ಗುರುವಾರ, ಏಪ್ರಿಲ್ 13, 2017

ಮಾತಾಡು ಊರ್ಮಿಳಾ


ಮಾತಾಡು ಊರ್ಮಿಳಾ

ರಾಮಾಯಣವೆಂಬ ಮಹಾಕಾವ್ಯ ಸಮುದ್ರದಲ್ಲಿ ಲಕ್ಷೋಪಲಕ್ಷ ಪಾತ್ರಗಳವೆ. ನಮ್ಮಲ್ಲಿ ರಾಮಾಯಣಗಳ ಸಂಖ್ಯೆಗೂ ಮಿತಿಯಿಲ್ಲ. ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲಎಂದು ಕುಮಾರವ್ಯಾಸ ಒಂದೆಡೆ ಹೇಳುತ್ತಾನೆ. ಇಲ್ಲಿ ಕೆಲವು ಹೆಬ್ಬಂಡೆಗಳಂಥಹ ಪಾತ್ರಗಳಿದ್ದರೆ, ಇನ್ನು ಕೆಲವು ಮಧ್ಯಮ, ಸೂಕ್ಷ್ಮಗಾತ್ರದವು. ಹೀಗಿದ್ದರೂ ಇವುಗಳಲ್ಲಿ ಯಾವೊಂದೂ ಪ್ರಧಾನವಲ್ಲ, ಯಾವುದೂ ನಗಣ್ಯವಲ್ಲವೆನಿಸುತ್ತದೆ. ವಾಲ್ಮೀಕಿಯ ಶ್ರೀರಾಮಾಯಣವೆಂಬ ಕಾವ್ಯವನ್ನೇ ಅವಲೋಕಿಸುವು ದಾದರೆ, ಅದರಲ್ಲಿ ಕಥಾನಾಯಕನಾದ ರಾಮನೇ ಕೇಂದ್ರವ್ಯಕ್ತಿ. ರಾಮನ ಕಥೆಯೇ ರಾಮಾಯಣವೆಂಬಷ್ಟು ಜನಪ್ರಿಯವಾಗಿಬಿಟ್ಟಿದೆ. ಇತ್ತೀಚೆಗಿನ ಬೆಳವಣಿಗೆಯಲ್ಲಿ ಸೀತೆಯೇ ಪ್ರಧಾನಳಾಗಿ ಸೀತಾಯಣವೆಂದೂ ಕರೆಸಿಕೊಳ್ಳುತ್ತಿರುವುದನ್ನು ಕೇಳಿದ್ದೇವೆ. ಮಹಾಕಾವ್ಯವೊಂದರಲ್ಲಿ ನಾಯಕ, ನಾಯಕಿಯರ ಪ್ರವೇಶ ವಾದಮೇಲೆ ಖಳನಾಯಕನ ಪ್ರವೇಶವಾಗದಿರಲು ಸಾಧ್ಯವೇ? ಇಡೀ ರಾಮಾಯಣದಲ್ಲಿ ಕೆಲವಷ್ಟು ದುಷ್ಟರು ಕಾಣಿಸಿಕೊಂಡರೂ, ಅವರೆಲ್ಲರಿಗೂ ಮುಕುಟಪ್ರಾಯನಾಗಿ ಕಾಣಿಸಿಕೊಳ್ಳುವವ ರಾವಣ. ಪರನಾರೀಸೋದರ ಭಾವವನ್ನು ಹೊಂದಿರದ ಈತ, ಪರಾಂಗನೆಯ ಮೇಲೆ ಮೋಹಗೊಂಡು ತನ್ನ ಧೀಮಂತ ವ್ಯಕ್ತಿತ್ವವನ್ನು ತಾನೇ ಹಾಳುಮಾಡಿಕೊಳ್ಳುತ್ತಾನೆ.
