ಸೋಮವಾರ, ಮಾರ್ಚ್ 20, 2017

'ಮುನ್ನುಡಿ' ಹೊತ್ತಗೆಯಲ್ಲಿರುವ ಒಂದು ಸುಂದರ ಬಾಲ್ಯದ ಲೇಖನ

                                                           
                                                         ಭೂರಂಗದಲಿ ವರ್ಷ ನರ್ತನ

 ಭೂರಮೆಯ ವಿಶಾಲರಂಗದಲ್ಲಿ ವರ್ಷನರ್ತಕಿಯ ನಾಟ್ಯ ಆರಂಭಗೊಳ್ಳುತ್ತಿದೆ. ಹಸಿರಿನುಡುಗೆಯನ್ನುಟ್ಟ ಪ್ರಕೃತಿಮಾತೆಯು, ಮಳೆಯ ಚುಂಬನದಿಂದ ಮುದಗೊಳ್ಳುತ್ತಿರುವ ಇಳಾಸೌಂದರ್ಯದ ಪ್ರತಿಬಿಂಬದಂತೆ ಕಾಣುತ್ತಿದ್ದಾಳೆ. ನಿತ್ಯನೂತನ ಪರಿಸರÀದ ಚರ್ಯೆಯೇ ಸಂಪೂರ್ಣ ಬದಲಾಗಿ, ಎಲ್ಲೆಲ್ಲೂ ಅರಳುವಿಕೆಯ ಸೊಬಗೇ ರಂಜಿಸುತ್ತಿದೆ. ಮಳೆಯ ನವವಿಲಾಸದ ನಾಟ್ಯಕ್ಕೆ ಪಟಪಟ ಸದ್ದು ಜೊತೆಗೂಡಿ ಅದೃಶ್ಯವಾಗುತ್ತಿದೆ. ಹೊರಗೆ ಇಳೆ ಹಾಗೂ ಮಳೆಯ ಚೆಲ್ಲಾಟ ಸಾಗುತ್ತಿದ್ದರೆ, ಮನದಲ್ಲಿ ಹಿಂದಿನ ನೆನಪುಗಳೆಲ್ಲವೂ ಮರುಕಳಿಸುತ್ತಿದೆ. ಬೇಸಿಗೆಯಲ್ಲಿ ಬೆವರಿಳಿಸಿಕೊಂಡು ಅಂಗಳದಲ್ಲಿ ಕುಣಿದು, ಕುಪ್ಪಳಿಸಿ ಸಂಜೆವೇಳೆಗೆ ಮನೆಗೆ ಬರುವ ಸಮಯವು ಮುಗಿದು, ಈಗ ಬೆಚ್ಚನೇ ಮನೆಯೊಳಗೆ ಸೇರಿಕೊಳ್ಳುವ ಕಾಲ ಬಂದಿದೆ.
ನಾವೆಲ್ಲಾ ಹಳ್ಳಿಹುಡುಗರು. ತ್ರಿಕಾಲದಲ್ಲಿಯೂ ಪ್ರಾಕೃತಿಕ ಸೊಗಸನ್ನು ಕಣ್ತುಂಬಿಕೊಂಡೇ ಬೆಳೆದವರು. ರಾತ್ರಿಯಿಂದ ಬೆಳಗಿನವರೆಗೂ ವಿಪರೀತ ಗುಡುಗು, ಸಿಡಿಲುಗಳಿಂದ ಕೂಡಿದ ಮಳೆಯು ಒಂದೇ ಸಮನೇ ಸುರಿಯುವುದು ಸಾಮಾನ್ಯಸಂಗತಿ. ಆಗಾಗ ಮನೆಯ ಹಂಚಿನ ಒಡಕಿನಿಂದ ಹೊರಗಿನ ನೀರು ನುಸುಳಿಕೊಂಡು ಒಳಸೇರಿ ತೊಂದರೆಕೊಡುತ್ತದೆ. ಬೆಳಗ್ಗೆಯಾದರೂ ಸುಖವಿದೆಯೇ? ಅದೂ ಇಲ್ಲ; ಮೊದಲೇ ಹುಚ್ಚುಮಳೆ. ಅದರೊಂದಿಗೆ ಕೊರೆವ ಚಳಿಯಲ್ಲಿ ಹೊದ್ದು ಮಲಗೋಣವೆಂದರೆ, ಗಡಿಯಾರದ ಮುಳ್ಳು ಆಗಲೇ ಎಂಟುಗಂಟೆಗೆ ಹೋಗಿ ನಿಂತಿರುತ್ತಿತ್ತು. ಮನೆಯವರ ನಿಲ್ಲದ ಕಿರಿಕಿರಿಯ ನಡುವೆ ಸ್ನಾನಮಾಡಿ, ತಿಂಡಿತಿಂದು ಮೂಲೆಯಲ್ಲಿ ಬಿದ್ದಿದ್ದ ಕೊಡೆ, ಬ್ಯಾಗನ್ನು ಬೆನ್ನಿಗೆ ಏರಿಸಿಕೊಂಡು ಶಾಲೆಗೆ ಹೊರಡುವಾಗ ದೊಡ್ಡ ಯಜ್ಞವನ್ನೇ ಮಾಡಿದ ಅನುಭವವಾಗುತ್ತಿತ್ತು.
ಅದರಲ್ಲೂ ಈಗಿನ ಹೈವೇಗಳಿಲ್ಲದ ಹಳ್ಳಿಯ ಕೊರಕಲುದಾರಿಯಲ್ಲಿ ಹಳ್ಳ ಕೊಳಗಳದೇ ಸಾಮ್ರಾಜ್ಯ. ಅಲ್ಲೋ ಮಳೆನೀರು ತುಂಬಿಕೊಂಡು, ಕಾಲಿಟ್ಟರೆ ತೇಲಿಸಿಕೊಂಡು ಹೋಗುವ ಸುಳಿ! ಇದೆಲ್ಲದರ ನಡುವೆಯೂ ನಾವು ಶಾಲೆಗೆ ಹೋಗಲೇಬೇಕಿತ್ತು. ಹೊತ್ತಾಗಿರುತ್ತಿದ್ದ ಕಾರಣದಿಂದ ಓಡಿಕೊಂಡು ಹೋಗುವುದಲ್ಲದೇ ಬೇರೆ ಉಪಾಯವೇ ಇರುತ್ತಿರಲಿಲ್ಲ. ಶಾಲೆಯ ಮಧ್ಯಾಹ್ನದ ಊಟದ ಬಿಡುವಿನಲ್ಲಿ ಒಬ್ಬೊಬ್ಬರನ್ನೂ ಕಾಲಿಡಾರ್‍ನಲ್ಲಿ  ಬಾತುಕೋಳಿಯಂತೆ ಕೂರಿಸಿಕೊಂಡು ಎಳೆದಾಡುವ ಆಟಸಾಗುತ್ತಿತ್ತು. ಬಿದ್ದರೆ ತಿಂಗಳ ಆರೈಕೆ ಖಂಡಿತ. ಆದರೆ, ಇದೆಲ್ಲ ಆ ಸಮಯದಲ್ಲಿ ಎಲ್ಲಿ ನೆನಪಿಗೆ ಬರುತ್ತದೆ ಹೇಳಿ. ಇನ್ನು ತರಗತಿಯಲ್ಲಿ ನಾವು ಕುಳಿತುಕೊಂಡಿದ್ದರೂ ಮನಸ್ಸು ಪಾಠ ಕೇಳುವುದಕ್ಕಿಂತ ಹೆಚ್ಚಾಗಿ ಹೊರಗಡೆಯೇ ಉತ್ಸುಕಗೊಳ್ಳುತ್ತಿರುತ್ತದೆ. ಸಂಜೆಯ ಕೊನೆಯ ಬೆಲ್ಲಿನ ಸದ್ದಾಗುವುದೇ ತಡ ಒಂದೇ ಓಟಕ್ಕೇ ಹೊರಗೋಡುತ್ತಿದ್ದೆವು. ದಾರಿಯಲ್ಲಿ ಬರುವಾಗ, ಮಳೆಬಂದು ನೀರುನಿಂತಲ್ಲೆಲ್ಲಾ ಕಾಲು ಜಾರಿಸಿ ಆಟವಾಡುತ್ತಾ ಮನೆಗೆ ಬರುವಾಗ ಪೂರ್ಣ ಒದ್ದೆಯ ಮುದ್ದೆಗಳೇ. ಮನೆಗೆ ಬಂದ ಬಳಿಕ ಧರಿಸಿದ ಬಟ್ಟೆಯನ್ನು ಕಿತ್ತೆಸೆದು ಬೆಂಕಿಯ ಬುಡದಲ್ಲಿ ಕುಳಿತರೆ ಮತ್ತೆ ಸದ್ಯಕ್ಕೆ ಅಲ್ಲಿಂದ ಕದಲುವ ಮಾತೇ ಇರಲಿಲ್ಲ. ಒಲೆಯಲ್ಲಿ ಬೆಂಕಿಯ ಕಾವು ಕ್ಷೀಣಿಸಿದಾಗ ಕುರುಕಲು ತಿಂಡಿಯ ನೆನಪಾಗುತ್ತಿತ್ತು. ಬೇಸಿಗೆಯಲ್ಲಿ ಮೊದಲೇ ಮಾಡಿಟ್ಟ ಹಲಸಿನ ಹಪ್ಪಳವೋ, ಸಂಡಿಗೆಯೋ ಲೆಕ್ಕವಿಲ್ಲದೇ ಸುಟ್ಟು, ಕರಿದು ಬಾಯಿಗೆ ಆಹುತಿಯಾಗುತ್ತಿತ್ತು. ಇವಿಷ್ಟೇ ಅಲ್ಲದೆ, ಕೆಲವೊಮ್ಮೆ ಹಲಸಿನ ಬೀಜವನ್ನೂ, ಒಣಗಿಸಿಟ್ಟ ಗೇರುಬೀಜವನ್ನೂ ಸುಟ್ಟುತಿನ್ನುವುದಿತ್ತು. ಅಷ್ಟರಲ್ಲಿ ಮತ್ತೆ ಮಳೆಯ ಆರ್ಭಟ ಪ್ರಾರಂಭವಾಗಿ ಗೂಡುಸೇರುವ ಹಕ್ಕಿಗಳಂತೆ, ಮುಸುಕಿನ ಮರೆಯಲ್ಲಿ ಮರೆಯಾಗುತ್ತಿದ್ದೆವು.
ಸುತ್ತಲೂ ಎತ್ತರದ ಮರಗಳಿಂದಲೇ ಕೂಡಿದ ಪರಿಸರವಾದ್ದರಿಂದ ಒಂದು ಸಲ ಹೋದ ಕರೆಂಟಿನ ಮುಖದರ್ಶನವಾಗುತ್ತಿದ್ದುದು ಹದಿನೈದು ಇಪ್ಪತ್ತು ದಿನಗಳ ಬಳಿಕವೇ! ಅಲ್ಲಿವರೆಗೆ ಬೇಸರ ಕಳೆಯಲು ಚಿಮಣಿ ಬೆಳಕಿನಲ್ಲಿಯೇ ಮನೆಯವರೆಲ್ಲರಿಂದ ಪಗಡೆಯಾಡುವುದೋ, ಹಾವುಏಣಿ ಹತ್ತಿಸುವುದೋ ಏನೋ ಒಂದಾಟ ಸಾಗುತ್ತಿತ್ತು. ರಾತ್ರಿಯಾಗುತ್ತಿದ್ದಂತೆಯೇ ಗಾಳಿಗೆ ದೀಪವೂ ನಿಲ್ಲುತ್ತಿರಲಿಲ್ಲ. ಕೈತೊಳೆಯಲು ಮಳೆಯಿಂದ ಹೊರಗೆ ಹೋಗುವುದಕ್ಕೂ ಆಗದೇ ಪೇಚಾಟ ಪ್ರಾರಂಭ. ಹಳೆಯ ಮನೆಯಾದ್ದರಿಂದ ಮಳೆಯ ನೀರಿಗೂ ನಿರ್ಭಯವಾಗಿ ಒಳಬರಲು ವಿಫುಲ ಅವಕಾಶವಿತ್ತು! ಹೇಳಿಕೊಳ್ಳುವುದಕ್ಕೆ ಮೂರ್ನಾಲ್ಕು ಕೋಣೆಗಳಿದ್ದರೂ ಅದರಲ್ಲಿ ಬೆಚ್ಚಗಿನಕೋಣೆ ಒಂದೇ. ಆ ನಡುಮನೆಯಲ್ಲಿಯೇ ನಮ್ಮ ಆಟ, ಕೂಟ, ಶಯನೋತ್ಸವ ಎಲ್ಲವೂ.
ಮತ್ತೆ ಮರುದಿನ ಯಥಾಪ್ರಕಾರದ ಗೋಳು;ಶಾಲೆಗೆ ಹೊರಡುವುದು. ಹೇಗೋ ಹೊರಡುತ್ತಿದ್ದೆವು. ದಾರಿಯಲ್ಲಿ ತಿರುಗಾಡುವ ವಾಹನಗಳಿಗೋ ಅತೀವ ಅಹಂಕಾರ. ಬಡಪಾಯಿಗಳಾಗಿ ಹೋಗುತ್ತಿದ್ದ ನಮ್ಮ ಮೇಲೆ ಕೆಸರುಮಿಶ್ರಿತ ನೀರನ್ನು ಹಾರಿಸಿಕೊಂಡೇ ಹೋಗುವುದು. ಮೊದಲೇ ಗಡಿಬಿಡಿ, ಅದರಲ್ಲಿ ಇದರ ಕಾಟದಿಂದಾಗಿ ಶಾಲೆಗೆ ಹೋಗುವಾಗಲೇ ನಾವು ಒದ್ದೆ. ಅಲ್ಲಾದರೂ ಸುಖವಿದೆಯೇ? ಅಲ್ಲೂ ಅದೇ ಅವಸ್ಥೆ! ಒಡಕು ಹಂಚಿನ ಕೊನೆಯಿಂದ ಸುರಿವ ಮಳೆಯ ಆಗಮನ. ಮಳೆಯ ಜೊತೆಯಲ್ಲಿಯೇ ಚಳಿಯೂ ನಮ್ಮನ್ನು ರೇಗಿಸುತ್ತಿರುತ್ತದೆ. ಒಮ್ಮೊಮ್ಮೆ ಬಹಳ ಚಳಿಯಾದಾಗ, ನಮ್ಮ ಅವಸ್ಥೆಯನ್ನು ನೋಡುವುದಕ್ಕಾಗದೇ ಶಿಕ್ಷಕರು ಬೆತ್ತದ ಬಿಸಿ ಮುಟ್ಟಿಸುತ್ತಿದ್ದರು! ಅದೇ ವೇಳೆಗೆ ‘ಹುಯ್ಯೋ ಹುಯ್ಯೋ ಮಳೆರಾಯ ಮಾವಿನ ತೋಟಕೆ ನೀರಿಲ್ಲ’ ಎಂಬ ಪದ್ಯವೂ ಕಿವಿದೆರೆಗೆ ಬೀಳುತ್ತಿತ್ತು. ಮಳೆಗಾಲ ಬಂತೆಂದರೆ ಇನ್ನೂ ಒಂದು ಮಹತ್ವದ ಸಂಗತಿ ನೆನಪಾಗುತ್ತದೆ. ಒದ್ದೆಯಾಗದಿರಲಿ ಎಂದು ಪುಸ್ತಕಕ್ಕೆ ಕಾಕಿ ಬೈಂಡ್ ಹಾಕಿ, ಅದಕ್ಕೆ ಹೆಸರಿನ ಸ್ಟಿಕ್ಕರ್ ಅಂಟಿಸುವ ಜಾಣ್ಮೆ.
