ಶುಕ್ರವಾರ, ಏಪ್ರಿಲ್ 28, 2017

ಕೆಜಿಯಿಂದ ಪಿಜಿವರೆಗೆ - ಶಿವಕುಮಾರ ಬಿ.ಎ ಅಳಗೋಡು ('ಮುನ್ನುಡಿ' ಕೃತಿಯಿಂದ ಆಯ್ದ ಲೇಖನ)




 ಕೆಜಿಯಿಂದ ಪಿಜಿವರೆಗೆ

ಹೀಗೆಂದಾಕ್ಷಣ ಏನಪ್ಪಾ ಇದು? ಎಂದೆನಿಸುವುದು ಸಹಜ. ಆದರೆ ಇಂದಿನ ದಿನಗಳಲ್ಲಿವು ತೀರಾ ಸಾಮಾನ್ಯವಾಗಿಬಿಟ್ಟಿವೆ. ನಾವೆಲ್ಲಾ ಓದು ಪ್ರಾರಂಭಿಸುವ ವೇಳೆಯಲ್ಲಿ ಕೆಜಿಗಳ ಪರಿಚಯವೇ ಇರಲಿಲ್ಲ. ನಮಗೆ ತಿಳಿದದ್ದು ಕೇವಲ ಅಳತೆಯ ಮಾಪನದ ಕೆಜಿಗಳು ಮಾತ್ರ. ಹಿಂದೆಲ್ಲಾ ವಿದ್ಯೆಯನ್ನು ಕಲಿಸುವುದಕ್ಕೆ ಗುರುಕುಲ ವ್ಯವಸ್ಥೆಗಳಿತ್ತು. ಅಲ್ಲಿ ವಿದ್ಯಾರ್ಥಿಯು ಅವಧಿ ಪೂರ್ಣಗೊಳ್ಳುವವರೆಗೂ, ಗುರುವಿನ ಪದತಳದಲ್ಲಿ ಸೇವೆಮಾಡಿ ಕೊಂಡೇ ಜ್ಞಾನಾರ್ಜನೆಯನ್ನು ಮಾಡಬೇಕಿತ್ತು. ಆದರೆ, ಮುಂದೆ ನಮ್ಮೊಳಗೆ ಬೆರೆತುಹೋದ ಪಾಶ್ಚಾತ್ಯರ ಆಗಮನದ ವಾರ್ತೆಯೂ, ಅವರ ಚಿಂತನೆಗಳೂ ಇಂಥಹ ವ್ಯವಸ್ಥೆಯ ಮೇಲೆ ಬಲವಾದ ಪ್ರಭಾವವನ್ನೇ ಬೀರಿಬಿಟ್ಟವು. ರೀತಿಯ ಹಲವು ಬದಲಾವಣೆಗಳು ತಲೆದೋರಿದ ಆನಂತರದಲ್ಲಿ ಬಾಲವಾಡಿಗಳು ತಲೆಯೆತ್ತಿದವು. ಸ್ವಲ್ಪ ಕಾಲದ ಬಳಿಕ ಅವೂ ತಮ್ಮ ಅಸ್ಥಿತ್ವವನ್ನೂ, ಸತ್ವವನ್ನೂ ಕಳೆದುಕೊಂಡು ಮೂಲೆಸೇರಿಬಿಟ್ಟವು. ಈಗಂತೂ ಎಲ್ಲಿ ನೋಡಿದರೂ ಬರಿಯ ಕೆಜಿಗಳಷ್ಟೇ ತುಂಬಿಹೋಗಿವೆ.
