ಹಣದಲ್ಲಿ ಉಳಿದುದನ್ನು ಒಂದು ದಿನವೂ ನನಗಾಗಲೀ, ಹೆಂಡತಿಗಾಗಲೀ ಆತ ಹಿಂತಿರುಗಿಸಿದ ದಾಖಲೆಯೇ ಇಲ್ಲವಾಗಿತ್ತು. ಮನೆಯಲ್ಲಿ ಹಣದ ಉಳಿತಾಯ ಬರಿದಾಗುತ್ತಾ ಬಂದಿತ್ತು. ಕೊಟ್ಟ ಹಣದಲ್ಲಿ ಉಳಿದ ಭಾಗವೂ ಕೈಸೇರುತ್ತಿರಲಿಲ್ಲ.
ಒಂದೆರಡು ದಿನವಾದರೆ ಏನೋ ಮಗನಿಗೆ ಚಾಕಲೇಟು ಬೇಕೆಂಬ ಬಯಕೆಯಾಗಿರಬಹುದು ಹಾಗಾಗಿ ತಂದು ತಿಂದ ಎಂದು ಸುಮ್ಮನಾಗಬಹುದಿತ್ತು. ಈ ಪ್ರಕ್ರಿಯೆ ನಿತ್ಯವೂ ತಪ್ಪದೇ ನೆಡೆಯತೊಡಗಿದ್ದರಿಂದ ನನಗೆ ಕ್ರಮೇಣ ಎಲ್ಲಿಲ್ಲದ ಸಿಟ್ಟು ಬರತೊಡಗಿತು. ಉಣ್ಣಲು ಗತಿಯಿಲ್ಲದೆ, ನಾವಿಲ್ಲಿ ಅವರಿವರ ಮನೆಯ ಚಾಕರಿ ಮಾಡಿ ಹಣ ಕೂಡಿಡಲು ನೋಡಿದರೆ, ಇರುವ ಒಬ್ಬನೇ ಮುದ್ದುಮಗ ಎಲ್ಲವನ್ನೂ ಅನಾವಶ್ಯಕವಾಗಿ ಹಾಳುಮಾಡುತ್ತಿದ್ದಾನಲ್ಲ ಎಂದು ಕೋಪ ನೆತ್ತಿಗೇರುತ್ತಿತ್ತು.
ಇತ್ತಕಡೆಯಲ್ಲಿ ದಿನೇದಿನೇ ಸಾಲಗಾರರ ಕಾಟ ಹೆಚ್ಚತೊಡಗಿತು. ಸಿಕ್ಕಿದಲ್ಲೆಲ್ಲಾ ಅವಮಾನಮಾಡುತ್ತಾ ಹಣಕ್ಕಾಗಿ ಪೀಡಿಸುವ ಪ್ರಕ್ರಿಯೆ ಅವಿರತವಾಗಿ  ಸಾಗುತ್ತಿತ್ತು. ದಿನಪೂರ್ತಿ ದುಡಿದು ಮನೆಗೆ ಬಂದರೂ ನೆಮ್ಮದಿ ಇಲ್ಲ. ಒಂದೆಡೆಯಲ್ಲಿ ಸಂಸಾರವನ್ನು ತೂಗಿಸಬೇಕಾದ ಅನಿವಾರ್ಯತೆ, ಇನ್ನೊಂದೆಡೆಯಲ್ಲಿ ಪಡೆದ ಸಾಲವನ್ನು ಬಡ್ಡಿ, ಚಕ್ರಬಡ್ಡಿ ಸಹಿತವಾಗಿ ಹಿಂತಿರುಗಿಸಬೇಕಾದ ಒತ್ತಡ ಎಲ್ಲವೂ ಒಮ್ಮೆಲೇ ನನ್ನನ್ನು ಚಿಂತೆಗೀಡುಮಾಡುತ್ತಿತ್ತು. ಮನೆಗೆ ಬಂದಾಗ ಹೆಂಡತಿ ಮಕ್ಕಳೊಡನೆಯೂ ಮಾತು ಬೇಡವೆನಿಸಿ ಊಟವನ್ನೂ ಸರಿಯಾಗಿ ಮಾಡದೇ ಮಲಗಿಬಿಡುತ್ತಿದ್ದೆ. ಆ ದಿನವೂ ಹಾಗೇಯೇ ಆಯಿತು. ವಿಪರೀತ ಮಾನಸಿಕ ಒತ್ತಡ, ಕಿತ್ತು ತಿನ್ನುತ್ತಿರುವ ಬಡತನ, ಸಾಲಗಾರರ ಬಿರುನುಡಿಗಳು ಎಲ್ಲವೂ ಮನಸ್ಸಿನ ಶಾಂತಿಯನ್ನು ಕದಡಿ ಕೋಪವನ್ನು ನೆತ್ತಿಗೇರಿಸಿ ಬಿಟ್ಟಿತ್ತು. ಅದೇ ಸಮಯಕ್ಕೆ ಮಾರ್ಗ ಮಧ್ಯದ ಮಾರುಕಟ್ಟೆಯಲ್ಲಿ ಬಗೆಬಗೆಯ ವಸ್ತುಗಳಿತ್ತು; ಜೊತೆಗೆ ಮಗನ ಕೈಯಲ್ಲಿ ಚಾಕಲೇಟೂ ಇತ್ತು. ನನಗೆ ಏನಾಯಿತೋ ಏನೋ ಒಂದೇ ಸಲಕ್ಕೆ ಆವೇಶ ಬಂದವರಂತೆ ವರ್ತಿಸಿದೆ. ಮಗನನ್ನು ದರದರನೆ ಎಳೆದುಕೊಂಡು ಬಂದು ಮನೆಯ ಮುಂದೆ ನಿಲ್ಲಿಸಿದವನೇ ಕಣ್ಣನ್ನು ಮತ್ತಷ್ಟು ಕೆಂಪಾಗಿಸಿದೆ. ಹಿಂದುಮುಂದೆ ನೋಡಲಿಲ್ಲ, ಯಾಕೆ ಏನು ಕೇಳಲಿಲ್ಲ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟವನೆ, ಅವನ ಕೆನ್ನೆಗೆ ಒಂದೇಟು ಹೊಡೆದೆ. ಛೇ! ನನ್ನಿಂದು ಮುಂದಿನ ಕತೆಯನ್ನು ಹೇಳಲಾಗುತ್ತಿಲ್ಲ ಸ್ವಾಮೀ..
ಆದರೂ ನಿಮ್ಮ ಮುಂದೆ ಹೇಳಲೇಬೇಕಾಗಿದೆ. ಹೇಳುತ್ತೇನೆ ಕೇಳಿ. ಹೊಡೆದಿದ್ದು ಒಂದೇ ಏಟಾದರೂ ಎಳೆಯ ಹುಡುಗನಿಗೆ ಅಷ್ಟೇ ಸಾಕಾಗಿತ್ತು. ಅಮ್ಮಾ ಎಂದು ಕಿರುಚಿಕೊಂಡು ಧೊಪ್ಪನೆ ನೆಲಕ್ಕೆ ಬಿದ್ದ. ಮತ್ತೆ ನನ್ನ ಮುದ್ದಿನ ಕಂದ ಮೇಲಕ್ಕೆ ಏಳಲೇ ಇಲ್ಲ ಸ್ವಾಮೀ. ನನ್ನ ಮಗನನ್ನು ಕೈಯ್ಯಾರೇ ನಾನೇ ಕೊಂದೆ. ಕಣ್ಣೆದುರೇ ಮಡಿದ ಕರುಳಕುಡಿಯನ್ನು ಕಂಡ ನನ್ನ ಹೆಂಡತಿ ಅದೇ ಆಘಾತದಲ್ಲಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಳು. ಒಂದೇ ಕ್ಷಣದಲ್ಲಿ ನನ್ನ ಇಡೀ ಸಂಸಾರಕ್ಕೆ ನಾನೇ ಕೊಳ್ಳಿ ಇಟ್ಟು ಬಿಟ್ಟೆ. ಎಷ್ಟೋಸಮಯ ಬಯಸೀ ಬಯಸಿ ಪಡೆದುಕೊಂಡ ಮಗ ಸ್ವಾಮಿ ಆತ. ಲೋಕದಲ್ಲಿ ತಂದೆತಾಯಿಗಳ ಸಂಸ್ಕಾರವನ್ನು ಮಾಡುವುದಕ್ಕಾಗಿಯೇ ಮಕ್ಕಳನ್ನು ಪಡೆದುಕೊಳ್ಳುತ್ತಾರಂತೆ. ಹೆತ್ತಮಕ್ಕಳಿಂದ ಉತ್ತರಕ್ರಿಯೆಯನ್ನು ತಂದೆತಾಯಿಗಳು ಮಾಡಿಸಿಕೊಳ್ಳಬೇಕು, ಆದರೆ ನನ್ನ ಜೀವನದಲ್ಲಿ ನಾವು ಹೆತ್ತ ಮಗನಿಗೇ ಸಂಸ್ಕಾರ ಮಾಡುವ ದುರ್ವಿಧಿ ನನ್ನ ಪಾಲಿಗೆ ಬಂತು. ಅಂತೂ ಹೇಗೋಮಾಡಿ ಅಸುನೀಗಿದವರ ಅಂತ್ಯಕ್ರಿಯೆಗಳನ್ನೆಲ್ಲ ಮುಗಿಸಿದೆ. ಮನಸ್ಸು ಒಂದೇ ಸಮನೇ ಪಾಪಪ್ರಜ್ಞೆಯಿಂದ ಬಳಲುತ್ತಿತ್ತು. ಹೆಂಡತಿ, ಮಗನ ರೂಪವೇ ಕಣ್ಣೆದುರು ಬಂದು ನಿಂತು ನನ್ನನ್ನು ನಿಂದಿಸುತ್ತಾ ಹಂಗಿಸುತ್ತಿರುವಂತೆ ಭ್ರಮೆಯಾಗುತ್ತಿತ್ತು.
ಅಷ್ಟುದಿನ ಹಗಲಿನಿಂದ ರಾತ್ರಿಯವರೆಗೆ ನಿರಂತರ ಕೆಲಸದಲ್ಲಿಯೇ ಇರುತ್ತಿದ್ದರೂ ಬಹಳ ಆಯಾಸವಾದಂತೆ ಕಾಣಿಸುತ್ತಿರಲಿಲ್ಲ. ಆದರೆ ಸಂಸಾರ ಛಿದ್ರವಾದಾಗ ಇಡೀ ಪ್ರಪಂಚದಲ್ಲಿ ನಾನೊಬ್ಬನೇ ಒಂಟಿ ಜೀವಿ ಎಂದು ನನಗನಿಸತೊಡಗಿತು. ಸತ್ತ ನನ್ನ ಕುಟುಂಬಿಗಳು ಪ್ರೇತವಾಗಿ ಬಂದು ಪೀಡಿಸುವ ಅನುಭವ, ಸುತ್ತಲೂ ಬೆಳಕಿದ್ದರೂ ನಾನೊಬ್ಬನೇ ಕತ್ತಲೆಯಲ್ಲಿದ್ದೇನೆ ಎಂಬ ಭಯ ಎಲ್ಲವೂ ಒಮ್ಮೆಲೆ ಆಯ್ತು ಸ್ವಾಮೀ. ಸಂಸಾರನಿರ್ವಹಣೆಯ ಅನಿವಾರ್ಯತೆಗೆ ಕಟ್ಟುಬಿದ್ದ ನನಗೆ ಮಗನ ಬಾಲಲೀಲೆಯನ್ನು ಕಾಣುವ ಭಾಗ್ಯವೇ ದೊರೆಯದೇ ಹೋಯ್ತು. ಆ ಸಮಯದಲ್ಲೆಲ್ಲ ನನ್ನ ಮಗ ಅದೆಷ್ಟು ಅನಾಥಪ್ರಜ್ಞೆಯನ್ನು ಅನುಭವಿಸಿ ಮರುಗುತ್ತಿದ್ದನೋ ಏನೋ? ಛೇ.
