ಭಾನುವಾರ, ಏಪ್ರಿಲ್ 30, 2017


ಅಪೂರ್ವ ಧ್ವನಿ,ಚಿತ್ರ,ದೃಶ್ಯಗಳ ಸಂಗ್ರಹಕಾರ – ಸುಧೇಶ್ ಶೆಟ್ಟಿ

ಬದುಕಿರುವಾಗ ವ್ಯಕ್ತಿಯ ದೇಹದೊಳಗಿರುವ ಜೀವ ಆತನನ್ನು ಜೀವಂತವಾಗಿರಿಸಿದರೆ, ಮಡಿದಮೇಲೆಯೂ ಜೀವಂತಗೊಳಿಸುವುದು ನೆನಪುಗಳಷ್ಟೇ. ಬದುಕಿರುವಾಗ ಸವಿದ ಎಷ್ಟೋ ಸಂಗತಿಗಳೂ ಕೂಡ ಅವರನ್ನು ಅಗಲಿದ ಮೇಲೆ ಕಾಡುವುದಕ್ಕೆ ಪ್ರಾರಂಭಿಸುತ್ತವೆ. ಎಲ್ಲವನ್ನೂ ಕಳೆದುಕೊಂಡ ಮೇಲೆ ಕಳೆದುಹೋದವರ ಕುರಿತು ಒಲವು ಅತಿಯಾಗುತ್ತದೆ. ಆದರೆ, ಅಷ್ಟರಲ್ಲಾಗಲೇ ಎಲ್ಲವೂ ನಮ್ಮಿಂದ ದೂರಾಗಿಬಿಟ್ಟಿರುತ್ತವೆ. ಒಬ್ಬ ವ್ಯಕ್ತಿ ನಮಗೆ ಪರಿಚಿತನಾಗಿದ್ದರೆ, ಆತನ ಮರಣದ ನಂತರವೂ ನಮ್ಮನ್ನು ಸುತ್ತಿಕೊಳ್ಳುವುದು ಸಹಜ. ಒಂದು ಕ್ಷಣದ ಮಾತ್ರಕ್ಕೂ ಕಂಡಿರದ ವ್ಯಕ್ತಿತ್ವವೊಂದರ ಕುರಿತು ಎಳವೆಯಿಂದಲೇ ಆಕರ್ಷಿತರಾಗಿ, ಅವರನ್ನು ಆಳವಾಗಿ ಅರಿಯುವ ಮನಮಾಡುವವರು ವಿರಳಾತಿವಿರಳ. ಈ ಪೀಠಿಕೆ ಮುಂದಿನ ಕಥೆಗೆ ಎಂದೂ ತೊಡಕುಂಟುಮಾಡುವಂಥದ್ದಲ್ಲ.
ಯಕ್ಷಲೋಕದಲ್ಲಿ ಒಂದು ಹೊಸಬಗೆಯ ಅಲೆಯನ್ನೇ ಸೃಷ್ಟಿಸಿ, ದಶಕದಶಕಗಳೇ ಕಳೆದುಹೋದರೂ ಮಾನಸರಂಗದಲ್ಲಿ ನರ್ತಿಸುತ್ತಿರುವ ಚೇತನ, ಗುಂಡ್ಮಿಕಾಳಿಂಗ ನಾವಡರು. ಇವರ ಗಾನಮಾಧರ್ಯಕ್ಕೆ ಮನಸೋಲದ ಮನಸ್ಸುಗಳೇ ಇಲ್ಲವೆನ್ನಬಹುದು. ಏರು ಶೃತಿಯ ರಂಗಸೂತ್ರಧಾರ ನಾವಡರು ಜೀವಿಸಿದ್ದು ಅತ್ಯಲ್ಪ ಕಾಲ. ಅಷ್ಟರಲ್ಲೇ ಪೂರ್ಣಾಯುಷ್ಯದ ಸಾಧನೆಯನ್ನು ಮಾಡಿ ಇಹದ ಋಣವನ್ನು ಕಳಚಿಕೊಂಡರು. ಭೌತಿಕವಾಗಿ ನಮ್ಮಿಂದ ಮರೆಯಾಗಿಹೋದರೂ ಕೂಡ ಇಂದಿಗೂ ಪ್ರತಿಯೊಬ್ಬರ ಮನಮನಗಳಲ್ಲಿ ಸ್ವರಸಿರಿಯ ಮೂಲಕ ಮತ್ತೆ ಮತ್ತೆ ಜೀವಂತಗೊಳ್ಳುತ್ತಿದ್ದಾರೆ.
ನಾನು ಈ ಭುವಿಯ ಬೆಳಕನ್ನು ಮೊದಲಬಾರಿಗೆ ಕಂಡಿದ್ದು ಇಪ್ಪತ್ತೆರಡು ವರ್ಷಗಳ ಹಿಂದೆ. ನಾಳೆಗೆ ಅದು ಮುಂದಿನ ವರ್ಷಾರಂಭಕ್ಕೆ ಮುಂದಡಿಯಿಡುತ್ತದೆ. ನಾವಡರು ಹುಟ್ಟಿದ್ದು 1958ರಲ್ಲಿ. ಮರಣಿಸಿದ್ದು 1990. ಮಿತ್ರರಾದ ಸುಧೇಶ ಶೆಟ್ಟಿಯವರಿಗೂ ನನ್ನದ್ದೇ ಪ್ರಾಯ. (1995) ಹುಟ್ಟುವಾಗಲೇ ಮೇರು ಭಾಗವತನನ್ನು ಕಳೆದುಕೊಂಡು ಹುಟ್ಟಿದವರು ನಾವುಗಳು. ಆದರೆ, ಈ ನೋವನ್ನೇ ಛಲವಾಗಿಸಿಕೊಂಡು ಮುನ್ನಡೆದು ಬಂದವರು ಸುಧೇಶರು. ಕಾಳಿಂಗ ನಾವಡರು ಜೀವಿಸಿದ್ದ ಕಾಲದಲ್ಲಿ ಅವರಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿ, ದೃಶ್ಯಸುರುಳಿ, ಧ್ವನಿಸುರುಳಿ, ಅಪೂರ್ವದ ಭಾವಚಿತ್ರಗಳು ಪ್ರತಿಯೊಂದನ್ನೂ ಸಂಗ್ರಹಿಸಿಕೊಳ್ಳುವ ಕಾಯಕದಲ್ಲಿ ತೊಡಗಿಸಿಕೊಂಡರು. ಸ್ವಂತ ಖರ್ಚಿನಲ್ಲಿ, ಯಾವುದೇ ಲಾಭಗಳಿಕೆಯ ಉದ್ಧೇಶವಿಲ್ಲದೇ ಎಲ್ಲೆಲ್ಲಿಗೋ ಹೊತ್ತುಗೊತ್ತನ್ನು ನೋಡದೇ ಹೋಗಿ, ಕಾಡಿ, ಬೇಡಿ ಅಮೂಲ್ಯವಾದ ಸಂಪತ್ತನ್ನು ಪಡೆದುಕೊಂಡಿದ್ದಾದೆ. ಅವರ ಈ ಪ್ರಯತ್ನ ಇಂದಿಗೂ ನಿರಂತರವಾಗಿ ಸಾಗುತ್ತಿದೆ. ಕೆಲವರು ನಾವಡರ ಮುಖವನ್ನೇ ನೋಡಿರಲಿಲ್ಲ, ಇನ್ನು ಕೆಲವರಿಗೆ ನಾವಡರ ಒಂದಿಷ್ಟು ಪದ್ಯಗಳು ಮಾತ್ರ ತಿಳಿದಿವೆ. ಹೀಗಿರುವಾಗ ಅವರ ಸಾಧನೆಯ ವಿಸ್ತಾರತೆಯನ್ನು ಪರಿಚಯಿಸುವ ಕಾರ್ಯ ಸುಧೇಶರಿಂದ ಸಂಪನ್ನಗೊಳ್ಳುತ್ತಿದೆ.
ಆಗಿನ ಕಾಲಕ್ಕೆ ಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳಿರಲಿಲ್ಲ. ಅಂಥಹ ಸಮಯದಲ್ಲಿಯೂ ಕೆಲವು ಅಭಿಮಾನಿಗಳು, ಕಲಾಸಕ್ತರು ದಾಖಲಿಸಿಕೊಂಡ ಅತ್ಯಮೂಲ್ಯ ತುಣುಕುಗಳನ್ನು ಸಂಗ್ರಹಿಸಿ ಇರಿಸಿಕೊಂಡವರು ಮಿತ್ರ ಸುಧೇಶ್. ಯೂಟ್ಯೂಬ್, ಫೇಸ್ಬುಕ್ ಗಳಲ್ಲಿಯೂ ಕೆಲವು ತುಣುಕುಗಳನ್ನು ಹಾಕುತ್ತಿರುತ್ತಾರೆ. ಭಾವಚಿತ್ರಗಳಂತೂ ಆಗಾಗ ಕಾಣಿಸಿಕೊಳ್ಳುತ್ತವೆ. ಒಂದೇ ಅಲ್ಲ, ಹತ್ತಾರು, ನೂರಾರು ವಿಭಿನ್ನ ಭಾವಚಿತ್ರಗಳು. ನಾವಡರ ದೊಡ್ಡ ಅಭಿಮಾನಿಯಾಗಿ, ಅಭಿಮಾನಿಗಳೊಂದಿಗೆ ಸೇರಿ ‘ನಾವಡರ ನೆನಪಿನ’ ದಿನವನ್ನು ಕಲಾಪ್ರದರ್ಶನದ ಮೂಲಕ ಆಚರಿಸುತ್ತಾರೆ. ನಿನ್ನೆಯೂ ನಾವಡರ, ರೂಪಶ್ರೀ, ವಿಜಯಶ್ರೀ, ಕಾಂಚನಶ್ರೀ ಪ್ರಸಂಗ ಬಹಳ ಸೊಗಸಾಗಿ ನರ್ತಿಸಿತು.
ಕೆಲವರು ತಪ್ಪಾಗಿ ತಿಳಿದುಕೊಂಡಿರಬಹುದು, ಇದರಿಂದೇನೋ ಲಾಭವಿದೆ ಎಂದು. ಖಂಡಿತಾ ಹಾಗಿಲ್ಲ. ಇದೊಂದು ಬಗೆಯ ಹುಚ್ಚು. ಅಪಾರವಾದ ಅಭಿಮಾನ. ಸುಧೇಶರು ಈ ಮಹತ್ವದ ಕೆಲಸಕ್ಕೆ ತೊಡಗಿಕೊಳ್ಳದೇ ಇರುತ್ತಿದ್ದರೆ, ಇಂದು ನಾವಡರ ಕೆಲವೇ ಪದ್ಯಗಳಿಂದ ನಾವೆಲ್ಲ ತೃಪ್ತಿಪಟ್ಟುಕೊಂಡು ಸುಮ್ಮನಾಗಬೇಕಿತ್ತು. ಇವರ ಪರಿಶ್ರಮದಿಂದಾಗಿ ಸಾಗರವನ್ನೇ ನೋಡುವಂತಾಗಿದೆ. ಕೇವಲ ನಾವಡರ ಕುರಿತಾಗಿ ಮಾತ್ರವಲ್ಲ ಕೆಲಸ. ಯಕ್ಷಗಾನದ ಬಹಳ ಹಿಂದಿನ ದೃಶ್ಯ, ಚಿತ್ರಗಳನ್ನು ಸಂಗ್ರಹಿಸಿಕೊಳ್ಳುತ್ತಾರೆ. ಇದರಿಂದಾಗಿ ಯಕ್ಷಗಾನದ ಹಿಂದಿನ ಇತಿಹಾಸ, ಇಂದಿನ ವರ್ತಮಾನವನ್ನು ಜೊತೆಯಾಗಿರಿಸಿಕೊಂಡು ನೋಡಬಹುದಾಗಿದೆ. ಸಣ್ಣ ಪ್ರಾಯದಲ್ಲಿ ಇಂಥಹ ಮಹತ್ವದ ಕೆಲಸಕ್ಕೆ ತೊಡಗಿಕೊಂಡಿರುವ ಸುಧೇಶರು ಸದಾ ಶ್ಲಾಘನಾರ್ಹರು. ಇವರ ಈ ಕಾಯಕ ಇನ್ನೂ ಮುಂದುವರಿದೆ, ಮತ್ತೂ ಅಮೂಲ್ಯವಾದ ದಾಖಲೆಗಳನ್ನು ಸಂಗ್ರಹಿಸುವಂತಾಗಲಿ, ಆ ಮೂಲಕ ಯಕ್ಷಕಲೆ, ನಾವಡರ ಬದುಕಿನ ತುಣುಕು ಪ್ರಸಾರವಾಗಲಿ ಎಂಬುದೇ ಎಲ್ಲರ ಆಶಯ.

                                                                                  ಶಿವಕುಮಾರ ಬಿ.ಎ ಅಳಗೋಡು

ಶುಕ್ರವಾರ, ಏಪ್ರಿಲ್ 28, 2017

ಕೆಜಿಯಿಂದ ಪಿಜಿವರೆಗೆ - ಶಿವಕುಮಾರ ಬಿ.ಎ ಅಳಗೋಡು ('ಮುನ್ನುಡಿ' ಕೃತಿಯಿಂದ ಆಯ್ದ ಲೇಖನ)




 ಕೆಜಿಯಿಂದ ಪಿಜಿವರೆಗೆ

ಹೀಗೆಂದಾಕ್ಷಣ ಏನಪ್ಪಾ ಇದು? ಎಂದೆನಿಸುವುದು ಸಹಜ. ಆದರೆ ಇಂದಿನ ದಿನಗಳಲ್ಲಿವು ತೀರಾ ಸಾಮಾನ್ಯವಾಗಿಬಿಟ್ಟಿವೆ. ನಾವೆಲ್ಲಾ ಓದು ಪ್ರಾರಂಭಿಸುವ ವೇಳೆಯಲ್ಲಿ ಕೆಜಿಗಳ ಪರಿಚಯವೇ ಇರಲಿಲ್ಲ. ನಮಗೆ ತಿಳಿದದ್ದು ಕೇವಲ ಅಳತೆಯ ಮಾಪನದ ಕೆಜಿಗಳು ಮಾತ್ರ. ಹಿಂದೆಲ್ಲಾ ವಿದ್ಯೆಯನ್ನು ಕಲಿಸುವುದಕ್ಕೆ ಗುರುಕುಲ ವ್ಯವಸ್ಥೆಗಳಿತ್ತು. ಅಲ್ಲಿ ವಿದ್ಯಾರ್ಥಿಯು ಅವಧಿ ಪೂರ್ಣಗೊಳ್ಳುವವರೆಗೂ, ಗುರುವಿನ ಪದತಳದಲ್ಲಿ ಸೇವೆಮಾಡಿ ಕೊಂಡೇ ಜ್ಞಾನಾರ್ಜನೆಯನ್ನು ಮಾಡಬೇಕಿತ್ತು. ಆದರೆ, ಮುಂದೆ ನಮ್ಮೊಳಗೆ ಬೆರೆತುಹೋದ ಪಾಶ್ಚಾತ್ಯರ ಆಗಮನದ ವಾರ್ತೆಯೂ, ಅವರ ಚಿಂತನೆಗಳೂ ಇಂಥಹ ವ್ಯವಸ್ಥೆಯ ಮೇಲೆ ಬಲವಾದ ಪ್ರಭಾವವನ್ನೇ ಬೀರಿಬಿಟ್ಟವು. ರೀತಿಯ ಹಲವು ಬದಲಾವಣೆಗಳು ತಲೆದೋರಿದ ಆನಂತರದಲ್ಲಿ ಬಾಲವಾಡಿಗಳು ತಲೆಯೆತ್ತಿದವು. ಸ್ವಲ್ಪ ಕಾಲದ ಬಳಿಕ ಅವೂ ತಮ್ಮ ಅಸ್ಥಿತ್ವವನ್ನೂ, ಸತ್ವವನ್ನೂ ಕಳೆದುಕೊಂಡು ಮೂಲೆಸೇರಿಬಿಟ್ಟವು. ಈಗಂತೂ ಎಲ್ಲಿ ನೋಡಿದರೂ ಬರಿಯ ಕೆಜಿಗಳಷ್ಟೇ ತುಂಬಿಹೋಗಿವೆ.
 ಮಕ್ಕಳು ಇಂಜಿನೀಯರ್, ಡಾಕ್ಟರ್ಗಳೇ ಆಗಬೇಕೆಂಬ ಹೆತ್ತವರ ಅಪೇಕ್ಷೆ, ಉನ್ನತ ಸ್ಥಾನಗಳಿಸಬೇಕೆಂದು ಹುಟ್ಟುವ ಮೊದಲೇ ಹುಟ್ಟುವ ಬಯಕೆಗಳ ಕಾರಣದಿಂದಲೇ ಇಂದು ಕೆಜಿಗಳು ಹೆಚ್ಚಾಗಿವೆ. ಇದರಿಂದಾಗಿ ದೇಹದ ಕೆಜಿ ಕಡಿಮೆಯಾಗುತ್ತಿದ್ದರೂ ಅದರ ಕುರಿತು ಲಕ್ಷ್ಯವೇ ಇಲ್ಲ. ಬಾಲ್ಯದಲ್ಲಿ ಮಕ್ಕಳಿಗೆ ಸಹಜವಾದ ಬಾಲ್ಯವನ್ನು ಅನುಭವಿಸಲು ಬಿಡಬೇಕು. ಆದರೆ ಈಗಿನ ವ್ಯವಸ್ಥೆಯಲ್ಲಿ ಕೇವಲ ಪುಸ್ತಕದ ಬದನೇಕಾಯಿಯಾಗಿ ಮಾತ್ರ ಬದುಕುವಂತಾಗಿದೆ. ಅಂದೆಲ್ಲಾ ನಾವು ಸಣ್ಣವರಿದ್ದಾಗ ಆಡುತ್ತಿದ್ದ ತುಂಟಾಟಗಳು, ಮರಕೋತಿ, ಲಗೋರಿ, ಚಿನ್ನಿದಾಂಡು, ಮೈಚೆಂಡು, ಕೋಕೋ ಆಟ ಇಂದು ಸಂಪೂರ್ಣ ಕಣ್ಮರೆಯಾಗಿಬಿಟ್ಟಿವೆ. ನಮ್ಮ ಮನೆಯ ಮಗನಲ್ಲದ ಕ್ರಿಕೆಟ್ ಕುರಿತಾಗಿಯೂ ಒಂದಷ್ಟು ದಿನ ಯುವ ಪೀಳಿಗೆಗೆ ಒಲವಿದ್ದುದು ನಿಜ. ಆದರೆ, ಈಗಂತೂ ಯಾರ ಮನೆಯಲ್ಲಿ ನೋಡಿದರೂ ಮೊಬೈಲ್, ಕಂಪ್ಯೂಟರ್ಗಳು. ಇಂದು ಇವು ನವಜಾತ ಶಿಶುವಿನ ಅಂಗೈನಲ್ಲೂ ಸೇರಿಹೋಗಿವೆ. ಇದು ತೀರಾ ದುಃಖದ ಸಂಗತಿಯಲ್ಲದೇ ಮತ್ತಿನ್ನೇನು?
ನಿಜಕ್ಕೂ ಬಾಲ್ಯವೇ ಸುಂದರ. ಅದರಲ್ಲೂ ಬಾಲ್ಯದ ಶಾಲಾದಿನಗಳು ಎಂದೂ ಮರೆತುಹೋಗದ ಸವಿಕ್ಷಣಗಳನ್ನು ನಮ್ಮಲ್ಲಿ ಅಚ್ಚೊತ್ತಿಸಿರುತ್ತವೆ. ಯಾವ ಕಲ್ಮಶವೂ ಇಲ್ಲದ, ಮುಗ್ದ ಮನದ ವಿದ್ಯಾರ್ಜನೆಯ ಕಾಲವದು. ನಲಿಯುತ್ತಾ ಕಲಿಯುವ ದಿನಗಳು ಕ್ರಮೇಣ ಏಕಾಗ್ರಗೊಳ್ಳುತ್ತಾ ಪದವಿ ಹಂತದವರೆಗೂ ಸಾಗುತ್ತವೆ. ಮುಂದಿನದು ಪಿಜಿ ಜೀವನ. ಇದು ಬಾಲ್ಯದ ದಿನದಂತೆ ಸರಳವೂ ಅಲ್ಲ, ಸಹಜವೂ ಅಲ್ಲ. ಇಲ್ಲಿ ಜ್ಞಾನವನ್ನು ವಿಸ್ತಾರಗೊಳಿಸಿಕೊಳ್ಳುವ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಸಂಗತಿ ಯಷ್ಟೇ ಪ್ರಧಾನವಾಗುತ್ತದೆ. ಸಾಮಾನ್ಯವಾಗಿ ರೂಢಿಯಲ್ಲಿ ಒಂದು ಮಾತಿದೆ. ವಿದ್ಯಾರ್ಥಿ ಸುಖಾರ್ಥಿಯಾಗಲಾರ, ಸುಖಾರ್ಥಿ ವಿದ್ಯಾರ್ಥಿಯಾಗಲಾರ ನೆಂದು. ಅದು ನಿಜವೂ ಹೌದೆನ್ನಿ. ಹಾಗಾಗಿಯೋ ಏನೋ... ಆಳವಾಗಿ ಅಧ್ಯಯನ ಮಾಡುವುದಕ್ಕೆ ಬಂದಾಗ, ಅಲ್ಲಿ ಓದೊಂದೇ ಮುಖ್ಯವಾಗುತ್ತದೆ.
ಈಗಿನ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸವು ಕೆಜಿಗಳಿಂದಲೇ ಆರಂಭವಾಗುವಂತಹದ್ದು. ಅಲ್ಲಿಂದ ಮೊದಲ್ಗೊಂಡು ಉನ್ನತ ಹಂತದ ಪಿಜಿವರೆಗೂ ವಿದ್ಯಾರ್ಥಿ ತನ್ನೆಲ್ಲಾ ಸುಖ ಸಂತೋಷಗಳನ್ನು ಬದಿಗಿರಿಸಿ, ಓದನ್ನು ಮಾತ್ರ ಗುರಿಯಾಗಿಸಿಕೊಳ್ಳಬೇಕಾಗುತ್ತದೆ. ನಡುವೆ ಹೊಸ ಹೊಸ ಮುಖಗಳ ಪರಿಚಯವಾಗುತ್ತದೆ. ಪರಿಚಯದಿಂದ ಸ್ನೇಹ, ಪ್ರೀತಿ ಎಲ್ಲವೂ ವಿದ್ಯಾಹಂತದ ಭಾಗಗಳೇ ಆಗಿಬಿಡುತ್ತದೆ. ಕೆಲವರು ಶ್ರದ್ಧೆಯಿಂದ ಓದಿ ತಾವಂದುಕೊಂಡದ್ದನ್ನು ಸಾಧಿಸುತ್ತಾರೆ. ಇನ್ನು ಕೆಲವರು ಲೌಕಿಕದ ಪಾಶಗಳ ಸುಳಿಗೆ ಸಿಲುಕಿ ದೆಸೆಗೆಡುತ್ತಾರೆ. ಹಂತಗಳು ಉನ್ನತವಾಗುತ್ತಾ ಹೋದಹಾಗೆ ನಮ್ಮಲ್ಲಿನ ಭಾವನೆಗಳೂ ಬೆಳೆಯುತ್ತಲೇ ಸಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಮೇಷ್ಟ್ರುಗಳ ಭಯ, ರಜೆಸಿಕ್ಕಾಗ ಆಗುವ ಸಂತೋಷ, ದಿನಾಚರಣೆಗಳಲ್ಲಿ ಕೊಟ್ಟ ಸಿಹಿಯ ಅನುಭವ, ಹೋಂವರ್ಕ್ಗಳ ಕಿರಿಕಿರಿ ಎಲ್ಲವೂ ಮೇಳೈಸಿಕೊಂಡಿರುತ್ತದೆ. ಆದರೆ ಪದವಿ ಪೂರ್ವ ಮತ್ತು ಪದವಿ ಹಂತಗಳಿಗೆ ಕಾಲಿರಿಸಿದಾಗ ಆಗುವ ಅನುಭವಗಳೇ ವಿಭಿನ್ನ ರೀತಿಯದ್ದು. ಶಿಕ್ಷಕರ ಅನುಕರಣೆ ಮಾಡುವುದು, ಡೆಸ್ಕ್ಗಳಲ್ಲಿ ಚಿಂಗಮ್ ಹಚ್ಚಿಡುವುದು, ಮುಂದೆ ಕುಳಿತವರ ತಲೆಗೆ ಹೊಡೆಯುವುದು, ಕೂದಲನ್ನು ಗದ್ದೆ ನೆಟ್ಟಿ (ನಾಟಿ) ಮಾಡಿದಂತೆ ಆಕಾಶಕ್ಕೆ ಏರಿಸಿ ಬಾಚುವುದು, ಎಲ್ಲರೂ ತರಗತಿ ಯೊಳಗೆ ಕುಳಿತ ಮೇಲೆ ಹೀರೋ ರೀತಿಯಲ್ಲಿ ಒಳಗೆ ಕಾಲಿಡುವುದು, ಬೇಕೆಂದೇ ಕೀಟಲೆ ಮಾಡುತ್ತಾ ಕುಳಿತುಕೊಳ್ಳುವುದು... ಹೀಗೆಲ್ಲಾ ದಿನಗಳು ಸಾಗುತ್ತವೆ. ಇವುಗಳ ಜೊತೆಯಲ್ಲಿಯೇ ಪ್ರೀತಿ ಪ್ರೇಮಗಳ ಬಯಕೆಯೂ ಅಂಕುರಗೊಂಡು ಮನಸ್ಸನ್ನು ಎತ್ತೆತ್ತಲೋ ಕೊಂಡುಹೋಗುತ್ತದೆ. ಯಾರೋ ಒಬ್ಬರು ಇಷ್ಟವಾಗುತ್ತಾರೆ; ಸದಾ ಅವರನ್ನೇ ಕಾಣಬೇಕು, ಮಾತಾಡಬೇಕೆಂಬ ಬಯಕೆ ಹೆಚ್ಚುತ್ತದೆ. ಕೆಲವರಂತೂ, ತಾವು ಓದಿದ ಕಥೆÀಗಳ ಸುಂದರ ನಾಯಕ, ನಾಯಕಿಯರನ್ನು ತನ್ನವರೊಂದಿಗೆ ಹೋಲಿಸಿಕೊಂಡು   ಕಾರಣವಿಲ್ಲದೆಯೇ ನಗುತ್ತಿರುತ್ತಾರೆ. ಕನಸಿನಲ್ಲಿ ಕಂಡವರನ್ನು, ಕಣ್ಣು ತೆರೆದಾಗಲೂ ಮತ್ತೆ ಮತ್ತೆ ಹುಡುಕಾಡುತ್ತಾರೆ. ಕಣ್ಣು ಮುಚ್ಚಿರುವಾಗಲೂ ಅವರನ್ನೇ ನೆನೆಯುತ್ತಾರೆ. ಅಷ್ಟರೊಳಗಾಗಲೇ ಮುಖ್ಯಪರೀಕ್ಷೆಯು ಹತ್ತಿರಕ್ಕೆ ಬಂದುಬಿಡುತ್ತದೆ. ಇನ್ನೇನು ನಾಳೆಯೇ ಪರೀಕ್ಷೆ ಎಂಬುದು ಸ್ಪಷ್ಟವಾದರೂ ಯಾಕೋ ಓದುವುದಕ್ಕೇ ಉದಾಸೀನ. ಆಗಲೂ ಮನಸ್ಸು ಎಲ್ಲೆಲ್ಲಿಗೋ ಹೋಗಿಬರುತ್ತದೆ. ಪ್ರೀತಿಯಲ್ಲಿ ಅತಿಯಾಗಿ ಮುಳುಗಿದವರು, ಓದಿನ ಪುಸ್ತಕದಲ್ಲಿಯೂ ತಮ್ಮವರನ್ನೇ ಹುಡುಕುತ್ತಾರೆ! ಹಾಸಿಗೆಯ ಮೇಲೆ ಮಲಗಿಕೊಂಡು ಇತಿಹಾಸ ಓದುವ ಬದಲು ಮನಸಿಗೆ ಹತ್ತಿರವಾದವರು ಕೊಟ್ಟ ಪತ್ರವನ್ನೋ, ಗ್ರೀಟಿಂಗನ್ನೋ ಇನ್ನೇನನ್ನೋ ಓದುವುದಕ್ಕೆ ಮುಂದಾಗುತ್ತಾರೆ. ನೋಡುವವರಿಗೆ ಇವರಷ್ಟ್ಟು ಶಿಸ್ತುಬದ್ದಬ್ರಿಲಿಯೆಂಟ್ ಸ್ಟೂಡೆಂಟ್ಗಳು ಪ್ರಪಂಚದಲ್ಲಿ ಮತ್ತೆಲ್ಲೂ ಇಲ್ಲವೇನೋ ಎನಿಸುತ್ತದೆ. ಆದರೆ ಗುಟ್ಟು ಅವರಿಗಷ್ಟೇ ಗೊತ್ತಿದ್ದು, ಒಳಗೊಳಗೇ ಮುಸಿಮುಸಿ ನಗುತ್ತಾರೆ. ಹೀಗಿದ್ದರೂ, ಅಂತಿಮ ಪರೀಕ್ಷೆಯಲ್ಲಿ ಹೇಗೋ ತಕ್ಕಷ್ಟು ಅಂಕ ಗಳಿಸಿಕೊಂಡು ಉತ್ತೀರ್ಣರೂ ಆಗಿಬಿಡುತ್ತಾರೆ!
ಅಂದುಕೊಂಡದ್ದೆಲ್ಲವೂ ಹಾಗೆಯೇ ಆದರೆ ನಮ್ಮಷ್ಟು ಪುಣ್ಯವಂತರೇ ಇಲ್ಲವೆಂದು ಬೀಗುತ್ತೇವೆ. ಕೆಲವೊಮ್ಮೆ ಬಯಸಿದ್ದು ಕೈಗೆಟುಕದೇ ಇದ್ದಾಗ ಕಣ್ಕೊಳದ ಕಟ್ಟೆಯೊಡೆದು ಜಲಪ್ರವಾಹವೇ ಉಂಟಾಗುತ್ತದೆ. ಸ್ಥಿರ ಮನಸ್ಕರಲ್ಲದವರಂತೂ, ಸಣ್ಣ ಸಣ್ಣ ವಿಷಯಕ್ಕೂ ತುಂಬಾ ತಲೆಕೆಡಿಸಿ ಕೊಳ್ಳುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ಪರೀಕ್ಷೆಯಲ್ಲಿ ಬಯಸಿದಷ್ಟು ಅಂಕ ದೊರೆಯಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೂ ಆತ್ಮಹತ್ಯೆಯ ಪ್ರಯತ್ನಕ್ಕೆ ಮುಂದಾಗುತ್ತಾರೆ. ನಾವು ಪ್ರೀತಿಸಿದವರನ್ನೇ ಮದುವೆಯಾಗುವ ಭಾಗ್ಯ ಸಿಕ್ಕಾಗ ಭೂಮಿಯಲ್ಲಿ ನಮಗಿಂತ ಹೆಚ್ಚು ಸಂತೋಷಪಡುವವರೇ ಇಲ್ಲವೆನಿಸುತ್ತದೆ. ಹಾಗೆಯೇ ಬಯಸಿದವರನ್ನು ಹೊಂದಲಾಗದೇ ಇದ್ದಾಗ, ಬೇರೆ ದಾರಿಯೇ ಇಲ್ಲ ಎಂದುಕೊಂಡು ಸಾವಿಗೆ ಶರಣಾಗುವವರೂ ಇದ್ದಾರೆ. ಇನ್ನು ಕೆಲವು ತರುಣರು ಸಾವಿಗೆ ಮುಂದಾಗದಿದ್ದರೂ, ಕೊರಗುತ್ತಲೇ ಮುಖದಮೇಲೆ ಒಂದಿಷ್ಟು ದಾಡಿಬಿಟ್ಟುಕೊಂಡು ದೇವ ದಾಸನಂತೆ ತಿರುಗುತ್ತಾರೆ!
ಹೇಗೆಲ್ಲಾ ಸಾಗಿ ಬರುತ್ತದಲ್ಲವೇ ಶೈಕ್ಷಣಿಕ ಜೀವನ. ಮಾನವನ ಜೀವನ ಅನಂತ ತಿರುವುಗಳ ಆಗರವೆಂದು ಬಲ್ಲವರು ಹೇಳಿದ್ದಾರೆ. ತಿರುವುಗಳ ದಾರಿಯಲ್ಲಿ ಸಾಗುವಾಗ ನಮ್ಮ ಜೀವನದಲ್ಲಿಯೂ ಅನೇಕ ಏರುಪೇರುಗಳುಂಟಾಗುತ್ತವೆ. ವಾಡಿಕೆಯಲ್ಲಿ, ವಿದ್ಯಾರ್ಥಿಯ ಜೀವನವನ್ನು ಬಂಗಾರದ ಜೀವನ ಎಂದು ಕರೆಯುವುದಿದೆ. ಇದಕ್ಕೆ ಕಾರಣವಿಲ್ಲದೇ ಇಲ್ಲ. ಹಂತಗಳಲ್ಲಿ ಪಡೆಯುವ ಅನುಭವ ಇನ್ನಾವ ಸಮಯದಲ್ಲಿಯೂ, ಬೇಕೆಂದರೂ ಸಿಗುವುದಿಲ್ಲ. ಗೆಳೆಯರೊಡನೆ ಹರಟೆ, ಆಟ, ವಿನೋದಾವಳಿ ಗಳು ಎಲ್ಲವೂ ನಮ್ಮನ್ನು ಸಂತಸದ ಕಡಲಲ್ಲಿ ತೇಲಾಡಿಸುತ್ತವೆ. ಕಲಿಯುವಿಕೆಗೆ ಕೊನೆಯಿಲ್ಲವಾದರೂ ಶಾಲಾ ಕಾಲೇಜುಗಳಲ್ಲಿ ಕುಳಿತು ಕಲಿಯುವ ಅವಕಾಶ ಕೇವಲ ಕೆಜಿಯಿಂದ ಪಿಜಿವರೆಗೆ ಮಾತ್ರ. ಮುಂದೆಯೂ ಓದುವುದಕ್ಕೆ ಸಾಧ್ಯ, ಆದರೆ ಅಲ್ಲಿ ಹಿಂದಿನಂತಹ ವ್ಯವಸ್ಥೆಗಳಿರುವುದಿಲ್ಲ. ಸಾಮಾನ್ಯವಾಗಿ ಇಂದಿನ ಆಧುನಿಕ ಜಗತ್ತಿನಲ್ಲಿದ್ದರೂ, ಅನೇಕರು ಹಿಂದಿನ ಮಧುರಾನುಭವದ ರಸಾಸ್ವಾದವನ್ನು ಪಡೆದುಕೊಂಡೇ ಬಂದಿರುವವರಾಗಿರುತ್ತಾರೆ.
ನಮಗೆಲ್ಲ ಕೆಜಿಗಳ ಅನುಭವವಿಲ್ಲ. ಒಂದೆರಡು ದಿನ ಮಾತ್ರ ಬಾಲವಾಡಿಗೆ ಹೋಗಿ ಫುಡ್ ತಿಂದ ನೆನಪಷ್ಟೇ ಉಳಿದಿದೆ. ತೀರಾ ಇತ್ತೀಚಿನವರಿಗೆ ಬಾಲವಾಡಿ ಎಂದರೇನೆಂದೇ ಗೊತ್ತಿಲ್ಲದಿರುವುದು ವಿಷಾದದ ಸಂಗತಿ. ಈಗಿನ ಮಕ್ಕಳು ಬಹುತೇಕ ಸಂದರ್ಭಗಳಲ್ಲಿ ಸಹಜ ಸಂತಸಗಳಿಂದ ಸಂಪೂರ್ಣ ವಂಚಿತರಾಗುತ್ತಿದ್ದಾರೆ. ಪುಸ್ತಕದ ಹುಳಗಳಾಗುತ್ತಿದ್ದಾರೆ. ಕುಟುಂಬದಲ್ಲಿ ಮಕ್ಕಳು ಹುಟ್ಟುತ್ತಲೇ, ಪ್ರತಿಷ್ಠಿತ ಹುದ್ದೆಗಳನ್ನು ಪಡೆಯಲು ಬಲವಂತದಿಂದ ತಿದ್ದಲಾಗುತ್ತಿದೆ. ಆಡಿಕೊಂಡು ಇರಬೇಕಾದ ದಿನಗಳಲ್ಲಿ ಗೂಡಿನೊಳಗೆ ಕುಳಿತು ಮೂರುಹೊತ್ತೂ ಟ್ಯೂಷನ್, ಓದು, ಹೋಂವರ್ಕ್ ಎಂದು ಹಿಂಸಿಸತೊಡಗಿದರೆ, ಮಗುವಿಗೆ ಮಾನಸಿಕ ಒತ್ತಡವಾಗಿ ಬದ್ದಿ ಮಂದವಾದರೂ ಆದೀತು. ಸರಿಯಾದ ಜೀವನ ರೂಪಿಸಿಕೊಳ್ಳುವುದಕ್ಕೆ, ಲೋಕದ ಜನರ ನಡುವೆ ಬೆರೆಯುವ ಕ್ರಿಯೆ ಮಾತ್ರ ಸಹಾಯ ಮಾಡಲು ಸಾಧ್ಯ. ಪಂಜರದ ಗಿಳಿಗೆ ಹಾರುವ ಹುಮ್ಮಸ್ಸಿದ್ದರೂ ಬಂಧನವೇ ಹೆಚ್ಚಾದರೆ, ಅದು ಕ್ರಮೇಣ ನಿರುತ್ಸಾಹಿಯೇ ಆಗಿಬಿಡುತ್ತದೆ. ಹಾಗಾಗಿ ಇನ್ನಾದರೂ ಮಕ್ಕಳಿಗೆ ಮತ್ತೆ ಹಿಂದಿನ ಸಂತಸವೇ ಮರುಕಳಿಸುವಂತಾಗಬೇಕು. ಹೀಗೆ ಬಯಸುವ ಭಾವವೇ ಎಲ್ಲರೆದೆಯಲ್ಲೂ ಮೊಳೆತು ಹೆಮ್ಮರವಾಗಲಿ ಎಂಬುದೇ ನಮ್ಮ, ಹಿರಿಯರೆಲ್ಲರ ಆಶಯ...*         