 ಮಕ್ಕಳು ಇಂಜಿನೀಯರ್, ಡಾಕ್ಟರ್ಗಳೇ ಆಗಬೇಕೆಂಬ ಹೆತ್ತವರ ಅಪೇಕ್ಷೆ, ಉನ್ನತ ಸ್ಥಾನಗಳಿಸಬೇಕೆಂದು ಹುಟ್ಟುವ ಮೊದಲೇ ಹುಟ್ಟುವ ಬಯಕೆಗಳ ಕಾರಣದಿಂದಲೇ ಇಂದು ಕೆಜಿಗಳು ಹೆಚ್ಚಾಗಿವೆ. ಇದರಿಂದಾಗಿ ದೇಹದ ಕೆಜಿ ಕಡಿಮೆಯಾಗುತ್ತಿದ್ದರೂ ಅದರ ಕುರಿತು ಲಕ್ಷ್ಯವೇ ಇಲ್ಲ. ಬಾಲ್ಯದಲ್ಲಿ ಮಕ್ಕಳಿಗೆ ಸಹಜವಾದ ಬಾಲ್ಯವನ್ನು ಅನುಭವಿಸಲು ಬಿಡಬೇಕು. ಆದರೆ ಈಗಿನ ವ್ಯವಸ್ಥೆಯಲ್ಲಿ ಕೇವಲ ಪುಸ್ತಕದ ಬದನೇಕಾಯಿಯಾಗಿ ಮಾತ್ರ ಬದುಕುವಂತಾಗಿದೆ. ಅಂದೆಲ್ಲಾ ನಾವು ಸಣ್ಣವರಿದ್ದಾಗ ಆಡುತ್ತಿದ್ದ ತುಂಟಾಟಗಳು, ಮರಕೋತಿ, ಲಗೋರಿ, ಚಿನ್ನಿದಾಂಡು, ಮೈಚೆಂಡು, ಕೋಕೋ ಆಟ ಇಂದು ಸಂಪೂರ್ಣ ಕಣ್ಮರೆಯಾಗಿಬಿಟ್ಟಿವೆ. ನಮ್ಮ ಮನೆಯ ಮಗನಲ್ಲದ ಕ್ರಿಕೆಟ್ ಕುರಿತಾಗಿಯೂ ಒಂದಷ್ಟು ದಿನ ಯುವ ಪೀಳಿಗೆಗೆ ಒಲವಿದ್ದುದು ನಿಜ. ಆದರೆ, ಈಗಂತೂ ಯಾರ ಮನೆಯಲ್ಲಿ ನೋಡಿದರೂ ಮೊಬೈಲ್, ಕಂಪ್ಯೂಟರ್ಗಳು. ಇಂದು ಇವು ನವಜಾತ ಶಿಶುವಿನ ಅಂಗೈನಲ್ಲೂ ಸೇರಿಹೋಗಿವೆ. ಇದು ತೀರಾ ದುಃಖದ ಸಂಗತಿಯಲ್ಲದೇ ಮತ್ತಿನ್ನೇನು?
ನಿಜಕ್ಕೂ ಬಾಲ್ಯವೇ ಸುಂದರ. ಅದರಲ್ಲೂ ಬಾಲ್ಯದ ಶಾಲಾದಿನಗಳು ಎಂದೂ ಮರೆತುಹೋಗದ ಸವಿಕ್ಷಣಗಳನ್ನು ನಮ್ಮಲ್ಲಿ ಅಚ್ಚೊತ್ತಿಸಿರುತ್ತವೆ. ಯಾವ ಕಲ್ಮಶವೂ ಇಲ್ಲದ, ಮುಗ್ದ ಮನದ ವಿದ್ಯಾರ್ಜನೆಯ ಕಾಲವದು. ನಲಿಯುತ್ತಾ ಕಲಿಯುವ ದಿನಗಳು ಕ್ರಮೇಣ ಏಕಾಗ್ರಗೊಳ್ಳುತ್ತಾ ಪದವಿ ಹಂತದವರೆಗೂ ಸಾಗುತ್ತವೆ. ಮುಂದಿನದು ಪಿಜಿ ಜೀವನ. ಇದು ಬಾಲ್ಯದ ದಿನದಂತೆ ಸರಳವೂ ಅಲ್ಲ, ಸಹಜವೂ ಅಲ್ಲ. ಇಲ್ಲಿ ಜ್ಞಾನವನ್ನು ವಿಸ್ತಾರಗೊಳಿಸಿಕೊಳ್ಳುವ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಸಂಗತಿ ಯಷ್ಟೇ ಪ್ರಧಾನವಾಗುತ್ತದೆ. ಸಾಮಾನ್ಯವಾಗಿ ರೂಢಿಯಲ್ಲಿ ಒಂದು ಮಾತಿದೆ. ವಿದ್ಯಾರ್ಥಿ ಸುಖಾರ್ಥಿಯಾಗಲಾರ, ಸುಖಾರ್ಥಿ ವಿದ್ಯಾರ್ಥಿಯಾಗಲಾರ ನೆಂದು. ಅದು ನಿಜವೂ ಹೌದೆನ್ನಿ. ಹಾಗಾಗಿಯೋ ಏನೋ... ಆಳವಾಗಿ ಅಧ್ಯಯನ ಮಾಡುವುದಕ್ಕೆ ಬಂದಾಗ, ಅಲ್ಲಿ ಓದೊಂದೇ ಮುಖ್ಯವಾಗುತ್ತದೆ.
