ಭಾನುವಾರ, ಏಪ್ರಿಲ್ 30, 2017


ಅಪೂರ್ವ ಧ್ವನಿ,ಚಿತ್ರ,ದೃಶ್ಯಗಳ ಸಂಗ್ರಹಕಾರ – ಸುಧೇಶ್ ಶೆಟ್ಟಿ

ಬದುಕಿರುವಾಗ ವ್ಯಕ್ತಿಯ ದೇಹದೊಳಗಿರುವ ಜೀವ ಆತನನ್ನು ಜೀವಂತವಾಗಿರಿಸಿದರೆ, ಮಡಿದಮೇಲೆಯೂ ಜೀವಂತಗೊಳಿಸುವುದು ನೆನಪುಗಳಷ್ಟೇ. ಬದುಕಿರುವಾಗ ಸವಿದ ಎಷ್ಟೋ ಸಂಗತಿಗಳೂ ಕೂಡ ಅವರನ್ನು ಅಗಲಿದ ಮೇಲೆ ಕಾಡುವುದಕ್ಕೆ ಪ್ರಾರಂಭಿಸುತ್ತವೆ. ಎಲ್ಲವನ್ನೂ ಕಳೆದುಕೊಂಡ ಮೇಲೆ ಕಳೆದುಹೋದವರ ಕುರಿತು ಒಲವು ಅತಿಯಾಗುತ್ತದೆ. ಆದರೆ, ಅಷ್ಟರಲ್ಲಾಗಲೇ ಎಲ್ಲವೂ ನಮ್ಮಿಂದ ದೂರಾಗಿಬಿಟ್ಟಿರುತ್ತವೆ. ಒಬ್ಬ ವ್ಯಕ್ತಿ ನಮಗೆ ಪರಿಚಿತನಾಗಿದ್ದರೆ, ಆತನ ಮರಣದ ನಂತರವೂ ನಮ್ಮನ್ನು ಸುತ್ತಿಕೊಳ್ಳುವುದು ಸಹಜ. ಒಂದು ಕ್ಷಣದ ಮಾತ್ರಕ್ಕೂ ಕಂಡಿರದ ವ್ಯಕ್ತಿತ್ವವೊಂದರ ಕುರಿತು ಎಳವೆಯಿಂದಲೇ ಆಕರ್ಷಿತರಾಗಿ, ಅವರನ್ನು ಆಳವಾಗಿ ಅರಿಯುವ ಮನಮಾಡುವವರು ವಿರಳಾತಿವಿರಳ. ಈ ಪೀಠಿಕೆ ಮುಂದಿನ ಕಥೆಗೆ ಎಂದೂ ತೊಡಕುಂಟುಮಾಡುವಂಥದ್ದಲ್ಲ.
ಯಕ್ಷಲೋಕದಲ್ಲಿ ಒಂದು ಹೊಸಬಗೆಯ ಅಲೆಯನ್ನೇ ಸೃಷ್ಟಿಸಿ, ದಶಕದಶಕಗಳೇ ಕಳೆದುಹೋದರೂ ಮಾನಸರಂಗದಲ್ಲಿ ನರ್ತಿಸುತ್ತಿರುವ ಚೇತನ, ಗುಂಡ್ಮಿಕಾಳಿಂಗ ನಾವಡರು. ಇವರ ಗಾನಮಾಧರ್ಯಕ್ಕೆ ಮನಸೋಲದ ಮನಸ್ಸುಗಳೇ ಇಲ್ಲವೆನ್ನಬಹುದು. ಏರು ಶೃತಿಯ ರಂಗಸೂತ್ರಧಾರ ನಾವಡರು ಜೀವಿಸಿದ್ದು ಅತ್ಯಲ್ಪ ಕಾಲ. ಅಷ್ಟರಲ್ಲೇ ಪೂರ್ಣಾಯುಷ್ಯದ ಸಾಧನೆಯನ್ನು ಮಾಡಿ ಇಹದ ಋಣವನ್ನು ಕಳಚಿಕೊಂಡರು. ಭೌತಿಕವಾಗಿ ನಮ್ಮಿಂದ ಮರೆಯಾಗಿಹೋದರೂ ಕೂಡ ಇಂದಿಗೂ ಪ್ರತಿಯೊಬ್ಬರ ಮನಮನಗಳಲ್ಲಿ ಸ್ವರಸಿರಿಯ ಮೂಲಕ ಮತ್ತೆ ಮತ್ತೆ ಜೀವಂತಗೊಳ್ಳುತ್ತಿದ್ದಾರೆ.