 ಎಂದೋ ಪಡೆದ ವರವನ್ನು ಪಟ್ಟಾಭಿಷೇಕದ ಸಮಯದಲ್ಲಿ ಕೇಳುವ ಕೈಕೆಯ ದೆಸೆಯಿಂದ ಇನವಂಶ ಸಂಜಾತರು ವನಗಮನ ಮಾಡಬೇಕಾ ಗುತ್ತದೆ. ಪಿತೃವಾಕ್ಯ ಪರಿಪಾಲಕನಾದ ರಾಘವ ಮರುಮಾತಾಡದೇ, ಮನದಲ್ಲೂ ನೊಂದುಕೊಳ್ಳದೇ, ಅಡವಿಗೆ ತೆರಳಲು ಮುಂದಾಗುತ್ತಾನೆ. ಮಿಥಿಲಾ ನಗರಿಯಿಂದ ಅಯೋಧ್ಯೆಗೆ ಬಂದ ಸೀತೆಯೂ ಗಂಡನೊಡನೆ ಹೊರಟು ನಿಲ್ಲುತ್ತಾಳೆ. ‘ನೀವಿರುವ ಕಾಡೇ ಎನಗೆ ನಾಡು. ನೀವಿಲ್ಲದ ನಾಡೂ ಎನಗೆ ಕಾಡು. ಕೈಹಿಡಿದು ಬಂದವಳನ್ನು ಅರ್ಧದಲ್ಲಿ ಕೈಬಿಟ್ಟು ಹೋಗುತ್ತೀರಾ? ಕಲ್ಲಾಗಲೀ, ಮುಳ್ಳಾಗಲೀ ನನ್ನ ಮನ ನಿಮ್ಮ ಜೊತೆ ಸಾಗಲಿ ಎಂಬುದೇ ನನ್ನ ಕೋರಿಕೆ ಎಂದು ಬೇಡಿಕೊಳ್ಳುತ್ತಾಳೆ. ಇಷ್ಟರಮೇಲೆ ರಾಮನಿಗೂ ಮಡದಿಯನ್ನು ತೊರೆದು ಹೋಗುವುದಕ್ಕೆ ಮನಸ್ಸಾಗುವುದಿಲ್ಲ. ಬೆನ್ನಿಗೆ ಬಿದ್ದ ತಮ್ಮ ಲಕ್ಷ್ಮಣನಂತೂ ‘ಉಳಿದವರೆಲ್ಲರನ್ನೂ ಶಿಕ್ಷಿಸಿ ನಿನಗೆ ಪಟ್ಟ ಕೊಡಿಸುತ್ತೇನೆ ಎಂದು ಮೊದಲು ಕೋಪಿಷ್ಟನಾದರೂ ಕೊನೆಗೆ ತಾನೂ ಜಟಾವಲ್ಕಲಧಾರಿಯಾಗಿ ಅಣ್ಣನೊಂದಿಗೆ ಹೊರಡುತ್ತಾನೆ. ಆದರೆ, ಎಲ್ಲಿಯೂ ಸೀತೆಯಂತೆ ಊರ್ಮಿಳಾ ಕಾಣಿಸಿಕೊಳ್ಳುವುದೇ ಇಲ್ಲ. ಜನಕ ಮಹಾರಾಜನಿಗೆ ಭೂಮಿಯನ್ನು ಉಳುವಾಗ ದೊರೆತವಳು ಸೀತೆ. ಆ ಬಳಿಕ ಔರಸಪುತ್ರಿಯಾಗಿ ಜನಿಸಿದವಳು ಊರ್ಮಿಳಾ! ಭೂಮಿಜೆ ಜನಕನ ಕೈಸೇರಿದರೂ ಜಾನಕಿಯಾಗುತ್ತಾಳೆ; ಆದರೆ, ಜನಕನಾತ್ಮಜೆ ಮಾತ್ರ ಊರ್ಮಿಳೆಯಾಗಿಯೇ ಉಳಿದುಬಿಡುತ್ತಾಳೆ! ಮೊದಲು ದೊರೆತ ಹೆಣ್ಣು ಕೂಸು ಹಿರಿಯವನ ಜೊತೆಸೇರಿ ಹಿರಿಸೊಸೆಯ ಪಟ್ಟವನ್ನು ಪಡೆದುಕೊಂಡರೆ; ಔರಸಪುತ್ರಿಯಾಗಿ ಜನಿಸಿದವಳು ಅನುಜನ ಕೈಹಿಡಿಯುತ್ತಾಳೆ. ಇವರಿಬ್ಬರೂ ಒಂದೇ ಮಂಟಪದಲ್ಲಿ ವಿವಾಹವಾಗಿ, ಒಂದೇ ಮನೆಸೇರಿದವರು. ಸೀತೆ, ಊರ್ಮಿಳೆಯೊಂದಿಗೆ ಮಾಂಡವಿ, ಶ್ರುತಕೀರ್ತಿಯರೂ ಕೂಡ ಹೀಗೆಯೇ.
ಲಕ್ಷ್ಮಣ ಅಣ್ಣನೊಂದಿಗೆ ಹೊರಟುನಿಂತಾಗ ಊರ್ಮಿಳಾ ಅಲ್ಲಿರಲಿಲ್ಲವೇ? ಅಥವಾ, ಇದ್ದರೂ ಅವಳಿಗೆ ವಿಷಯವೇ ತಿಳಿಯಲಿಲ್ಲವೇ? ಎಂದೆನಿಸುತ್ತದೆ. ಸೀತೆಯೇನೋ ಹಠಮಾಡಿ ಗಂಡನನ್ನು ಒಪ್ಪಿಸಿಬಿಟ್ಟಳು. ಸೌಮ್ಯ ಸ್ವಭಾವದ ರಾಮನೂ ಒಪ್ಪಿದ. ಆ ಕೌಶಲ ಊರ್ಮಿಳಾಗೆ ಇಲ್ಲ ವಾಯಿತೇ? ಲಕ್ಷ್ಮಣ ಕೋಪಿಷ್ಟ, ಮುಂಗೋಪಿ ಎಂದು ಸುಮ್ಮನಾಗಿ ಬಿಟ್ಟಳೇ? ಇದಾವುದೂ ಅಲ್ಲದಿದ್ದರೆ, ಬರಸಿಡಿಲೆರಗಿದ ಅನುಭವವಾಗಿ ಪ್ರಜ್ಞೆತಪ್ಪಿ ಬಿದ್ದುಬಿಟ್ಟಾಗಲೇ ಅವರ ಸವಾರಿ ಅಲ್ಲಿಂದ ನಿರ್ಗಮಿಸಿತೇ? ಎಂಬ ಪ್ರಶ್ನೆಗಳು ಆಗಾಗ ನಮ್ಮಲ್ಲಿ ಉಂಟಾಗುತ್ತಿರುತ್ತವೆ. ಎಲ್ಲರ ನಡುವೆ ಊರ್ಮಿಳಾ ಮಹಾ ಮೌನಿ ಯಾಗಿಯೇ ಉಳಿದುಬಿಟ್ಟಳು. ಅದಕ್ಕೆ ಕಾರಣ ಗಳು ಹೀಗೊಂದು ಬಗೆಯಲ್ಲಾದರೆ, ಇನ್ನೊಂದು ಮುಖವೂ ಇರಬಹುದಲ್ಲ?