ಈಗಿನ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸವು ಕೆಜಿಗಳಿಂದಲೇ ಆರಂಭವಾಗುವಂತಹದ್ದು. ಅಲ್ಲಿಂದ ಮೊದಲ್ಗೊಂಡು ಉನ್ನತ ಹಂತದ ಪಿಜಿವರೆಗೂ ವಿದ್ಯಾರ್ಥಿ ತನ್ನೆಲ್ಲಾ ಸುಖ ಸಂತೋಷಗಳನ್ನು ಬದಿಗಿರಿಸಿ, ಓದನ್ನು ಮಾತ್ರ ಗುರಿಯಾಗಿಸಿಕೊಳ್ಳಬೇಕಾಗುತ್ತದೆ. ನಡುವೆ ಹೊಸ ಹೊಸ ಮುಖಗಳ ಪರಿಚಯವಾಗುತ್ತದೆ. ಪರಿಚಯದಿಂದ ಸ್ನೇಹ, ಪ್ರೀತಿ ಎಲ್ಲವೂ ವಿದ್ಯಾಹಂತದ ಭಾಗಗಳೇ ಆಗಿಬಿಡುತ್ತದೆ. ಕೆಲವರು ಶ್ರದ್ಧೆಯಿಂದ ಓದಿ ತಾವಂದುಕೊಂಡದ್ದನ್ನು ಸಾಧಿಸುತ್ತಾರೆ. ಇನ್ನು ಕೆಲವರು ಲೌಕಿಕದ ಪಾಶಗಳ ಸುಳಿಗೆ ಸಿಲುಕಿ ದೆಸೆಗೆಡುತ್ತಾರೆ. ಹಂತಗಳು ಉನ್ನತವಾಗುತ್ತಾ ಹೋದಹಾಗೆ ನಮ್ಮಲ್ಲಿನ ಭಾವನೆಗಳೂ ಬೆಳೆಯುತ್ತಲೇ ಸಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಮೇಷ್ಟ್ರುಗಳ ಭಯ, ರಜೆಸಿಕ್ಕಾಗ ಆಗುವ ಸಂತೋಷ, ದಿನಾಚರಣೆಗಳಲ್ಲಿ ಕೊಟ್ಟ ಸಿಹಿಯ ಅನುಭವ, ಹೋಂವರ್ಕ್ಗಳ ಕಿರಿಕಿರಿ ಎಲ್ಲವೂ ಮೇಳೈಸಿಕೊಂಡಿರುತ್ತದೆ. ಆದರೆ ಪದವಿ ಪೂರ್ವ ಮತ್ತು ಪದವಿ ಹಂತಗಳಿಗೆ ಕಾಲಿರಿಸಿದಾಗ ಆಗುವ ಅನುಭವಗಳೇ ವಿಭಿನ್ನ ರೀತಿಯದ್ದು. ಶಿಕ್ಷಕರ ಅನುಕರಣೆ ಮಾಡುವುದು, ಡೆಸ್ಕ್ಗಳಲ್ಲಿ ಚಿಂಗಮ್ ಹಚ್ಚಿಡುವುದು, ಮುಂದೆ ಕುಳಿತವರ ತಲೆಗೆ ಹೊಡೆಯುವುದು, ಕೂದಲನ್ನು ಗದ್ದೆ ನೆಟ್ಟಿ (ನಾಟಿ) ಮಾಡಿದಂತೆ ಆಕಾಶಕ್ಕೆ ಏರಿಸಿ ಬಾಚುವುದು, ಎಲ್ಲರೂ ತರಗತಿ ಯೊಳಗೆ ಕುಳಿತ ಮೇಲೆ ಹೀರೋ ರೀತಿಯಲ್ಲಿ ಒಳಗೆ ಕಾಲಿಡುವುದು, ಬೇಕೆಂದೇ ಕೀಟಲೆ ಮಾಡುತ್ತಾ ಕುಳಿತುಕೊಳ್ಳುವುದು... ಹೀಗೆಲ್ಲಾ ದಿನಗಳು ಸಾಗುತ್ತವೆ. ಇವುಗಳ ಜೊತೆಯಲ್ಲಿಯೇ ಪ್ರೀತಿ ಪ್ರೇಮಗಳ ಬಯಕೆಯೂ ಅಂಕುರಗೊಂಡು ಮನಸ್ಸನ್ನು ಎತ್ತೆತ್ತಲೋ ಕೊಂಡುಹೋಗುತ್ತದೆ. ಯಾರೋ ಒಬ್ಬರು ಇಷ್ಟವಾಗುತ್ತಾರೆ; ಸದಾ ಅವರನ್ನೇ ಕಾಣಬೇಕು, ಮಾತಾಡಬೇಕೆಂಬ ಬಯಕೆ ಹೆಚ್ಚುತ್ತದೆ. ಕೆಲವರಂತೂ, ತಾವು ಓದಿದ ಕಥೆÀಗಳ ಸುಂದರ ನಾಯಕ, ನಾಯಕಿಯರನ್ನು ತನ್ನವರೊಂದಿಗೆ ಹೋಲಿಸಿಕೊಂಡು   ಕಾರಣವಿಲ್ಲದೆಯೇ ನಗುತ್ತಿರುತ್ತಾರೆ. ಕನಸಿನಲ್ಲಿ ಕಂಡವರನ್ನು, ಕಣ್ಣು ತೆರೆದಾಗಲೂ ಮತ್ತೆ ಮತ್ತೆ ಹುಡುಕಾಡುತ್ತಾರೆ. ಕಣ್ಣು ಮುಚ್ಚಿರುವಾಗಲೂ ಅವರನ್ನೇ ನೆನೆಯುತ್ತಾರೆ. ಅಷ್ಟರೊಳಗಾಗಲೇ ಮುಖ್ಯಪರೀಕ್ಷೆಯು ಹತ್ತಿರಕ್ಕೆ ಬಂದುಬಿಡುತ್ತದೆ. ಇನ್ನೇನು ನಾಳೆಯೇ ಪರೀಕ್ಷೆ ಎಂಬುದು ಸ್ಪಷ್ಟವಾದರೂ ಯಾಕೋ ಓದುವುದಕ್ಕೇ ಉದಾಸೀನ. ಆಗಲೂ ಮನಸ್ಸು ಎಲ್ಲೆಲ್ಲಿಗೋ ಹೋಗಿಬರುತ್ತದೆ. ಪ್ರೀತಿಯಲ್ಲಿ ಅತಿಯಾಗಿ ಮುಳುಗಿದವರು, ಓದಿನ ಪುಸ್ತಕದಲ್ಲಿಯೂ ತಮ್ಮವರನ್ನೇ ಹುಡುಕುತ್ತಾರೆ! ಹಾಸಿಗೆಯ ಮೇಲೆ ಮಲಗಿಕೊಂಡು ಇತಿಹಾಸ ಓದುವ ಬದಲು ಮನಸಿಗೆ ಹತ್ತಿರವಾದವರು ಕೊಟ್ಟ ಪತ್ರವನ್ನೋ, ಗ್ರೀಟಿಂಗನ್ನೋ ಇನ್ನೇನನ್ನೋ ಓದುವುದಕ್ಕೆ ಮುಂದಾಗುತ್ತಾರೆ. ನೋಡುವವರಿಗೆ ಇವರಷ್ಟ್ಟು ಶಿಸ್ತುಬದ್ದಬ್ರಿಲಿಯೆಂಟ್ ಸ್ಟೂಡೆಂಟ್ಗಳು ಪ್ರಪಂಚದಲ್ಲಿ ಮತ್ತೆಲ್ಲೂ ಇಲ್ಲವೇನೋ ಎನಿಸುತ್ತದೆ. ಆದರೆ ಗುಟ್ಟು ಅವರಿಗಷ್ಟೇ ಗೊತ್ತಿದ್ದು, ಒಳಗೊಳಗೇ ಮುಸಿಮುಸಿ ನಗುತ್ತಾರೆ. ಹೀಗಿದ್ದರೂ, ಅಂತಿಮ ಪರೀಕ್ಷೆಯಲ್ಲಿ ಹೇಗೋ ತಕ್ಕಷ್ಟು ಅಂಕ ಗಳಿಸಿಕೊಂಡು ಉತ್ತೀರ್ಣರೂ ಆಗಿಬಿಡುತ್ತಾರೆ!