ನಾನು ಈ ಭುವಿಯ ಬೆಳಕನ್ನು ಮೊದಲಬಾರಿಗೆ ಕಂಡಿದ್ದು ಇಪ್ಪತ್ತೆರಡು ವರ್ಷಗಳ ಹಿಂದೆ. ನಾಳೆಗೆ ಅದು ಮುಂದಿನ ವರ್ಷಾರಂಭಕ್ಕೆ ಮುಂದಡಿಯಿಡುತ್ತದೆ. ನಾವಡರು ಹುಟ್ಟಿದ್ದು 1958ರಲ್ಲಿ. ಮರಣಿಸಿದ್ದು 1990. ಮಿತ್ರರಾದ ಸುಧೇಶ ಶೆಟ್ಟಿಯವರಿಗೂ ನನ್ನದ್ದೇ ಪ್ರಾಯ. (1995) ಹುಟ್ಟುವಾಗಲೇ ಮೇರು ಭಾಗವತನನ್ನು ಕಳೆದುಕೊಂಡು ಹುಟ್ಟಿದವರು ನಾವುಗಳು. ಆದರೆ, ಈ ನೋವನ್ನೇ ಛಲವಾಗಿಸಿಕೊಂಡು ಮುನ್ನಡೆದು ಬಂದವರು ಸುಧೇಶರು. ಕಾಳಿಂಗ ನಾವಡರು ಜೀವಿಸಿದ್ದ ಕಾಲದಲ್ಲಿ ಅವರಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿ, ದೃಶ್ಯಸುರುಳಿ, ಧ್ವನಿಸುರುಳಿ, ಅಪೂರ್ವದ ಭಾವಚಿತ್ರಗಳು ಪ್ರತಿಯೊಂದನ್ನೂ ಸಂಗ್ರಹಿಸಿಕೊಳ್ಳುವ ಕಾಯಕದಲ್ಲಿ ತೊಡಗಿಸಿಕೊಂಡರು. ಸ್ವಂತ ಖರ್ಚಿನಲ್ಲಿ, ಯಾವುದೇ ಲಾಭಗಳಿಕೆಯ ಉದ್ಧೇಶವಿಲ್ಲದೇ ಎಲ್ಲೆಲ್ಲಿಗೋ ಹೊತ್ತುಗೊತ್ತನ್ನು ನೋಡದೇ ಹೋಗಿ, ಕಾಡಿ, ಬೇಡಿ ಅಮೂಲ್ಯವಾದ ಸಂಪತ್ತನ್ನು ಪಡೆದುಕೊಂಡಿದ್ದಾದೆ. ಅವರ ಈ ಪ್ರಯತ್ನ ಇಂದಿಗೂ ನಿರಂತರವಾಗಿ ಸಾಗುತ್ತಿದೆ. ಕೆಲವರು ನಾವಡರ ಮುಖವನ್ನೇ ನೋಡಿರಲಿಲ್ಲ, ಇನ್ನು ಕೆಲವರಿಗೆ ನಾವಡರ ಒಂದಿಷ್ಟು ಪದ್ಯಗಳು ಮಾತ್ರ ತಿಳಿದಿವೆ. ಹೀಗಿರುವಾಗ ಅವರ ಸಾಧನೆಯ ವಿಸ್ತಾರತೆಯನ್ನು ಪರಿಚಯಿಸುವ ಕಾರ್ಯ ಸುಧೇಶರಿಂದ ಸಂಪನ್ನಗೊಳ್ಳುತ್ತಿದೆ.