ಲಕ್ಷ್ಮಣ ಶ್ರೀರಾಮಚಂದ್ರನ ಅನುಜನಾಗಿಯೂ ಯಾಕೆ ಹೀಗೆ ಮಾಡಿದ? ಯಾಕೆ ಆತ ಕೈಹಿಡಿದ ಚೆಲುವೆಯನ್ನು ಪುರದಲ್ಲಿಯೇ ಬಿಟ್ಟುಹೋದ? ಅಣ್ಣ, ಅತ್ತಿಗೆಯರ ಸೇವೆಗೆ ಭಂಗಬರಬಾರದೆಂಬ ಕಾರಣ ದಿಂದಲೇ? ಕಾಡಿನವಾಸ ಕಷ್ಟವೆಂದೇ? ತಾಯಿಗೆ ವ್ಯಥೆಯಾಗದಿರ ಲೆಂದೇ? ಈ ಕಾರಣಗಳೇ ಮುಖ್ಯವಾಗಿದ್ದರೆ, ಸೀತೆಯೂ ವನಗಮನ ಮಾಡಿದ್ದಳಲ್ಲ! ಅಥವಾ, ಹೆಂಡತಿ ಜೊತೆಯಲ್ಲಿದ್ದರೆ ಸಂಯಮ ತಪ್ಪುವು ದೆಂಬ ಕಾರಣದಿಂದ ಸೌಮಿತ್ರಿ ಹೀಗೆ ಮಾಡಿದನೇ? ಎಲ್ಲವೂ ಪೂರ್ಣ ವಿರಾಮವಿಲ್ಲದ ಪ್ರಶ್ನಾರ್ಥಕಗಳೇ!
ನೀನೇ ಹೇಳು ಊರ್ಮಿಳಾ, ಒಮ್ಮೆ ಕತ್ತೆತ್ತಿ ಮಾತಾಡು. ಮಾತಾಡು ಊರ್ಮಿಳಾ... ನೂರಾರು ಪ್ರಶ್ನೆಗಳು ನಿನ್ನ ಕುರಿತಾಗಿಯೇ ಹುಟ್ಟಿಕೊಂಡಿವೆ. ಯಾರನ್ನು ಕೇಳಿದರೂ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ. ಹಾಗಾಗಿ, ನಿನ್ನಲ್ಲಿಯೇ ಕೇಳುತ್ತಿದ್ದೇನೆ. ಅವೆಲ್ಲದಕ್ಕೂ ಉತ್ತರಿಸುವುದಕ್ಕೆ ನಿನಗಲ್ಲದೇ ಅನ್ಯರಿಂದ ಸಾಧ್ಯವಿಲ್ಲ. ಒಂದೊಂದಾಗಿ ಕೇಳುತ್ತಾ ಬರುತ್ತೇನೆ, ಕೊನೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕ ಉತ್ತರನೀಡು.
ಆ ದಿನ ಏನಾಯ್ತು? ಇಡೀ ಅಯೋಧ್ಯೆಯೇ, ಪಟ್ಟಾಭಿಷಿಕ್ತನಾಗ ಬೇಕಾದ ರಾಮ, ಸೀತೆ, ಲಕ್ಷ್ಮಣರ ವಿಯೋಗದ ಮಹಾ ಮಡುವಿನಲ್ಲಿ ಬಿದ್ದಿತಂತೆ. ಉಳಿದವರು ಅಷ್ಟೆಲ್ಲಾ ನೋಯುವಾಗ ನಿನಗೂ ನೋವಾಗಿಯೇ ಆಗಿರುತ್ತದೆಯಲ್ಲವೇ? ಯಾರೊಬ್ಬರಾದರೂ ನಿನ್ನ ಯೋಗಕ್ಷೇಮ ವಿಚಾರಿಸಿದ ರೇನೇ ಅಂದು? ರಾಮನಿಗೆ ವನಗಮನದ ಸಂಗತಿ ಲಕ್ಷ್ಮಣ, ಕೈಕೇಯ ಮೂಲಕ ತಿಳಿಯಿತು. ಆಗ ನೀನಲ್ಲಿ ಇರಲಿಲ್ಲವೇನೇ? ಅಂಥಹ ಮಹಾ ಸಂಭ್ರಮದ ವಾತಾವರಣದಲ್ಲಿ ನೀನೆಲ್ಲೂ ಕಾಣಿಸಿಕೊಂಡಂತೆಯೇ ಇಲ್ಲ ವೆನಿಸುತ್ತದೆ. ‘ಹೊರಡುತ್ತೇವೆ ಎಂದು ರಾಮನು ಹೇಳಿದನೇ? ಅಥವಾ ನಿನ್ನ ಸಖಿಯಂತೆ ಇದ್ದ ಸೀತೆ, ಆ ನಿನ್ನ ತಂದೆಗೆ ಸಿಕ್ಕಿದ ಮಗಳೂ ಹೇಳ ಲಿಲ್ಲವೇ? ಹೋಗಲಿಬಿಡು, ಏನೋ ಆಗಿರಬೇಕು. ಅವರೆಲ್ಲರೂ ಒಂದೇ ಮನೆಯಲ್ಲಿದ್ದರೂ ಕುಟುಂಬ ಬೇರೆಯಲ್ಲವೇ! ಆದರೆ ನಿನ್ನ ಜೀವನದ ಆಧಾರ ಸ್ಥಂಭವಾದ ಕೈಹಿಡಿದ ಗಂಡನಾದರೂ ಸುದ್ದಿತಿಳಿಸಿದನೇ? ಏನೆಂದು ತಿಳಿಸಿದ? ಉತ್ತರಿಸು ಊರ್ಮಿಳಾ..
ಲಕ್ಷ್ಮಣ ಬಂದವನೆ, ಬೈದು ಗದರಿಸಿ ನಿನ್ನನ್ನು ಒಪ್ಪಿಸಿಬಿಟ್ಟನೇ? ತಾಟಕಿ ವಧೆಗಾಗಿ ಕೊಂಡೊಯ್ದ ಬಿಲ್ಲುಬಾಣಗಳನ್ನು ಎದುರಿರಿಸಿಕೊಂಡು ಮಾತಾಡಿದನೇ? ದಶರಥ, ಕೈಕೆಯ ಬಗೆಗೆ ಕುದಿಯುತ್ತಿರುವ ಕೋಪಾಗ್ನಿಯಲ್ಲಿ ನಿನ್ನನ್ನು ದಿಟ್ಟಿಸಿನೋಡಿದನೇ? ಒಪ್ಪಲೇಬೇಕೆಂದು ಒತ್ತಾಯಮಾಡಿದನೇ?  ಏನೆಂದೂ ತಿಳಿಯುತ್ತಿಲ್ಲ. ಇಲ್ಲ, ಲಕ್ಷ್ಮಣ ಅಷ್ಟೊಂದು ಕ್ರೂರಿಯಲ್ಲ. ಮುಂಗೋಪಿಯಾದರೂ, ಸ್ವಂತ ಹೆಂಡತಿಯನ್ನವನು ಎಂದೂ ಶಿಕ್ಷಿಸಿದವನೇ ಅಲ್ಲ. ಹಾಗಿದ್ದರೆ, ಹೀಗಾಗಿರಬಹುದೇ...?
ಸೌಮಿತ್ರಿಗೆ, ಹೆಂಡತಿಯನ್ನು ಬಹಳ ಬೇಗನೇ ಒಲಿಸಿಕೊಳ್ಳುವ ಕಲೆ ತಿಳಿದಿದೆಯೇನೋ? ಮೆಲ್ಲನೇ ಅಂತಃಪುರದೊಳಗೆ ಬಂದ ಆತ, ನಿನ್ನ ಗಲ್ಲವನ್ನು ಹಿಡಿದು ಕೆನ್ನೆಗೆ ಮುತ್ತಿನ ಮಳೆಸುರಿದನೇನೇ? ಅಥವಾ ಬೆಲ್ಲದಂಥಾ ಮಾತಾಡಿ, ಮೋಡಿಮಾಡಿ ನಿನ್ನ ಮನ ಒಲಿಸಿ ಕೊಂಡನೇನೇ? ಕರವ ಪಿಡಿದನೇ...? ನಿನ್ನಯ ಸೆರಗನೆಳೆದನೇ? ಮುಂಗುರುಳಿನಿಂದ ರಾಜಿಸುವ ತಲೆನೇವರಿಸಿ, ಅಪ್ಪಿಕೊಂಡು ನಿಧಾನಕ್ಕೆ ನಡೆದ ವಿಷಮ ಪರಿಸ್ಥಿತಿಯ ಅರಿವು ಮೂಡಿಸಿದನೇ? ಹೇಳೆ ಊರ್ಮಿಳಾ... ನಿಜಕ್ಕೂ ನೀನೊಬ್ಬಳು ಅಸಾಮಾನ್ಯ ಸ್ತ್ರೀ. ಆಡುವ ಮೊದಲೇ ಭಾಷೆಯನ್ನು ಪಡೆದುಕೊಂಡು ಆಮೇಲೆ ವಿಷಯ ತಿಳಿಸಿಬಿಟ್ಟರೆ ನೀನಾದರೂ ಏನುಮಾಡುತ್ತೀಯ? ಸೂರ್ಯವಂಶೀಯರು ಎಂದೂ ಮಾತಿಗೆ ತಪ್ಪದವರು. ಹಾಗಾಗಿಯೇ ಅಲ್ಲವೇ ಈ ವನಗಮನ! ಹೋಗಲಿಬಿಡು. ಇದೋ ತಲೆ ಎತ್ತಿ ಒಮ್ಮೆ ನನ್ನನ್ನು ನೋಡೇ...