26.02.2016 
 ಉದಯವಾಣಿಯಲ್ಲಿ ಪ್ರಕಟ


ಶಿವಕುಮಾರ ಬಿ. ಎ ಅಳಗೋಡು 27.04.17 ಉದಯವಾಣಿ

ಸೋಮವಾರ, ಏಪ್ರಿಲ್ 24, 2017

munnudi: ಶಿವಕುಮಾರ ಬಿ.ಎ. ಅಳಗೋಡು ಅವರ ಮಹೀಂದ್ರ ಮಹಾಭಿಷ’ ಮತ್ತು ‘ಮ...

munnudi: ಶಿವಕುಮಾರ ಬಿ.ಎ. ಅಳಗೋಡು ಅವರ ಮಹೀಂದ್ರ ಮಹಾಭಿಷ’ ಮತ್ತು ‘ಮ...: ಶಿವಕುಮಾರ ಬಿ . ಎ . ಅಳಗೋಡು ಅವರ ಮಹೀಂದ್ರ ಮಹಾಭಿಷ ’ ಮತ್ತು ‘ ಮುನ್ನುಡಿ ’ ಕೃತಿಗಳ ಬಿಡುಗಡೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ...

munnudi: ಶಿವಕುಮಾರ ಬಿ.ಎ ಅಳಗೋಡು ಇವರ 'ಮುನ್ನುಡಿ' ಕೃತಿಯಿಂದ ಆಯ್ದ ...

munnudi: ಶಿವಕುಮಾರ ಬಿ.ಎ ಅಳಗೋಡು ಇವರ 'ಮುನ್ನುಡಿ' ಕೃತಿಯಿಂದ ಆಯ್ದ ...: ಭಾರತದ ಕರ್ಣ ಮಹಾಭಾರತ , ರಾಮಾಯಣಗಳು ವಿಸ್ತಾರವಾದ ಶರಧಿಯಿದ್ದಂತೆ . ಎಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಅದರ ಕೊನೆಯನ್ನು ತಿಳಿಯು ವುದಕ್ಕಾಗಲೀ ,...

ಶಿವಕುಮಾರ ಬಿ.ಎ. ಅಳಗೋಡು ಅವರ ಮಹೀಂದ್ರ ಮಹಾಭಿಷ’ ಮತ್ತು ‘ಮುನ್ನುಡಿ’ ಕೃತಿಗಳ ಬಿಡುಗಡೆ


ಶಿವಕುಮಾರ ಬಿ.. ಅಳಗೋಡು ಅವರ ಮಹೀಂದ್ರ ಮಹಾಭಿಷಮತ್ತುಮುನ್ನುಡಿಕೃತಿಗಳ ಬಿಡುಗಡೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ದಿನಾಂಕ: 19-4-2017 ರಂದು ದ್ವಿತೀಯ ವರ್ಷದ ಕನ್ನಡ ಎಂ.. ವಿದ್ಯಾರ್ಥಿ ಶಿವಕುಮಾರ್ರವರಮಹೀಂದ್ರ ಮಹಾಭಿಷಮತ್ತುಮುನ್ನುಡಿಎಂಬ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ನಡೆಯಿತುಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಅವರು ಎರಡು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ, ಪುಸ್ತಕಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶಿವಕುಮಾರ್ ಅವರನ್ನು ಸನ್ಮಾನಿಸಿದರು. ಕನ್ನಡದ ಪ್ರಸಿದ್ಧ ವಿದ್ವಾಂಸರು ಮತ್ತು ನಿವೃತ್ತ ಪ್ರಾಂಶುಪಾಲರೂ ಆದ ಪ್ರೊ. ಪಾದೇಕಲ್ಲು ವಿಷ್ಣುಭಟ್ ಅವರು ಯಕ್ಷಗಾನ ಕೃತಿಯಾದಮಹೀಂದ್ರ ಮಹಾಭಿಷ ಬಗ್ಗೆ ಮಾತನಾಡಿದರು. ಕನ್ನಡದ ಯಕ್ಷಗಾನದ ಚರಿತ್ರೆಯನ್ನು ತಿಳಿಸುತ್ತಲೇ ಶಿವಕುಮಾರ್ ಅವರ ಯಕ್ಷಗಾನ ಕೃತಿ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು. ‘ ಹಿಂದಿನ ಕವಿಗಳ ಕೃತಿಗಳನ್ನು ಚೆನ್ನಾಗಿ ಓದಿಕೊಂಡಇರುವುದು ಅವರ ರಚನೆಯಿಂದ ತಿಳಿಯುತ್ತದೆ. ಛಂದೋಬದ್ಧವಾಗಿ ಸಣ್ಣದಾದ ಕಥೆಯನ್ನೇ ಸೊಗಸಾಗಿ ನಿರೂಪಿಸಿದ್ದಾರೆ. ಇಂದಿನ ದಿನಗಳಲ್ಲಿ ಯಾರಿಂದಲೋ ಪದ್ಯಬರೆಸಿ ಪ್ರಸಂಗ ಕತೃಗಳೆಂದು ಕರೆಸಿಕೊಳ್ಳುತ್ತಿರುವವರೆದುರು ಶಿವಕುಮಾರರು ವಿಶಿಷ್ಟವಾಗಿ ಎದ್ದು ಕಾಣಿಸಿಕೊಳ್ಳುತ್ತಾರೆ. ನಡುಗನ್ನಡ, ಹೊಸಗನ್ನಡ ಭಾಷಾಬಳಕೆಯಿಂದ ಪ್ರಸಂಗದ ಮಹತ್ವ ಹೆಚ್ಚಿದೆ. ಇವರಿಂದ ಇನ್ನೂ ಅನೇಕ ಮೌಲಿಕ ಕೃತಿಗಳು ರಚನೆಗೊಳ್ಳಲಿ’ ಎಂದರು. ತೆಂಕನಿಡಿಯೂರು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಎಚ್.ಕೆ. ವೆಂಕಟೇಶ ಅವರು ಶಿವಕುಮಾರ್ ಅವರ ಮತ್ತೊಂದು ಕೃತಿಮುನ್ನುಡಿಕುರಿತ  ಅವಲೋಕನ ಮಾಡಿದರು. ‘ಇದೊಂದು 17 ಲೇಖನಗಳ ಪುಸ್ತಕವಾಗಿದೆ. ಮೇಲ್ನೋಟದಿಂದ ಬಿಡಿ ಲೇಖನಗಳಂತೆ ಕಾಣಿಸಿದರೂ ಎಲ್ಲಕ್ಕೂ ಅನುಕ್ರಮ ಸಂಬಧವಿದೆ. ‘ಕವಿಯಾದವನು ಎಲ್ಲವನ್ನೂ ಕಾಣಬೇಕು’ ಆ ನೆಲೆಯಿಂದಲೇ ಕೆಲವು ಲೇಖನಗಳನ್ನು ಬರೆದೆ ಎಂದು ಕೃತಿಕಾರರೇ ಹೇಳಿಕೊಂಡಿದ್ದಾರೆ. ಅದರಂತೆ, ಮದುವೆ ಎಂದರೆ, ಹೆಂಡತಿಯ ಅಲಂಕಾರದಲ್ಲಿ ಗಂಡ ಬೇಸತ್ತು ಹೋದ ಬಗೆಗೆ, ಹೆಣ್ಣಿನ ಇಂದಿನ ನಿಜಸ್ಥಿತಿಯ ಬಗೆಗೆ ಹೀಗೆ ಕಲ್ಪಿಸಿ ಕಂಡ ಲೇಖನಗಳಿಲ್ಲಿವೆ. ಕುವೆಂಪುರವರ ಶ್ರೀರಾಮಾಯಣದರ್ಶನಂ ಕೃತಿಯಲ್ಲಿ ಬರುವ ಮಂಥರೆ ಮತ್ತು ಊರ್ಮಿಳೆಯ ಪಾತ್ರದಿಂದ ಪ್ರೇರಣೆಗೊಂಡು ಇಲ್ಲಿನ ‘ಮಾತಾಡು ಊರ್ಮಿಳಾ’, ‘ತಪ್ಪಿಲ್ಲ ನಿನ್ನೊಳು ಮಂಥರಾ’ ಲೇಖನ ಅತ್ಯಂತ ಸೊಗಸಾಗಿ ರಚನೆಗೊಂಡಿವೆ. ‘ಭಾರತದ ಕರ್ಣ’ ಪಂಪ, ಕುಮಾರವ್ಯಾಸ ಭಾರತದಲ್ಲಿ ಕರ್ಣನನ್ನು ಕಂಡ ಬಗೆಯನ್ನು ತಮ್ಮ ನೆಲೆಯಲ್ಲಿ ಲೇಖಕರು ಚಿತ್ರಿಸಿದ್ದಾರೆ. ಇದೊಂದು ಸುಂದರ ಲೇಖನವಾಗಿದ್ದು ವಿದ್ಯಾರ್ಥಿಗಳಿಗೆ ಸಮರ್ಥವಾದ ಪರಾಮರ್ಶನ ಲೇಖನವೂ ಆಗಿದೆ. ಸೃಜನಶೀಲ ಕೃತಿಯಾದ ಈ ಲೇಖನಮಾಲಿಕೆಯಲ್ಲಿನ ಎಲ್ಲಾ ಲೇಖನಗಳೂ ಓದಲೇಬೇಕಾದವುಗಳಾಗಿವೆ. ಕೆಲವಷ್ಟು ಲೇಖನಗಳು ಮತ್ತೆ ಮತ್ತೆ ಓದಿಸಿಕೊಳ್ಳುವಂತಿವೆ’ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿಕೊಂಡು ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳ ಮೂಲಕ ಕ್ರಿಯಾಶೀಲರಾಗಿ ಕಾಲೇಜಿನ ಘನತೆಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು. ಲೇಖಕ ಶಿವಕುಮಾರರು ಕೃತಿಗಳ ಅಭಿವ್ಯಕ್ತಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರುಆಂಗ್ಲವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರಸಾದ್ ರಾವ್ ಎಂ. ಶುಭ ಹಾರೈಸಿದರು. ಕನ್ನಡ ಸಹ ಪ್ರಾಧ್ಯಾಪಕಿ  ಡಾ. ನಿಕೇತನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ರಶ್ಮಿಶ್ರೀ ಪ್ರಾರ್ಥಿಸಿದರು. ಸುಹಾಸ್ ಶೆಟ್ಟಿ ನಿರೂಪಿಸಿದರುಚಂದನಾ ಕೆ.ಎಸ್. ವಂದಿಸಿದರು.

ಶಿವಕುಮಾರ ಬಿ.ಎ ಅಳಗೋಡು ಇವರ 'ಮುನ್ನುಡಿ' ಕೃತಿಯಿಂದ ಆಯ್ದ ಲೇಖನ 'ಭಾರತದ ಕರ್ಣ'