ಅಂದೇಕೋ ದುಃಖವನ್ನು ತಡೆದುಕೊಳ್ಳುವುದಕ್ಕೆ ಬಹಳ ಕಷ್ಟವಾಯಿತು. ಸುಮ್ಮನೆ ಕೂರಲಾರದೆ, ಮಗನ ಕೋಣೆಯಲ್ಲಿ ಹೋಗಿ ತಲೆ ಬಾಗಿಸಿಕೊಂಡು ತಪ್ಪಿತಸ್ಥ ಭಾವದಲ್ಲಿ ಕುಳಿತುಬಿಟ್ಟೆ. ಕಣ್ಣಿಗೆ ಮಂಜುಮಂಜಾಗಿ ಏನೋ ಒಂದು ಡೈರಿ ಕಾಣಿಸಿದಂತಾಯಿತು. ಸಾವಕಾಶದಿಂದ ಅದನ್ನು ಕೈಗೆತ್ತಿಕೊಂಡು ಒಂದೊಂದೇ ಪುಟವನ್ನೂ ತಿರುಗಿಸುತ್ತಾ ವೇಗವಾಗಿ ಮನಸ್ಸನ್ನು ಓಡಿಸಿದೆ.
ನನ್ನ ಮಗ ಕೇವಲ ಹತ್ತುಹನ್ನೊಂದು ವರ್ಷದವನಾಗಿದ್ದರೂ ನಿತ್ಯವೂ ಆದ ಘಟನೆಗಳನ್ನೆಲ್ಲಾ ಪುಸ್ತಕದಲ್ಲಿ ಬರೆದಿಡುತ್ತಿದ್ದ. ತಂದೆತಾಯಿಗಳಿಬ್ಬರೂ ಕೆಲಸಕ್ಕೆ ಹೋಗಿ ಸಂಜೆಗತ್ತಲಿಗೆ ಬರುವಲ್ಲಿಯವರೆಗೂ ಆತ ಒಂಟಿಯಾಗಿಯೇ ತನ್ನೆಲ್ಲಾ ಭಾವನೆಗಳನ್ನೂ ಬರಹದ ರೂಪಕ್ಕಿಳ್ಳಿಸಿ ತನ್ನದೇ ಆದ ರೀತಿಯಲ್ಲಿ ಬರೆದಿಡುತ್ತಿದ್ದ. ನನ್ನ ಕಣ್ಣು ಬೇಗಬೇಗನೇ ಅವೆಲ್ಲವನ್ನೂ ಓದಿಸಿಕೊಂಡು ಮುಂದೆ ಸಾಗಿದಂತೆ ಆಘಾತಕಾರಿಯಾದ ಅನೇಕ ಸಂಗತಿಗಳ ಪದರಗಳು ತೆರೆದುಕೊಳ್ಳತೊಡಗಿದವು.
“ ಅಪ್ಪಾ, ಅಮ್ಮಾ ನಿಮ್ಮ ಕಷ್ಟಗಳನ್ನು ನನ್ನಿಂದ ನೋಡಲಾಗುತ್ತಿಲ್ಲ. ನಿತ್ಯವೂ ನೀವು ದಣಿದು ಬಂದಾಗ ನಿಮ್ಮ ದೇಹ ಆಯಾಸದಿಂದ ಬಸವಳಿದಿರುತ್ತಿತ್ತು. ಈ ಕಷ್ಟಕ್ಕೆಲ್ಲಾ ಪರಿಹಾರ ಕೊಡಲೂ ನನ್ನಿಂದ ಆಗದಷ್ಟು ಅಸಹಾಯಕನಾಗಿದ್ದೆ. ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ನಾನೇ ತರುವುದು. ಹೀಗೆ ತರುವಾಗಲೆಲ್ಲ ಅಂಗಡಿಯವರು ಉಳಿದ ಚಿಲ್ಲರೆಯನ್ನು ಕೊಡುವ ಬದಲು ಒಂದಿಷ್ಟು ಚಾಕಲೇಟನ್ನು ಕೊಟ್ಟು ಸರಿಯಾಯಿತು ಮಗು ಎಂದು ಹೇಳಿ ಕಳುಹಿಸುತ್ತಿದ್ದರು. ಮೊದಮೊದಲು ಅಗೊಮ್ಮೆ ಈಗೊಮ್ಮೆ ನೆಡೆಯುವ ಈ ಸಂಗತಿ ಬರಬರುತ್ತಾ ನಿತ್ಯವಾಯಿತು. ಎಷ್ಟೆಂದರೆ ತರಕಾರಿ ಅಂಗಡಿಯಲ್ಲಿ ಉಳಿದ ಚಿಲ್ಲರೆಯ ಬದಲಿಗೆ ಚಾಕಲೇಟು, ಅಮ್ಮನಿಗೆ ಜ್ವರಬಂದಾಗ ಔಷದಿ ತರಲು ಹೋದಾಗ ಅಲ್ಲಿಯೂ ಚಾಕಲೇಟು, ನನ್ನ ಪುಸ್ತಕದ ಅಂಗಡಿಗೆ ಹೋದರೆ ಅಲ್ಲಿಯೂ ಉಳಿದ ಚಿಲ್ಲರೆಗೆ ಚಾಕಲೇಟು ಕೊಡಲಾರಂಭಿಸಿದರು. ಆಗೆಲ್ಲಾ ನನಗೆ ದುಃಖ ತಡೆಯಲಾಗದೇ ಅತ್ತು ಬಿಡುತ್ತಿದ್ದೆ. ಮೊದಲು ಒಂದು ರೂಪಾಯಿ ಉಳಿದರೆ ಅದಕ್ಕೆ ಚಾಕಲೇಟು ನೀಡುತ್ತಿದ್ದವರು ಈಗೀಗ ನಾಲ್ಕೈದು ರೂಪಾಯಿ ಚಿಲ್ಲರೆಗೂ ಬೇಡಬೇಡವೆಂದರೂ ಕೈತುಂಬಾ ಬಣ್ಣಬಣ್ಣದ ಚಾಕಲೇಟನ್ನು ಕೊಟ್ಟು ಕಳುಹಿಸುತ್ತಾರೆ. ವಸ್ತುವೇ ಬೇಡವೆಂದು ಬಿಟ್ಟುಬರೋಣವೆಂದರೆ, ರಾತ್ರಿ ದಣಿದು ಬಂದ ನಿಮಗೆ ಊಟಕ್ಕೆ ಪದಾರ್ಥವಾಗಬೇಕಲ್ಲ? ಹಾಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇನೆ. ಆದರೆ ಇಲ್ಲಿವರೆಗೆ ನನಗೆ ಸಿಕ್ಕಿದ ಚಾಕಲೇಟಿನಲ್ಲಿ ಒಂದನ್ನೂ ನಾನು ತಿಂದಿಲ್ಲ. ಮೊನ್ನೆ ತಾನೆ ನನ್ನ ಸ್ನೇಹಿತನೊಬ್ಬನಿಗೆ ಕೆಲವಷ್ಟು ಚಾಕಲೇಟನ್ನು ಕೊಟ್ಟು ಅವನಿಂದ ಹಣ ಪಡೆದುಕೊಂಡು ಕುಡಿಕೆಯಲ್ಲಿ ಬಚ್ಚಿಟ್ಟಿದ್ದೇನೆ. ಪ್ರತೀವಾರವೂ ಅವನಿಗೆ ಚಾಕಲೇಟನ್ನು ಕೊಟ್ಟು ಹಣ ಪಡೆದುಕೊಳ್ಳಬೇಕು ಅದರಿಂದ ಒಟ್ಟು ಮಾಡಿದ ಹಣದಿಂದ ಅಪ್ಪಾ, ನಿಮಗೊಂದು ಅಂಗಿ, ಅಮ್ಮಂಗೊಂದು ಸೀರೆಯನ್ನು ಕೊಂಡು ತರಬೇಕೆಂದು ಮಾಡಿದ್ದೇನೆ. ಇಷ್ಟೆಲ್ಲಾ ಕಷ್ಟಪಡುವ ನಿಮ್ಮ ಹರಿದ ಬಟ್ಟೆಯನ್ನು ನನ್ನಿಂದ ನೋಡಲಾಗುತ್ತಿಲ್ಲ. ಚಿಲ್ಲರೆ ಹಣವನ್ನು ಎಲ್ಲರೂ ಸರಿಯಾಗಿ ನೀಡಿದ್ದರೆ ನೀವು ದಿನವೂ ಊಟಮಾಡಬಹುದಿತ್ತು. ಆದರೆ ಈಗೀಗ ನಿತ್ಯವೂ ನಿಮಗೆ ಗಂಜಿಯೇ ಗತಿಯಾಗಿದೆ. ನನ್ನನ್ನು ಕ್ಷಮಿಸಿಬಿಡಿ ಇಂದೂ ಕೂಡ ಗೆಳೆಯನಿಗೆ ಚಾಕಲೇಟನ್ನು ಕೊಟ್ಟು ಹಣತೆಗೆದುಕೊಂಡು ಬರಬೇಕು ಅದಕ್ಕೇ ಈಗ ಹೊರಗಡೆ ಹೊರಟಿದ್ದೇನೆ. ದುಡ್ಡು ಒಟ್ಟಾದರೆ ಇವತ್ತೇ ನಿಮಗೆ ಬಟ್ಟೆ ತರುತ್ತೇನೆ…..”