ನೀವು ಹೊರಡುವುದು ನಿಶ್ಚಯವೇ ಆದರೆ, ನನಗೇಕೆ ಈ ವಿರಹ ದುರಿಯ ಶಿಕ್ಷೆ? ನನ್ನನ್ನೂ ನಿಮ್ಮೊಡನೆ ಕರೆದೊಯ್ಯಿರಿ. ಗಡ್ಡೆಗೆಣಸನ್ನೇ ಸೇವಿಸಿ ಬದುಕುತ್ತೇನೆ ಎಂದು ನಿನಗಂದು ಹಠಹಿಡಿದು ಕೇಳಿಕೊಳ್ಳಲು ಏನಾಗಿತ್ತೇ ಊರ್ಮಿಳಾ? ನೀನೊಬ್ಬಳು ಬಲುದಡ್ಡಿ. ಆ ಸೀತೆಯನ್ನೇ ನೋಡು...! ಗಂಡನನ್ನು ಕಳುಹಿಸಿಕೊಡುವಾಗ ನಿನಗೆ ಎಷ್ಟೊಂದು ವೇದನೆಯಾಗಿರಬಹುದೆಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅದೂ ಅಲ್ಲದೇ, ಒಂದೆರಡು ದಿನವೇ? ಒಂದೆರಡು ವಾರವೇ? ಒಂದೆರಡು ತಿಂಗಳೇ? ಒಂದರೆಡು ವತ್ಸರವೇ? ಹದಿನಾಲ್ಕು ವರ್ಷ!! ಅಷ್ಟೊಂದು ದೀರ್ಘವಾದ, ಸ್ವಪ್ನದಲ್ಲಿಯೂ ಕಲ್ಪಿಸಿಕೊಳ್ಳಲಾಗದ ಅವಧಿಯನ್ನು ನಿನ್ನಿಂದ ಸಹಿಸಿಕೊಳ್ಳಲು ಹೇಗೆ ಸಾಧ್ಯವಾಯಿತೆ ನನ್ನವ್ವಾ... ಭರತ ಅಯೋಧ್ಯೆಗೆ ಬಂದವನೇ ತಾಯಿಗೆ ಬೈದು, ತಾನೂ ವನಕ್ಕೆ ಹೋದ. ಆತ ಅಣ್ಣನನ್ನು ಕರೆತರಲು ಹೊರಟರೆ, ಇಡೀ ಪುರದ ಜನರೂ ಜೊತೆ ಸೇರಿದರಂತೆ. ಆಗಲೂ ನೀನು ಗಂಡನನ್ನು ಕಾಣುವ ತವಕದಿಂದ ಪರ್ಣಕುಟೀರಕ್ಕೆ ಬರಲಿಲ್ಲವೇ? ಬಂದಿದ್ದೆಯಾ? ಬಂದಿದ್ದರೆ, ಗಂಡನೊಡನೆ ಮುಕ್ತವಾಗಿ ಮಾತಾಡಲು ಜನಸಾಗರ ಅಡ್ಡಬಂತೇ? ಅಲ್ಲಿಗೆ ತಪ್ಪಿತಸ್ಥೆ ಕೈಕೇಯೂ, ಸಾದ್ವಿ ಕೌಸಲ್ಯೆಯೂ, ನಿನ್ನತ್ತೆ ಸುಮಿತ್ರೆಯೂ ಬಂದಿದ್ದರೆಂದು ಕಾಣುತ್ತದೆ. ಅತ್ತೆಯೊಡನೆ ಹಠಹಿಡಿದು ನಿನಗೂ ಬರಲಾಗಲಿಲ್ಲವೇನೇ? ಬಂದಿದ್ದರೂ ವ್ಯರ್ಥವೇ ಆಗುತ್ತಿತ್ತು ಬಿಡು; ಲಕ್ಷ್ಮಣನೆಲ್ಲಿ ಅಣ್ಣನನ್ನು ಬಿಟ್ಟುಬರುತ್ತಾನೆ! ಆದರೂ ಗಂಡನ ಮುಖ ದರ್ಶನದ ಭಾಗ್ಯವಾದರೂ ನಿನ್ನ ಪಾಲಿಗೆ ಲಭಿಸುತ್ತಿತ್ತು. ಅರಣ್ಯಕ್ಕೆ ಹೊರಡುವ ಮೊದಲು ಲಕ್ಷ್ಮಣ ನಿನ್ನಲ್ಲಿ ಏನೆಂದು ಮಾತು ಪಡೆದಿದ್ದ? ಒಮ್ಮೆಯೂ ಕಣ್ಣೀರು ಸುರಿಸಬಾರದೆಂದೇ? ಉಳಿದವರಿಗೆ ನೋವುಂಟು ಮಾಡಬಾರದೆಂದೇ? ಆಭರಣ ತೊಡಬಾರದೆಂದೇ? ಅಥವಾ, ನಿನ್ನ ತವರಿಗೆ ಹೋಗಿರು ಎಂದೇ? ಇದ್ಯಾವುದೂ ಅಲ್ಲದಿದ್ದರೆ, ಮತ್ತೇನು? ಹದಿನಾಲ್ಕು ವತ್ಸರ ಕಳೆದು ಬರುವಾಗಲೂ ನೀನು ಇದೇ ಸ್ಥಿತಿಯಲ್ಲಿರ ಬೇಕೆಂದೇ? ಹಾಸಿದ ಹಾಸಿಗೆ ಕೊಂಚವೂ ಬಾಡಬಾರದೆಂದೇ? ವನದ ಮಲ್ಲಿಗೆ ಬಳ್ಳಿಗಳು ನೀರಿಲ್ಲದೆ ಒಣಗಕೂಡದೆಂದೇ?