ಭಾರತದ ಕರ್ಣ

ಮಹಾಭಾರತ, ರಾಮಾಯಣಗಳು ವಿಸ್ತಾರವಾದ ಶರಧಿಯಿದ್ದಂತೆ. ಎಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಅದರ ಕೊನೆಯನ್ನು ತಿಳಿಯು ವುದಕ್ಕಾಗಲೀ, ಆಳವನ್ನು ಅರಿಯುವುದಕ್ಕಾಗಲೀ ಸಾಧ್ಯವಿಲ್ಲ. ರಾಷ್ಟ್ರಕವಿ ಕುವೆಂಪುರವರು ತಮ್ಮಮಲೆಗಳಲ್ಲಿ ಮದುಮಗಳುಕಾದಂಬರಿಯಲ್ಲಿ ಹೇಳುವ, ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ; ಇಲ್ಲಿ ಯಾವುದೂ ಅಲ್ಲ ವ್ಯರ್ಥ, ನೀರೆಲ್ಲವೂ ತೀರ್ಥಎಂಬ ಮಾತನ್ನು ಮಹಾಕಾವ್ಯಗಳ ಪಾತ್ರದ ಕುರಿತಾಗಿಯೂ ಅನ್ವಯಿಸಿ ಹೇಳಬಹುದು. ಇವು ದಿನನಿತ್ಯದ ಬದುಕಿನ ಅದೆಷ್ಟೋ ಸಂಗತಿಗಳನ್ನು ಒಳಗೊಂಡಿವೆ. ನಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನೂ ಸಾರುತ್ತವೆ; ಹಾಗೆಯೇ, ಉಚ್ಛಾಟಿಸಿಕೊಳ್ಳಬೇಕಾದ ಸೂಕ್ಷ್ಮತೆಗಳನ್ನೂ ಧ್ವನಿಸುತ್ತವೆ. ಹಾಗಾಗಿಯೇ ಮಹಾಭಾರತ, ರಾಮಾಯಣಗಳು ಎಂದೋ ಘಟಿಸಿ ಹೋಗಿದ್ದರೂ ಕೂಡ ಅವು ಇಂದಿಗೂ ಹಾಗೂ ಎಂದೆಂದಿಗೂ ನಮಗೆ ಪ್ರಸ್ತುತವೇ ಎನಿಸುತ್ತವೆ.
ಕೇವಲ ಮಹಾಭಾರತವನ್ನಷ್ಟೇ ಗಣನೆಗೆ ತೆಗೆದುಕೊಂಡಾಗ ಅದರಲ್ಲಿ ಬಹುಬೇಗ ಆಕರ್ಷಿಸಲ್ಪಡುವ ವ್ಯಕ್ತಿತ್ವವೆಂದರೆ ಕರ್ಣನ ವ್ಯಕ್ತಿತ್ವ. ಆತನ ಜನನ, ಮರಣ, ಇವೆರಡರ ನಡುವಿನ ಜೀವನ ಎಲ್ಲವೂ ಒಂದು ಬಗೆಯ ದುರಂತ ಕ್ಷಣಗಳನ್ನು ಕಡೆದು ನಿಲ್ಲಿಸಿದಂತಿದೆ. ದೂರ್ವಾಸರ ಮಂತ್ರ ಬಲದಿಂದ ಜನಿಸಿದ ತರಳರಲ್ಲಿ ಮೊದಲಿಗನೇ ಕಲಿ ಕರ್ಣಸಾಮಾನ್ಯವಾಗಿ ರೂಢಿಯಲ್ಲಿ ಒಂದು ಮಾತಿದೆಯೋಗ ಇದ್ದವರಿಗೆ ಭಾಗ್ಯವಿಲ್ಲ, ಭಾಗ್ಯ ಇದ್ದವರಿಗೆ ಯೋಗವಿಲ್ಲವೆಂದು ಆದರೆ, ಕರ್ಣನಿಗೆ ಇವೆರಡೂ ಸರಿಯಾದ ಸಮಯಕ್ಕೆ ಒದಗಿಬರಲಿಲ್ಲ. ಹಾಗಾಗಿಯೇ ನಾಯಕನಾಗಬೇಕಾಗಿದ್ದವನು ಸೇವಕನಾಗಿಬಿಡುತ್ತಾನೆ! ಮಹಾಭಾರತವು ಹಲವು ನಾಯಕರಿಂದ ಕೂಡಿದ ಕಾವ್ಯ. ಇಲ್ಲಿ ಒಂದೊಂದು ಸಂದರ್ಭದಲ್ಲಿ ಒಬ್ಬೊಬ್ಬರು ನಾಯಕರಂತೆ ಕಾಣಿಸಿಕೊಳ್ಳುತ್ತಾರೆ. ಇದರಿಂದಾಗಿಯೇ ಭಾರತ
ಕಥೆಯಲ್ಲಿಏಕನಾಯಕತ್ವವನ್ನು ನಿಖರವಾಗಿ ಗುರುತಿಸುವುದು ಕಷ್ಟ. ಮಹಾಕಾವ್ಯವು ಮುಂದೆ ಅನೇಕ ಮೇರು ಕೃತಿಗಳಿಗೆ ವಸ್ತುವನ್ನೊದಗಿಸಿ ಕೊಟ್ಟಿತು. ವ್ಯಾಸಭಾರತದಲ್ಲಿ ಕರ್ಣ, ದುಷ್ಟ ಚತುಷ್ಟಯರ ಪಟ್ಟಿಯಲ್ಲಿ ಸೇರಿದ್ದರೂ ಪಂಪನ ಮೆಚ್ಚಿನ ಪಾತ್ರವಾಗುತ್ತಾನೆ. ಪಂಪನನ್ನಷ್ಟೇ ಅಲ್ಲ, ಅಸಂಖ್ಯ ಕೃತಿಕಾರರ, ಸಹೃದಯ ಓದುಗರ ಮನಸೂರೆಗೊಂಡವನಾತ. ವಿಕ್ರಮಾರ್ಜುನ ವಿಜಯದಲ್ಲಿ ನಾಯಕನೆಂದು ಅರ್ಜುನನನ್ನು ಗುರುತಿಸ ಲಾದರೂ, ಕವಿಯ ವಿಶೇಷವಾದ ಒಲವು ಪ್ರತಿನಾಯಕನಾದ ಕರ್ಣನ ಬಗೆಗೇ ಇರುವುದು ಸ್ಪಷ್ಟವಾಗುತ್ತದೆ.
ಕರ್ಣನ ಹುಟ್ಟು ಸಾಮಾನ್ಯರಿಂದ ಆದುದೇನಲ್ಲ. ವಿಶ್ವಕ್ಕೇ ಬೆಳಕನ್ನು ನೀಡುವ ಭಗವಾನ್ ಸೂರ್ಯದೇವನ ಮಂತ್ರಬಲದಿಂದ ಜನಿಸಿದವನೀತ. ಹುಟ್ಟುವಾಗಲೇ ತೇಜಃಪುಂಜನಾಗಿ, ಕುಂಡಲದ್ವಯಗಳನ್ನು ಹಾಗೂ ಅಮೃತಕಲಶವನ್ನು ಹೊಂದಿಕೊಂಡೇ ಬಂದವನು. ಹೀಗಿದ್ದರೂ ಅವನ ಬಾಳು ಕೊನೆಯವರೆಗೂ ಕತ್ತಲ ಕೂಪದಲ್ಲಿಯೇ ನರಳಾಡಿತುನಾವೊಂದು ಬಗೆದರೆ ವಿಧಿ ಬೇರೊಂದು ಬಗೆಯಿತು ಎಂಬ ಮಾತೊಂದಿದೆ. ಅದರಂತೆ, ವಿಧಿವಿಲಾಸದ ಮಾಯೆಗೆ ಸಿಲುಕಿ ಕ್ಷಾತ್ರ ತೇಜೋಸಂಪನ್ನನಾದ ಕರ್ಣ ಅಂತ್ಯ ಕಾಲದವರೆಗೂ ಲೋಕದ ದೃಷ್ಟಿಯಲ್ಲಿ ಒಬ್ಬ ಸಾಮಾನ್ಯ ಸೂತಸುತ ನಾಗಿಯೇ ಉಳಿದುಬಿಟ್ಟ. ಇದು ಭಾಗ್ಯವಿಹೀನನಾದ ಕರ್ಣನ ದುರಂತದ ಶೃಂಗಸ್ಥಿತಿ. ಬಂಗಾರದ ಸಿಂಹಾಸನದ ಮೇಲೆ ಕುಳಿತು, ಬೆಳ್ಗೊಡೆಯ ನೆರಳಿನಲ್ಲಿ ಪ್ರಜಾಸ್ತೋಮವನ್ನು ಸಲಹುವ ಸಾಮಥ್ರ್ಯ ಹೊಂದಿದವನಿವ. ಇಷ್ಟೆಲ್ಲಾ ಇದ್ದರೂ, ಜನನ ಕಾಲದಲ್ಲಷ್ಟೇ ಹೊನ್ನ ಪೆಟ್ಟಿಗೆಯಲ್ಲಿ ಪಯಣ ಬೆಳೆಸುವ ಭಾಗ್ಯದೊರಕಿದುದು ದೌರ್ಭಾಗ್ಯವಲ್ಲದೇ ಮತ್ತೇನು?
ವ್ಯಕ್ತಿಯ ಹುಟ್ಟು ಎಲ್ಲಿ, ಹೇಗೆಯೇ ಆಗಿದ್ದರೂ ಬೆಳೆಯುವಿಕೆಯ ಪರಿಸರದಿಂದ ಅವನ ಭವಿಷ್ಯ ರೂಪಿತವಾಗುತ್ತದೆ ಎಂಬಂತೆ, ಕರ್ಣ ಜಗತ್ತಿನ ಬೆಳಕಾದ ಸೂರ್ಯ ಸುತನೇ ಆಗಿದ್ದರೂ ಹೀನಕುಲದ ಪರಿಸರದಲ್ಲಿ ಸಾಕಲ್ಪಟ್ಟಿದ್ದರಿಂದ ಸೂತಸುತನೆಂದೇ ಭಾರತದ ಉದ್ದಗಲದಲ್ಲಿ ಕರೆಸಿಕೊಳ್ಳ ಬೇಕಾಯಿತು. ಇಡೀ ಲೋಕ, ‘ಕಾನೀನ’, ‘ಸೂತಜ’, ‘ಕುಲಹೀನಎಂಬ ಶಬ್ದವನ್ನು ಅನಾಯಾಸವಾಗಿ ಬಳಕೆ ಮಾಡಿತು. ತಮ್ಮ ಮೂಲವನ್ನೇ ಸರಿಯಾಗಿ ಅರಿಯದಿದ್ದವರೂ, ಕರ್ಣನ ಕುಲದ ಕುರಿತು ಮಾತಾಡಿದರು.ಮಹಾಭಾರತವನ್ನು ವಸ್ತುವನ್ನಾಗಿಸಿಕೊಂಡು ಕೃತಿರಚಿಸಿದ ಪಂಪ, ರನ್ನ, ಕುಮಾರವ್ಯಾಸರಂತಹ ಬಹುತೇಕ ಕವಿಗಳು ತಮ್ಮ ಕೃತಿಯಲ್ಲಿ ಯಾರನ್ನೇ ನಾಯಕನನ್ನಾಗಿಸಿದರೂ ಕರ್ಣನ ಕುರಿತಾಗಿ ಯಾರೂ ಅನಾದರ ತೋರಿಸಲಿಲ್ಲ. ಪಂಪನಂತೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಮನಬಿಚ್ಚಿ ಕರ್ಣನ ಗುಣಗಾನ ಮಾಡಿದ್ದಾನೆ.
ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನೊಂದೆಚಿತ್ತದಿಂ ನೆನೆವುದಾದೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇರು ಕರ್ಣನ ಕಡುನನ್ನಿಎಂದು ಹೇಳುವ ಕವಿಗೆ ಇಷ್ಟೂ ಸಾಲದೆನಿಸಿ ಮತ್ತೂ ಮುಂದುವರೆಸುತ್ತಾ, ‘ಕರ್ಣನ ಪಡೆಮಾತಿನೊಳ್ ಪುದಿದು ಕರ್ಣ ರಸಾಯನ ಮಲ್ತೆ ಭಾರತಂಎಂಬುದಾಗಿ ಹಾಡಿಹೊಗಳುತ್ತಾನೆ. ಇಲ್ಲಿ ಮಹಾಭಾರತವು ಕೇಳುವುದಕ್ಕೆ ಬಹಳ ಸೊಗಸಾದುದು ಎಂಬ ಅರ್ಥವಿದ್ದರೂ, ಪಂಪ ಹೇಳಿರುವುದು ಕರ್ಣನಿಗೆ ಅನ್ವಯವಾಗುವ ರೀತಿಯಲ್ಲಿಯೇ ಎಂಬುದನ್ನು ಗಮನಿಸಬೇಕು. ವಿಕ್ರಮಾರ್ಜುನ ವಿಜಯದಲ್ಲಿ, ಪಂಪ ಕೆಲವು ಮುಖ್ಯ ಪಾತ್ರಗಳಲ್ಲಿ ಒಂದಿಷ್ಟು ಮೌಲಿಕಾಂಶಗಳನ್ನು ಗುರುತಿಸುತ್ತಾನೆ. ‘ಚಲದೊಳ್ ದುರ್ಯೋಧನಂ, ನನ್ನಿಯೊಳಿನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೇಶನ್, ಅತ್ಯುನ್ನತಿಯೊಳ್ ಅಮರ ಸಿಂಧೂದ್ಭವಂ, ಚಾಪವಿದ್ಯಾ ಬಲದೊಳ್ ಕುಂಭೋದ್ಭವಂಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿರ್ಮಲಚಿತ್ತಂ ಧರ್ಮಪುತ್ರಂ ಮಿಗಿಲಿ ವರ್ಗಳಿನೀ ಭಾರತಂ ಲೋಕಪೂಜ್ಯಂಎಂದು. ಗುಣಗಳ ಪಟ್ಟಿಯಲ್ಲಿ, ಮಾತಿಗೆ ತಪ್ಪದ ವೀರ, ಕಲಿ, ತ್ಯಾಗಜೀವಿ ಎಂಬಿತ್ಯಾದಿ ಅರ್ಥಗಳೂ ಕರ್ಣನ ಸಂಬಂಧವಾಗಿಯೇ ರೂಪುಗೊಂಡಿವೆ. ಕೌರವನ ಮನೆಯ ಉಪ್ಪನ್ನವನ್ನು ಉಂಡ ಕಾರಣಕ್ಕಾಗಿ ಕರ್ಣ ಕೊನೆಯಲ್ಲಿ ತನ್ನ ಪ್ರಾಣವನ್ನೇ ಅರ್ಪಿಸುತ್ತಾನೆಯೇ ಹೊರತೂ ಮಾತಿಗೆ ತಪ್ಪುವುದಿಲ್ಲ. ಶ್ರೀಹರಿಯೇ ಬಂದು ಕುಂಡಲಗಳನ್ನೂ, ಎದೆಯ ಅಮೃತ ಕಲಶವನ್ನೂ ಬೇಡಿದಾಗ ಅವುಗಳನ್ನೂ ಹರ್ಷಚಿತ್ತನಾಗಿಯೇ ಹರಿಚರಣಕ್ಕೆ ಸಮರ್ಪಿಸಿ ವಿನೀತನಾಗುತ್ತಾನೆ.
ಪಂಚಪಾಂಡವರೂ, ಕೌರವರೂ ಹುಟ್ಟುವ ಮೊದಲೇ ದೂರ್ವಾಸರಿತ್ತ ಮಂತ್ರಬಲದಿಂದ ಕರ್ಣನ ಜನನವಾಗಿರುತ್ತದೆÉ. ಹುಟ್ಟಿದ ತಕ್ಷಣವೇ ತನ್ನ ಕರಾಳ ಮುದ್ರೆಯನ್ನು ಕರ್ಣನ ಮೇಲೆ ಒತ್ತುವ ದುರ್ವಿಧಿ, ಬಾಳಿನುದ್ದಕ್ಕೂ ತನ್ನ ಪ್ರಾಬಲ್ಯವನ್ನೇ ಮೆರೆಯುತ್ತದೆ. ಹೊನ್ನಿನ ಪೆಟ್ಟಿಗೆಯಲ್ಲಿ ತೇಲಿ ಹೋಗುತ್ತಿರುವ ಶಿಶುವಿನ ಕುರಿತಾಗಿ ಆದಿ ಕವಿಗೆ ವಿಶೇಷ ಪ್ರೀತಿ, ಆದರ ಉಂಟಾಗುತ್ತದೆ. ವ್ಯಾಸಭಾರತದಲ್ಲಿ, ಹೊಳೆಯುವ ಕುಂಡಲಗಳನ್ನು ಹೊಂದಿದ ಕಾರಣ ಕರ್ಣ ಎಂಬ ಹೆಸರು ಬಂದರೆ; ವಿಕ್ರಮಾರ್ಜುನ ವಿಜಯದಲ್ಲಿ ಸಂಗತಿಯನ್ನು ವಿಶೇಷವಾಗಿ ವಿವರಿಸಲಾಗಿದೆ. ನದಿಯಲ್ಲಿ ಸಿಕ್ಕಿ, ಸೂತನ ಮನೆಯಲ್ಲಿ ಬೆಳೆಯುತ್ತಿರುವ ಹುಡುಗನ ಪರಾಕ್ರಮವಾರ್ತೆ ಕರ್ಣದಿಂದ ಕರ್ಣಕ್ಕೆ ಹರಡಿ ಕೀರ್ತಿ ಹೆಚ್ಚಾಗುತ್ತದೆ. ಇದೇ ಕಾರಣದಿಂದ ಆತನಿಗೆಕರ್ಣಎಂಬ ಹೆಸರೇ ಶಾಶ್ವತವಾಗಿಬಿಡುತ್ತದೆ (ಪ್ರಥಮಾಶ್ವಾಸ) ಎನ್ನುತ್ತಾನೆ ಪಂಪ. ಅಹರ್ಪತಿಯ ಮಗನಾಗಿ ಜನಿಸಿದರೂ, ಸೂತನಿಂದ ಸಾಕಲ್ಪಟ್ಟ ಕಾರಣ ಈತ, ಸೂತಸುತನೇ ಆಗಿಬಿಡುತ್ತಾನೆ! ಆದರೆ, ಮೈಯಲ್ಲಿ ಹರಿಯುತ್ತಿರುವ ಕ್ಷಾತ್ರ ಶೋಣಿತ ಅವನನ್ನು ಪರಶುರಾಮರಲ್ಲಿಗೆ ವಿದ್ಯಾರ್ಜನೆಗಾಗಿ ಕಳುಹಿಸುತ್ತದೆ. ದ್ವಿಜರಿಗಲ್ಲದೇ ಅನ್ಯರಿಗೆ ವಿದ್ಯೆ ಕಲಿಸುವು ದಿಲ್ಲವೆಂಬ ನಿರ್ಧಾರದಲ್ಲಿದ್ದ ಭಾರ್ಗವರಾಮರಲ್ಲಿ ಕಲಿಕರ್ಣ ಅನಿವಾರ್ಯವಾಗಿ ದ್ವಿಜನೆಂದು ಸೇರಿಕೊಳ್ಳುತ್ತಾನೆ. ಇಲ್ಲಿ ನಿಜ ಕುಲವನ್ನರಿಯದ ಈತ ವಿದ್ಯೆಯ ದಾಹದಿಂದ ಹೀಗೆ ಹೇಳುತ್ತಾನೆಯೇ ಹೊರತೂ ಮತ್ಯಾವ ವಂಚನೆಯ ಕಾರಣದಿಂದಲೂ ಅಲ್ಲ. ಇದೆಲ್ಲವನ್ನೂ ತಿಳಿದ ಸಹಸ್ರಾಕ್ಷನಾದ ಇಂದ್ರ ಅಲ್ಲಿ ತನ್ನ ಕಪಟವನ್ನು ಪ್ರದರ್ಶಿಸುತ್ತಾನೆ. ಪರಶುರಾಮರು ಕರ್ಣನ ತೊಡೆಯ ಮೇಲೆ ಮಲಗಿರುವ ಸಂಧರ್ಭದಲ್ಲಿ, ವಜ್ರಕೀಟವನ್ನು ಸೃಷ್ಟಿಸಿ ಕಳುಹಿಸುತ್ತಾನೆ. ಗುರುಗಳಿಗೆ ಸ್ವಲ್ಪವೂ ತೊದರೆಯಾಗಬಾರದೆಂದು ಆತ ಅಪಾರ ವೇದನೆಯಲ್ಲೂ ದೇಹವನ್ನು ಕದಲಿಸುವುದಿಲ್ಲ. ಆದರೆ, ಬಿಸಿನೆತ್ತರಿನ ಸ್ಪರ್ಶವಾಗುತ್ತಿದ್ದಂತೆಯೇ ಎಚ್ಚೆತ್ತ ಗುರುಗಳು ಯಾವುದನ್ನೂ ವಿಮರ್ಶಿಸದೇ ಶಪಿಸುತ್ತಾರೆ. ‘ ಧೈರ್ಯಂ ಕ್ಷತ್ರಿಯಂಗಲ್ಲದಾಗದು ಪಾರ್ವನೆಂದೆನ್ನೊಳು ಪುಸಿದು ವಿದ್ಯೆಯಂ ಕೈಕೊಂಡುದಕ್ರ್ಕೆ ದಂಡಂ ಪರತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರವೆಂಬದಿವ್ಯಾಸ್ತ್ರಂ ನಿನ್ನ ಅವಸಾನಕಾಲದೊಳ್ ಬೆಸಕೈಯ್ಯದಿರ್ಕುಂಎಂದು. ವಿದ್ಯೆಯನ್ನು ಬಯಸಿ ಬಂದ, ಗುರುಗಳ ನಿದ್ರಾಭಂಗವಾಗದಿರ ಲೆಂದು ಅಪಾರ ವೇದನೆಯನ್ನೂ ಸಹಿಸಿಕೊಂಡ ವಿದ್ಯಾರ್ಥಿಗೆ ಪ್ರತಿಯಾಗಿ   ದೊರೆಯುವುದು ಶಾಪಮಾತ್ರ. ಇಡೀ ಭಾರತದಲ್ಲಿ ವಿಮೋಚನೆಯೇ ಇಲ್ಲದ ಕಡುಶಾಪಕ್ಕೆ ತುತ್ತಾದವನು ಬಹುಶಃ ಕರ್ಣನೊಬ್ಬನೇ ಇರಬೇಕು. ಇಷ್ಟಕ್ಕೂ ಅವನಿಗಾಗುವ ಅವಮಾನಗಳು ನಿಲ್ಲುವುದಿಲ್ಲ. ಕೋಲಗುರುವಿನ ಬಿಲ್ವಿದ್ಯಾರಂಗದಲ್ಲಿ ಇದರ ತೀವ್ರತೆಯನ್ನು ಕಾಣಬಹುದು. ಕೊಡಲಿ ಪೆಟ್ಟು ತಿಂದ ಕಲ್ಪವೃಕ್ಷ ಕುಂಭಜನ ಗರಡಿಗೆ ಬರುವಾಗ ಪಂಪ ಆಡುವ ಮಾತು ಬಹಳ ಸೊಗಸಾಗಿದೆ. ‘ತೊಳಗುವ ತೇಜಂ ತೊಳ ತೊಳ ತೊಳಗುವ ದಿವ್ಯಾಸ್ತ್ರಮುಮರ್ದ ಕೋದಂಡಮಸುಂಗೊಳಿಸೆ ಮನಂಗೊಳಿಸೆ ಭಯಂ ಗೊಳಿಸೆ ಸಭಾಸದರನುರದೆ ಕರ್ಣಂ ಬಂದಂಎಂದು ವರ್ಣಿಸುತ್ತಾನೆ. ಆದರೆ, ಇದರ ಬೆನ್ನಿನಲ್ಲೇ ಅರಸುಮಕ್ಕಳ ಸಮ್ಮುಖ ಈತನನ್ನು ಕುಲಹೀನನೆಂದು ಜರೆಯಲಾಗುತ್ತದೆ. ನಿಜವಾದ ಪ್ರತಿಭೆಗೆ ಕುಲವು ಅಡ್ಡವಾಗಿ ಅವಮಾನಗೊಳಿಸುತ್ತದೆ. ಸಾಮಥ್ರ್ಯವಿದ್ದರೂಹುಟ್ಟುಅದನ್ನು ಪ್ರದರ್ಶಿಸಲು ಅವಕಾಶವನ್ನೇ ಕೊಡುವುದಿಲ್ಲ. ಕುಲದ ವಿಚಾರವಾಗಿ ಎಲ್ಲರೂ ಅವನನ್ನು ನಿಂದಿಸುವಾಗಪಂದೆಯಂ ಪಾವಡರ್ದಂತುಮ್ಮನೆ ಬೆಮರುತ್ತಮಿರ್ದಂ ಕರ್ಣಎಂದು ಕವಿ ನೊಂದುಕೊಂಡು ಹೇಳುತ್ತಾನೆ. ಅದೇ ಸಮಯದಲ್ಲಿ ಅಲ್ಲಿದ್ದ ಕೌರವ, ‘ಕರ್ಣನನೀಗಳೇ ಕುಲಜನಂ ಮಾಡಿತೋರ್ಪೆನೆಂದುಮುಂದಾಗಿ ಅಂಗರಾಜ್ಯದ ಪಟ್ಟವನ್ನೇ ಕಟ್ಟಿಬಿಡುತ್ತಾನೆ. ಅಂಗರಾಜ್ಯದೊಂದಿಗೆ ಕೌರವನ ಅಂತರಂಗ ರಾಜ್ಯವೂ ಭಾನುಜಾತನಿಗೆ ಪ್ರಾಪ್ತವಾಗುತ್ತದೆ. ಪಂಪ, ಕರ್ಣನ ನಿಜ ವ್ಯಕ್ತಿತ್ವದ ಅನಾವರಣಕ್ಕಾಗಿಯೇ  ಕೆಲವಷ್ಟು ಸಂದರ್ಭವನ್ನು ಮನೋಜ್ಞವಾಗಿ ಕಟ್ಟುತ್ತಾನೆ. ಅದರಲ್ಲಿ ಬಹಳ ಪ್ರಮುಖವಾದುದೆಂದರೆ: ಕರ್ಣ-ಕೃಷ್ಣರ ಬೇಟಿ, ಕುಂತಿ-ಕರ್ಣರ ಮುಖಾಮುಖಿ, ಶಲ್ಯ ಮತ್ತು ಕರ್ಣರ ಸಂಭಾಷಣೆ, ಭೀಷ್ಮ-ಕರ್ಣರ ಮಾತುಕತೆ, ಕರ್ಣಾವಸಾನ....
ಕರ್ಣ-ಕೃಷ್ಣರ ಭೇಟಿ : ಕುಮಾರವ್ಯಾಸನಿಗೆ ಕೃಷ್ಣಕಥೆಯೇ ಭಾರತಕಥೆ. ಪಂಪನ ದೃಷ್ಟಿಯಲ್ಲಿ ಕೃಷ್ಣನೊಬ್ಬ ರಾಜಕಾರಣಿಯಷ್ಟೇ. ಕೃಷ್ಣ ಏಕಾಂತದಲ್ಲಿ ಕುಂತಿಗೆ ಹೇಳುವ ಮಾತಿನಲ್ಲಿ ಕರ್ಣನ ಮಹತ್ವಿಕೆಯೇ ಅಡಗಿಕೊಂಡಿದೆ. ಇಡೀ ಕುರುಸೇನೆಯಲ್ಲಿ ಅಖಿಳಶಾಸ್ತ್ರವಿಶಾರದನೂ, ಜಯಿಸಲು ಅಸಾಧ್ಯ ನಾದವನೂ, ನಮ್ಮೊಡನೆ ಸೇರದವನೂ ಆದವನು ಕರ್ಣನೊಬ್ಬನೇ. ಇಡೀ ಭಾರತ ಯುದ್ಧ ಕೌರವರಿಗಾಗಿ ಅಲ್ಲ; ಅವನೊಬ್ಬನಿಗಾಗಿ ಮಾತ್ರ. ಎನ್ನುತ್ತಾ ಹಿಂದಿನ ಒಂದು ಘಟನೆಯನ್ನು ನೆನಪಿಸುತ್ತಾನೆ. ಮಗನ ಮೇಲಿನ ಮಮಕಾರದಿಂದ ಸ್ವತಃ ಇಂದ್ರನೇ ಅಷ್ಟು ಎತ್ತರದಿಂದ ಕೆಳಗಿಳಿಯುತ್ತಾನೆ; ತನ್ನ ಸ್ಥಾನವನ್ನೂ ಮರೆತು, ಕರ್ಣನಲ್ಲಿ ದೀನನಾಗಿ ಕವಚವನ್ನು ಬೇಡುತ್ತಾನೆ.ಸೂರ್ಯನೇ ಎಚ್ಚರಿಸಿದರೂ ಮಾತಿಗೆ ತಪ್ಪದ ಆತ, ದೇಹದಿಂದ ಚರ್ಮವನ್ನು ಕಿತ್ತುಕೊಟ್ಟಂತೆ ಕೊಟ್ಟುಬಿಡುತ್ತಾನೆ. ಪಂಪನಿಗೆ ಕರ್ಣನ ದಾನಶೀಲತೆಯನ್ನು ಎಷ್ಟು ಹೊಗಳಿದರೂ ಸಾಕೆನಿಸು ವುದಿಲ್ಲ. ಕೆಡುಕು ಮಾಡಲೆಂದು ಮೇಲಿಂದ ಕೆಳಗಿಳಿದ ದೇವೇಂದ್ರ, ಮಗನ ವೈರಿಯ ತ್ಯಾಗಗುಣಕ್ಕೆ ಸಂಪೂರ್ಣವಾಗಿ ಮನಸೋಲುತ್ತಾನೆ. ತನ್ನ ಕೃತ್ಯ ಅವನಿಗೆ ನಾಚಿಕೆಯನ್ನು ಹುಟ್ಟಿಸುತ್ತದೆ. ಇದಕ್ಕೆ ಪ್ರತಿಯಾಗಿ, ಯಾರನ್ನು ಉಳಿಸಲು ನಾಟಕ ಆಡಿದನೋ, ಯಾರಿಗಾಗಿ ಇಂಥಹ ನೀಚ ಕಾರ್ಯಕ್ಕೆ ಕೈಹಾಕಿದನೋ ಅಂಥವನನ್ನೂ ಕೊಲ್ಲುವ ಸಾಮಥ್ರ್ಯದ ಶಕ್ತ್ಯಾಯುಧವನ್ನು ಕೊಟ್ಟು ಹೋಗುತ್ತಾನೆ. ಮೋಸ ಮಾಡಲೆಂದು ಬಂದ ಇಂದ್ರನೇ ಮನಸೋತು ಹೋಗಬೇಕಾದರೆ, ‘ಜಸಕ್ಕೆ ನೋಂತು ಕೊಟ್ಟೆಎನ್ನಬೇಕಾದರೆ ಕರ್ಣನ ತ್ಯಾಗವೆಂಥದ್ದು ಎಂದು ಕವಿ ಉದ್ಗಾರಮಾಡುತ್ತಾನೆ. ಪಂಪಭಾರತದಲ್ಲಿ ದ್ರೌಪದಿಯ ವಸ್ತ್ರಾಪಹಾರ ಪ್ರಸಂಗಕ್ಕೆ ಕರ್ಣನ ಪ್ರೋತ್ಸಾಹವಾಗಲಿ, ಪ್ರೇರಣೆಯಾಗಲಿ ಕಾಣಿಸುವುದಿಲ್ಲ. ಆತ ದುರ್ಯೋಧನ, ಶಕುನಿ ಮೊದಲಾದವರೊಂದಿಗೆ ಮಂತ್ರಾಲೋಚನೆಗಾಗಿ ಸೇರಿದ್ದ ಎಂದಷ್ಟೇ ತಿಳಿಸುತ್ತಾನೆ. ಹಾಗೆಯೆ, ಘೋಷಯಾತ್ರೆಯ ಸಂದರ್ಭದಲ್ಲಿ ಕರ್ಣ ಹೇಡಿಯಂತೆ ಓಡಿಹೋಗುವು ದಿಲ್ಲ. ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪ ಮೊದಲಾದವರೇ ಹಿಮ್ಮೆಟ್ಟಿದಾಗ, ಕರ್ಣನು ಯಾವಲೆಕ್ಕ ಅವರಿಗೆ ಎಂದು ಪಂಪ ಹೇಳಿಬಿಡುತ್ತಾನೆ.
ಕರ್ಣ ಮತ್ತು ದುರ್ಯೋಧನರ ನಿಜವಾದ ಸ್ನೇಹ ಪರಿಚಿತವಾಗುವುದು ಕೃಷ್ಣನ ಕಾರಣದಿಂದ. ಕುಮಾರವ್ಯಾಸ ಭಾರತದಲ್ಲಿ ಪ್ರಸಂಗ ಬಹಳ ಸುಂದರವಾಗಿ ಮೂಡಿಬಂದಿದೆ. ಕರ್ಣನ ಮಾನಸಿಕ ಭೇದನವನ್ನು ಮಾಡಿ ಕೌರವನ ಪಕ್ಷವನ್ನು ದುರ್ಬಲಗೊಳಿಸುವ ಹುನ್ನಾರದಿಂದ ಕೃಷ್ಣ ಕರ್ಣನೊಬ್ಬನನ್ನೇ ಕಣ್ಸನ್ನೆಯಿಂದ ಕರೆದು ತನ್ನ ಸನಿಹದಲ್ಲಿ ಕೂರಿಸಿಕೊಳ್ಳ ಲೆತ್ನಿಸುತ್ತಾನೆ. ಆದರೆ ಅದನ್ನು ಒಪ್ಪದ ಕುಮಾರವ್ಯಾಸನ ಕರ್ಣ, ‘ಎನಗೆ ನಿಮ್ಮಡಿಗಳಲಿ ಸಮಸೇವನೆಯೇ ದೇವ ಮುರಾರಿಯಂಜುವೆನುಎಂಬುದಾಗಿ ಹೇಳುತ್ತಾನೆ. ಆಗ ಪಂಪನ ಕೃಷ್ಣ, ಆತನ ಜನ್ಮರಹಸ್ಯವನ್ನರುಹಿನಿನ್ನದೀ ಮೇದಿನಿ, ಪಟ್ಟಮುಂ ನಿನತೆ, ನೀನಿರೆ ಮತ್ತೆ ಪೆರರ್ ನರೇಂದ್ರರೇಎಂದಾಗ, ಕರ್ಣ ಅದನ್ನು ತಿರಸ್ಕರಿಸುತ್ತಾನೆ. ಇದಕ್ಕೆ ಇನತನಯ ಕೊಡುವ ಉತ್ತರವನ್ನು ಕುಮಾರವ್ಯಾಸ ವಿಶಿಷ್ಟವಾಗಿ ಅಭಿವ್ಯಕ್ತಿಸುತ್ತಾನೆ. ‘ಮರಳು  ಮಾಧವ ಮಹಿಯ ರಾಜ್ಯದ ಸಿರಿಗೆ ಸೋಲುವನಲ್ಲಎಂದು. ಇದನ್ನು ದ್ವಂದ್ವಾರ್ಥದ ನೆಲೆಯಲ್ಲಿಯೂ ಕಾಣಬಹುದಾಗಿದೆ. ತನ್ನ ಸ್ವಾಮಿನಿಷ್ಟೆ, ಕೌರವ ಇರಿಸಿದ ಆತ್ಮೀಯತೆಯನ್ನೆಲ್ಲಾ ವಿವರಿಸುವ ಕರ್ಣ, ಮನದಲ್ಲಿ ಅತೀವವಾಗಿ ನೊಂದುಕೊಳ್ಳುತ್ತಾನೆ. ‘ಭೇದದಲಿ ಹೊಕ್ಕಿರಿದನೋ ಮಧುಸೂದನನುಎಂದು ಪರಿತಪಿಸುತ್ತಾ ಕೌರವನ ವಿಜಯಲಕ್ಷ್ಮಿಯನ್ನು ಅಪಹರಿಸುವ ಕುಟಿಲತೆಗೆ ದುಃಖಿಸುತ್ತಾನೆ. ಸಮಯದಲ್ಲಿಯೂ, ‘ಬೇಗನೇ ನನಗೆ ಹೊರಡಲು ಅನುಮತಿ ಕೊಡು. ಇಲ್ಲದಿದ್ದರೆ ಪಿಸುಣರು ನಮ್ಮ ಕುರಿತಾಗಿ ಆಡಿಕೊಳ್ಳುವಂತಾಗುತ್ತದೆಎಂದು ಹೇಳಿ ಔಚಿತ್ಯವರಿತು ಹೊರಟು ಬಿಡುತ್ತಾನೆ. ಪಂಪ, ಸಂದರ್ಭದಲ್ಲಿ ವಿಶೇಷವಾಗಿಭಾನುಮತಿಯ ನೆತ್ತ ಸಂಗತಿಯನ್ನು ಕರ್ಣನ ಮೂಲಕ ನೆನಪಿಸುತ್ತಾನೆ. ಏಕಾಂತದಲ್ಲಿ ಮುತ್ತಿಗಾಗಿ ಭಾನುಮತಿಯೊಡನೆ ತಾನು ಪಗಡೆ ಆಡಿ ಗೆದ್ದಿದ್ದು, ಕೊರಳಿಗೆ ಕೈಯಿಕ್ಕಿ ಮುತ್ತುಗಳು ನೆಲದ ಪಾಲಾದಾಗ ಸುಯೋಧನಚದುರಿದ ಮುತ್ತುಗಳನ್ನು ಆಯ್ದುಕೊಡಲೇನೋ ಕರ್ಣಎಂದು ಕೇಳಿದ್ದು ಎಲ್ಲವನ್ನೂ ಹೇಳುತ್ತಾ, ಹೀಗಿದೆ ಅವನ ಸ್ನೇಹ ಎಂದು ಕೃಷ್ಣನಿಗೆ ಮನದಟ್ಟು ಮಾಡುತ್ತಾನೆ