ಆಗಿನ ಕಾಲಕ್ಕೆ ಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳಿರಲಿಲ್ಲ. ಅಂಥಹ ಸಮಯದಲ್ಲಿಯೂ ಕೆಲವು ಅಭಿಮಾನಿಗಳು, ಕಲಾಸಕ್ತರು ದಾಖಲಿಸಿಕೊಂಡ ಅತ್ಯಮೂಲ್ಯ ತುಣುಕುಗಳನ್ನು ಸಂಗ್ರಹಿಸಿ ಇರಿಸಿಕೊಂಡವರು ಮಿತ್ರ ಸುಧೇಶ್. ಯೂಟ್ಯೂಬ್, ಫೇಸ್ಬುಕ್ ಗಳಲ್ಲಿಯೂ ಕೆಲವು ತುಣುಕುಗಳನ್ನು ಹಾಕುತ್ತಿರುತ್ತಾರೆ. ಭಾವಚಿತ್ರಗಳಂತೂ ಆಗಾಗ ಕಾಣಿಸಿಕೊಳ್ಳುತ್ತವೆ. ಒಂದೇ ಅಲ್ಲ, ಹತ್ತಾರು, ನೂರಾರು ವಿಭಿನ್ನ ಭಾವಚಿತ್ರಗಳು. ನಾವಡರ ದೊಡ್ಡ ಅಭಿಮಾನಿಯಾಗಿ, ಅಭಿಮಾನಿಗಳೊಂದಿಗೆ ಸೇರಿ ‘ನಾವಡರ ನೆನಪಿನ’ ದಿನವನ್ನು ಕಲಾಪ್ರದರ್ಶನದ ಮೂಲಕ ಆಚರಿಸುತ್ತಾರೆ. ನಿನ್ನೆಯೂ ನಾವಡರ, ರೂಪಶ್ರೀ, ವಿಜಯಶ್ರೀ, ಕಾಂಚನಶ್ರೀ ಪ್ರಸಂಗ ಬಹಳ ಸೊಗಸಾಗಿ ನರ್ತಿಸಿತು.
ಕೆಲವರು ತಪ್ಪಾಗಿ ತಿಳಿದುಕೊಂಡಿರಬಹುದು, ಇದರಿಂದೇನೋ ಲಾಭವಿದೆ ಎಂದು. ಖಂಡಿತಾ ಹಾಗಿಲ್ಲ. ಇದೊಂದು ಬಗೆಯ ಹುಚ್ಚು. ಅಪಾರವಾದ ಅಭಿಮಾನ. ಸುಧೇಶರು ಈ ಮಹತ್ವದ ಕೆಲಸಕ್ಕೆ ತೊಡಗಿಕೊಳ್ಳದೇ ಇರುತ್ತಿದ್ದರೆ, ಇಂದು ನಾವಡರ ಕೆಲವೇ ಪದ್ಯಗಳಿಂದ ನಾವೆಲ್ಲ ತೃಪ್ತಿಪಟ್ಟುಕೊಂಡು ಸುಮ್ಮನಾಗಬೇಕಿತ್ತು. ಇವರ ಪರಿಶ್ರಮದಿಂದಾಗಿ ಸಾಗರವನ್ನೇ ನೋಡುವಂತಾಗಿದೆ. ಕೇವಲ ನಾವಡರ ಕುರಿತಾಗಿ ಮಾತ್ರವಲ್ಲ ಕೆಲಸ. ಯಕ್ಷಗಾನದ ಬಹಳ ಹಿಂದಿನ ದೃಶ್ಯ, ಚಿತ್ರಗಳನ್ನು ಸಂಗ್ರಹಿಸಿಕೊಳ್ಳುತ್ತಾರೆ. ಇದರಿಂದಾಗಿ ಯಕ್ಷಗಾನದ ಹಿಂದಿನ ಇತಿಹಾಸ, ಇಂದಿನ ವರ್ತಮಾನವನ್ನು ಜೊತೆಯಾಗಿರಿಸಿಕೊಂಡು ನೋಡಬಹುದಾಗಿದೆ. ಸಣ್ಣ ಪ್ರಾಯದಲ್ಲಿ ಇಂಥಹ ಮಹತ್ವದ ಕೆಲಸಕ್ಕೆ ತೊಡಗಿಕೊಂಡಿರುವ ಸುಧೇಶರು ಸದಾ ಶ್ಲಾಘನಾರ್ಹರು. ಇವರ ಈ ಕಾಯಕ ಇನ್ನೂ ಮುಂದುವರಿದೆ, ಮತ್ತೂ ಅಮೂಲ್ಯವಾದ ದಾಖಲೆಗಳನ್ನು ಸಂಗ್ರಹಿಸುವಂತಾಗಲಿ, ಆ ಮೂಲಕ ಯಕ್ಷಕಲೆ, ನಾವಡರ ಬದುಕಿನ ತುಣುಕು ಪ್ರಸಾರವಾಗಲಿ ಎಂಬುದೇ ಎಲ್ಲರ ಆಶಯ.

                                                                                  ಶಿವಕುಮಾರ ಬಿ.ಎ ಅಳಗೋಡು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