ಹೇಗೆ ಸಹಿಸಿಕೊಂಡೆಯೇ ತಾಯಿ... ಪತಿವಿರಹ ಜ್ವಾಲೆಯನ್ನು! ಹಿಂದೆ ಕಾಡಿನಲ್ಲಿ ಶಿಲೆಯಾಗಿ ಬಿದ್ದಿದ್ದ ಅಹಲ್ಯೆಗೆ ಶ್ರೀರಾಮ, ಪಾದಸ್ಪರ್ಶ ದಿಂದಲೇ ಪುನರ್ಜನ್ಮ ಕೊಟ್ಟಿದ್ದನಂತೆ. ಈ ಕಥೆ ಖಂಡಿತಾ ನಿನಗೆ ಮರೆತು ಹೋಗಿರಲಿಕ್ಕಿಲ್ಲ. ಅವಳಾದರೂ ಗಂಡನ ಶಾಪಕ್ಕೆ ಗುರಿಯಾಗಿ ಹಾಗಾದವಳು. ನಿನಗ್ಯಾರ ಶಾಪವೇ? ಆಕೆಯೋ ಕಲ್ಲಾಗಿ ತಪಸ್ಸು ಮಾಡಿದಳು. ನೀನು ಸಜೀವಿಯಾಗಿ, ಜೀವಂತ ಶವವಾಗಿ ಹೇಗೆ ಜೀವಿಸಿಬಿಟ್ಟೆಯೇ?
 ನಿನಗೆ ಮದುವೆಯಾಗಿ ಕೆಲವು ಸಮಯ ಆಗಿತ್ತು. ಸ್ವರ್ಗಸಮಾನ ವಾದ ಅರಮನೆಯ ವಾಸದಲ್ಲಿ ಮೈಮರೆತು ನೀವೆಲ್ಲರೂ ನಲಿಯುತ್ತಿದ್ದವರು. ಸಂತಾನ ಸೂಚನೆಯೂ ಈ ನಡುವೆ ಆಗಿರಬೇಕಲ್ಲವೇ? ಅದು ಹೌದೇ ಆಗಿದ್ದರೆ, ಗಂಡನಿಗೆ ಅಷ್ಟೊಂದು ಸಂತೋಷದ ವಾರ್ತೆಯನ್ನು ನೀನು ಹೇಳಿರಲಿಲ್ಲವೇನೇ? ಹೇಳಿದ್ದರೂ ನಿನ್ನನ್ನು ಆ ಸ್ಥಿತಿಯಲ್ಲಿ ಬಿಟ್ಟುಹೋದನೆ? ಅಥವಾ, ಆ ಸೂಚನೆ ಆಗಿಲ್ಲದಿದ್ದರೆ ಅವನಾದರೂ ಕೇಳಿರಬೇಕಲ್ಲವೇ? ಸಖಿಯರಾದರೂ ಛೇಡಿಸಿರಬೇಕಲ್ಲ... ಸುಮಿತ್ರಾದೇವಿ, ಆ ನಿನ್ನ ಅತ್ತೆ, ಹೇಗೆ ಸಲಹುತ್ತಿದ್ದಳೇ ನಿನ್ನ? ಮಗಳಂತೆ ಕಂಡಿದ್ದಳೇ? ಸೊಸೆಯಂತೆಯೂ ಕಾಣದೇ ಬೈಯ್ಯುತ್ತಿದ್ದಳೇ? ಕೆಲಸ ಕಲಿಸಿಕೊಟ್ಟಳೇ? ಗಂಡನ ಉಪಚಾರವನ್ನು    ಹೇಳಿಕೊಟ್ಟಳೇ? ಹೇಳೇ ಊರ್ಮಿಳಾ...
ಅಹಲ್ಯೆ ಅರಣ್ಯದಲ್ಲಿ ಕಲ್ಲಾಗಿ ಮೌನಿಯಾದರೆ, ನೀನು ಅರಮನೆ ಯಲ್ಲಿಯೇ ಮಹಾ ಮೌನಿಯಾಗಿಬಿಟ್ಟೆ. ಮಳೆ, ಗಾಳಿ ಯಾವುದಕ್ಕೂ ಕೊಂಚವೂ ಬೆಚ್ಚದೆ, ಬೆದರದೆ ನಿಲ್ಲುವ ಹಿಮಾಚಲವಾಗಿಬಿಟ್ಟೆ ನೀನು. ಗಂಡನಿಲ್ಲದ ಹದಿನಾಲ್ಕು ವರ್ಷದಲ್ಲಿ ಎಷ್ಟು ರಾತ್ರಿ ಸರಿಯಾಗಿ ನಿದ್ದೆಮಾಡಿದೆಯೇ ತಾಯಿ? ಹೇಳುತ್ತೀಯಾ... ಹೇಳುವುದಕ್ಕೇನಿದೆ ಬಿಡು. ಬಹುಶಃ ಒಂದು ರಾತ್ರಿಯೂ ನೀನು ನಿದ್ದೆಯಲ್ಲಿ ಕಳೆದುಹೋಗಿರಲಿಕ್ಕಿಲ್ಲ. ನಡುನಡುವೆ ಕನಸಿನಲ್ಲಿ ಗಂಡನನ್ನು ಕಂಡು ಕನವರಿಸಿದೆಯಾ? ಪಕ್ಕದಲ್ಲಿ ಮಲಗಿದ್ದಾನೆಂದು ಭ್ರಮಿಸಿ, ಅಪ್ಪಿಕೊಳ್ಳಲು ಮುಂದಾಗಿ ಮಂಚದಿಂದ ಕೆಳಕ್ಕೆ ಬಿದ್ದುಬಿಟ್ಟೆಯಾ? ತಂಗಾಳಿಗೆ ಹೊದಿಕೆ ಸರಿದಾಗ, ಗಂಡನ ತುಂಟಾಟವೆಂದು ಮನದಲ್ಲೇ ಭ್ರಾಂತುಗೊಂಡು ನಕ್ಕೆಯಾ? ಹೇಳೆ, ನನ್ನವ್ವಾ... ಅರಣ್ಯದಲ್ಲಿ ಸೀತೆ ಗಂಡನ ತೋಳತೆಕ್ಕೆಯಲ್ಲಿ ಹಾಯಾಗಿ ಮಲಗಿ ನಿದ್ರಿಸುವುದನ್ನು ಎಣಿಸಿ, ಆ ಭಾಗ್ಯ ತನಗಿಲ್ಲದೇ ಹೋಯಿತಲ್ಲ ಎಂದು ಮರುಗಿದೆಯಾ? ಕೊರಗಿ ನಿಟ್ಟುಸಿರು ಬಿಟ್ಟೆಯಾ? ಎಷ್ಟು ಹೊರಳಾಡಿದರೂ ನಿದ್ದೆಯೇ ಹತ್ತದೆ, ಗಂಡನ ನೆನಪಾಗಿ ಅಳುತ್ತಲೇ ಕೂರುತ್ತಿದ್ದೆಯಾ? ವಿರಹಿಗಳಿಗೆ ಬೆಳದಿಂಗಳ ಬೆಳಕು ಶತ್ರುವಂತೆ. ನಿನಗೂ ಹಾಗೇ ಅನಿಸಿತ್ತೆ? ಬೀಸುವ ಗಾಳಿ, ತೇಲಿಬರುವ ನಾದದಲೆಗಳು, ಪಸರಿಸಿಕೊಳ್ಳುವ ಬೆಳಕಿನ ಕಿರಣಗಳು ಎಲ್ಲದರಲ್ಲಿಯೂ ನಿನ್ನ ಪ್ರೀತಿಯ ಅರಸನಾದ ಲಕ್ಷ್ಮಣನ ಮುಖಕಮಲ ಕಾಣಿಸಿಕೊಳ್ಳುತ್ತಿತ್ತೇನೇ? ನಿಂತರೆ, ಕುಳಿತರೆ, ಇನಿಯನ ಇನಿದನಿ ಕರ್ಣಗಳಿಗೆ ಹಿತವುಂಟುಮಾಡುತ್ತಿತ್ತೇ? ನಿನ್ನ ಗೆಳತಿಯರೆಲ್ಲರೂ ಅವರವರ ಗಂಡನೊಂದಿಗೆ ರತಿಕೇಳಿಯಲ್ಲಿ ಮೈಮರೆತು ನಲಿಯುತ್ತಿದ್ದರೆ, ನೀನು ಮಲಗಿದ ಹಾಸಿಗೆಯನ್ನೇ ಅಪ್ಪಿಕೊಂಡು ದುಃಖಿಸುತ್ತಿದ್ದೆಯಾ? ಹೆಣ್ಣು ಯಾವುದನ್ನಾದರೂ ಸುಲಭವಾಗಿ ಬಿಟ್ಟು ಬದುಕಬಲ್ಲಳು. ಆದರೆ, ಗಂಡನೊಂದಿಗಿನ ಶಯನಸುಖವನ್ನು ಯಾರೊಂದಿಗೂ ಹಂಚಿಕೊಳ್ಳು ವುದಕ್ಕೆ ಒಪ್ಪಳು; ಬಿಟ್ಟು ಬದುಕಲಾರಳು. ನೀನು ಕೇವಲ ಹೆಣ್ಣಲ್ಲ ತಾಯೀ, ಅದೆಲ್ಲವನ್ನೂ ಮೀರಿದವಳು. ಏನೆಂದು ಹೆಸರಿಡಲಿ ನಿನ್ನ ವ್ಯಕ್ತಿತ್ವಕ್ಕೆ?