ತಾಯಿ ಮಗನ ಮುಖಾಮುಖಿ : ‘ಆತನಂ ನಾನುಂ ಎನ್ನ ಬಲ್ಲ ಮಾಳ್ಕೆಯಿಂ ಭೇದಿಸಿದಪ್ಪೆಂಎನ್ನುವ ಕೃಷ್ಣನ ಮಾತು ಮುಂದೆ ಕುಂತಿಯನ್ನು ಕರ್ಣನಲ್ಲಿಗೆ ಕಳುಹಿಸುತ್ತದೆ. ‘ಭೋಂಕನೆಹೆತ್ತವ್ವೆಯನ್ನು ಕಂಡ ಕರ್ಣನಿಗೆ ಗಂಗಾಮಾತೆಯನ್ನು ಕಂಡಂತಾಗುತ್ತದೆ. ಮಗುವನ್ನು ನದಿಯಲ್ಲಿ ತೇಲಿಬಿಟ್ಟ ಅವಳನ್ನು ಪಂಪಉನ್ನತಸ್ತನಿಎಂದು ಕರೆಯುತ್ತ; ಇಳಿವಯಸ್ಸಿನಲ್ಲೂ ಅವಳೆದೆಯಿಂದ ಹಾಲು ಜಿನುಗಿತು, ಕಣ್ಣಲ್ಲಿ ನೀರು ಕಾಣಿಸಿತು ಎಂದು ವರ್ಣಿಸುತ್ತಾನೆ. ಎಷ್ಟೋ ವರ್ಷಗಳ ಕಾಲ ಸೂತ ಸುತನೆನಿಸಿಯೇ ಬದುಕಿ, ಎಲ್ಲರ ನಿಂದನೆಯ ಮಾತುಗಳಿಗೆ ಬಲಿಯಾದ ಕರ್ಣನಿಗೆ ಜನ್ಮರಹಸ್ಯ ತಿಳಿಯುವುದು ಕೃಷ್ಣನಿಂದಲೇ. ಅದೂ ಕಾಲವು ಮಿಂಚಿಮರೆ ಯಾದ ಹೊತ್ತಿನಲ್ಲಿ. ತಿಳಿಯದಿದ್ದಿದ್ದರೇ ಒಳ್ಳೆಯದಿತ್ತು ಎನಿಸುವ ಕಾಲದಲ್ಲಿ. ಈಗ ಮತ್ತೂ ಮುಂದುವರೆದು, ಹೆತ್ತ ತಾಯಿಯೇ ಕಣ್ಣಮುಂದೆ ಬಂದು ನಿಂತು, ಏನನ್ನೋ ಕೇಳುವುದಕ್ಕೆ ತವಕಿಸುತ್ತಿದ್ದಾಳೆ. ‘ಚಲಮುಂ ಚಾಗಮುಮಳವುಂ ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೊಳ್ ನೆಲೆಸಿದವು ನಿಮ್ಮ ಕರುಣಾಬಲದಿಂ ನೀವೆನ್ನನಿಂದು ಮಗನೆಂದುದರಿಂಎನ್ನುವ ಪಂಪಭಾರತದ ಕರ್ಣನ ಮಾತಿನಲ್ಲಿ ಒಂದು ಬಗೆಯ ಜೀವನದ ಸಾರ್ಥಕ ಭಾವ ತುಂಬಿಕೊಂಡರೂ, ಸಣ್ಣ ವ್ಯಂಗ್ಯದ ಎಳೆಯನ್ನೂ ಗುರುತಿಸಬಹುದಲ್ಲವೇ?
ನೆಲವನ್ನು ನೀನೆ ಆಳು ಬಾಎಂದು ಮಗನನ್ನು ಕುಂತಿ ಕರೆದಾಗ, ‘ಭಯಮಂ ಲೋಭಮುಮೆಂಬ ತಮ್ಮುತೆರಡಂ ಪಾಪಕ್ಕೆ ಪಕ್ಕಾಗೆ ಪಾಳಿಯನೊಕ್ಕಾಳ್ದನ ಗೆಯ್ದ ಸತ್ಕøತಮುಮಂ ಪಿಂತಿಕ್ಕಿ ಜೋಳಕ್ಕೆ ತಪ್ಪಿಯುಮಿಂ ಬಾಳ್ವುದೆಎಂದು ಪ್ರಶ್ನಿಸುತ್ತಾ ಕರ್ಣ, ತನ್ನ ಅಚಲವಾದ ನಿರ್ಧಾರವನ್ನು ತಾಯಿಗೆ ತಿಳಿಸುತ್ತಾನೆ. ಅವನ ಒಡಲಿನಲ್ಲಿ ಸುಡುತ್ತಿರುವ ಬೆಂಕಿಯ ಪ್ರಖರತೆ ಅವನಿಗಷ್ಟೇ ಗೊತ್ತಿದೆ. ಅದು ಹೊರಪ್ರಪಂಚಕ್ಕೆ ಪ್ರಕಟವಾಗುತ್ತಿಲ್ಲ. ಸೂತ, ಮೀಂಗುಲಿಗ, ಹೀನಕುಲದವನು ಎಂದು ಜಗವೆಲ್ಲವೂ ಅವನನ್ನು ನಿಂದಿಸುತ್ತಿರುವಾಗಲೇ ಅರಗಿಸಿಕೊಳ್ಳಲಾಗದ ಸತ್ಯ ಕರ್ಣನ ಕರ್ಣಗಳಿಗೆ ಅಪ್ಪಳಿಸಿರುತ್ತದೆ. ಆದರೂ ಅದು ಜಗತ್ತಿಗೆ ಪ್ರಕಟ ವಾಗದೆಯೇ ಅವಸಾನಗೊಳಿಸುತ್ತದೆ. ‘ಸೂತನಾಗಿ ಬಿಸುಡದಿದ್ದ ಗುಣಗಳನ್ನು ನಿಮ್ಮ ಮಗನಾಗಿ ಬಿಸುಡುವೆನೆಎಂದು ಹೇಳುವಲ್ಲಿ ಅವನ ಅಂತರಾಳ ವನ್ನದು ತೆರೆದುತೋರಿಸುತ್ತದೆ. ‘ತೊಟ್ಟ ಅಂಬನ್ನು ಮತ್ತೆ ತೊಡದಿರು, ಪಂಚಪಾಂಡವರ ನೋಯಿಸದಿರುಎಂದು ಕೇಳಿಕೊಳ್ಳುವ ತಾಯಿಯ ಮಾತಿಗೆ ಎರಡೆಣಿಸದೆ ಒಪ್ಪಿಬಿಡುತ್ತಾನೆ. ಆದರೆ, ಅರ್ಜುನನ ಮೇಲಿನ ಅವನ ಹಗೆಯನ್ನು ಕಳೆದುಕೊಳ್ಳುವುದಕ್ಕೆ ಸಿದ್ಧನಿಲ್ಲ. ಅದು ಸ್ವಾಮಿನಿಷ್ಠೆಯ ಕಾರಣದಿಂದಲೂ ಅವನಿಗೆ ಸಮ್ಮತವಲ್ಲ. ‘ಪಾರ್ಥನೊಬ್ಬನನ್ನುಳಿದು ಅನ್ಯ ರನ್ನು ಘಾಸಿಗೊಳಿಸೆನು, ಅವನ ಮೇಲೆ ಪುರಿಗಣೆಯನ್ನು ತೊಡೆನುಎಂದು ಸಮಾಧಾನದ ಮಾತುಗಳನ್ನಾಡಿ ಕುಂತಿಯನ್ನು ಕಳುಹಿಸಿ ಕೊಡುತ್ತಾನೆ. ಅಂತೂ ಕೊನೆಯಲ್ಲಿ ಕುಂತಿಪುರಿಗಣೆಯನ್ನು ತೊಡುವುದಿಲ್ಲಎಂಬ ಮಗನ ಮಾತನ್ನು ಜೋಪಾನವಾಗಿ ಹೆಕ್ಕಿಕೊಂಡು ಸಾಗುತ್ತಾಳೆ.
ಮಹಾಭಾರತ  ಸಂಗ್ರಾಮ ಆರಂಭಗೊಳ್ಳಲು, ದುರ್ಯೋಧನ ಭೀಷ್ಮರನ್ನು ಸೇನಾಧಿಪತಿ ಪಟ್ಟಕ್ಕೆ ಒಪ್ಪಿಸುತ್ತಾನೆ. ಎಲ್ಲರ ಸಮ್ಮುಖದಲ್ಲಿ ಗಂಗಾತನಯನೇ ಸೇನೆಯ ಮುಂದಾಳು ಎಂದು ಘೋಷಿಸುವ ಸಂದರ್ಭ ದಲ್ಲಿ ಕರ್ಣ ಅದನ್ನು ವಿರೋಧಿಸುತ್ತಾನೆ. ‘ಭಗವತಿಯೇರುವೇಳ್ವ ತೆರದಿಂ ಕಥೆಯಾಯ್ತಿವರೇರುಎನ್ನುತ್ತಲೇ ವೃದ್ಧ ಭೀಷ್ಮಾಚಾರ್ಯರ ಸ್ಪಷ್ಟ ಚಿತ್ರಣವನ್ನು ಕರ್ಣ ಹೀಗೆ ನೀಡುತ್ತಾನೆ, ‘ಕಟ್ಟಿದ ಪಟ್ಟಮೆ ಸರವಿಗೆ ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಂಗೆಣೆ ಕಣ್ಗೆಟ್ಟ ಮುದುಪಂಗೆ ಪಗೆವರ ನಿಟ್ಟೆಲ್ವಂ ಮುರಿವೊಡೆನಗೆ ಪಟ್ಟಂಗಟ್ಟಾಎಂದು. ಚರ್ಮ ಎಳೆದರೆ ಮಾರುದ್ದ ಬರುವ, ಕೂದಲೆಲ್ಲಾ ಬೆಳ್ಳಿಯ ಸರಿಗೆಗಳಾಗಿರುವ ಮುದಿ ಭೀಷ್ಮ ರಣರಂಗ ದಲ್ಲಿ ಮಾಡುವುದೇನು? ಹಿಂದೆ ಪರಾಕ್ರಮಿಯಾಗಿದ್ದನೆಂಬ ಕಾರಣಕ್ಕೆ ಈಗಲೂ ಅದನ್ನೇ ನಂಬಿ ಸೇನಾಧಿಪತಿಯನ್ನಾಗಿಸುವುದು ಎಷ್ಟು ಸರಿ? ಎಂಬ ವಿರೋಧ ಅವನದ್ದು. ಹಾಗಾಗಿಯೇ ತನಗೆ ಪಟ್ಟಕಟ್ಟು ಎನ್ನುತ್ತಾನೆ. ಇವನ ವಿರೋಧಕ್ಕೆ ಪ್ರತಿಯಾಗಿ ಕುಂಭಸಂಭವ, ‘ನಾಲಗೆ ಕುಲಮಂ ತುಬ್ಬುವವೊಲುರದೆ ನೀಂ ಕೆಡೆ ನುಡಿವೈಎಂದು ಕಟುವಾದ ಮಾತುಗಳನ್ನಾಡುತ್ತಾ ಕರ್ಣನ ಕುಲವನ್ನು ಬಹಳವಾಗಿ ಹೀಗಳೆಯುತ್ತಾನೆ. ಹೊರಗಿನವರು ಹಂಗಿಸಿದರೆ ಅದು ಅಷ್ಟೊಂದು ಪ್ರಧಾನವೆನಿಸುವುದಿಲ್ಲ. ಆದರೆ ನಮ್ಮೊಳಗೇ ಇರುವ, ನಮ್ಮೊಂದಿಗೆ ಇರುವವರೇ ಕೆಟ್ಟ ಮಾತುಗಳಿಂದ ಚುಚ್ಚಿದಾಗ ಸಹಿಸಿಕೊಳ್ಳುವುದಕ್ಕೆ ಬಹಳ ಕಷ್ಟವೆನಿಸುತ್ತದೆ. ಇಲ್ಲಿ ಇನತನಯ ನಿಗೂ ಹಾಗೆಯೇ ಆಗುತ್ತದೆ. ಒಂದೇ ಪಕ್ಷದಲ್ಲಿರುವ, ಒಂದೇ ನಾಯಕನ ಅಧೀನದಲ್ಲಿರುವವರೇ ಅವನನ್ನು ಜರೆಯುತ್ತಾರೆ. ಹಾಗೆಂದು ಕರ್ಣ ಇಲ್ಲಿ, ಹಿಂದಿನಂತೆ ಬೆವರುತ್ತಾ ಸುಮ್ಮನೇ ನಿಲ್ಲುವುದಿಲ್ಲ. ಅದನ್ನು ಅದೇ ರೀತಿಯಲ್ಲಿಯೇ ಹಿಂತಿರುಗಿಸುತ್ತಾನೆ. ‘ಕುಲಮನೆ ಮುನ್ನ ಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಂ ಅಭಿಮಾನವೊಂದೆ ಕುಲಂ ಅಣ್ಮು ಕುಲಂಎಂದು ದ್ರೋಣನ ಉನ್ನತ ಕುಲದ ಅಭಿಮಾನದ ಮೇಲೆ ಬರೆ ನುಡಿಯ ಬಿಸಿಮುಟ್ಟಿಸುತ್ತಾನೆ. ಭೀಷ್ಮ, ಕರ್ಣನ ಮೇಲಿನ ಮುನಿಸಿನಿಂದಸೂಳ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್ಎಂದಾಗ, ವೃದ್ಧನ ನಾಯಕತ್ವವಿರುವಲ್ಲಿಯವರೆಗೆ ತಾನು ಶಸ್ತ್ರವನ್ನೇ ಹಿಡಿಯುವುದಿಲ್ಲವೆಂದು ಕರ್ಣ ಅಲ್ಲಿಂದ ನಿರ್ಗಮಿಸುತ್ತಾನೆ. ಮುಂದೆ ಭೀಷ್ಮನ ಅವಧಿ ಮುಗಿದು, ದ್ರೋಣನ ಅವಸಾನವಾದ ಬಳಿಕ ಮತ್ತೆ ಸೇನಾಧಿಪತಿ ಪಟ್ಟಕ್ಕಾಗಿ ಅಶ್ವತ್ಥಾಮ ಕರ್ಣನನ್ನು ಹೀಗಳೆಯುವ ಪ್ರಸಂಗ ಪಂಪನಲ್ಲಿ ಬಹಳ ಸೊಗಸಾಗಿ ಮೂಡಿ ಬಂದಿದೆ. ಅಶ್ವತ್ಥಾಮ, ಅವನನ್ನಷ್ಟೇ ಅಲ್ಲದೇ ಸಂಪ್ರದಾಯದ ಉಳಿವಿಗೋಸ್ಕರ ದುರ್ಯೋಧನನನ್ನೂನಿಜದೊಳೆ ಭೂಪರೆಂಬರವಿವೇಕಿಗಳ್ಎಂದು ವಿರೋಧಿಸುತ್ತಾನೆ. ಆಗ ಕರ್ಣ, ಹಿಂದೆ ದ್ರೋಣನಿಗಾಡಿದ ಎರಡುಪಟ್ಟು ಕಟುವಾಗಿ ಉತ್ತರ ಕೊಡುತ್ತಾನೆ. ‘ವಿಷಮೊಳ್ಳೆಗುಳ್ಳೊಡಂ ಅದೊಳ್ಳೆಯೆ ಕಾಳಿಯ ನಾಗನಾಗದಣ್ಮಿನ ಪಡೆಮಾತದೊಂದೆ ನೆವಮಾಗಿರೆ ಕಯ್ದುವನಿಕ್ಕಿ ಸತ್ತ ಸಾವಿನ ಪಡಿಚಂದ ಮಾಗಿಯುಮಿದೇಂ ನಿಮಗಳ್ತಿಯೊ ಗಂಡು ವಾತುಗಳ್’, ‘ನಿಷ್ಕಾರಣಂ ಕೆಯ್ದುವಿಕ್ಕುವ ಕಣ್ಣೀರ್ಗಳನಿಕ್ಕುವೀ ಯೆರಡುಮಂ ನಿಮ್ಮಯ್ಯನೊಳ್ ಕಲ್ತಿರೇಎಂದು.