ಇದೆಲ್ಲವನ್ನೂ ಓದಿದ ನಾನು ಕಣ್ಣುಕತ್ತಲೆ ಬಂದು ಬಿದ್ದುಬಿಟ್ಟೆ ಸ್ವಾಮಿ, ಎಷ್ಟೋ ಹೊತ್ತಿನ ಬಳಿಕ ಎಚ್ಚರವಾಯಿತು. ಗೋಡೆಗೆ ತಲೆತಲೆ ಚಚ್ಚಿಕೊಂಡೆ, ಏನು ಮಾಡಿದರೇನು? ನಾನೇ ಕೊಂದ ಮಗ ಮತ್ತೆ ಬದುಕಿ ಬಂದಾನೆಯೇ? ಮಗನ ಮರಣದಿಂದ ಮಡಿದ ಹೆಂಡತಿ ಎದ್ದು ಬಂದು ಮಾತನಾಡಿಯಾಳೇ? ಇಲ್ಲ ಸ್ವಾಮೀ ಇದ್ಯಾವುದೂ ಸಾಧ್ಯವಿಲ್ಲ. ಇಷ್ಟು ಬೆಳೆದರೂ ನನ್ನ ಮಗನಿಗಿದ್ದ ಸಾಸಿವೆಷ್ಟು ಬುದ್ಧಿಯೂ ನನಗಿಲ್ಲದೇ ಹೋಯಿತು. ಯಾವುದೋ ಸಿಟ್ಟಿನಲ್ಲಿ ಮಗನ ಮೇಲೆ ಕೈಮಾಡಿಬಿಟ್ಟೆ. ಪ್ರತೀನಿತ್ಯ ನನ್ನ ಮಗ ಚಾಕಲೇಟನ್ನು ತಂದು ತಿನ್ನುತ್ತಾ ಹಣವನ್ನು ವ್ಯರ್ಥವಾಗಿ ಹಾಳುಮಾಡಿ ಸಂಸಾರವನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದಾನೆಂದು ತಪ್ಪಾಗಿ ಭಾವಿಸಿಕೊಂಡಿದ್ದೆ, ಆದರೆ ಅವನ ಡೈರಿಯನ್ನು ಓದಿದ ಮೇಲೆ ಎಲ್ಲವೂ ತಿಳಿಯಿತು. ಆದರೆ ಮಗ ಮತ್ತೆ ಬಂದಾನೆಯೆ?
ಬಡತನದ ಬವಣೆಯಲ್ಲಿ ಬಳಲಿ ಬೆಂಡಾಗಿದ್ದ ನಮ್ಮನ್ನು ಹೊರಪ್ರಪಂಚದ ಅಂಗಡಿಯವರೇ ಈ ರೀತಿಯಲ್ಲಿ ನೋವಿಗೀಡುಮಾಡುತ್ತಿದ್ದಾರೆ. ನಮ್ಮಂಥ ಕೂಲಿಕೆಲಸದವರಿಗೆ ಒಂದೊಂದು ರೂಪಾಯಿಯೂ ಚಿನ್ನವೇ. ಒಂದೊಂದು ಪೈಸೆಯೂ ಬೆವರಿನ ಹನಿಯಿಂದ ದೊರೆತಿದ್ದು. ಬಿಸಿಲು, ಬೆಂಕಿಎನ್ನದೇ, ಮಳೆ,ಗಾಳಿಎನ್ನದೇ, ರಾತ್ರಿ ಹಗಲೆನ್ನದೇ ದುಡಿದ ಶ್ರಮದ ಪ್ರತಿಫಲ ಅದು. ಅದನ್ನು ಒಂದೇ ನಿಮಿಷದೊಳಗೆ ಬಣ್ಣಬಣ್ಣದ ಚಾಕಲೇಟಿಗೆ ಸಮವಾಗಿಸಿ ನಮ್ಮ ನೆತ್ತರಿನ ಹಣವನ್ನು ತಮ್ಮೊಳಗೆ ಸೇರಿಸಿಕೊಳ್ಳುವ ಕಠಿಣ ಮನಸ್ಸು ಉಳಿದವರಿಗೆ ಯಾಕೆ ಬಂತೋ ಎಂದು ಆಗಾಗ ಅನಿಸುತ್ತದೆ. ಹೆಂಡತಿ,ಮಗನ ಸಾವಿನ ನಂತರ ನನಗೆ ಬದುಕೇ ಬೇಡವೆನ್ನಿಸಿದೆ. ಮಹಾಸ್ವಾಮೀ ನಾನು ತಪ್ಪುಮಾಡಿದವ. ನನ್ನ ಸಂಸಾರವನ್ನು ನಾನೇ ಕೊಲೆಗೈದು ಇಲ್ಲಿ ನಿಮ್ಮೆದುರು ನಿಂತಿದ್ದೇನೆ. ಎಲ್ಲಾ ಅಪರಾಧವನ್ನೂ ನಾನೇ ಒಪ್ಪಿಕೊಂಡು ಶರಣಾಗುತ್ತಿದ್ದೇನೆ. ಇದಕ್ಕೆ ಸರಿಯಾದ ಮರಣದಂಡನೆ ಶಿಕ್ಷೆಯನ್ನೇ ದಯಪಾಲಿಸಿ. ದೂರದಲ್ಲಿ ನಿಂತು ನನ್ನ ತಪ್ಪನ್ನೆಲ್ಲಾ ಮನ್ನಿಸಿ ಹೆಂಡತಿ ಮತ್ತು ಮಗ ನನ್ನನ್ನು ಅವರಿರುವಲ್ಲಿಗೆ ಕೈಬೀಸಿ ಕರೆಯುತ್ತಿದ್ದಾರೆ. ನ್ಯಾಯಮೂರ್ತಿಗಳಾದ ತಾವು ಆದಷ್ಟು ಬೇಗ ಅಲ್ಲಿಗೆ ನನ್ನನ್ನು ಕಳುಹಿಸಿಕೊಡಿ…ಇದನ್ನು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಎಂದು ನಾನು ತಿಳಿದುಕೊಳ್ಳುತ್ತಾ ಅಗಲಿದ ಸಂಸಾರವನ್ನು ಮತ್ತೆ ಸೇರುತ್ತೇನೆಂಬ ಸಂತೋಷದಲ್ಲಿ ಹೊರಡುತ್ತೇನೆ. ಇಷ್ಟು ಮಾಡಿ ನನ್ನಾಸೆಯನ್ನು ಈಡೇರಿಸಿಕೊಡಿ ಸ್ವಾಮಿ.
ಅಬ್ಬಾ! ಅಂತೂ ತುಂಬಾ ಉಪಕಾರವಾಯ್ತು ಸ್ವಾಮೀ ತಮ್ಮಿಂದ. ನನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನೀವು ಮರಣದಂಡನೆಯನ್ನೇ ವಿಧಿಸಿದಿರಿ. ನನ್ನಾಸೆಯಂತೆ ಮತ್ತೆ ನನ್ನ ಸಂಸಾರವನ್ನು ಸೇರಿಕೊಳ್ಳುವುದಕ್ಕೆ ಅನುಮತಿಯನ್ನು ನೀಡಿದಿರಿ. ಹೋಗಿಬರುತ್ತೇನೆ ಸ್ವಾಮಿ. ಇನ್ನಾದರೂ ಬಡವನ ಬೆವರ ಹನಿಯ ಹಣಕ್ಕೆ ಚಾಕಲೇಟಿನ ವಿನಿಮಯ ಮೌಲ್ಯವನ್ನು ಕಟ್ಟುವುದನ್ನು ನಿಲ್ಲಿಸಿ ನಮ್ಮಂಥವರನ್ನು ರಕ್ಷಿಸಿ ಮಹಾಪ್ರಭು…ನನಗಿನ್ನು ಅಪ್ಪಣೆ ಕೊಡಿ…

                                                                      -   ಶಿವಕುಮಾರ ಬಿ. ಎ ಅಳಗೋಡು