ಅಂದುಕೊಂಡದ್ದೆಲ್ಲವೂ ಹಾಗೆಯೇ ಆದರೆ ನಮ್ಮಷ್ಟು ಪುಣ್ಯವಂತರೇ ಇಲ್ಲವೆಂದು ಬೀಗುತ್ತೇವೆ. ಕೆಲವೊಮ್ಮೆ ಬಯಸಿದ್ದು ಕೈಗೆಟುಕದೇ ಇದ್ದಾಗ ಕಣ್ಕೊಳದ ಕಟ್ಟೆಯೊಡೆದು ಜಲಪ್ರವಾಹವೇ ಉಂಟಾಗುತ್ತದೆ. ಸ್ಥಿರ ಮನಸ್ಕರಲ್ಲದವರಂತೂ, ಸಣ್ಣ ಸಣ್ಣ ವಿಷಯಕ್ಕೂ ತುಂಬಾ ತಲೆಕೆಡಿಸಿ ಕೊಳ್ಳುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ಪರೀಕ್ಷೆಯಲ್ಲಿ ಬಯಸಿದಷ್ಟು ಅಂಕ ದೊರೆಯಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೂ ಆತ್ಮಹತ್ಯೆಯ ಪ್ರಯತ್ನಕ್ಕೆ ಮುಂದಾಗುತ್ತಾರೆ. ನಾವು ಪ್ರೀತಿಸಿದವರನ್ನೇ ಮದುವೆಯಾಗುವ ಭಾಗ್ಯ ಸಿಕ್ಕಾಗ ಭೂಮಿಯಲ್ಲಿ ನಮಗಿಂತ ಹೆಚ್ಚು ಸಂತೋಷಪಡುವವರೇ ಇಲ್ಲವೆನಿಸುತ್ತದೆ. ಹಾಗೆಯೇ ಬಯಸಿದವರನ್ನು ಹೊಂದಲಾಗದೇ ಇದ್ದಾಗ, ಬೇರೆ ದಾರಿಯೇ ಇಲ್ಲ ಎಂದುಕೊಂಡು ಸಾವಿಗೆ ಶರಣಾಗುವವರೂ ಇದ್ದಾರೆ. ಇನ್ನು ಕೆಲವು ತರುಣರು ಸಾವಿಗೆ ಮುಂದಾಗದಿದ್ದರೂ, ಕೊರಗುತ್ತಲೇ ಮುಖದಮೇಲೆ ಒಂದಿಷ್ಟು ದಾಡಿಬಿಟ್ಟುಕೊಂಡು ದೇವ ದಾಸನಂತೆ ತಿರುಗುತ್ತಾರೆ!
ಹೇಗೆಲ್ಲಾ ಸಾಗಿ ಬರುತ್ತದಲ್ಲವೇ ಶೈಕ್ಷಣಿಕ ಜೀವನ. ಮಾನವನ ಜೀವನ ಅನಂತ ತಿರುವುಗಳ ಆಗರವೆಂದು ಬಲ್ಲವರು ಹೇಳಿದ್ದಾರೆ. ತಿರುವುಗಳ ದಾರಿಯಲ್ಲಿ ಸಾಗುವಾಗ ನಮ್ಮ ಜೀವನದಲ್ಲಿಯೂ ಅನೇಕ ಏರುಪೇರುಗಳುಂಟಾಗುತ್ತವೆ. ವಾಡಿಕೆಯಲ್ಲಿ, ವಿದ್ಯಾರ್ಥಿಯ ಜೀವನವನ್ನು ಬಂಗಾರದ ಜೀವನ ಎಂದು ಕರೆಯುವುದಿದೆ. ಇದಕ್ಕೆ ಕಾರಣವಿಲ್ಲದೇ ಇಲ್ಲ. ಹಂತಗಳಲ್ಲಿ ಪಡೆಯುವ ಅನುಭವ ಇನ್ನಾವ ಸಮಯದಲ್ಲಿಯೂ, ಬೇಕೆಂದರೂ ಸಿಗುವುದಿಲ್ಲ. ಗೆಳೆಯರೊಡನೆ ಹರಟೆ, ಆಟ, ವಿನೋದಾವಳಿ ಗಳು ಎಲ್ಲವೂ ನಮ್ಮನ್ನು ಸಂತಸದ ಕಡಲಲ್ಲಿ ತೇಲಾಡಿಸುತ್ತವೆ. ಕಲಿಯುವಿಕೆಗೆ ಕೊನೆಯಿಲ್ಲವಾದರೂ ಶಾಲಾ ಕಾಲೇಜುಗಳಲ್ಲಿ ಕುಳಿತು ಕಲಿಯುವ ಅವಕಾಶ ಕೇವಲ ಕೆಜಿಯಿಂದ ಪಿಜಿವರೆಗೆ ಮಾತ್ರ. ಮುಂದೆಯೂ ಓದುವುದಕ್ಕೆ ಸಾಧ್ಯ, ಆದರೆ ಅಲ್ಲಿ ಹಿಂದಿನಂತಹ ವ್ಯವಸ್ಥೆಗಳಿರುವುದಿಲ್ಲ. ಸಾಮಾನ್ಯವಾಗಿ ಇಂದಿನ ಆಧುನಿಕ ಜಗತ್ತಿನಲ್ಲಿದ್ದರೂ, ಅನೇಕರು ಹಿಂದಿನ ಮಧುರಾನುಭವದ ರಸಾಸ್ವಾದವನ್ನು ಪಡೆದುಕೊಂಡೇ ಬಂದಿರುವವರಾಗಿರುತ್ತಾರೆ.