ಮುಂದೆ ಕರ್ಣ, ಸೇನಾಧಿಪತಿ ಪಟ್ಟವನ್ನು ಅಲಂಕರಿಸುತ್ತಾನೆ. ಬಳಿಕ ಆತನಿಗೆ ಹಿಂದೆ ಭೀಷ್ಮಾಚಾರ್ಯರಿಗೆ ತಾನಾಡಿದ ಮಾತು ಸರಿಯಲ್ಲ ವೆಂದು ತೋರುತ್ತದೆ. ತಕ್ಷಣವೇ ರಥವೇರಿ ಶರಮಂಚದಲ್ಲಿರುವ  ಗಂಗಾಸುತನ ಬಳಿಗೆ ಹೋಗಿ; ಆಚಾರ್ಯರಿಗೆ ಮೂರು ಸುತ್ತುಬಂದು, ವಿನೀತನಾಗಿ ಬೇಡಿಕೊಳ್ಳುತ್ತಾನೆ. ‘ಅಜ್ಜಾ, ದಿನ ನಾನು ಅರಿಯದೇ ಮಾತಾಡಿ ನಿಮ್ಮ ಮನಸ್ಸಿಗೆ ವಿನಾಕಾರಣ ನೋವುಂಟು ಮಾಡಿಬಿಟ್ಟೆ. ನಿಮ್ಮ ಪರಾಕ್ರಮವನ್ನು ಅರಿಯುವುದಕ್ಕಾಗಲೀ, ಅಳೆಯುವುದಕ್ಕಾಗಲೀ ನಮ್ಮಿಂದ ಸಾಧ್ಯವಿದೆಯೇ? ತಪ್ಪಾಯಿತೆಂದು ಬೇಡುವುದಕ್ಕಾಗಿಯೇ ಬಂದಿದ್ದೇನಜ್ಜಯ್ಯಾಎಂದು. ಮಾತುಗಳಲ್ಲಿ ಕೃತಕತೆಯ ಲವಲೇಶವೂ ಇಲ್ಲ. ಅಧಿಕಾರವನ್ನು ಸ್ವೀಕರಿಸಿದ ಮೇಲಿನ ಅಹಂಕಾರವೂ ಇಲ್ಲ. ಹಿರಿಯ ವ್ಯಕ್ತಿತ್ವವನ್ನು ಅರಿಯದೆಯೇ ದುಡುಕಿ ತಪ್ಪು ಮಾಡಿಬಿಟ್ಟೆ ಎಂಬ ಪಶ್ಚಾತ್ತಾಪದ ಅಳುಕಿದೆ. ಹತ್ತು ದಿನದಲ್ಲಿ ಭೀಷ್ಮರು ತೋರಿಸಿದ ಅಸಾಧ್ಯ ಪರಾಕ್ರಮವನ್ನು ಮನಗಂಡವನು ಕರ್ಣ. ‘ಸಿಂಗದ ಮುಪ್ಪುಂ ಗಾಂಗೇಯರ ಮುಪ್ಪುಂಎಂದು ಅಂದು ದ್ರೋಣ ಹೇಳಿದಂತೆಯೇ ಭೀಷ್ಮ ಹೋರಾಡಿ ತೋರಿಸಿದ್ದ. ಕರ್ಣನಿಗೆ ಹೊತ್ತು, ಅನುಭವ ಶೂನ್ಯನಾಗಿ ಆಡಿದ ಮಾತು, ಸ್ವಾನುಭವಕ್ಕೆ ಬಂದ ಬಳಿಕ ತಪ್ಪಾಗಿ ಗೋಚರಿಸುತ್ತದೆ. ಅವಿವೇಕದಿಂದ ಆಡಿದ ಮಾತಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿಯೇ ನಮ್ರನಾಗಿ ಅಜ್ಜಯ್ಯನಲ್ಲಿ ಬೇಡಿ ಕೊಳ್ಳುತ್ತಾನೆ. ಇಲ್ಲಿರುವ ಒಂದು ಬಹಳ ಮುಖ್ಯವಾದ ಅಂಶವೆಂದರೆ, ಅಲ್ಲಿಯವರೆಗೆ ಕರ್ಣನ ಮನಸ್ಸಿಗೆ ನೋವುಂಟುಮಾಡಿದ ಯಾರೂ ಅವನಲ್ಲಿನನ್ನನ್ನು ಕ್ಷಮಿಸುಎಂದು ಕೇಳಿಕೊಂಡಿದ್ದೇ ಇಲ್ಲ; ಎಲ್ಲರೂ ನಿಂದಿಸಿದವರೇ. ಆದರೆ, ಕರ್ಣ ತನ್ನ ತಪ್ಪನ್ನು ಸ್ವತಃ ತಾನೇ ತಿಳಿದು ಕ್ಷಮೆಯಾಚಿಸುತ್ತಾನೆ. ಕುಮಾರವ್ಯಾಸ ಭಾರತದಲ್ಲಿಯೂ ಪ್ರಸಂಗವಿದೆ. ಆತ ಕ್ಷಮೆಯಾಚಿಸಲು, ಭೀಷ್ಮ, ‘ನುಡಿವುದಂ ಪತಿಭಕ್ತಿಯ ಪೆಂಪಿನಿಂ ನೀಂ ನುಡಿದೈ ಪೆರತಂದದಿಂ ನುಡಿದೆಯಲ್ತೆಎಂದು ಸವಿಮಾತುಗಳಿಂದ ಸಮಾಧಾನ ಮಾಡುತ್ತಾನೆ. ಅಷ್ಟಕ್ಕೇ ನಿಲ್ಲಿಸಿದೆ, ನಮ್ಮೀರ್ವರಿಗೂ ವಿದ್ಯಾದಾನವನ್ನು ಮಾಡಿದ ಪರಶುರಾಮ ಗುರುಗಳು ಒಬ್ಬರೇ ಆದುದರಿಂದ ನಾವೀರ್ವರೂ ನೆಂಟರು ಎನ್ನುತ್ತಾನೆ. ಇನ್ನೊಂದೆಡೆ ಒಟ್ಟಾಗಿ ವಿದ್ಯೆ ಕಲಿತ ದ್ರುಪದ-ದ್ರೋಣರ ಸಂಬಂಧ ಕಡಿದುಕೊಳ್ಳುವಿಕೆಯ ಚಿತ್ರಣವನ್ನೂ, ಕೌರವ-ಪಾಂಡವರ ವೈಮಸ್ಸನ್ನೂ ಚಿತ್ರಿಸುವ ಪಂಪ ಇಲ್ಲಿ ಅದರ ವಿಭಿನ್ನ ಮುಖವನ್ನು ತೆರೆದಿಡುತ್ತಾನೆ. ನದಿಸುತನಿಗೆ ಕರ್ಣನ ಕುರಿತು ಹಗೆಯಿಲ್ಲವೆಂಬುದನ್ನು ಆದಿ ಕವಿ, ‘ನೀನೆಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದೆ ಮೊಮ್ಮನೈಸೆಎಂಬ ಮಾತುಗಳ ಮೂಲಕ ತೋರ್ಪಡಿಸುತ್ತಾನೆ. ಭೀಷ್ಮನಿಗೆ ಕರ್ಣನ ಜನ್ಮ ವೃತ್ತಾಂತ ತಿಳಿದಿರದಿದ್ದರೂ, ಆತನ ಕ್ಷತ್ರಿಯೋಚಿತ ನುಡಿಯಿಂದಈತ ಕುಲಹೀನನಲ್ಲ, ಉಭಯಕುಲ ಶುದ್ಧನೇ ಆಗಿರಬೇಕುಎಂದು ತೀರ್ಮಾನಿಸುತ್ತಾನೆ. ಭಾನುಜಾತನ ಸಾಮಥ್ರ್ಯ ಬಗೆಯದ್ದು. ಕುರುಕುಲ ಪಿತಾಮಹರೇ ಹೀಗೆ ಮನದಲ್ಲಿ ಹೇಳಿ ಕೊಳ್ಳುವಾಗ ಆತನ ನಿರ್ಮಲ ಚಾರಿತ್ರ್ಯ ಇತರರನ್ನು ಸೆಳೆಯದೇ ಇರುತ್ತದೆಯೇ?
ಪಂಪಭಾರತದಲ್ಲಿ ಗಾಂಗೇಯನೇ ಸೂರ್ಯಸುತನಿಗೆ ಶಲ್ಯನನ್ನು ಸಾರಥಿಯಾಗಿಸಿಕೋ ಎಂದು ತಿಳಿಸುವ ಪ್ರಸಂಗ ಬರುತ್ತದೆ. ಅಜ್ಜನ ಸಲಹೆಯನ್ನು ಸ್ವೀಕರಿಸಿದ ಕರ್ಣ, ದುರ್ಯೋಧನನಿಗೆ ತಿಳಿಸುತ್ತಾನೆ. ಅದರಂತೆ, ಕರ್ಣನ ಬಂಡಿಗೆ ಶಲ್ಯನನ್ನು ಸಾರಥಿಯನ್ನಾಗಿಸಲು ದುರ್ಯೋಧನ ಮುಂದಾಗುತ್ತಾನೆ. ಆದರೆ, ಮದ್ರಾಧಿಪನಾದ ಶಲ್ಯ, ಕರ್ಣನನ್ನು ಕುಲಹೀನ ನೆಂದು ಬಹಳವಾಗಿ ಅವಮಾನಿಸುತ್ತಾನೆ. ಕಡುಗಲಿಯಾಗಿದ್ದರೂ, ಕುಲದ ಭೂತ ಅವನನ್ನು ಕ್ಷಣಕ್ಷಣಕ್ಕೂ ಕಾಡುತ್ತಲೇ ಇರುತ್ತದೆ. ಅಂಗಾಧಿಪತಿಯಾಗಿ, ಕೌರವ ಸೇನೆಯ ಸೇನಾಧಿಪತಿಯಾದ ಬಳಿಕವೂ ಸೂತನೆಂಬ ಹಣೆಪಟ್ಟಿ ಕರ್ಣನನ್ನು ಬಿಟ್ಟು ಹೋಗುವುದೇ ಇಲ್ಲ! ಅಂತೂ ಕೊನೆಯಲ್ಲಿ ಪರಶುರಾಮರಿಂದಲೇ ಬಿಲ್ವಿದ್ಯೆಯನ್ನೂ, ಶಸ್ತ್ರಾಸ್ತ್ರಗಳನ್ನೂ ಹೊಂದಿದ ಕರ್ಣನ ಹಿರಿತನವನ್ನು ಕೌರವ ತಿಳಿಹೇಳಬೇಕಾಗುತ್ತದೆ. ಇಂಥಹ ಕೃಪೆಯು ಸತ್ಪಾತ್ರರಿಗಲ್ಲದೇ ಅನ್ಯರಿಗೆ ದೊರಕುವುದೇ? ಎಂದು ಸಮಾಧಾನ ಪಡಿಸುತ್ತಾನೆ. ಮುಂದೆ, ‘ತಾನೆಂದಂತೆ ಆತ ಕೇಳುವುದಿದ್ದರೆ ಆಗಬಹುದುಎಂಬ ನಿಬಂಧನೆಯ ಮೇಲೆಯೇ ಶಲ್ಯ, ಒಲ್ಲದ ಮನದಿಂದ ಒಪ್ಪುತ್ತಾನೆ.
ಅಂಗಾಧಿಪತಿ-ಮದ್ರಾಧಿಪತಿಯ ಬೆಸುಗೆ : ಪಾಂಡವ ಪಾಳಯದಲ್ಲಿ ಕೃಷ್ಣ, ಕರ್ಣನ ಬಗೆಗೆ ಹೇಳುವ ಮಾತು ಅವನ ಚಾರಿತ್ರ್ಯ, ಪರಾಕ್ರಮವನ್ನು ಮುಗಿಲಿಗಿಂತಲೂ ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ. ‘ಕರ್ಣಂಗಂಡಲ್ತೆ ಕಲ್ತರ್ ನುಡಿವ ಪಸುಗೆಯಂ ಗಂಡರಾ ಗಂಡವಾತುಂ ಕರ್ಣಂ ಮುಂ ಪುಟ್ಟಿ ಪುಟ್ಟಿತ್ತಳವಮರ್ದೊಡವುಟ್ಟಿತ್ತು ಪೂಣ್ದೀವ ಚಾಗಂ ಕರ್ಣಂಗೊಡ್ಡಿತ್ತು ದಲ್ ಭಾರತಮೆನೆ ಜಗದೊಳ್ಪರಾಕ್ರಮ, ತ್ಯಾಗಗುಣ, ಸಾಮಥ್ರ್ಯ ಎಲ್ಲವೂ ಕರ್ಣ ಹುಟ್ಟಿದ ನಂತರವೇ ಹುಟ್ಟಿತು; ಇಡೀ ಭಾರತ ಸಂಗ್ರಾಮ ಕರ್ಣನೊಬ್ಬನಿಗಾಗಿಯೇ ಒಡ್ಡಿದೆ ಎಂದು ಜಗತ್ತೇ ಆಡುತ್ತಿದೆ ಎಂದು ಜಗತ್ತಿನ ಮಾತನ್ನು ಪುನರುಚ್ಛರಿಸುವವನು, ಸರ್ವಶಕ್ತನಾದ ಶ್ರೀಹರಿಯೇ ಎಂಬುದಿಲ್ಲಿ ಗಮನಾರ್ಹ.
ಯುದ್ಧಮಧ್ಯೆ ಖಾಂಡವ ವನದಲ್ಲಿ ಅರೆಜೀವವಾಗಿದ್ದ, ಸಜೀವ ಸರ್ಪಶರ ಪುನಃ ಬಂದು ಕರ್ಣನನ್ನು ಮರಳಿ ಪ್ರಯೋಗಿಸೆಂದು ಕೇಳಿಕೊಳ್ಳುತ್ತದೆ. ಆದರೆ, ತಾಯಿಗೆ ಕೊಟ್ಟ ಭಾಷೆಯನ್ನು ಮುರಿಯಲಾರದೇ ಆತ ತಿರಸ್ಕರಿಸುತ್ತಾನೆ. ಇನಸುತಗೆ ಇತರರ ಔದಾರ್ಯದ ಭಿಕ್ಷೆಯ ಅನಿವಾರ್ಯತೆ ಇರಲಿಲ್ಲ. ಕೊನೆಯ ಉಸಿರಿನವರೆಗೂ ಸ್ವಸಾಮಥ್ರ್ಯದಿಂದಲೇ ಆತ ಬದುಕುತ್ತಾನೆ. ಕುಮಾರವ್ಯಾಸ ಭಾರತದಲ್ಲಿ, ತನ್ನ ಇಡೀ ವ್ಯಕ್ತಿತ್ವವನ್ನೇ ತೋರ್ಪಡಿಸುವಂತೆ ಕರ್ಣ, ಶಲ್ಯನಿಗೆ ಹೇಳುವ ಮಾತು ಅತ್ಯಂತ ಮಹತ್ವಪೂರ್ಣ. ‘ಒಂದು ಶರಸಂಧಾನ, ನಾಲಗೆಯೊಂದು, ನಮ್ಮಲಿ ಕುಟಿಲವಿದ್ಯವನೆಂದುಕಂಡೈ ಶಲ್ಯ, ನಾವಡಿಯಿಡೆವಧರ್ಮದಲಿಎಂದುಕರ್ಣಾವಸಾನದ ಹಿಂದಿನ ರಾತ್ರಿ ಧರ್ಮರಾಯನಿಗೆ ಚಿಂತೆ ಕಾಡುತ್ತದೆ; ಇವರನ್ನು ಗೆಲ್ಲುವುದು ಹೇಗೆಂದು. ಆಗ ಕೃಷ್ಣ ಶಲ್ಯಭೇದನವನ್ನೂ ನಿರ್ವಿಘ್ನವಾಗಿ ಪೂರೈಸಿ ಅವರಿಬ್ಬರ ನಡುವೆ ಒಡಕು ತಂದಿಡುತ್ತಾನೆ. ಇದೇ ಕಾರ್ಯ ಮುಂದೆ ಕರ್ಣಾವಸಾನಕ್ಕೆ ಮುನ್ನುಡಿಯನ್ನೂ ಬರೆಯುತ್ತದೆ.
ಇಡೀ ಯುದ್ಧಭೂಮಿಯನ್ನು ರಂಗಭೂಮಿಯಂತೆ ಕುಣಿಸುತ್ತಿರುವ ಸೂತ್ರಧಾರÀ ಕೃಷ್ಣ. ‘ಯುದ್ಧ ಕೌರವರಿಗಾಗಿ ಮಾಡುವುದಲ್ಲ ಕರ್ಣನಿಗಾಗಿಎನ್ನುವಲ್ಲಿ ಇಡೀ ಸೇನೆಯನ್ನೂ ಮೀರಿದ ಅವನ ಅಳವು ಏನೆಂಬುದನ್ನು ಪಂಪ, ಕೃಷ್ಣನ ಮೂಲಕ ತೋರ್ಪಡಿಸುತ್ತಾನೆ. ಇಡೀ ಸಂಗ್ರಾಮದಲ್ಲಿ  ಕೌರವರು ಗೆದ್ದರೂ, ಪಾಂಡವರು ಗೆದ್ದರೂ ಕರ್ಣನಿಗೆ ಲೌಕಿಕವಾಗಿ ದಕ್ಕುವುದೇನೂ ಇಲ್ಲ. ಪಗಡೆಯಾಟದ ದಾಳವಷ್ಟೇ ಅವನಾಗಿರುತ್ತಾನೆ. ಇದನ್ನು ಕುಮಾರವ್ಯಾಸಭಾರತದಲ್ಲಿ ಕರ್ಣ, ಕೃಷ್ಣನಿಗೆ ಹೇಳುವ ಮಾತಿನ ಮೂಲಕ ತಿಳಿಯಬಹುದು. ನೀನು ಅರಸನಾಗು. ಇಕ್ಕೆಲದವರೂ ನಿನ್ನನ್ನು ಓಲೈಸುತ್ತಾರೆ, ದುರ್ಯೋಧನನಿಗೆ ಹೇಳಿ ಯುದ್ಧ ನಿಲ್ಲಿಸು... ಹೀಗೆಲ್ಲಾ ಕೃಷ್ಣ ಹೇಳಿದ ಬಳಿಕ ಇನಸುತ ಆಡುತ್ತಾನೆ, ‘ನಾನು ಸೈನಿಕ. ಯುದ್ಧಮಾಡುವುದು ನನ್ನ ಕೆಲಸ. ಯುದ್ಧದಲ್ಲಿ ಭಾಗವಹಿಸುವವರು ರಾಜಕೀಯವನ್ನು ಚರ್ಚಿಸಬಾರದು. ನಾನು ಸಂಧಿಯ ಮಾತಾಡಿದರೆ, ಕರ್ಣ ಯುದ್ಧಕ್ಕೆ ಹಿಂಜರಿಯುತ್ತಿದ್ದಾನೆಂದು ತಿಳಿದುಕೊಳ್ಳುತ್ತಾರೆ’ (ಕುಮಾರವ್ಯಾಸ ವಿಮರ್ಶೆ-ಕೀರ್ತಿನಾಥ ಕುರ್ತಕೋಟಿ. ಸಂ. ಗಿರಡ್ಡಿ ಗೋವಿಂದರಾಜ್ ಪು.208)  ಎಂದು. ಮಾತುಗಳಲ್ಲಿ ಅವನ ಸ್ಥಾನವೇನೆಂದು ಅರ್ಥವಾಗುತ್ತದೆ.
ದೋಷವೆಂಬುದು ಬಡಿಯುವವನಿಗಲ್ಲದೇ ಹಿಡಿದ ಬಡಿಗೆಗಲ್ಲಎಂಬ ಪ್ರಸಿದ್ಧ ಮಾತೊಂದಿದೆ. ಇಲ್ಲೇಕೆ ಇದು ಉಲ್ಲೇಖವೆಂದರೆ, ವೀರ ಅಭಿಮನ್ಯುವಿನ ಬಿಲ್ಲನ್ನು ಮುಕ್ಕಡಿ ಮಾಡಿ ಆತನ ಸಾವಿಗೆ ಪರೋಕ್ಷವಾಗಿ ಕಾರಣನಾದವನು ಕರ್ಣ ಎಂಬ ಕವಲು ನುಡಿಯನ್ನು ಅಲ್ಲಗಳೆಯಲು, ಆತನ ಅಸಹಾಯಕತೆಯನ್ನು ತೋರ್ಪಡಿಸಲು ಹೇಳಬೇಕಾಗಿದೆ. ಕೋಲಗುರುವಿನಲ್ಲಿಯೇ ಕರ್ಣ ಕೇಳಿಕೊಳ್ಳುತ್ತಾನೆ ಇದು ತಪ್ಪಲ್ಲವೇ ಗುರುಗಳೆ? ಎಂದು. ಆಗ ದ್ರೋಣಾಚಾರ್ಯರುಪಾಪ ಪುಣ್ಯಗಳೆಲ್ಲವೂ ಕೌರವನಿಗೆ; ನಮಗಲ್ಲ. ಹೇಳಿದಂತೆ ಮಾಡುಎಂದು ಆದೇಶಿಸಿದ್ದಕ್ಕೆ, ಉಭಯ ಸಂಕಟವಾಗಿ ಕರ್ಣ ಬಿಲ್ಲನ್ನು ಮುರಿಯುತ್ತಾನೆ. ನಂತರದಲ್ಲಿ ಜಯದ್ರಥನು ಅಭಿಮನ್ಯುವನ್ನು ಕೊಲ್ಲುತ್ತಾನೆ. ಇಲ್ಲಿ ಕೌರವನು ಹಿಡಿದ ಬಡಿಗೆಗಳು ಕರ್ಣ, ದ್ರೋಣ ಮುಂತಾದವರೆಲ್ಲ. ಹಾಗಾಗಿ ಪಾಪ ತರಣಿಜನನ್ನು ಬಾಧಿಸದು ಎಂಬುದು ನನ್ನ ಅಭಿಮತ.
ಯುದ್ಧರಂಗದಲ್ಲಿ ಪಾರ್ಥನಿಂದ ಹತನಾದ ವೀರ ವೃಷಸೇನನ ಕಳೇಬರವನ್ನು ಕಂಡಮೇಲೂ ಕರ್ಣ ಯುದ್ಧದಿಂದ ವಿಮುಖನಾಗದೇ ಒಡೆಯನಿಗಾಗಿ ಹೋರಾಡುತ್ತಾನೆ. ಹಿಂದೆ ಕರ್ಣಭೇದನದ ಸಂದರ್ಭದಲ್ಲಿಭಾನುವಂಶ ಲಲಾಮ ನೀ ರಾಮಂಗೆ ಸರಿಎನ್ನುವ ಕೃಷ್ಣ, ಯುದ್ಧದಲ್ಲಿ ಕರ್ಣನ ಪರಾಕ್ರಮವನ್ನು ಕಂಡಮೇಲೆಅರರೆ ಧಣುಧಣು ಪೂತು ಪಾಯಿಕು ಸರಿಯಕಾಣೆನುಎಂದು ಶ್ಲಾಘಿಸುತ್ತಾನೆ. (ಕು.ವ್ಯಾ)ಅಗ್ನಿಯಿಂದ ಕೊಡಲ್ಪಟ್ಟ ರಥ, ಬ್ರಹ್ಮಾಂಡಭಾಂಡೋದರನಾದ ಶ್ರೀಹರಿಯೇ ಸಾರಥಿ, ಆಂಜನೇಯನೇ ಪತಾಕೆ ಇಷ್ಟೆಲ್ಲಾ ಹಿರಿದಾದ ಮಹತ್ವಿಕೆಯ ರಥ ಪಾರ್ಥನದ್ದು. ಅದನ್ನೇ ಕರ್ಣ ಬಿಲ್ಲಿನಂತರಕ್ಕೆ ಹಾರಿಸು ತ್ತಾನೆ ಎಂದರೆ ಆತನ ಪರಾಕ್ರಮ ಎಷ್ಟಿರಬಹುದು ಎಂಬುದನ್ನು ನಾವೇ ಅರ್ಥೈಸಿಕೊಳ್ಳಬೇಕು. ‘ನೀನೊಬ್ಬ ವಿಶ್ವಾಸಘಾತಕಿ, ನೆಲನೂ ಹೊರುವುದೇ ನಿನ್ನನುಎಂದು ಶಲ್ಯ ಹೀಗಳೆದಾಗ, ಅದಕ್ಕೆ ಪ್ರತಿಯಾಗಿ ಕರ್ಣಹೆತ್ತ ತಾಯಿಯೇ ನನ್ನನ್ನು ಹೊರಲಿಲ್ಲ ಹೀಗಿರಲು ಭೂತಾಯಿ ಎಂತು ಹೊರುವಳುಎಂದು ನುಡಿಯುತ್ತಾನೆ. ಮಾತಿನಲ್ಲಿ ಅಡಗಿದ ದುಃಖ ಸಾಗರವನ್ನು ಬಣ್ಣಿಸುವುದಕ್ಕೆ ಸಾಧ್ಯವಿದೆಯೇ? ಅಸಹಾಯಕನಾಗಿ ತನ್ನ ವರೂಥ ಭೂಮಿಯಲ್ಲಿ ಹೂತು ಹೋಗಿರುವಾಗಲೂ ಕರ್ಣ ಎದುರಾಳಿಯಾದ ಪಾರ್ಥನಲ್ಲಿ, ಅರೆಗಳಿಗೆಯನ್ನು ರಥ ಎತ್ತಿಕೊಳ್ಳಲೋಸುಗ ಬೇಡುತ್ತಾನೆ. ಆಗ ಕವಿವರೇಣ್ಯರು ಹೀಗೆ ವರ್ಣಿಸುತ್ತಾರೆ, ‘ರುಧಿರ ತೋಯದಿ ಭೂಮಿ ಕೆಸರಾಯ್ತು, ಅದರಲಿ ಭಾನುನಂದನನಕಟಾಎಂಬುದಾಗಿ. ಪಾರ್ಥನಿಗೆ ಕರ್ಣನೊಬ್ಬನಲ್ಲಿಯೇ ಪಂಚಪಾಂಡವರ ದರ್ಶನವಾಗುತ್ತದೆ. ಆದರೆ, ಕೃಷ್ಣ ಸನ್ನೆಮಾಡಿ ಕ್ಷಣದಲ್ಲಿಯೇ ಬಾಣಪ್ರಯೋಗಿಸಲು  ಆದೇಶಿಸುತ್ತಾನೆ. ಅಂಥಹ ಸಂದರ್ಭದಲ್ಲಿಯೂ ಕರ್ಣ, ತನ್ನ ಕುರಿತಾಗಿ ಯೋಚಿಸದೇಹೂತು ಹೋದುದು ನನ್ನ ರಥದ ಚಕ್ರಗಳಲ್ಲ, ಸುಯೋಧನನ ಭಾಗ್ಯಚಕ್ರಗಳುಎಂಬುದಾಗಿ ವ್ಯಥಿಸುತ್ತಾನೆ. ‘ರೂಢಿಸಿದ ಭಟ ನೀನು, ಪಂಥದ ಪಾಡುಗಳ ಬಲ್ಲವನು ಶಾಸ್ತ್ರವ ಖೋಡಿಗಳೆವವನಲ್ಲ ಲೌಕಿಕ ವೈದಿಕ ಸ್ಥಿತಿಯ ನಾಡೆ ಬಲ್ಲಿರಿ ಶಸ್ತ್ರಹೀನರ ಕೂಡೆ, ವಾಹನಹೀನರಲಿ ಕೈ ಮಾಡಲನುಚಿತವೆಂಬ ಮಾರ್ಗವನೆಂದನಾ ಕರ್ಣಎಂಬುದಾಗಿ ಕುಮಾರವ್ಯಾಸ ಅತ್ಯಂತ ಕೃಷ್ಣನ ಮೂಲಕ ಯುದ್ಧನೀತಿ ನೆನಪಿಸುತ್ತಾನೆಕೃಷ್ಣ ಪಾರ್ಥನಿಗೆ, ‘ಏಸು ಮರುಳೆ ಗಾಂಢೀವಿಯಾಪತ್ತೆಸಗಿದಾಗಳೆ ಹಗೆಯ ಗೆಲುವುದು ವಸುಮತೀಶರ ನೀತಿಎಂದು ಬಾಣ ಪ್ರಯೋಗಿಸಲು ಪ್ರಚೋದಿಸುತ್ತಾನೆ. ಇಂತಹ ಹೊತ್ತಿನಲ್ಲಿ ಕುಮಾರವ್ಯಾಸ, ಬಹುದೊಡ್ಡ ರೂಪಕವೊಂದನ್ನು ಎಸೆದುಬಿಡುತ್ತಾನೆ. ‘ಮನದಭಿಮಾನ ಸರ್ಪನ ಕೆಡಹಿ ಧೈರ್ಯ ನಿಧಾನವನು ಕೈ ಸೂರೆಗೊಂಡುದು ಶೋಕವರ್ಜುನನಎಂದು. ಮುಂದೆ ಕರ್ಣ, ಸಂಪೂರ್ಣವಾಗಿ ತನ್ನ ಶರೀರವನ್ನು ಶರವರ್ಷಕ್ಕೆ ನೂಕುತ್ತಾ, ಕುಂಡಲಗಳನ್ನು ಎದೆಯೊಳಗಿನ ಅಮೃತಕಲಶದಿಂದ ಧಾರೆ ಎರೆದು ಹರಿಗೆ ಸಮರ್ಪಿಸುತ್ತಾನೆ. ಕೊನೆಯ ಬಯಕೆಯಾಗಿ ಮತ್ತೋರ್ವ ಮಗ ವೃಷಕೇತುವನ್ನು ಪ್ರೀತಿಯಿಂದ ಸಲಹಬೇಕೆಂದು ಶ್ರೀಕೃಷ್ಣನಲ್ಲಿ ಭಿನ್ನವಿಸಿಕೊಳ್ಳುತ್ತಾನೆ. ಕರ್ಣನಿಗೆ ತನ್ನ ಸಾವು ಸಾರ್ಥಕತೆಯನ್ನು ಪಡೆಯಿತಲ್ಲ ಎಂಬ ಸಮಾಧಾನ ವ್ಯಕ್ತವಾಗುತ್ತದೆ. ಆಗ, ಕುಮಾರವ್ಯಾಸ ಭಾನುಸುತನ ಅಂತರಂಗದಿಂದ ಹೀಗೆ ಹೇಳಿಸುತ್ತಾನೆ, ‘ಸಲಹಿದೊಡೆಯನ ಜೋಳವಾಳಿಗೆ ತಲೆಯ ಮಾರುವದೊಂದು ಪುಣ್ಯದ ಫಲವು, ಮರಣದ ಹೊತ್ತು ಕೃಷ್ಣನ ಕಾಬ ಸುಕೃತ ಫಲ, ಇಳೆಯ ಮೇಲೆನಗಲ್ಲದಾರಿಗೆ ಫಲಿಸುವುದು ತಾ ಧನ್ಯನೆನುತಎಂದು.
ಕುಮಾರವ್ಯಾಸ ಭಾರತದಲ್ಲಿ ಕರ್ಣನ ಅವಸಾನ ಕಾಲದ ಚಿತ್ರಣವನ್ನು ಹೃದಯಂಗಮವಾಗಿ ಚಿತ್ರಿತವಾಗಿದೆ. ‘ತನ್ನ ಮಗನ ಸಾವನ್ನು ಕಾಣಲಾರದೇ ಸೂರ್ಯ ಪಶ್ಚಿಮಾಂಬುಧಿಯಲ್ಲಿ ಮುಳುಗಿದಎನ್ನುತ್ತಾ ಕವಿಯೂ ಭಾವುಕನಾಗುತ್ತಾನೆ. ಪಾರ್ಥನ ರಥದ ಪತಾಕೆಯಾದ ಮಾರುತಿಯುಇಂತಹ ಮಹಾವೀರನನ್ನು ಎರಡು ಯುಗಗಳಲ್ಲಿಯೂ ಕಾಣಲಿಲ್ಲಎಂದು  ಕಣ್ಣೀರು ಮಿಡಿಯುತ್ತಾನೆ. ‘ಲೋಕದ ಮಕ್ಕಳಲ್ಲಿ, ನಿಜವಾಗಿ ಹೆತ್ತವಳೆಂದರೆ ಕುಂತಿ ಹೌದುಎನ್ನುವ ಜನರೇ ಕೊನೆಯಲ್ಲಿ ಅವಳಿಗಿಂತಲೂ ಕರ್ಣನನ್ನು ಹೆತ್ತಕ್ಕನೇ ಮಿಗಿಲೆಂದು ಹೊಗಳುವ ಪ್ರಸಂಗ ಪಂಪಭಾರತದಲ್ಲಿ ಬರುತ್ತದೆ.
ಅಶ್ವಸೇನನೆಂಬ ಸರ್ಪ ಎರಡನೇ ಬಾರಿ ಬತ್ತಳಿಕೆಯನ್ನು ಹೊಕ್ಕು, ಪುನಃ ತೊಡು ಎಂದು ಕೇಳಿಕೊಂಡಾಗ ಕರ್ಣ ಒಪ್ಪುವುದಿಲ್ಲ. ‘ವೈರಿಯ ವೈರಿಯು ತನ್ನ ಸ್ನೇಹಿತಎನ್ನುವ ರಾಜಕೀಯ ಚಾಣಾಕ್ಷತೆ ಕರ್ಣನಲ್ಲಿಲ್ಲ. ‘ಶರರೂಪದೊಳಿರೆ ನಿನ್ನಂ ಶರಮೆಂದಾಂ ತೊಟ್ಟೆನರಿದು ತುಡುವೆನೆ ನಿನ್ನಂಎಂದು ಹೇಳುವ ಕರ್ಣನ ಮಾತೊಂದೇ ಸಾಲದೇ ಅವನ ವ್ಯಕ್ತಿತ್ವಕ್ಕೆ?
ಪಾರ್ಥನ ಅನೇಕ ಅಂಬುಗಳು ದೇಹವನ್ನು ಹೊಕ್ಕು, ಅಂತಿಮವಾಗಿ ಇನತನೂಜನ ಕೊರಳನ್ನೇ ಬೇರ್ಪಡಿಸುತ್ತದೆ. ಆಗ ಸತ್ಯಸಂಧನಾದ, ಕಡುಪರಾಕ್ರಮಿಯಾದ, ತ್ಯಾಗಗುಣ ಸಂಪನ್ನನಾದ ಅವನ ಸಾನಿಧ್ಯದಿಂದ ಹೇಗೆ ತಾನು ದೂರಸರಿಯಲಿ ಎಂದು ವಿಜಯಲಕ್ಷ್ಮಿಯೂ ಚಿಂತಿಸುತ್ತಾಳೆ. ದೇವತೆಗಳು, ‘ಪಿಡಿದನೆ ಪುರಿಗಣೆಯನ್? ಎರಳ್ನುಡಿದನೆ? ಬಳ್ಕಿದನೆತಾನೆ ತನ್ನನೆ ಚಲಮಂ ಪಿಡಿದರಿದನೆಂದುಕಡುಗಲಿಯನ್ನು ಕೊಂಡಾಡುತ್ತಾರೆ. ಕರ್ಣನ ಅವಸಾನದಿಂದ ಅತೀವವಾಗಿ ನೋಯುವ ಪಂಪ, ಮಡಿದ ಮಹಾವೀರನಿಗಾಗಿ ಚರಮ ಗೀತೆಯನ್ನೇ ಬರೆಯುತ್ತಾನೆ. ‘ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನೊಂದೆಚಿತ್ತದಿಂ ನೆನೆವುದಾದೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇರು ಕರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂಎಂಬುದಾಗಿ. ಅಂಗಾಧಿಪತಿಯೂ, ತನ್ನಂಗಾಧಿಪತಿಯೂ ಆಗಿದ್ದ ಮಿತ್ರನ ಮರಣ ವಾರ್ತೆಯು ದುರ್ಯೋಧನನ ಅಂತರಂಗವನ್ನೇ ಇರಿಯುತ್ತದೆ.
ಕರ್ಣನ ಜೀವನವೇ ಒಂದು ರೀತಿಯ ದುರಂತಮಯ. ಅತ್ಯಂತ ಮೇಲ್ಪಂಕ್ತಿಯ ಸೂರ್ಯನಿಂದ ಜನನ, ಸೂತನಿಂದ ಪಾಲನ. ಎಲ್ಲಿನೋಡಿದರೂ ಸೂತಸುತನೆಂಬ ಹೀಗಳಿಕೆಯ ನುಡಿ, ನಿಜವಾದ ಪ್ರತಿಭೆಗೆ ಕುಲವು ಅಡ್ಡಿಯಾಗಿ ಅವಮಾನವನ್ನುಂಟುಮಾಡುವುದು, ಹೀಗೆ ಎಲ್ಲಿಯೂ ಆತನಿಗೆ ಸಿಗಬೇಕಾದ ಮನ್ನಣೆ ಸಿಗಲೇ ಇಲ್ಲ. ‘ಕರ್ಣ ಮೊದಲು ಉನ್ನತಸ್ಥಿತಿಯಲ್ಲಿದ್ದು ನಂತರ ಅಧೋಗತಿಗಿಳಿದವನಲ್ಲ. ಬದಲಿಗೆ ದೀವರಪುತ್ರತ್ವದಿಂದ ಕ್ಷತ್ರಿಯತ್ವಕ್ಕೇರಿ, ಅಂಗಾಧಿಪತಿಯಾಗಿ ತನ್ನ ಕೀರ್ತಿಯ ಪ್ರಚಂಡ ಜ್ಯೋತಿಯು ಪ್ರಜ್ವಲಿಸುತ್ತಿರುವಾಗಲೇ, ಜ್ವಾಲೆಯ ನಟ್ಟ ನಡುವೆ ಭಸ್ಮೀಭೂತನಾದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ‘ನಿಜಕ್ಕೂ ಕರ್ಣನೊಬ್ಬ ನಿರ್ಭಾಗ್ಯ ವ್ಯಕ್ತಿಯಾಗಿ ಎಲ್ಲ ಅವಕಾಶಗಳಿದ್ದರೂ ಅನ್ನದ ಋಣವನ್ನು ತೊರೆದು ಹೋಗದೇ, ಒಡೆಯನಿಗಾಗಿ ಒಡಲನ್ನೇ ತೆತ್ತ ಮಹಾವೀರ. ಈತ ದಾನಶೂರನಾಗಿ, ಕಲಿಯಾಗಿ, ಸ್ನೇಹದ ಸಾಕಾರಮೂರ್ತಿಯಾಗಿ, ಅವಕಾಶ ವಂಚಿತನಾಗಿ ಕಾಣಿಸಿಕೊಳ್ಳುತ್ತಾನೆದೇಹದಿಂದ ಕೊರಳು ಬೇರಾದರೂ ಅವನ ಸುದೀರ್ಘ ಜೀವನದ ನಿರ್ಮಲ ಚಾರಿತ್ರ್ಯ, ಸತ್ಯಸಂಧತೆ, ತ್ಯಾಗಶೀಲಗುಣ ಎಂದೂ ಬೇರ್ಪಡುವುದೇ ಇಲ್ಲ. ಹಾಗಾಗಿಯೇ ಕರ್ಣ ಎಂದೆಂದಿಗೂಅಮರ ಕೀರ್ತಿಯ ತರಣಿಜನೇಆಗಿರುತ್ತಾನೆ...*