ಕಾಡಿನ ವಾಸ, ಕಾಡಿನವರ ಸಹವಾಸ ಮುಗಿಸಿ, ಪುರಕ್ಕೆ ಬಂದ ಪತಿರಾಯ ನಿನ್ನನ್ನು ನೋಡಲು ಓಡೋಡಿ ಬಂದನೇ? ಅವನ ಮಾತು, ಮನಸ್ಸಿನಲ್ಲಾಗ ಯಾವ ಭಾವ ತೀವ್ರಸ್ಥಿತಿಯಲ್ಲಿತ್ತು? ಅಂಥಹ ಮಹಾತ್ಯಾಗ ಮಾಡಿದ ನಿನಗೆ ಬಳುವಳಿಯಾಗಿ ಆತ ಏನನ್ನು ನೀಡಿದನೇ? ಅಗಲಿದಷ್ಟು ವರ್ಷಗಳ ನೆನಪನ್ನೆಲ್ಲಾ ಮರಳಿ ಕೊಟ್ಟನೇ? ಹೇಳೆ, ಹೇಳೆಲೆ ಮಹಾತ್ಯಾಗಿ; ಹೇಳವ್ವಾ ಮಹಾಮೌನಿ...
ಇಂದ್ರಿಯ ನಿಗ್ರಹಮಾಡಿಕೊಂಡು ತಪಸ್ಸಿನಂತೆ ಬದುಕಿದ ನಿನ್ನ ಗಂಡ, ಇಂದ್ರಾರಿಯನ್ನೇನೋ ಕೊಂದುಬಿಟ್ಟ. ಅದರಲ್ಲಿ ಕೇವಲ ಅವನ ಸಾಮರ್ಥ್ಯ ಇತ್ತೇನೇ? ನೀನವನನ್ನು ಒಪ್ಪಿ, ಕಳುಹಿಸಿ ಕೊಟ್ಟಿದ್ದಕ್ಕಲ್ಲವೇನೇ ಎಲ್ಲವೂ ನಡೆದಿದ್ದು? ಸೀತೆಗೆ ಕೊನೆಯಲ್ಲಿ ಹೆಸರು, ಕೀರ್ತಿ, ಗೌರವಾದರ ಗಳೆಲ್ಲವೂ ಲಭಿಸಿತು. ನಿನಗೆ ಚೂರೂ ಆ ಕುರಿತು ಬಯಕೆ ಉಂಟಾಗ ಲಿಲ್ಲವೇ? ಜನಕನ ಔರಸಪುತ್ರಿಯಾಗಿದ್ದರೂ ಅವಳ ಮೇಲೆ ಒಂದಿಷ್ಟೂ ಅಸೂಯೆ ಮೂಡಲಿಲ್ಲವೇ? ಕೊನೆವರೆಗೂ ನೀನು ಎಲೆಮರೆಯ ಕಾಯಿಯಾಗಿಯೇ ಉಳಿದುಬಿಟ್ಟೆಯಲ್ಲ ತಾಯೀ! ಮಾತಾಡು ಊರ್ಮಿಳಾ....
ಯಾವುದಕ್ಕೂ ಉತ್ತರವಿಲ್ಲ. ಆ ಮಹಾತ್ಯಾಗಿಯ ಹೃದಯ ಸಮುದ್ರದ ಏರಿಳಿತವನ್ನು ಲೆಕ್ಕಿಸಲು ಯಾರಿಂದ ಸಾಧ್ಯವಾದೀತು? ನೊಂದ ನೋವ ನೋಯದವರೆತ್ತ ಬಲ್ಲರು ಜಗದೊಳಗೆ? ಬಲ್ಲವಳೇ ಬಲ್ಲಳು....!!...*  

                                                                                                                       
  { ಶಿವಕುಮಾರ ಬಿ.ಎ ಅಳಗೋಡುರವರ 'ಮುನ್ನುಡಿ' ಎಂಬ ಕೃತಿಯಿಂದ ಆಯ್ದ ಲೇಖನ }




1 ಕಾಮೆಂಟ್‌: