ಮಂಗಳವಾರ, ಮಾರ್ಚ್ 28, 2017

ಮುನ್ನುಡಿಗೊಂದು ಮುನ್ನುಡಿ





ಮುನ್ನುಡಿಗೊಂದು ಮುನ್ನುಡಿ


ಸಾಹಿತ್ಯ-ಸಮಾಜ ನಿತ್ಯನೂತನವಾದವು. ಒಂದನ್ನೊಂದು ಪ್ರಭಾವಿಸುತ್ತಾ, ಪರಿಣಾಮಿಸುತ್ತಾ ಬೆಳೆದು ಬರುವವು. ಬೆಳವಣಿಗೆಗೆ ಹಳೆಯ ಬೇರಿನಂತೆ ಹೊಸ ಚಿಗುರೂ ಆವಶ್ಯಕ. ಬಗೆಯ ಚಿಗುರು ಯುವಪ್ರತಿಭೆ ಶಿವಕುಮಾರ ಬಿ. ಅಳಗೋಡುರವರು. ಕಾಲೇಜಿನ ಗೋಡೆ ಪತ್ರಿಕೆಗೆ, ಆಕಾಶವಾಣಿಗೆ, ಉದಯವಾಣಿ ಮೊದಲಾದ ನಿಯತಕಾಲಿಕಗಳಿಗೆ ನಿರಂತರ ಬರೆಯುವ ಹವ್ಯಾಸ ಇರಿಸಿಕೊಂಡಿರುವ ಇವರು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಕೂಡ. ‘ಪ್ರಾಯಂ ಕೂಸಾದೊಡೆ ಅಭಿಪ್ರಾಯಂ ಕೂಸಕ್ಕುಮೆಎನ್ನುವಂತೆ ವಯಸ್ಸು ಚಿಕ್ಕದಾದರೂ ಮನಸ್ಸು ದೊಡ್ಡದಾದ ಅವರ ಬರವಣಿಗೆಗಳಲ್ಲಿ ತಾಜಾತನವಿದೆ, ಸರಳತೆಯಿದೆ, ಸಹಜತೆಯಿದೆ. ಹಾಸ್ಯದ ಹೊನಲಿದೆ. ಅಲಕ್ಷಿತರ ಕಡೆಗೆ ಲಕ್ಷ್ಯವಿದೆ. ಮಾನವೀಯ ಕಾಳಜಿ ಕಡಲಾಗಿದೆ. ತಮ್ಮನ್ನು ಬಾಲ್ಯದಿಂದಲೂ ಪ್ರಭಾವಿಸಿದ ಸಂಗತಿಗಳನ್ನು ಬರಹ ರೂಪದಲ್ಲಿ ದಾಖಲಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ.
ಯಕ್ಷಗಾನದ ಬಗ್ಗೆ ವಿಶೇಷ ಒಲವುಳ್ಳ ಶ್ರೀಯುತರು ಯಕ್ಷಗಾನ ಪಾತ್ರಧಾರಿಯಾಗಿಯೂ, ಯಕ್ಷಗಾನ ಪ್ರಸಂಗಕರ್ತೃವಾಗಿಯೂ ಜನಮನ್ನಣೆ ಗಳಿಸಿದ್ದಾರೆ. ಅವರ ಮುನ್ನುಡಿಯಲ್ಲಿ ಬಾಲ್ಯದ ದಿನಗಳ ಶಾಲಾ ನೆನಪುಗಳಿಂದ ಹಿಡಿದು ಸಮಕಾಲೀನ ಸಾಮಾಜಿಕ ಸಮಸ್ಯೆಗಳ ಕಡೆಗೆ ವಿಷಯದ ವಿಸ್ತಾರವಿದೆ. ರಾಮಾಯಣ, ಮಹಾಭಾರತಗಳ ಬಗ್ಗೆ ಲೇಖಕರಿಗೆ ವಿಶೇಷ ಆಸಕ್ತಿ, ಕಾಳಜಿ, ತಿಳುವಳಿಕೆ ಇದೆ. ಅದಕ್ಕಾಗಿಯೇ ಅಲ್ಲಿನ ಅನೇಕ ಅಲಕ್ಷಿತ ಪಾತ್ರಗಳಿಗೆ ಮರುಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಮಾನವೀಯತೆ ಮರೆಯಾಗಿ ಹೋಗುತ್ತಿರುವ ಹೊತ್ತಿನಲ್ಲಿ ಮನುಜನಲ್ಲಿ ಮತ್ತೆ ಮನುಷ್ಯತ್ವವನ್ನು ಬಿತ್ತುವ ತುರ್ತು ಇದೆ. ‘ತಪ್ಪಿಲ್ಲ ನಿನ್ನೊಳು ಮಂಥರಾ ನೆಲೆಯಲ್ಲಿ ರಚನೆಯಾಗಿರುವ ಪ್ರಬಂಧ. ‘ಪಾಪಿಗೂ ಉದ್ಧಾರವಿಹುದೌ ಸೃಷ್ಟಿಯ ಮಹದ್ವ್ಯೂಹ ರಚನೆಯೊಳ್ ಎನ್ನುವ ಕುವೆಂಪು ಅವರ ಮಾತು ಇಲ್ಲಿ ನೆನಪಾಗುತ್ತಿದೆ. ‘ಮಾತಾಡು ಊರ್ಮಿಳಾರಾಮಾಯಣದಲ್ಲಿ ಮೌನಿಯಾಗಿರುವ ಲಕ್ಷ್ಮಣನ ಮಡದಿ ಊರ್ಮಿಳೆಯ ಒಳತೋಟಿಗಳನ್ನು ಅರ್ಥಪೂರ್ಣವಾಗಿ ಅರ್ಥೈಸುವ ಪ್ರಬಂಧವಾಗಿದೆ. ‘ಭಾರತದ ಕರ್ಣನಂತೂ ಕರ್ಣ ರಸಾಯನವಾಗಿದೆ. ಲೇಖಕರ ಸೂಕ್ಷ್ಮ ಅಧ್ಯಯನ ಇಲ್ಲಿ ಪುಟಪುಟದಲ್ಲೂ ಪ್ರಕಟಗೊಳ್ಳುತ್ತದೆ. ಕರ್ಣನ ಬದುಕಿನ ಎಲ್ಲಾ ಸಂಗತಿಗಳನ್ನೂ ಪಂಪಭಾರತ, ಕುಮಾರವ್ಯಾಸ ಭಾರತಗಳ ಹಿನ್ನೆಲೆಯಲ್ಲಿ ಬಹಳ ವಿವರವಾಗಿ ವಿವರಿಸಲಾಗಿದೆ.
ಸಮಕಾಲೀನ ಸಮಸ್ಯೆಗಳ ಕಡೆಗೆ ನಮ್ಮ ಗಮನ ಸೆಳೆಯುವ ಪ್ರಯತ್ನ ಅವರಕೆಜಿ ಯಿಂದ ಪಿಜಿವರೆಗೆಪ್ರಬಂಧದಲ್ಲಿ ಒಡಮೂಡಿದೆ. ತಮ್ಮ ಬಾಲ್ಯದ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತಾ ಹೋಗುವ ಲೇಖಕರು ಕಲಿಕೆಯ ಕಾಲದ ಮಹತ್ವಿಕೆಯನ್ನು ತಿಳಿಸುತ್ತಾ ಹೋಗುತ್ತಾರೆ. ವಿದ್ಯಾರ್ಥಿಗಳಂತೆ ಪೋಷಕರೂ ಗಮನಿಸಲೇಬೇಕಾದ ಪ್ರಬಂಧ ಇದಾಗಿದೆ. ‘ಭೂರಂಗದಲಿ ವರ್ಷ ನರ್ತನಮಲೆನಾಡಿನ ಮಳೆಗಾಲದ ಅನುಭವವನ್ನು ಬಿಚ್ಚಿಡುತ್ತದೆ. ಶಾಲೆಗೆ ಮಳೆಯ ನಡುವೆಯೂ ಹೋಗಬೇಕಾದ ಒಡನಾಟದ ಮಾತುಗಳಿವೆ.
ಸ್ತ್ರೀಯರ ಮೇಲಾಗುತ್ತಿರುವ ಶೋಷಣೆಯ ವಿವಿಧ ಮುಖಗಳನ್ನು ಹೆಣ್ಣೆ ನಿನಗೆಲ್ಲೆ ಮನ್ನಣೆತಿಳಿಸುತ್ತಾ, ಸ್ತ್ರೀಯರ ಮೇಲೆ ನಡೆಯುತ್ತಿರುವ ಅನಾಚಾರಗಳು ನಿಲ್ಲಬೇಕೆಂಬ ಕಾಳಜಿ ಇಲ್ಲಿದೆ. ಸ್ವ ಅನುಭವದ ನೆಲೆಯಲ್ಲಿಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆಮತ್ತುವಾಹನಸಂಹಾರಗಳಲ್ಲಿ ಸೊಳ್ಳೆ, ಇಲಿಗಳ ಕಾಟದಿಂದ ಅನುಭವಿಸಿದ ಕಷ್ಟನಷ್ಟದ ರಸವತ್ತಾದ ಚಿತ್ರಣವಿದೆ. ‘ ಮನಸು ಹೊಲಸಿನ ತೊಟ್ಟಿಪ್ರಬಂಧದಲ್ಲಿ ಮನಸ್ಸು ಕೇಂದ್ರಭಾವವಾಗಿದೆ. ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಏನಾಗುತ್ತದೆ, ನಾವು ಮನಸ್ಸಿನ ನಿಯಂತ್ರಣದಲ್ಲಿದ್ದರೆ ಏನಾಗುತ್ತದೆ ಎನ್ನುವುದನ್ನು ರಾಮಾಯಣ, ಮಹಾಭಾರತ, ಪುರಾಣಗಳ ನಿದರ್ಶನದಿಂದ ನಿರೂಪಿಸಲಾಗಿದೆ.
ಹೂವುಗಳ ಬಗ್ಗೆ ಅಪರೂಪದ ಅಪೂರ್ವ ವಿವರಗಳ ಪರಿಮಳವನ್ನು ಕೊಡುವ ಪ್ರಬಂಧಹೂವೇ ಹೂವೇಆದರೆ, ಯುವಪ್ರೇಮಿಗಳ ಸರಸ-ಸಲ್ಲಾಪದ ನುಡಿಗಳನ್ನು ಸೊಗಸಾಗಿ ನಿರೂಪಿಸುವ ಪ್ರಬಂಧ ‘ಪೂರ್ವೋತ್ತರವಾಗಿದೆ. ಹಾಸ್ಟೆಲ್‍ನ ಅನುಭವವು ‘ಆ ದಿನಗಳ ಮೆಲುಕುನಲ್ಲಿ ಚಿತ್ರಿತಗೊಂಡಿದೆ.
ಶ್ರೀ ಶಿವಕುಮಾರ ಬಿ.ಎ. ಅಳಗೋಡು ಇವರ ಮೊದಲ ತೊದಲ ಬರವಣಿಗೆ ಅಚ್ಚುಕಟ್ಟಾಗಿಯೇ ಮೂಡಿಬಂದಿದೆ. ವಿಷಯ ವೈವಿಧ್ಯ ಮನಸ್ಸಿಗೆ ಹಿಡಿಸುವಂತಿದೆ. ಅದರ ಜೊತೆಜೊತೆಗೆ ಶ್ರೀಯುತರ ಅಧ್ಯಯನ ಅಭ್ಯಾಸಗಳು ಆಳವಾಗಿ ನಡೆಯಲಿ. ಕನ್ನಡ ಸಾಹಿತ್ಯಕ್ಕೆ ಅವರು ಮತ್ತಷ್ಟು, ಮಗದಷ್ಟು ಕೃತಿಗಳನ್ನು ಕೊಡಲಿ. ಭರವಸೆಯ ಬರಹಗಾರನಾಗಿ ಮೂಡಿಬರಲಿ.

                      - ಡಾ. ಎಚ್.ಕೆ ವೆಂಕಟೇಶ
                   ಕನ್ನಡ ಸಹಾಯಕ ಪ್ರಾಧ್ಯಾಪಕರು
          ಸ.ಪ್ರ.ದ.ಕಾಲೇಜು, ತೆಂಕನಿಡಿಯೂರು, ಉಡುಪಿ
                 
                     

                                                                                                                  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