ನಿತ್ಯವೂ ನಾವು ಶಾಲೆಗೆ ಹೋಗುವ ದಾರಿಯಲ್ಲಿ ಒಂದಿಲ್ಲೊಂದು ಮರ ಬಿದ್ದೇ ಇರುತ್ತಿತ್ತು. ಅಷ್ಟೇ ಅಲ್ಲದೇ, ‘ಮತ್ತೊಂದು ಯಾವಾಗ ಬೀಳುತ್ತದೆಯಪ್ಪಾ..’ ಎಂಬ ಸಣ್ಣ ಭಯವೂ ನಮ್ಮಿಂದ ದೂರಸರಿಯುತ್ತಿರಲಿಲ್ಲ. ಘಟ್ಟಪ್ರದೇಶದ ಗಾಳಿಯ ಭೀಕರತೆಯ ಕುರಿತು ಹೇಳುವುದಕ್ಕೆ ಸಾಧ್ಯವೇ ಇಲ್ಲ. ಅದನ್ನು ಅನುಭವಿಸಿಯೇ ತಿಳಿಯಬೇಕು. ಒಮ್ಮೊಮ್ಮೆ ರಭಸವಾಗಿ ಬಂತೆಂದರೆ, ಕೈಯ್ಯಲ್ಲಿ ಹಿಡಿದ ಎಂಥಹಾ ಕೊಡೆಯೂ ತಿರುವು ಮುರುವಾಗುವುದರಲ್ಲಿ ಸಂಶಯವಿಲ್ಲ.  ಪಿರಿಪಿರಿ ಮಳೆ ಬರುತ್ತಿದ್ದರೂ ಕೊಡೆ ಬಿಡಿಸುವಂತಿಲ್ಲ. ಬಿಡಿಸಿದರೆ ಅದರ ಸಮೇತ ಗಾಳಿ ನಮ್ಮನ್ನೂ ಹಾರಿಸಿಕೊಂಡೇ ಹೋಗುವುದು. ಬಿಡಿಸದೇ ಇದ್ದರೂ ಉಪಾಯವುಂಟೇ? ತಲೆನೆನೆಯುವುದಕ್ಕೆ ಅಷ್ಟೇ ಸಾಕಾಗುತ್ತದೆ. ಮುಂದೆ ಹಿಡಿದರೆ, ಬೆನ್ನಿನ ಚೀಲ ಒದ್ದೆ; ಹಿಂದೆ ಹಿಡಿದರೆ ತಲೆಯೂ ಒದ್ದೆ. ಗಾಳಿಗೆ ಕೊಡೆಯ ಕಥೆಯೂ ಮುಗಿದಂತೆಯೇ. ಆಗಾಗ ರಸ್ತೆ ಬದಿಯಲ್ಲಿ ಹೋಗುವಾಗ ವಾಹನಗಳ ಮಳೆಯ ಸುರಿತದಲ್ಲಿ ವಾಹನವೂ ಕಾಣಿಸದು. ಇದೆಲ್ಲದರ ನಡುವೆ ನಮ್ಮ ಪಯಣ. ಗಾಳಿಯ ಅಹಂಕಾರಕ್ಕೆ ಸವಾಲೊಡ್ಡುವುದಕ್ಕೆ ಒಂದಿಷ್ಟು ದಿನ ಮಳೆಕೋಟನ್ನೂ ಹಾಕಿದ್ದಾಯಿತು. ಆದರೆ ಅದನ್ನು ಹಾಕಿ, ಬಿಚ್ಚುವ ಅವಸರದಲ್ಲಿ ಅದೆಷ್ಟು ದಿನ ಹರಿಯದೇ ಉಳಿದುಕೊಳ್ಳುತ್ತದೆ ಹೇಳಿ. ಇದೇ ಅವಸ್ಥೆಯ ವ್ಯವಸ್ಥೆಯಲ್ಲಿಯೇ ಹತ್ತುವರ್ಷ ಶಾಲೆಗೆ ತಿರುಗಾಡಿದ್ದು ಗೊತ್ತೇ ಆಗಲಿಲ್ಲ. ಹಳ್ಳಿಯ ಮಣ್ಣಿನಮನೆಗಳಲ್ಲಿ ನಾವಷ್ಟೇ ಇರುವುದಲ್ಲ. ಮೊದಮೊದಲು ಅಪೂರ್ವಕ್ಕೆ ಸಣ್ಣ ಹಾವಿನ ಮರಿಯೋ, ಚೇಳೋ ನಮ್ಮೆಲ್ಲರ ಯೋಗಕ್ಷೇಮ ವಿಚಾರಣೆಗಾಗಿ ಮನೆಯೊಳಗೆ ಬರುವುದಿತ್ತು. ಬಂದು ಒಂದಿಷ್ಟು ಸಮಯ ನೆಂಟರಂತೆ ಇದ್ದು, ಮತ್ತೆ ಎಲ್ಲಿಗೋ ಸಾಗಿಬಿಡುತ್ತಿದ್ದವು. ಆದರೆ, ಈಗ ಕೇವಲ ವಿವಿಧ ಬಗೆಯ ಹುಳಗಳು ಮಾತ್ರ ಬಂದುಹೋಗುತ್ತಿರುತ್ತವೆ. ಹಿಂದಿನವರ ಹೆಸರನ್ನು ನೆನಪಿಸುವ ಮಟ್ಟಿಗಷ್ಟೇ!
ವಿಷಾದದ ಸಂಗತಿ ಎಂದರೆ ಪೇಟೆಯ ಮಕ್ಕಳಿಗೆ ಇದ್ಯಾವುದರ ಪರಿಚಯವೂ ಇಲ್ಲ. ಕಾರು, ಆಟೋಗಳಲ್ಲಿಯೇ ಅವರ ಪಯಣ ವಾದ್ದರಿಂದ ಇಂತಹ ಅನುಭವಗಳಿಂದ ಅವರು ವಂಚಿತರಾಗುತ್ತಿದ್ದಾರೆ. ಎಲ್ಲವೂ ಆಧುನಿಕವಾದಂತೆ ಸಹಜಸುಂದರ ಅನುಭವಗಳು ಮೂಲೆಗುಂಪಾಗುತ್ತಿದೆ. ನಮಗೆ ಅಂದು ಕಳೆದ ಬಾಲ್ಯದ ಮಳೆಗಾಲ ಇಂದಿಗೂ ನೆನಪಿದೆ. ಆಡಿದ ತುಂಟಾಟಗಳು, ಮಾಡಿದ ಚೇಷ್ಟೆಗಳು ಸ್ಮøತಿಯಿಂದ ಸ್ವಲ್ಪವೂ ಮಾಸಿಲ್ಲ. ದುಃಖದ ಸಂಗತಿ ಎಂದರೆ, ಮಳೆಗಾಲ ಮತ್ತೆ ಮತ್ತೆ ಬರುತ್ತಿದ್ದರೂ ಆ ಸುಂದರ ನೆನಪುಗಳನ್ನು ಹೊತ್ತು ತರುತ್ತಿಲ್ಲ. ಆ ಸಂತೋಷವನ್ನು ಕೊಡುತ್ತಿಲ್ಲ. ಈಗೀಗ ಹಳ್ಳಿಗಳಲ್ಲಿಯೂ ಪಟ್ಟಣದ ಲಾಲಸೆ ಹೆಚ್ಚಾಗುತ್ತಿದೆ. ಹಾಗಾಗಿ ಇಲ್ಲಿಯೂ, ಮಳೆ ಮನೆಯ ಸದಸ್ಯನಾಗಿ ಉಳಿಯುತ್ತಿಲ್ಲ. ಆಗಾಗ ಬಂದು ಹೋಗುವ ನೆಂಟ ರಂತಾಗುತ್ತಿದೆ. ಇನ್ನು ಪೇಟೆಗಳ ಪರಿಸ್ಥಿತಿಯನ್ನು ವಿವರಿಸಿ ಹೇಳುವುದಕ್ಕೆ ಏನಿದೆ. ಅಲ್ಲಿ ಎಲ್ಲವೂ ಇದೆ; ಹಣವಿದ್ದರೆ! ಆದರೆ ನೆನಪಿಡಿ, ಹಣದಿಂದ ಪಡೆಯಲಾರದ ಬಹುತೇಕ ಸಹಜ ಸಂಗತಿಗಳನ್ನು ಹಳ್ಳಿಯ ನಿರ್ಮಲಪರಿಸರದಲ್ಲಿ ಪಡೆಯಬಹುದು. ನಾವೆಲ್ಲರೂ ಅದರ ಮಡಿಲಿನಲ್ಲಿಯೇ ಆಡಿ ಬಂದ ಕಾರಣ ನಮಗೆ ಎಂದಿಗೂ ಅವುಗಳ ಸಾಂಗತ್ಯ ಬೇಕೆನಿಸುತ್ತಲೇ ಇರುತ್ತದೆ...*


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