ನಮಗೆಲ್ಲ ಕೆಜಿಗಳ ಅನುಭವವಿಲ್ಲ. ಒಂದೆರಡು ದಿನ ಮಾತ್ರ ಬಾಲವಾಡಿಗೆ ಹೋಗಿ ಫುಡ್ ತಿಂದ ನೆನಪಷ್ಟೇ ಉಳಿದಿದೆ. ತೀರಾ ಇತ್ತೀಚಿನವರಿಗೆ ಬಾಲವಾಡಿ ಎಂದರೇನೆಂದೇ ಗೊತ್ತಿಲ್ಲದಿರುವುದು ವಿಷಾದದ ಸಂಗತಿ. ಈಗಿನ ಮಕ್ಕಳು ಬಹುತೇಕ ಸಂದರ್ಭಗಳಲ್ಲಿ ಸಹಜ ಸಂತಸಗಳಿಂದ ಸಂಪೂರ್ಣ ವಂಚಿತರಾಗುತ್ತಿದ್ದಾರೆ. ಪುಸ್ತಕದ ಹುಳಗಳಾಗುತ್ತಿದ್ದಾರೆ. ಕುಟುಂಬದಲ್ಲಿ ಮಕ್ಕಳು ಹುಟ್ಟುತ್ತಲೇ, ಪ್ರತಿಷ್ಠಿತ ಹುದ್ದೆಗಳನ್ನು ಪಡೆಯಲು ಬಲವಂತದಿಂದ ತಿದ್ದಲಾಗುತ್ತಿದೆ. ಆಡಿಕೊಂಡು ಇರಬೇಕಾದ ದಿನಗಳಲ್ಲಿ ಗೂಡಿನೊಳಗೆ ಕುಳಿತು ಮೂರುಹೊತ್ತೂ ಟ್ಯೂಷನ್, ಓದು, ಹೋಂವರ್ಕ್ ಎಂದು ಹಿಂಸಿಸತೊಡಗಿದರೆ, ಮಗುವಿಗೆ ಮಾನಸಿಕ ಒತ್ತಡವಾಗಿ ಬದ್ದಿ ಮಂದವಾದರೂ ಆದೀತು. ಸರಿಯಾದ ಜೀವನ ರೂಪಿಸಿಕೊಳ್ಳುವುದಕ್ಕೆ, ಲೋಕದ ಜನರ ನಡುವೆ ಬೆರೆಯುವ ಕ್ರಿಯೆ ಮಾತ್ರ ಸಹಾಯ ಮಾಡಲು ಸಾಧ್ಯ. ಪಂಜರದ ಗಿಳಿಗೆ ಹಾರುವ ಹುಮ್ಮಸ್ಸಿದ್ದರೂ ಬಂಧನವೇ ಹೆಚ್ಚಾದರೆ, ಅದು ಕ್ರಮೇಣ ನಿರುತ್ಸಾಹಿಯೇ ಆಗಿಬಿಡುತ್ತದೆ. ಹಾಗಾಗಿ ಇನ್ನಾದರೂ ಮಕ್ಕಳಿಗೆ ಮತ್ತೆ ಹಿಂದಿನ ಸಂತಸವೇ ಮರುಕಳಿಸುವಂತಾಗಬೇಕು. ಹೀಗೆ ಬಯಸುವ ಭಾವವೇ ಎಲ್ಲರೆದೆಯಲ್ಲೂ ಮೊಳೆತು ಹೆಮ್ಮರವಾಗಲಿ ಎಂಬುದೇ ನಮ್ಮ, ಹಿರಿಯರೆಲ್ಲರ ಆಶಯ...*         

26.02.2016 
 ಉದಯವಾಣಿಯಲ್ಲಿ ಪ್ರಕಟ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